ಈ ದಿನ ಸಂಪಾದಕೀಯ | ರೈತರು ಮಣ್ಣು ತಿನ್ನುವುದು, ಮನುಷ್ಯರು ವಿಷ ಉಣ್ಣುವುದು ನಿಲ್ಲುವುದೆಂದು?

Date:

Advertisements
ಬೀಜ ಮತ್ತು ಗೊಬ್ಬರಕ್ಕಾಗಿ ಕಾರ್ಪೊರೇಟ್ ಕಂಪನಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡು ಸಹಜ ಕೃಷಿಯತ್ತ ಹೊರಳದ ಹೊರತು ಬದುಕಿಲ್ಲ ಎನ್ನುವುದನ್ನು ಅರಿಯಬೇಕು. ಇಲ್ಲದಿದ್ದರೆ ರೈತರು ಮಣ್ಣು ತಿನ್ನುವುದು, ಮನುಷ್ಯರು ವಿಷ ಉಣ್ಣುವುದು ನಿತ್ಯ ನಿರಂತರ.

ಹಿಂದೊಮ್ಮೆ ಕುಲಾಂತರಿ ಹತ್ತಿ ತಳಿ ಮಾರುಕಟ್ಟೆಗೆ ಬಂದಾಗ, ರೈತನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರು, ‘ಇನ್ನು ಹತ್ತು ವರ್ಷಗಳಲ್ಲಿ ದೇಸಿ ತಳಿಬೀಜಗಳು ನಾಶವಾಗಲಿವೆ’ ಎಂದಿದ್ದರು. ಅವರು ಹೇಳಿದಂತೆಯೇ, ಕೇವಲ ಹತ್ತು ವರ್ಷಗಳಲ್ಲಿ ಶೇ. 97ರಷ್ಟು ರೈತರು ಕುಲಾಂತರಿ ಬೀಜಗಳನ್ನು ಅವಲಂಬಿಸುವಂತಾಯಿತು. ರೈತರು ಮಿಶ್ರ ಬೇಸಾಯ ಬಿಟ್ಟು, ಹಣ ತರುವ ಏಕಬೆಳೆ(ಮಾನೋ ಕಲ್ಚರ್) ಸಂಸ್ಕೃತಿಯತ್ತ ವಾಲಿದ ಪರಿಣಾಮವಾಗಿ- ಮನೆಬೀಜ ಸಂಸ್ಕೃತಿ ಮರೆಯಾಯಿತು; ಕುರಿ-ಕೋಳಿ-ದನ-ಎಮ್ಮೆಗಳ ಸಾಕುವುದನ್ನು ಬಿಟ್ಟಿದ್ದರಂದ ತಿಪ್ಪೆ ಗೊಬ್ಬರ ಕಣ್ಮರೆಯಾಯಿತು.

ರೈತರು ಕಾಪಿಡುತ್ತಿದ್ದ ಮನೆಬೀಜಗಳು ಮರೆಯಾಗುತ್ತಿದ್ದಂತೆ, ಸರ್ಕಾರಿ ಬೀಜೋತ್ಪಾದನೆ, ಕಾರ್ಪೊರೇಟ್ ಕಂಪನಿಗಳ ಕುಲಾಂತರಿ ಬೀಜಗಳು ಮಾರುಕಟ್ಟೆ ಆಕ್ರಮಿಸಿಕೊಂಡವು. ಈಗಿನ ವ್ಯವಸ್ಥೆ ಹೇಗಿದೆ ಎಂದರೆ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಸರ್ಕಾರದಿಂದ ಬೀಜದ ಬೇಡಿಕೆ ಬರದ ಹೊರತು, ಬೀಜೋತ್ಪಾದನೆಗೆ ಮುಂದಾಗುವುದಿಲ್ಲ. ಲಾಭಬಡುಕ ಕಾರ್ಪೊರೇಟ್ ಕಂಪನಿಗಳು, ಸರ್ಕಾರಿ ಸಂಸ್ಥೆಗಳು ಬೀಜೋತ್ಪಾದನೆ ಮಾಡಲು ಬಿಡುವುದಿಲ್ಲ. ಮಳೆಯಾಗುತ್ತಿದ್ದಂತೆ ರೈತ ಹೊಲ ಹದ ಮಾಡುವುದು, ಸರ್ಕಾರದತ್ತ ನೋಡುವುದು ನಿಲ್ಲುವುದಿಲ್ಲ. ಸರ್ಕಾರ, ‘ರೈತಬಾಂಧವರು ಆತಂಕಪಡುವ ಅಗತ್ಯವಿಲ್ಲ’ ಎಂಬ ಮಂತ್ರ ಜಪಿಸುವುದನ್ನು ಬಿಡುವುದಿಲ್ಲ. ಸರ್ಕಾರದ ಸಿದ್ಧಮಂತ್ರವನ್ನು ರೈತ ಕೇಳುತ್ತಾನೆ, ಮಣ್ಣು ಕೇಳುತ್ತದೆಯೇ?

