ಮನುಷ್ಯ ಬದುಕಲು ಯೋಗ್ಯವಲ್ಲದ ಗಡಿ ಪ್ರದೇಶದಲ್ಲಿ ಕಣ್ಣು ಮುಚ್ಚದೆ ಶತ್ರುಗಳಿಂದ ನಮ್ಮನ್ನು ರಕ್ಷಿಸುವ ವೀರ ಯೋಧರಿಗೆ ಗೌರವ ಸಲ್ಲಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ಪಟ್ಟಣದ ಎಸ್ ಸಿಎಸ್ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಆಯೋಜಿಸಿದ್ದ ಕಾರ್ಗಿಲ್ ಮತ್ತು ಅಪರೇಷನ್ ಸಿಂಧೂರ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನಿಸಿ ಗೌರವಿಸಿ ಮಾತನಾಡಿದ ಅವರು ಕರ್ತವ್ಯನಿರತ ಸೈನಿಕರು ನೆಮ್ಮದಿ ಬದುಕು ಕಾಣುವುದು ನಿವೃತ್ತಿ ಬಳಿಕ ಎಂಬುದು ತಿಳಿದ ವಿಚಾರ. ಈ ನಿಟ್ಟಿನಲ್ಲಿ ಮಾಜಿ ಸೈನಿಕರಿಗೆ ನೆಮ್ಮದಿಯ ಮನೆ ನಿರ್ಮಾಣಕ್ಕೆ ನಿವೇಶನ ಒದಗಿಸುವ ಭರವಸೆ ನೀಡಿದರು.
ಕಳೆದ ವರ್ಷ ನಿವೇಶನ ಒದಗಿಸುವ ಭರವಸೆ ನೀಡಿದ್ದೆ ಆದರೆ ವೈಯಕ್ತಿಕವಾಗಿ ನಿವೇಶನ ಹಂಚಿಕೆ ನಿಯಮದಲಿಲ್ಲ. ಹಾಗಾಗಿ ಪಟ್ಟಣದ ಹೊರ ವಲಯದಲ್ಲಿ ಜಮೀನು ಕಾದಿರಿಸಿ ನಿವೇಶನವನ್ನು ಹಕ್ಕುಪತ್ರ ವಿತರಣೆ ಮೂಲಕ ಹಂಚುವ ಕೆಲಸ ಈ ಬರಹದಲ್ಲಿ ಮಾಡುವುದಾಗಿ ಹೇಳಿದ ಅವರು ದೇಶ ರಕ್ಷಣೆ ಸಮಯದಲ್ಲಿ ಬಲಿದಾನ ಮಾಡಿದ ಯೋಧರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಬೆಟ್ಟದಹಳ್ಳಿ ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿ ದೇಶದ ಮೊದಲ ಆಸ್ತಿ ಯೋಧರು ನಂತರ ಎರಡನೇ ಆಸ್ತಿಯಾಗಿ ರೈತರು ಇದ್ದು, ಮೂರನೇ ಆಸ್ತಿಯಾಗಿ ಶಿಕ್ಷಕರು ಇರುತ್ತಾರೆ. ನಾಲ್ಕು ಮತ್ತು ಐದನೇ ಸ್ಥಾನ ಕ್ರಮವಾಗಿ ತಾಯಿ ಹಾಗೂ ಗುರುಪೀಠಕ್ಕೆ ನೀಡಬೇಕಿದೆ. ಇವರೆಲ್ಲರ ಜವಾಬ್ದಾರಿ ಸುಭದ್ರ ದೇಶ ಕಟ್ಟುವ ಕೆಲಸ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣದ ಕರ್ತವ್ಯ ಕೂಡಾ ಆಗಿದೆ. ಶಿಕ್ಷಣ ಎಂದರೆ ಸಂಸ್ಕಾರ ಎನ್ನುವ ಕಾಲ ಮರೆಯಾಗಿದೆ. ಆಂಗ್ಲ ವ್ಯಾಮೋಹಕ್ಕೆ ಕನ್ನಡ ಶಾಲೆಗಳು ಮುಚ್ಚಿವೆ. ಕನ್ನಡ ಶಾಲೆಯೇ ನಮ್ಮ ಸಂಸ್ಕಾರ ಕಲಿಸುವ ಸ್ಥಳವಾಗಿತ್ತು. ಇಂಗ್ಲೀಷ್ ಭಾಷೆಯಿಂದ ಪಾಶ್ಚಿಮಾತ್ಯ ಸಂಸ್ಕೃತಿ ನಮ್ಮಲ್ಲಿ ಬೆಳೆಯುತ್ತಿರುವುದು ವಿಷಾದನೀಯ ಎಂದರು.
