ಉಳುಮೆ ಪ್ರತಿಷ್ಠಾನದಿಂದ ಮೈಸೂರಿನ ಗದ್ದಿಗೆ ಮುಖ್ಯ ರಸ್ತೆಯಲ್ಲಿರುವ ‘ ಬನವಾಸಿ ತೋಟ ‘ದಲ್ಲಿ ದಿನಾಂಕ-03-08-2025 ರಂದು ‘ ಬೆಳಕಿನ ಬೇಸಾಯ ‘ ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
“ರೈತ ನಮ್ಮ ದೇಶದ ಬೆನ್ನೆಲಬು ಎನ್ನುತ್ತಾರೆ. ಆದರೆ, ಇಂದು ಅದೇ ರೈತನ ಬೆನ್ನೆಲುಬು ಮುರಿದು ಬೀಳುತ್ತಿದೆ. ಇದಕ್ಕೆ ಹಲವಾರು ಕಾರಣಗಳು ಇವೆ. ಹವಾಗುಣದಲ್ಲಿ ಬದಲಾವಣೆ ಆಗುತ್ತಿರುವುದು, ಅಕಾಲಿಕ ಮಳೆ ಅಥವಾ ಅತಿವೃಷ್ಟಿ, ಸಮಯಕ್ಕೆ ಸರಿಯಾದ ಬಿತ್ತನೆ ಬೀಜ ಸಿಗದೆ ಇರುವುದು, ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದಿರುವುದು.”
” ಮತ್ತೊಂದು ಕಡೆ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಸಾಧನವಾದ ಸಾವಯವ ಇಂಗಾಲದ ಪ್ರಮಾಣ ಶೇ 3% ಕ್ಕಿಂತ ಅಧಿಕ ಇರಬೇಕು. ಆದರೆ, ಈ ರಾಸಾಯನಿಕ ಕೃಷಿ ಪದ್ಧತಿಯಿಂದ ಸಾವಯವ ಇಂಗಾಲದ ಪ್ರಮಾಣವು ಶೇ ೦.5% ರ ಆಸುಪಾಸಿಗೆ ಕುಸಿದಿದೆ. ಇದರಿಂದ ಕೃಷಿ ಭೂಮಿ ಅಸ್ಥಿಪಂಜರವಾಗಿ ಇಳುವರಿಯು ಗಣನೀಯ ಪ್ರಮಾಣದಲ್ಲಿ ಕುಸಿಯುವಂತಾಗಿದೆ. ಬಹಳ ಮುಖ್ಯವಾಗಿ ನಮ್ಮ ಆಹಾರಕ್ಕಾಗಿ ನಾವು ಬೆಳೆಯುವ ಬೆಳೆಗಳಿಗೆ 15ಲಿ ರಿಂದ 30ಲಿ ತಾಪಮಾನವು ಅತ್ಯವಶ್ಯಕ. “
ಆದರೆ, ಇಂದು ಪ್ರಪಂಚದಾದ್ಯಂತ ಶೇ 70%ರಷ್ಟು ಪ್ರದೇಶದಲ್ಲಿ 35ಲಿ ಗೂ ಅಧಿಕ ತಾಪಮಾನವನ್ನು ಕಾಣುತ್ತಿದ್ದೇವೆ. ಕೆಲವು ಕಡೆ 45ಲಿ ತಾಪಮಾನ ದಾಖಲಾಗಿದೆ. ಈ ಬಿಸಿಲಿನ ತೀವ್ರತೆಯಿಂದ ನಮ್ಮ ಬೆಳೆಗಳು ನರಳಾಡಿ, ನರಳಾಡಿ ಸಾಯುತ್ತಿವೆ. ಇಂತಹ ಹತ್ತು ಹಲವಾರು ಕಾರಣಗಳಿಂದ ರೈತ ಮತ್ತು ಕೃಷಿ ಸಂಕಷ್ಟಕ್ಕೆ ಸಿಲುಕಿದೆ. 1947ನೇ ಇಸವಿಯ ಆಸುಪಾಸಿನಲ್ಲಿ ಶೇ 100% ನಷ್ಟಿದ್ದ ರೈತರ ಸಂಖ್ಯೆ ಇಂದು ಶೇ 58% ರ ಆಸುಪಾಸಿಗೆ ತಲುಪಿರುವುದು ಆತಂಕಕ್ಕೆ ಎಡೆ ಮಾಡಿಕೊಡುತ್ತಿದೆ. “