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಹಿಳಾ ಉದ್ಯೋಗ ಹೆಚ್ಚಿಸಿದ ‘ಶಕ್ತಿ ಯೋಜನೆ’; ಟೀಕಾಕಾರರಿಗೆ ಸಶಕ್ತ ಉತ್ತರ

ಸರೀಕರ ಸಣ್ಣ ನೋಟಕ್ಕೆ ಅದುರಿಹೋಗುವ ರೈತ, ಪಕ್ಕದ ಹೊಲದ ಬಿತ್ತನೆ ಕಾರ್ಯ ನೋಡಿ ಅನಿವಾರ್ಯವಾಗಿ ಕಾರ್ಪೊರೇಟ್ ಕಂಪನಿಗಳು ಹೇಳಿದ ದರ ಕೊಟ್ಟು ಬೀಜ ಮತ್ತು ಗೊಬ್ಬರ ಖರೀದಿಸುತ್ತಾನೆ. ಈಗ ರೈತ ವಾಣಿಜ್ಯ ಬೆಳೆಗಳತ್ತ ಗಮನ ಹರಿಸಿರುವುದರಿಂದ ಕುಲಾಂತರಿ ತಳಿಬೀಜದ ಮೊರೆ ಹೋಗುತ್ತಾನೆ. ಬೆಳೆಗಳು ಕೀಟ ಮತ್ತು ರೋಗಗಳಿಗೆ ಒಳಗಾಗುವುದರಿಂದ ಕಾಲಕಾಲಕ್ಕೆ ರಾಸಾಯನಿಕ ಗೊಬ್ಬರ, ಔಷಧಿ ಸಿಂಪಡಿಸುತ್ತಲೇ ಇರಬೇಕಾಗುತ್ತದೆ. ನೀರಿಗಾಗಿ ಮಳೆಯನ್ನು ನೆಚ್ಚದೆ ಕೃಷಿಹೊಂಡ, ಹನಿನೀರಾವರಿ, ಬೋರ್‍‌ವೆಲ್ ಬಳಸಬೇಕಾಗುತ್ತದೆ.

ಹೀಗಾಗಿ ಕೃಷಿ ಕೂಡ ಈಗ ಲೆಕ್ಕಾಚಾರದ ಬದುಕಾಗಿದೆ. ಬಂಡವಾಳ ಹೂಡುವ, ಲಾಭ ನಿರೀಕ್ಷಿಸುವ ಉದ್ಯಮವಾಗಿದೆ. ಆದರೆ, ರೈತರು ತಾವು ಬೆಳೆದ ಬೆಳೆಗೆ ಬೆಲೆ ನಿಗದಿ ಮಾಡುವ ಕಾಲ, ಇವತ್ತಿಗೂ ಇಲ್ಲ. ಸಕಾಲದಲ್ಲಿ ಸರ್ಕಾರದಿಂದ ಬೆಂಬಲ ಬೆಲೆ ಸಿಗುವುದಿಲ್ಲ. ಅಕಸ್ಮಾತ್ ಪ್ರಕೃತಿ ಮುನಿಸಿಕೊಂಡರೆ ಅಥವಾ ಬೆಳೆಗೆ ರೋಗ ಬಡಿದರೆ, ಕೈಗೆ ಬಂದ ತುತ್ತು ಬಾಯಿಗಿಲ್ಲ. ಒಟ್ಟಾರೆ ರೈತ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗುತ್ತಾನೆ; ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆಗೆ ಶರಣಾಗುತ್ತಾನೆ.

