ಸಾಗರ, ಕಾಡಿಗೆ ನಾಡಿನ ಜಾನುವಾರುಗಳಿಗೆ ನಿರ್ಬಂದ ಹೇರಿ ಆದೇಶ ಹೊರಡಿಸಿರುವ ಕರ್ನಾಟಕ ರಾಜ್ಯ ಅರಣ್ಯ ಸಚಿವರ ರೈತ ವಿರೋಧಿ ಆದೇಶದ ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿ ರೈತ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ನೇತೃತ್ವದಲ್ಲಿ ಜನ ಜಾನುವಾರುಗಳ ಸಹಿತ ಪ್ರತಿಭಟನೆ ನಡೆಸಿದರು.
ಅವರು ಸಾಗರ ಪಟ್ಟಣಕ್ಕೆ ಸಮೀಪದ ಕೆಳದಿ ರಸ್ತೆಯಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಮಲೆನಾಡು ಗಿಡ್ಡ ಜಾನುವಾರುಗಳು ಮತ್ತು ಎಮ್ಮೆ-ಕೋಣಗಳ ಸಹಿತ ಜಮಾಯಿಸಿ ಜಾನುವಾರುಗಳಿಗೆ ಹಸಿರು ಹುಲ್ಲೆ ಹಾಗೂ ಬತ್ತದ ಬಿಳಿ ಹುಲ್ಲು ತಿನ್ನಲು ಹಾಕಿ ಅರಣ್ಯ ಸಚಿವರ ರೈತ ವಿರೋಧಿ ಆದೇಶವನ್ನು ಖಂಡಿಸಿ ವಿನೂತನ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಅರಣ್ಯ ಸಚಿವರಿಂದ ಕಾಡು ಮತ್ತು ನಾಡನ್ನು ಬೇರ್ಪಡಿಸುವ ಹುನ್ನಾರ ನಡೆಯುತ್ತಿದೆ.ರಾಜಮಹಾರಾಜರುಗಳ ಕಾಲದಿಂದ ಜಾನುವಾರುಗಳಿಗೆ ಕಾಡು-ಮೇಡು ಆಹಾರಕ್ಕೆ ಆದಾರವಾಗಿದೆ.ಕಾಡಿನ ಮೇವು ತಿಂದು ತಿರುಗಾಟದಿಂದ ಸಂಜೆ ಮನೆಗೆ ಆಗಮಿಸುವ ಜಾನುವಾರುಗಳು ಮತ್ತು ಕುರಿಗಳ ಹಾಲು ಹಾಗೂ ಸಗಣಿ ಅತ್ಯಂತ ಔಷಧ ಪೌಷ್ಠಿಕವಾಗಿರುತ್ತದೆ ಎಂಬ ಪ್ರತೀತಿಯಿದೆ ಎಂದರು.
ಕಾಡಿಗೆ ಜಾನುವಾರುಗಳು ಹೋಗುವುದರಿಂದ ಕಾಡಿನ ಅಂಚಿನಲ್ಲಿರುವ ಹುಲುಸಾಗಿ ಬೆಳೆದಿರುವ ಹಸಿರು ಹುಲ್ಲು ತಿನ್ನುವ ಮೂಲಕ ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಬೀಳುವ(ಕಾಡ್ಗಿಚ್ಚಿನ) ಅಪಾಯ ತಪ್ಪುತ್ತದೆ. ಹೈನುಗಾರಿಕೆಗೆ ಜಾನುವಾರುಗಳ ಕಾಡಿನ ಸಂಪರ್ಕಕ್ಕೆ ಯಾವುದೇ ನಿರ್ಬಂದ ಹೇರಬಾರದು ಎಂದರು.
ರೈತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಾಗರದ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್‌ಕುಮಾರ್ ಅವರನ್ನು ಉದ್ದೇಶಿಸಿ ಮನವಿ ಮಾಡಿದ ರೈತಮುಖಂಡರು, ಮಲೆನಾಡಿನ ಜಾನುವಾರುಗಳಿಗೆ ಕಾಡು-ಮೇಡುಗಳಲ್ಲಿ ಮೇಯಲು ಯಾವುದೇ ನಿರ್ಬಂದ ಹೇರದೆ ಮುಕ್ತ ಅವಕಾಶ ಕಲ್ಪಿಸಬೇಕು.ಅರಣ್ಯ ಇಲಾಖೆ ರೈತರ ಪರವಾಗಿ ಸ್ಪಂದಿಸಬೇಕು.ಆನಂದಪುರಂ ಹೋಬಳಿ ಮಲ್ಲಂದೂರು ರೈತರುಗಳಿಗೆ ಅರಣ್ಯ ಇಲಾಖೆಯಿಂದ ಆಗುತ್ತಿರುವ ಅಡಚಣೆಗಳಿಗೆ ಕಡಿವಾಣ ಹಾಕಬೇಕು.ರೈತರ ಬೇಡಿಕೆಗೆ ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಜಾನುವಾರುಗಳ ಮುಖಕ್ಕೆ ಅರಣ್ಯ ಸಚಿವರ ಮುಖವಾಡ ಅಳವಡಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.