ಉಡುಪಿ ಜಿಲ್ಲೆಯ ಕಾಪು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ನೆಟ್ವರ್ಕ್ನ ಗುಣಮಟ್ಟ ನಿರಂತರವಾಗಿ ಕುಸಿಯುತ್ತಿದ್ದು ಅದನ್ನೇ ನಂಬಿ ಕುಳಿತಿರುವ ನೂರಾರು ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊಬೈಲ್ ನೆಟ್ವರ್ಕ್ನ ಜೊತೆಗೆ ಫೈಬರ್ ಇಂಟರ್ನೆಟ್ ಸೇವೆಯೂ ಪದೇಪದೆ ವ್ಯತ್ಯಯಕ್ಕೆ ಒಳಗಾಗುತ್ತಿದೆ. ಕೆಲವು ಕಡೆ ಮೊಬೈಲ್ ಟವರ್ಗಳ ಅಸಮರ್ಪಕ ನಿರ್ವಹಣೆ, ಕೆಲವು ಕಡೆ ವಿದ್ಯುತ್ ಕೈಕೊಟ್ಟಾಗ ಜನರೇಟರ್ ಲಭ್ಯತೆ ಇಲ್ಲದಿರುವುದು ನೆಟ್ವರ್ಕ್ ಕಡಿತಕ್ಕೆ ಪ್ರಮುಖ ಕಾರಣವಾಗಿದೆ.

ನೆಟ್ವರ್ಕ್ ಮತ್ತು ಇಂಟರ್ನೆಟ್ ಸೇವೆಯ ವ್ಯತ್ಯಯದಿಂದಾಗಿ ಜನಸಾಮಾನ್ಯರಷ್ಟೇ ಅಲ್ಲ, ಉದ್ಯಮಗಳು, ಶಿಕ್ಷಣ ಸಂಸ್ಥೆಗಳು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸರಕಾರಿ ಇಲಾಖೆಗಳ ಕೆಲಸಕ್ಕೆ ತೊಂದರೆ ಆಗುತ್ತಿದೆ. ಸರಕಾರಿ ಕಚೇರಿಗಳಲ್ಲಿ ಸರ್ವರ್ ಬ್ಯುಸಿ, ಸರ್ವರ್ ಡೌನ್ನಿಂದಾಗಿ ಜನರ ಕೆಲಸಗಳು ವಿಳಂಬವಾಗುತ್ತಿವೆ. ಕೇಂದ್ರ ಸರಕಾರ ಬಿಎಸ್ಎನ್ಎಲ್ ಪುನರುಜ್ಜೀವನಕ್ಕೆ ಹಲವು ಯೋಜನೆಗಳನ್ನು ಘೋಷಿಸುತ್ತಿದೆ. ಆದರೆ, ಅದನ್ನು ಸಮರ್ಪಕವಾಗಿ ಜಾರಿಗೆ ತರಲು ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸು ತ್ತಿದ್ದಾರೆ. ದೂರು ನೀಡಿದಾಗ ಸರಿಪಡಿಸುವ ಭರವಸೆಗಳನ್ನು ನೀಡಲಾಗುತ್ತಿದೆಯಾದರೂ ಫಲ ನೀಡುತ್ತಿಲ್ಲ.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಗ್ರಾಹಕರಾದ ನಾರಾಯಣ, ಕಾಪು ಬಂಗ್ಲೆ ಮೈದಾನದಲ್ಲಿದ್ದ ಬಿಎಸ್ಎನ್ಎಲ್ ದೂರವಾಣಿ ವಿನಿಮಯ ಕೇಂದ್ರ ಈಗ ಕಾಣೆಯಾಗಿದೆ. ಇಲ್ಲಿಂದಲೇ ನೆಟ್ವರ್ಕ್ ದುರಸ್ತಿ, ದೂರುಗಳ ಸ್ವೀಕಾರ ಮತ್ತು ಪರಿಹಾರ, ಬಿಲ್ ಕಲೆಕ್ಷನ್, ರೀಚಾರ್ಜ್ ಇತ್ಯಾದಿ ಕೆಲಸಗಳು