ಹೊಸ ಕೃಷಿ ಪದ್ಧತಿಯಿಂದ ರೈತನ ಕತೆ ಹೀಗಾದರೆ, ಏಕಬೆಳೆ ಸಂಸ್ಕೃತಿಯಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ಅದು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಿಕ್ಕಾಪಟ್ಟೆ ರಾಸಾಯನಿಕ ಸಿಂಪಡಿಸಿ ಬೆಳೆದ ಹಣ್ಣು-ತರಕಾರಿ-ಸೊಪ್ಪು-ದವಸ-ಧಾನ್ಯಗಳನ್ನು ಸೇವಿಸುವ ಮೂಲಕ ಮನುಷ್ಯರ ಆರೋಗ್ಯ ಹದಗೆಡುತ್ತದೆ. ಈ ವಿಷವರ್ತುಲ ನಮ್ಮ ರೈತರಿಗೆ, ನಮ್ಮನ್ನಾಳುವ ಸರ್ಕಾರಗಳಿಗೆ ಯಾವಾಗ ಅರ್ಥವಾಗುತ್ತದೆ?

ಇಂತಹ ಸಂದರ್ಭದಲ್ಲಿಯೇ ಪ್ರತಿವರ್ಷದಂತೆ, ಈ ಬಾರಿಯೂ ರಸಗೊಬ್ಬರಕ್ಕಾಗಿ ಅಂಗಡಿಗಳ ಮುಂದೆ ಸರತಿ ಸಾಲು ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ದಿನವಿಡೀ ನಿಂತರೂ ಬಾಗಿಲು ತೆಗೆಯದ ಅಂಗಡಿಗಳು, ಬಾಗಿಲು ತೆಗೆದರೂ ಅಗತ್ಯ ದಾಸ್ತಾನು ಇಲ್ಲದಿರುವುದು, ಇದ್ದರೂ ಸಬೂಬು ಹೇಳಿ ಸಾಗಹಾಕುವುದು ಕೂಡ ಸಾಮಾನ್ಯವಾಗಿದೆ. ಇದರಿಂದ ಬೇಸತ್ತ ಕೊಪ್ಪಳದ ರೈತ ಚಂದ್ರಪ್ಪ ಬಡಿಗಿ ಮಣ್ಣು ತಿಂದು ಸರ್ಕಾರಕ್ಕೆ ಶಾಪ ಹಾಕಿದ್ದೂ ಆಗಿದೆ.

ಬೆವರು ಸುರಿಸಿ ಭೂಮಿ ಹದ ಮಾಡಿ ಹೈರಾಣಾದ ರೈತ, ಬೀಜ ಮತ್ತು ಗೊಬ್ಬರಕ್ಕಾಗಿ ಬಂದಾಗ, ನೋ ಸ್ಟಾಕ್ ಬೋರ್ಡ್ ನೋಡಿ ದೃತಿಗೆಡುವುದು ಸಹಜ. ವ್ಯಾಪಾರಸ್ಥರ ಸಬೂಬುಗಳು ರೈತರನ್ನು ಕೆರಳಿಸುವುದು, ರೈತರು ಸಹನೆ ಕಳೆದುಕೊಂಡು ಅಂಗಡಿ ಮಾಲೀಕನೊಂದಿಗೆ ಜಗಳಕ್ಕೆ ಬೀಳುವುದು, ಮುತ್ತಿಗೆ ಹಾಕುವುದು, ಲೂಟಿಗೆ ಮುಂದಾಗುವುದು, ಪೊಲೀಸರು ಲಾಠಿ ಚಾರ್ಜ್ ನಡೆಸುವುದು- ಎಲ್ಲವೂ ಪ್ರತಿವರ್ಷದ ಪುನರಾವರ್ತಿತ ಸುದ್ದಿಗಳು.  