ಕೌಶಲ್ಯಾಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ ಶಾಲಾ ಕಾಲೇಜಿನಲ್ಲಿ ಶಿಸ್ತು ಸಂಯಮ ಕಳಿಸಬೇಕಿದೆ. ಮಾಜಿ ಸೈನಿಕರ ನಡೆ ನೋಡಿ ಮಕ್ಕಳು ಕಲಿಯಬೇಕಿದೆ. ಯುವ ಜನಾಂಗಕ್ಕೆ ಚೈತನ್ಯ ನೀಡುವ ಇಂದಿನ ಕಾರ್ಯಕ್ರಮ ರಾಜ್ಯದೆಲ್ಲೆಡೆ ನಡೆಯಬೇಕು. ಜೊತೆಗೆ ಸೇನೆಗೆ ಯುವಕರು ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಸೇನೆ ಸೇರಲು ಅರಿವು ಮೂಡಿಸಬೇಕು ಎಂದ ಅವರು ಗುಬ್ಬಿ ತಾಲ್ಲೂಕಿನ ಸೈನಿಕರ ಸಂಘ ರಾಜ್ಯಕ್ಕೆ ಮಾದರಿ ಎನಿಸಿದೆ ಎಂದರು.
ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಎನ್.ಕೆ.ಶಿವಣ್ಣ ಮಾತನಾಡಿ ನಮ್ಮ ಸಂಘ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಕಾರ್ಯ ಪ್ರವೃತ್ತವಾಗಿದೆ. ಇಂತಹ ಕಾರ್ಯಕ್ರಮ ಜೊತೆಗೆ ಯುವಕರಿಗೆ ಸೇನೆಯ ಬಗ್ಗೆ ಜಾಗೃತಿ ಹಾಗೂ ಸೇನೆ ಸೇರಲು ಹೇಗೆ ಸಿದ್ಧವಾಗಬೇಕು ಎಂಬ ತರಬೇತಿ ನೀಡುತ್ತಿದ್ದೇವೆ. ನಮ್ಮ ಕಾರ್ಯಕ್ಕೆ ಸರ್ಕಾರ ಮತ್ತಷ್ಟು ನೆರವು ನೀಡಬೇಕಿದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಸಾವಿರ ಅಡಿಗಳ ರಾಷ್ಟ್ರಧ್ವಜ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಸಲಾಯಿತು. ಜೊತೆಗೆ ಸಾಂಸ್ಕೃತಿಕ ಕಲಾ ಮೇಳಗಳ ಮೆರವಣಿಗೆ ನಡೆಸಲಾಯಿತು. ಜಯಸಿಂಹ ಆಸ್ಪತ್ರೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿದರು. ರೋಟರಿ ಕ್ಲಬ್ ಹಾಗೂ ಬೆಳ್ಳಿ ಬ್ಲಡ್ ಬ್ಯಾಂಕ್ ರಕ್ತದಾನ ಶಿಬಿರ ನಡೆಸಿದರು.
ವೇದಿಕೆಯಲ್ಲಿ ತೊರೆಮಠದ ಶ್ರೀ ಚಂದ್ರಶೇಖರ ದೇಶಿಕೇಂದ್ರ ಸ್ವಾಮೀಜಿ, ಕರ್ನಲ್ ಜಿ.ಎಸ್.ಗುಜ್ರಾಲ್, ಪಪಂ ಅಧ್ಯಕ್ಷೆ ಆಯಿಷಾ ತಾಸೀನ್ , ಉಪಾಧ್ಯಕ್ಷೆ ಶ್ವೇತಾ, ತಾಪಂ ಇಓ ಶಿವಪ್ರಕಾಶ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಪ್ರಾಚಾರ್ಯ ಪ್ರಸನ್ನ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿಂದು ಮಾಧವ, ಕಸಾಪ ತಾಲ್ಲೂಕು ಅಧ್ಯಕ್ಷ ಯತೀಶ್, ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಆರ್.ಐ.ಹಿರೇಮಠ್, ತಾಲ್ಲೂಕು ಅಧ್ಯಕ್ಷ ಲೋಕೇಶ್ ಬಿದರೆ, ಪದಾಧಿಕಾರಿಗಳಾದ ವಿವೇಕಾನಂದಾಚಾರ್ಯ, ಜಯದೇವ್ ಇತರರು ಇದ್ದರು.