” ಇಂದು ರೈತ ಸಮುದಾಯವು ಸಾಮಾಜಿಕವಾಗಿ ಮತ್ತು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಯುವ ಜನತೆ ಕೃಷಿಯತ್ತ ಮುಖ ಮಾಡಿಯೂ ನೋಡುತ್ತಿಲ್ಲ. ಇಂತಹದೇ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದೆ ನಾವು ಬದುಕುವುದಾದರೂ ಹೇಗೆ? ಈ ಪ್ರಶ್ನೆಗೆ ಉತ್ತರವನ್ನು ಹುಡುಕಬೇಕಾಗಿದೆ. ಹಾಗೂ ಕೃಷಿಯಲ್ಲಿ ಬಳಸುತ್ತಿರುವ ಕ್ರಿಮಿನಾಶಕಗಳು, ಕೀಟನಾಶಕಗಳು, ಗೊಬ್ಬರಗಳು ನಮ್ಮ ದೇಹವನ್ನು ಸೇರುತ್ತಿವೆ. ಬಹಳ ಮುಖ್ಯವಾಗಿ ಆಹಾರ ಪದಾರ್ಥಗಳನ್ನು ಸಂರಕ್ಷಿಸಿಡುವಾಗ ಮತ್ತು ಅವುಗಳನ್ನು ಮೌಲ್ಯವರ್ಧನೆ ಮಾಡುವಾಗ ಮತ್ತು ಪ್ಯಾಕ್ ಮಾಡುವಾಗಲೂ ರಾಸಾಯನಿಕಗಳನ್ನು ಮತ್ತು ಪ್ಲಾಸ್ಟಿಕ್ ಅನ್ನು ಬಳಸಲಾಗುತ್ತದೆ. ಇನ್ನು ಮಾರುಕಟ್ಟೆಯಲ್ಲಿ ದೊರೆಯುವ ತರಕಾರಿ, ಹಣ್ಣು, ಕಾಳುಗಳು ಸದಾ ತಾಜಾತನದಿಂದ ಕೂಡಿರಲು ರಾಸಾಯನಿಕಗಳನ್ನು, ಕೃತಕ ಬಣ್ಣಗಳನ್ನು, ವ್ಯಾಕ್ಸ್ ಕೋಟಿಂಗ್ ಬಳಸಲಾಗುತ್ತಿದೆ. “
ಇದರಿಂದ, ನಮ್ಮ ದೇಹದ ರಕ್ತದ ಕಣಗಳಲ್ಲಿ ಪ್ಲಾಸ್ಟಿಕ್‌ನ ಸೂಕ್ಷ್ಮಾತಿ ಸೂಕ್ಷ್ಮ ಕಣಗಳು ಸೇರಿದೆ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಇದು ಅತ್ಯಂತ ಆತಂಕಕಾರಿ ಸಂಶೋಧನೆಯಾಗಿದೆ. ಮತ್ತೊಂದು ಕಡೆ ಅಪೌಷ್ಠಿಕತೆಯೂ ಹೆಚ್ಚಾಗುತ್ತಿದೆ. ವರ್ಷಕ್ಕೆ ಸುಮಾರು 4 ಲಕ್ಷ ಮಕ್ಕಳು ಅಪೌಷ್ಠಿಕತೆಯಿಂದ ಸಾಯುತ್ತಿದ್ದಾರೆ ಎಂದು ಡಬ್ಲ್ಯೂಹೆಚ್ಓ ತಿಳಿಸುತ್ತದೆ.

ನಮ್ಮ ವಾತಾವರಣದಲ್ಲಿ ಸಾರಜನಕ ಮತ್ತು ಆಮ್ಲಜನಕದ ಪ್ರಮಾಣ ಗಣನೀಯವಾಗಿ ಕಮ್ಮಿ ಆಗುತ್ತಿದೆ. ಇದಕ್ಕೆ ಕಾರಣ ಮರಗಿಡಗಳ ಸಂಖ್ಯೆ ಕಮ್ಮಿ ಆಗುತ್ತಿರುವುದು ಒಂದು ಕಡೆ ಆದರೆ, ಪ್ಲಾಂಕ್ಟಾನ್ ನಂತಹ ಜೀವಿಗಳು ನಶಿಸುತ್ತಿರುವುದು ಮತ್ತೊಂದು ಕಾರಣವಾಗಿದೆ. ಒಟ್ಟಿನಲ್ಲಿ ನಮ್ಮ ಆಧುನಿಕ ಜೀವನದ ಆವಿಷ್ಕಾರಗಳು ನಮ್ಮ ಅಸ್ತಿತ್ವಕ್ಕೆ ಮುಳುವಾಗಿದೆ.