2008ರ ಜೂನ್‌ನಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಬಿಜೆಪಿಯ ಬಿ.ಎಸ್. ಯಡಿಯೂರಪ್ಪನವರು, ಕೊರಳಿಗೆ ಹಸಿರು ಶಾಲು ಧರಿಸಿ, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ವಿಪರ್ಯಾಸಕರ ಸಂಗತಿ ಎಂದರೆ ಅದೇ ದಿನ ಹಾವೇರಿಯಲ್ಲಿ ಗೊಬ್ಬರಕ್ಕಾಗಿ ನಡೆದ ಹೋರಾಟದಲ್ಲಿ, ಇಬ್ಬರು ರೈತರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು.

ಇಬ್ಬರು ರೈತರು ಬಲಿಯಾಗಿ ಇಲ್ಲಿಗೆ ಹದಿನೇಳು ವರ್ಷಗಳಾದವು. ಇಲ್ಲಿಯವರೆಗೆ ಆ ರೈತರಿಗೆ ನ್ಯಾಯ ನೀಡದ ಬಿಜೆಪಿ, ಈಗ ಗೊಬ್ಬರದ ನೆಪದಲ್ಲಿ ರಾಜ್ಯದಾದ್ಯಂತ ಹೋರಾಟ ಆರಂಭಿಸಿದೆ. ರಾಜ್ಯದ ರೈತರಿಗೆ ತೊಂದರೆ ಆದಾಗ, ರೈತರ ಪರ ನಿಂತು ಸರ್ಕಾರದ ಮೇಲೆ ಒತ್ತಡ ತರಬೇಕಾದ್ದು, ಸರ್ಕಾರದ ಲೋಪದೋಷಗಳನ್ನು ಎತ್ತಿ ತೋರಿಸಬೇಕಾದ್ದು ಪ್ರತಿಪಕ್ಷದ ಕರ್ತವ್ಯ ಕೂಡ.

ಆದರೆ ಬಿಜೆಪಿ, ‘ರಾಜ್ಯದಲ್ಲಿ ಮುಂಗಾರು ಹಂಗಾಮಿಗಾಗಿ 6.30 ಲಕ್ಷ ಮೆಟ್ರಿಕ್ ಟನ್‌ ಯೂರಿಯಾದ ಅವಶ್ಯಕತೆಯಿದೆ ಎಂದು ರಾಜ್ಯ ಸರ್ಕಾರ ಬೇಡಿಕೆ ಇಟ್ಟಿತ್ತು. ಆದರೆ, ಕೇಂದ್ರ ರಸಗೊಬ್ಬರ ಇಲಾಖೆ ರಾಜ್ಯದ ರೈತರ ಹಿತದೃಷ್ಟಿಯಿಂದ ಸಕಾಲಿಕವಾಗಿ 8.73 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಪೂರೈಕೆ ಮಾಡಿದೆ. ಕೇಂದ್ರ ಸರ್ಕಾರ ರಾಜ್ಯದ ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದ ಗೊಬ್ಬರ ಪೂರೈಸಿದೆ’ ಎಂದು ದೂರುತ್ತಿದೆ.

ಬಿಜೆಪಿಯ ದೂರಿಗೆ ಉತ್ತರಿಸಿರುವ ಕೃಷಿ ಸಚಿವ ಚಲುವರಾಯಸ್ವಾಮಿ, ‘ಏಪ್ರಿಲ್‌ನಿಂದ ಜುಲೈ 2025ರವರೆಗೆ ಕೇಂದ್ರ ಸರಕಾರವು 6.82 ಲಕ್ಷ ಮೆ.ಟನ್ ರಸಗೊಬ್ಬರ ಹಂಚಿಕೆ ಮಾಡಿದ್ದು, ಇದರಲ್ಲಿ 5.26 ಲಕ್ಷ ಮೆ. ಟನ್ ಸರಬರಾಜಾಗಿದೆ. ಆದರೆ ರಾಜ್ಯಕ್ಕೆ 11.17 ಲಕ್ಷ ಮೆ. ಟನ್ ಬೇಡಿಕೆಯಿದೆ. ರಾಜ್ಯದಿಂದ ಪದೇ ಪದೆ ಪತ್ರ ಬರೆದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ಆಕ್ಷೇಪಿಸಿದ್ದಾರೆ. ಜೊತೆಗೆ ರಸಗೊಬ್ಬರ ಪೂರೈಕೆಗೆ ಸರ್ಕಾರ ಬದ್ಧ, ರೈತರು ಆತಂಕಪಡುವ ಅಗತ್ಯವಿಲ್ಲ ಎಂಬ ಭರವಸೆಯನ್ನೂ ನೀಡುತ್ತಾರೆ.