ನಡೆಯುತ್ತಿದ್ದವು. ಬಿಎಸ್ಎನ್ಎಲ್ ತನ್ನ ಟವರ್ಗಳನ್ನು 4ಜಿ ಹಾಗೂ 5ಜಿ ತಂತ್ರಜ್ಞಾನಕ್ಕೆ ನವೀಕರಿಸಲು ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ, ಕಾಪು ಪರಿಸರದಲ್ಲಿ ಅದ್ಯಾವುದೂ ಕಾಣಿಸುತ್ತಿಲ್ಲ. ಬಿಎಸ್ಎನ್ಎಲ್ನ ದುಸ್ಥಿತಿಯ ಬಗ್ಗೆ ಈಗಾಗಲೇ ಉಡುಪಿ ಜಿಲ್ಲಾ ಎಜಿಎಂ, ಉಡುಪಿ ಜೆಇಗೆ ದೂರು ನೀಡಲಾಗಿದೆ. ಇದನ್ನು ಸರಿಪಡಿಸುವುದಕ್ಕಾಗಿ ಸಂಬಂದಪಟ್ಟ ಅಧಿಕಾರಿಗಳು, ಇಲಾಖೆಗಳು, ಜನಪ್ರತಿನಿಧಿಗಳು ಇನ್ನೂ ಕ್ರಮ ಕೈಗೊಳ್ಳದಿದ್ದರೆ ಮುಂದೆ ಪಿಎಂಒ ಕಚೇರಿಗೆ ಅರ್ಜಿ ಸಲ್ಲಿಸುವುದರೊಂದಿಗೆ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.

ಗ್ರಾಹಕರ ಸಮಸ್ಯೆಗಳೇನು?
– ಅಸ್ಪಷ್ಟ ಧ್ವನಿ, ಕಾಲ್ಡ್ರಾಪ್, ಕಣ್ಣೆದುರು ನಿಂತಿದ್ದರೂ ವ್ಯಾಪ್ತಿ ಪ್ರದೇಶದಲ್ಲಿ ಇಲ್ಲ ಎನ್ನುವ ಸಂದೇಶ!
– ಆಗಾಗ ಕಡಿತಗೊಳ್ಳುವ ಮೊಬೈಲ್ ನೆಟ್ವರ್ಕ್ ಸೇವೆ, ಇಂಟರ್ನೆಟ್ ಸೇವೆ.
– ಗೂಗಲ್ಪೇ, ಫೋನ್ಪೇ ಸಹಿತ ತುರ್ತು ಇಂಟರ್ನೆಟ್ ಸೇವೆಗೆ ಕಿರಿಕಿರಿ
– ಸರಕಾರಿ ಕಚೇರಿ, ಬ್ಯಾಂಕ್ ವ್ಯವಹಾರಕ್ಕೆ ಬೇರೊಂದು
ನೆಟ್ವರ್ಕ್ ಬೇಕು!
– ಹಿಂದೆ ವಿದ್ಯುತ್ ಕೈಕೊಟ್ಟಾಗ ನೆಟ್ವರ್ಕ್ ಕಡಿತವಾದರೆ ಈಗ ವಿದ್ಯುತ್ ಇರುವಾಗಲೂ ಕಡಿತವಾಗುತ್ತದೆ.
ಈ ಬಗ್ಗೆ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಪ್ರತಿಕ್ರಿಯಿಸಿದ್ದು, ನೆಟ್ವರ್ಕ್ ಸಮಸ್ಯೆಯ ಅನುಭವ ನಮಗೂ ಆಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ, ಸಂಸದರ ಜತೆಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಕರಾವಳಿ ಜಿಲ್ಲೆಗಳ ನಿರ್ಲಕ್ಷ್ಯದ ಬಗ್ಗೆ ಕೇಂದ್ರ ಸಚಿವರ ಗಮನಕ್ಕೂ ತರಲಾಗಿದೆ. ಮತ್ತೂಮ್ಮೆ ಸಂಸದರ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.
