ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಪಪ್ರಚಾರ ಮಾಡುವ ‘ಕ್ರಿಮಿ-ಕೀಟ’ ಫೇಸ್‌ಬುಕ್ ಖಾತೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ದೂರು ಸಲ್ಲಿಸಿದೆ. ಈ ಫೇಸ್‌ಬುಕ್ ಖಾತೆಯಲ್ಲಿ ಎಐ ರಚಿತ ರಾಹುಲ್, ಸಿದ್ದರಾಮಯ್ಯ, ಸೋನಿಯಾ ಗಾಂಧಿಯವರ ವಿಡಿಯೋಗಳನ್ನು ಹಾಕಲಾಗುತ್ತಿದೆ.
ಈ ಸಂಬಂಧ ಬೆಂಗಳೂರು ಪಶ್ಚಿಮ ಕಾಂಗ್ರೆಸ್ ಜಿಲ್ಲಾ ಸಮಿತಿ ಬೆಂಗಳೂರು ಹೈಗ್ರೌಂಡ್ಸ್ ಪೊಲೀಸ್ ಸ್ಟೇಷನ್‌ನ ಎಸ್‌ಎಸ್‌ಒ ಅವರಿಗೆ ದೂರು ಸಲ್ಲಿಸಿದೆ. ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರ ಅಪಪ್ರಚಾರದ ವಿಡಿಯೋಗಳು, ನಕಲಿ ಧ್ವನಿಸುರುಳಿಯನ್ನು ಸೃಷ್ಟಿಸಿ ವೈಯಕ್ತಿಕವಾಗಿ ಹಾಗೂ ಪಕ್ಷಕ್ಕೆ ಧಕ್ಕೆ ತಂದಿರುವ ಕ್ರಿಮಿ ಕೀಟ ಎಂಬ ಫೇಸ್‌ಬುಕ್ ಖಾತೆ ವಿರುದ್ಧ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಮೋದಿ ಬದುಕಿರುವುದೇ ಪ್ರಚಾರದಿಂದ, ಅವರ ಸರ್ಕಾರಕ್ಕೆ ಸೊನ್ನೆ ಅಂಕ: ಸಿಎಂ ಸಿದ್ದರಾಮಯ್ಯ
“ಕ್ರಿಮಿ ಕೀಟ ಎಂಬ ಫೇಸ್‌ಬುಕ್ ಖಾತೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ವಿರುದ್ಧ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅವಹೇಳನಕಾರಿಯಾಗಿ ವಿಡಿಯೋಗಳನ್ನು ಮತ್ತು ನಕಲಿ ಧ್ವನಿಸುರುಳಿಯನ್ನು ಸೃಷ್ಟಿಸಿ ಸಮಾಜಕ್ಕೆ ತಪ್ಪು ಮಾಹಿತಿಗಳನ್ನ ರವಾನಿಸುತ್ತಿರುವ ಕ್ರಿಮಿ ಕೀಟ ಎಂಬ ಫೇಸ್‌ಬುಕ್ ಖಾತೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಅಧಿಕೃತವಾಗಿ ದೂರು ಸಲ್ಲಿಸುತ್ತಿದ್ದೇನೆ” ಎಂದು ಬೆಂಗಳೂರು ಪಶ್ಚಿಮ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಕುಶಾಲ್ ಹರುವೇಗೌಡ ತಿಳಿಸಿದ್ದಾರೆ.

“ಈ ಕ್ರಿಮಿ ಕೀಟ ಫೇಸ್‌ಬುಕ್ ಖಾತೆಯು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ಸಚಿವರ ವಿರುದ್ಧ ಆಧಾರವಿಲ್ಲದ ಅವಹೇಳನಕಾರಿ ವಿಡಿಯೋಗಳನ್ನು, ನಕಲಿ ಧ್ವನಿಸುರುಳಿಯನ್ನು ಸೃಷ್ಟಿಸುತ್ತಿದೆ. ವ್ಯಕ್ತಿತ್ವಕ್ಕೆ ಧಕ್ಕೆ ತರಲು ಮತ್ತು ಸಾರ್ವಜನಿಕರಲ್ಲಿ ತಪ್ಪು ಸಂದೇಶ ಹರಡಲು ಉದ್ದೇಶಪೂರ್ವಕವಾಗಿ ಈ ಕೃತ್ಯ ಮಾಡುತ್ತಿರುವ ಈ ಖಾತೆಯ ಹಿಂದಿರುವ ವ್ಯಕ್ತಿಗಳನ್ನು ಬಂಧಿಸಿ ಸೂಕ್ತ ವಿಚಾರಣೆ ನಡೆಸಿ ಸಂಬಂಧಪಟ್ಟ ಎಲ್ಲ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರು ಸಲ್ಲಿಸಿದ್ದಾರೆ.