ಆದರೆ, ಅರ್ಧ ಎಕರೆ ರೈತನಿಗೂ 50 ಕೆಜಿ ಚೀಲ, 5 ಎಕರೆ ಹೊಲವಿರುವ ರೈತನಿಗೂ 50 ಕೆಜಿ ಚೀಲ ರಸಗೊಬ್ಬರ ಕೊಟ್ಟರೆ ಏನು ಮಾಡಬೇಕು? 50 ಕೆಜಿ ಗೊಬ್ಬರವನ್ನು ಹೊಲದ ಯಾವ ಮೂಲೆಗೆ ಹಾಕಬೇಕು? ಮತ್ತೊಂದು ಚೀಲ ಬೇಕೆಂಬ ಬೇಡಿಕೆಗೆ ಕನಿಷ್ಠ ಒಂದು ತಿಂಗಳಾದರೂ ಕಾಯಬೇಕು. ಅಲ್ಲಿಯವರೆಗೆ ಬೆಳೆ ಬದುಕುತ್ತದೆಯೇ?

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಹದಾಯಿ: ನಾಯಕರೇ ನಾಡದ್ರೋಹಿಗಳು

ಒಟ್ಟಿನಲ್ಲಿ ಆಳುವ ಸರ್ಕಾರ ಕಾಂಗ್ರೆಸ್, ಕೇಂದ್ರದ ಬಿಜೆಪಿ ಮೇಲೆ; ಬಿಜೆಪಿ ಕಾಂಗ್ರೆಸ್ ಮೇಲೆ ದೂರುಗಳ ಸುರಿಮಳೆ ಸುರಿಸುತ್ತಿವೆ. ಪತ್ರಿಕಾ ಹೇಳಿಕೆಗಳ ಮೂಲಕ ಮಾಧ್ಯಮಗಳಲ್ಲಿ ಪ್ರಚಾರದ ಬೆಳೆ ತೆಗೆಯುತ್ತಿವೆ. ಎದುರಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಇಬ್ಬರಿಗೂ ಬೇಕಾಗಿಲ್ಲ. ಇಬ್ಬರೂ ಕೀಳುಮಟ್ಟದ ರಾಜಕಾರಣಕ್ಕೆ ರೈತರನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ರೈತರಿಗೆ ಅರ್ಥವಾಗಬೇಕು.

ಹಾಗೆಯೇ ಬೀಜ ಮತ್ತು ಗೊಬ್ಬರಕ್ಕಾಗಿ ಸರ್ಕಾರದ ಸೊಸೈಟಿಗಳ ಮತ್ತು ಕಾರ್ಪೊರೇಟ್ ಕಂಪನಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡು ಸಹಜ ಕೃಷಿಯತ್ತ ಹೊರಳದ ಹೊರತು ಬದುಕಿಲ್ಲ ಎನ್ನುವುದನ್ನು ಅರಿಯಬೇಕು. ಇಲ್ಲದಿದ್ದರೆ ರೈತರು ಮಣ್ಣು ತಿನ್ನುವುದು, ಮನುಷ್ಯರು ವಿಷ ಉಣ್ಣುವುದು ನಿತ್ಯ ನಿರಂತರ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸಿನೆಮಾ ಟಿಕೆಟ್ ದರಗಳಿಗೆ ಸರ್ಕಾರಿ ಕಡಿವಾಣದ ಸಂಗತಿಯೇನು?

ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರಗಳನ್ನು...

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

Download Eedina App Android / iOS

X