“ಜಾತಿಗೊಂದು ಮಠ”ಗಳಿಂದ ಸಮಾಜ ಕಲುಷಿತಗೊಂಡಿದೆ ಎಂದು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪೀಠದ ರಂಭಾಪುರಿ ಶ್ರೀಗಳು ನೀಡಿರುವ ಹೇಳಿಕೆಗೆ ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹಿಂದುಳಿದ ಮತ್ತು ದಲಿತ ಮಠಾಧೀಶರು ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಈ ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.
ದಾವಣಗೆರೆ ನಗರದ ಹಳೇ ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಲಿತ ಅಹಿಂದ ಮಠಾಧೀಶರ ಒಕ್ಕೂಟದ ಅಧ್ಯಕ್ಷ, ಕನಕಗುರುಪೀಠದ ನಿರಂಜನಾನಂದಪುರಿ ಶ್ರೀ, “ಶನಿವಾರ ಭದ್ರಾವತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾತಿಗೊಂದು ಮಠದಿಂದ ಸಮಾಜ ಸಂಪೂರ್ಣ ಕಲುಷಿತಗೊಳ್ಳುತ್ತಿದೆ ಎಂದು ರಂಭಾಪುರಿ ಶ್ರೀ ನೀಡಿದ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಹಿರಿಯರಾದ ಶ್ರೀಗಳು ಗಾಜಿನ ಮನೆಯಲ್ಲಿದ್ದುಕೊಂಡು ಮತ್ತೊಬ್ಬರಿಗೆ ಕಲ್ಲು ಹೊಡೆಯುವ ಕೆಲಸ ಮಾಡಿದ್ದಾರೆ. ತಾವು ಸಂಕುಚಿತ ಭಾವನೆಯಿಂದ ಹೊರಬಂದು ವಿಶಾಲ ಮನೋಭಾವನೆ ಬೆಳಸಿಕೊಳ್ಳಬೇಕು. ತಮ್ಮಿಂದ ಇಂತಹ ಕ್ಷುಲ್ಲಕ ಹೇಳಿಕೆಗಳು ಪುನರಾವರ್ತನೆಯಾದರೆ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಆಕ್ಷೇಪ ವ್ಯಕ್ತಪಡಿಸಿದರು.

ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದಪುರಿ ಶ್ರೀ ಮಾತನಾಡಿ, “ಭಾರತದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆಯಿದ್ದು, ಆಯಾ ಸಮುದಾಯದ ಸಾಂಸ್ಕøತಿಕ ನಾಯಕರ ಹೆಸರಿನಲ್ಲಿ ಮಠ ರಚನೆಗೊಂಡು ಸಮುದಾಯದ ಏಳ್ಗೆ, ಸಾಮರಸ್ಯ, ಬಾಂಧವ್ಯ ಹಾಗೂ ಆರೋಗ್ಯಪೂರ್ಣ ಸಮಾಜ ಸೃಷ್ಟಿಸುವ ಕಾರ್ಯದಲ್ಲಿ ಎಲ್ಲ ಮಠಗಳು ಸಾಗುತ್ತಿವೆ. ಆದರೆ, ರಂಭಾಪುರಿ ಶ್ರೀಗಳ ಈ ರೀತಿಯ ಹೇಳಿಕೆ ತರವಲ್ಲ” ಎಂದು ಅಭಿಪ್ರಾಯಪಟ್ಟರು.
ಚಿತ್ರದುರ್ಗದ ಮಾದಾರ ಚನ್ನಯ್ಯ ಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ ಮಾತನಾಡಿ, “ರಂಭಾಪುರಿ ಶ್ರೀಗಳು “ಮಾನವ ಧರ್ಮಕ್ಕೆ ಜಯವಾಗಲಿ” ಎನ್ನುವ ಘೋಷಣೆಯಲ್ಲಿ ಎಲ್ಲ ಮಾನವರು ಇದ್ದಾರೆಂಬುದನ್ನು ಮೊದಲು ಅರಿಯಬೇಕು. ಹಿಂದುಳಿದ –ದಲಿತ ಮಠಗಳ ಬಗ್ಗೆ ಅವಹೇಳನ ಮಾಡುವ ಮೂಲಕ ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಹೇಳಿಕೆಗೆ ಅವರು ವಿರುದ್ಧವಾಗಿದ್ದಾರೆ. ತಮ್ಮ ಈ ಹೇಳಿಕೆ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗಿದ್ದು, ನಮ್ಮಗಳ ಮನಸಿಗೆ ನೋವಾಗಿದೆ. ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಬೇಕು. ಇಲ್ಲದಿದ್ದರೆ ಹಿಂದುಳಿದ ಮಠಾಧೀಶರಿಂದ ಪ್ರಬಲ ಹೋರಾಟಕ್ಕೆ ಚಿಂತನೆ ನಡೆಸಲಾಗುವುದು” ಎಂದರು.

ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಮಾತನಾಡಿ, “ಶೋಷಿತ ಸಮುದಾಯಗಳಿಗೆ ಸಾಮಾಜಿಕ ವ್ಯವಸ್ಥೆಯಲ್ಲಿ ನಿರಂತರ ಶೋಷಣೆಯಾದಾಗ ಆಯಾ ಸಮುದಾಯದ ಭಕ್ತರೇ ಮಠ ಕಟ್ಟಿದ್ದಾರೆ, ವಿನಾ ಮಠಾಧೀಶರು ಬಂದು ಮಠ ಕಟ್ಟಿಲ್ಲ ಎಂಬುದನ್ನು ಶ್ರೀಗಳು ಅರಿತು ನಡೆಯಲಿ. ರಂಭಾಪುರಿ ಶ್ರೀಗಳು ಮೊದಲು ತಮ್ಮ ಮನಸ್ಸನ್ನು ಶುದ್ಧಗೊಳಿಸಿಕೊಂಡು ಇತರರಿಗೆ ಅರಿವು ಮೂಡಿಸುವ ಕಾರ್ಯ ಮಾಡಲಿ.
ನಾವು ನೇರವಾಗಿ ಜಾತಿ ಹೆಸರಲ್ಲಿ ಮಠ ನಡೆಸುತ್ತಿದ್ದೇವಾದರೂ ನಮ್ಮ ಗುರಿ ಜಾತ್ಯಾತೀತ ಸಮಾಜ ನಿರ್ಮಾಣವಾಗಿದೆ. ಆದರೆ, ತಾವು ಜಾತಿ ಹೆಸರಿನಲ್ಲಿ ಮಾಡುತ್ತಿರುವ ಕಾರ್ಯಗಳಾದರೂ ಏನು? ಸ್ಪಷ್ಟಪಡಿಸಿ” ಎಂದು ಸವಾಲುಗಳನ್ನು ಮುಂದಿಟ್ಟರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಆಧುನಿಕ ಸಮಾಜದ ಜಾತಿ ಕದನಗಳಿಂದ ಮುಕ್ತಿ ಹೊಂದಲು ವಚನಗಳಿಂದ ಸಾದ್ಯ; ವಿರಕ್ತಮಠದ ಬಸವಪ್ರಭು ಶ್ರೀ
ಸುದ್ದಿಗೋಷ್ಠಿಯಲ್ಲಿ ಯಾದವ ಗುರುಪೀಠದ ಶ್ರೀಕೃಷ್ಣಯಾದವ ಶ್ರೀ, ಹೊಸದುರ್ಗದ ಭಗೀರಥ ಪೀಠದ ಶ್ರೀ ಪುರಷೋತ್ತಮಾನಂದಪುರಿ ಸ್ವಾಮಿ, ತೀರ್ಥಹಳ್ಳಿ ಈಡಿಗರ ಪೀಠದ ಆರ್ಯ ರೇಣುಕಾನಂದ ಶ್ರೀ, ಯಳವ ಗುರುಪೀಠದ ಬಸವಭೃಂಗೇಶ್ವರ ಶ್ರೀ, ವೇಮನಮಠದ ವೇಮನಾನಂದ ಶ್ರೀ, ಕುಂಬಾರ ಪೀಠದ ಕುಂಬಾರಗುಂಡಯ್ಯಶ್ರೀ, ಹಡಪದ ಅನ್ನದಾನಿ ಭಾರತೀ ಹಪ್ಪಣ್ಣ ಶ್ರೀ, ಹೊಸದುರ್ಗ ಕನಕಗುರು ಶಾಖಾಪೀಠದ ಈಶ್ವರಾನಂದಪುರಿ ಶ್ರೀ, ಮೇದಾರ ಪೀಠದ ಬಸವಕೇತೇಶ್ವರ ಶ್ರೀ, ಬೋವಿ ಗುರುಪೀಠದ ಸಿಇಓ ಗೋನಳ್ಳಿ ಗೋವಿಂದಪ್ಪ, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಎಸ್‍ಜೆಎಸ್ ಜ್ಞಾನಪೀಠದ ನಿರ್ದೇಶಕ ಕಾಳಗಟ್ಟ ಹನುಮಂತಪ್ಪ ಮತ್ತಿತರರಿದ್ದರು.