ಇಂತಹ ಸಂದರ್ಭದಲ್ಲಿ ಕೃಷಿಯಲ್ಲಿ ಯಶಸ್ಸನ್ನು ಕಾಣುವುದು ಹೇಗೆ? ಎಂದು ಜಾಗೃತಿಯನ್ನು ಮೂಡಿಸುವ ಸಲುವಾಗಿ ಬನವಾಸಿ ತೋಟದಲ್ಲಿ ಕಳೆದ 35 ವರ್ಷಗಳಿಂದ ಯಾವುದೇ ರಾಸಾಯನಿಕಗಳನ್ನು ಬಳಸದೆ ಬೆಳಕಿನ ಬೇಸಾಯ ಕ್ರಮದಲ್ಲಿ ಆಹಾರ ವನವನ್ನಾಗಿ ಪರಿವರ್ತಿಸಿದ್ದೇವೆ. ಈ ನಮ್ಮ ಆಹಾರ ವನದಲ್ಲಿ ಸುಮಾರು 40 ಕ್ಕೂ ಅಧಿಕ ವಿವಿಧ ಬೆಳೆಗಳನ್ನು ಆಯೋಜಿದ್ದು ಪ್ರತಿ ತಿಂಗಳು ಆದಾಯವನ್ನು ಕಾಣುತ್ತಿದ್ದೇವೆ. ಈ ಕಾರ್ಯಾಗಾರದಲ್ಲಿ ಬನವಾಸಿ ತೋಟವು ಆಹಾರ ವನವಾಗಿ ಪರಿವರ್ತಿಸಿದ್ದು ಹೇಗೆ? ಬೆಳಕಿನ ಬೇಸಾಯ ಎಂದರೆ ಏನು? ರೋಗ ರುಜಿನಗಳನ್ನು ತಡೆಗಟ್ಟಲು ರಾಸಾಯನಿಕ ಮುಕ್ತವಾದ ಕಷಾಯಗಳನ್ನು ತಯಾರಿಸಿಕೊಳ್ಳುವುದು ಹೇಗೆ? ಬೆಳಕಿನ ಸದ್ಬಳಕೆಯನ್ನು ಮಾಡಿಕೊಳ್ಳುವುದು ಹೇಗೆ?, ಮಳೆಗಾಲದ ಹನಿ ಹನಿ ನೀರನ್ನು ಶೇಖರಿಸಿಟ್ಟುಕೊಳ್ಳುವುದು ಹೇಗೆ?, ರಾಸಾಯನಿಕ ಮುಕ್ತವಾಗಿ ಮಣ್ಣನ್ನು ಫಲವತ್ತು ಮಾಡಿಕೊಳ್ಳುವುದು ಹೇಗೆ? ಎನ್ನುವ ಹತ್ತು ಹಲವು ವಿಚಾರಗಳನ್ನು ತಿಳಿಸಿಕೊಡುತ್ತಾ, ಒಂದು ಎಕರೆ ಪ್ರದೇಶವು ಪ್ರತಿ ತಿಂಗಳು ಕನಿಷ್ಟ ₹15000 ರೂಪಾಯಿ ಆದಾಯವನ್ನು ಒದಗಿಸುವಂತಹ ಮಾದರಿಗಳನ್ನು ಪರಿಚಯಿಸಲಾಗುವುದು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಮನಿ ಡಬ್ಲಿಂಗ್ ಪ್ರಕರಣ; ಪಿಎಸ್ಐ ಪರಾರಿ
ಕಾರ್ಯಾಗಾರದಲ್ಲಿ ಬಾಗವಹಿಸಲು ಕೃಷಿಕರು ಹಾಗೂ ಲೇಖಕರಾದ ಟಿ ಜಿ ಎಸ್ ಅವಿನಾಶ್ ಅವರನ್ನು ಸಂಪರ್ಕಿಸಬಹುದು – 8197856132.