ಪಾಕ್ ಮಂಡಿಯೂರಿ ಕ್ಷಮೆಯಾಚಿಸುವಾಗ, ಮೋದಿ ಸರ್ಕಾರ ಯುದ್ಧ ನಿಲ್ಲಿಸಿ ಏಕೆ ಶರಣಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವನ್ನು ಯುದ್ಧ ವಿರಾಮಕ್ಕೆ ಒತ್ತಾಯಿಸಿದ್ದು ತಾವೇ ಎಂದು ಹೇಳಿಕೊಂಡಿರುವುದು ರಾಜಕೀಯ ವಲಯದಲ್ಲಿ ವಿವಾದವನ್ನು ಉಂಟು ಮಾಡಿದೆ. ಈ ಬಗ್ಗೆ ಸಂಸತ್ನಲ್ಲಿ ತೀವ್ರ ಚರ್ಚೆ ನಡೆದಿದ್ದು, ವಿರೋಧ ಪಕ್ಷಗಳು ಸರ್ಕಾರದ ನಿಲುವಿನ ಬಗ್ಗೆ ತೀಕ್ಷ್ಣವಾದ ಪ್ರಶ್ನೆಗಳನ್ನು ಎತ್ತಿವೆ.
ತಮ್ಮ ಸುದೀರ್ಘ ಭಾಷಣದಲ್ಲಿ ಆಪರೇಷನ್ ಸಿಂಧೂರ್ ಕುರಿತು ಅನೇಕ ಸಂಗತಿಗಳನ್ನು ಉಲ್ಲೇಖಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಳಿಕ ಕಾಂಗ್ರೆಸ್ ನಾಯಕ ಗೌರವ್ ಗೊಗೋಯ್ ಮಾತನಾಡಿದ್ದು ಆಪರೇಷನ್ ಸಿಂಧೂರ್ ವಿಷಯದಲ್ಲಿ ಭಾರತ ಯಾಕೆ ಕದನ ವಿರಾಮಕ್ಕೆ ಒಪ್ಪಿಕೊಂಡಿತು, ದೇಶದ ರಕ್ಷಣಾ ವ್ಯವಸ್ಥೆಗೆ ಏನಾದರು ನಷ್ಟವಾಗಿದೆಯೆ? ಹೀಗೆ ಹತ್ತು ಹಲವು ಪ್ರಶ್ನೆ ಮುಂದಿಟ್ಟಿದ್ದಾರೆ.
ರಾಜನಾಥ್ ಸಿಂಗ್ ಭಾಷಣ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ವಿರೋಧ ಪಕ್ಷದ ಕಡೆಯಿಂದ ಚರ್ಚೆಯನ್ನು ಪ್ರಾರಂಭಿಸಿದರು. ಸರ್ಕಾರದೊಂದಿಗೆ ಸಂಬಂಧ ಹೊಂದಿರುವ ಜನರು ಪಾಕಿಸ್ತಾನ ಬಯಸಿದ್ದನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. 100 ದಿನಗಳು ಕಳೆದಿವೆ, ಪಹಲ್ಗಾಮ್ ಮೇಲೆ ದಾಳಿ ಮಾಡಿದ ಭಯೋತ್ಪಾದಕರು ಎಲ್ಲಿದ್ದಾರೆ ಎಂದು ಸರ್ಕಾರ ಹೇಳಬೇಕು? ನಿಮ್ಮ ಬಳಿ ಡ್ರೋನ್ಗಳು, ಪೆಗಾಸಸ್, ಉಪಗ್ರಹಗಳಿವೆ, ಹಾಗಾದರೆ ನೀವು ದಾಳಿ ಮಾಡಿದ ಭಯೋತ್ಪಾದಕರನ್ನು ಇನ್ನೂ ಹಿಡಿಯಲು ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ರಾಜನಾಥ್ ಸಿಂಗ್ ಬಹಳ ಮುಖ್ಯವಾದ ಮಾಹಿತಿಯನ್ನು ನೀಡಿದರು, ಆದರೆ ಆ ಭಯೋತ್ಪಾದಕರು ಪಹಲ್ಗಾಮ್ಗೆ ಹೇಗೆ ಬಂದರು ಎಂಬುದನ್ನು ಅವರು ಹೇಳಲಿಲ್ಲ. ಆ ಐವರು ಭಯೋತ್ಪಾದಕರು ಹೇಗೆ ಪ್ರವೇಶಿಸಿದರು ಎಂಬುದನ್ನು ದೇಶವು ತಿಳಿದುಕೊಳ್ಳಲು ಬಯಸುತ್ತದೆ? ಅಲ್ಲಿನ ಜನರು ಭಯದಿಂದ ಬದುಕುತ್ತಿದ್ದಾರೆ, ಅವರು ಅದರ ಬಗ್ಗೆ ಏಕೆ ಒಂದು ಮಾತನ್ನೂ ಹೇಳಲಿಲ್ಲ ಎಂದು ಗೌರವ್ ಗೊಗೊಯ್ ಪ್ರಶ್ನಿಸಿದರು.
ಆಪರೇಷನ್ ಸಿಂಧೂರ್ ನಲ್ಲಿ ನಾವು ಯಾವುದೇ ರಫೇಲ್ ಅನ್ನು ಕಳೆದುಕೊಂಡಿದ್ದೇವೆಯೇ ಎಂದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಹೇಳಿದರು. ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರಿಗೆ ಸ್ಥಳೀಯರ ಬೆಂಬಲವಿತ್ತು ಎನ್ನಲಾಗಿದೆ. ಸರ್ಕಾರ ಇದಕ್ಕೆಲ್ಲಾ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.