ಗ್ರಾಮ ಪಂಚಾಯತಿ ನೌಕರರೊಬ್ಬರು ಹೊಳಲ್ಕೆರೆ ಶಾಸಕ ಡಾ. ಎಂ ಚಂದ್ರಪ್ಪ ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾಮದಲ್ಲಿ ನಡೆದಿದೆ.
ಗ್ರಾಮ ಪಂಚಾಯತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ತಿಪ್ಪೇಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಡೆತ್‌ನೋಟ್ ಬರೆದಿಟ್ಟು, ವಿಷ ಸೇವಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ಶಾಸಕ ಎಂ. ಚಂದ್ರಪ್ಪ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ.
ಮೂಲತಃ ಚಿತ್ರದುರ್ಗ ತಾಲೂಕಿನ ಸೊಂಡೇಕೊಳ ಗ್ರಾಮದವರಾದ ಅವರು ಹೊಸದುರ್ಗ ತಾಲೂಕಿನ ಉಪ್ಪರಿಗೇನಹಳ್ಳಿಯ ಪಂಚಾಯತಿಯಲ್ಲಿ ಕೆಲಸ ಮಾಡುತ್ತಿದ್ದರು.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ.ಎಂ ಚಂದ್ರಪ್ಪ ಅವರು ವಿನಾಕಾರಣ ಬೆದರಿಕೆ ಹಾಕುತ್ತಿದ್ದರು. ‘ನಿನ್ನನ್ನ ಸಸ್ಪೆಂಡ್ ಮಾಡಿಸ್ತೀನಿ’ ಎಂದು ಆಗಾಗ್ಗೆ ಹೆಸರಿಸುತ್ತಿದ್ದರು. ನನ್ನ ಮೇಲೆ ತಾಲೂಕು ಪಂಚಾಯತಿ ಇಓ ಮೂಲಕ ಒತ್ತಡ ಹಾಕಿದ್ದರು. ಲಿಂಗಾಯಿತರು ಕೆಲಸ ಮಾಡುವುದು ಬಹಳ ಕಷ್ಟವಾಗಿದೆ ಎಂದು ಅವರು ತಮ್ಮ ಡೆತ್‌ನೋಟ್‌ನಲ್ಲಿ ಆರೋಪಿಸಿದ್ದಾರೆ.

ಉಪ್ಪರಿಗೇನಹಳ್ಳಿ ಮೋಹನ್ ಕುಮಾರ್, ಮೂರ್ತಿ, ಉಗ್ರಪ್ಪ, ರಾಜಪ್ಪ ಹಾಗೂ ಇತರೆ 30 ಮಂದಿ ನನಗೆ ಬೆದರಿಕೆ ಹಾಕಿ, ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ತಾಲೂಕು ಪಂಚಾಯತಿ ಇಓ ಸೇರಿದಂತೆ ನನಗೆ ಬೆದರಿಕೆ ಹಾಕಿ ದೌರ್ಜನ್ಯ ಎಸಗಿರುವ ವಿರುದ್ಧ ತನಿಖೆ ನಡೆಸಬೇಕು ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.
ಆತ್ಮಹತ್ಯೆ ಪ್ರಕರಣ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.