ಪಂಚಮಸಾಲಿ ಸಮುದಾಯದ ಮನೆಯೊಂದು ಐದು ಬಾಗಿಲಾಗುತ್ತಿದೆ. ಅಸ್ತಿತ್ವದಲ್ಲಿರುವ ಮೂರು ಪೀಠಗಳ ಅಧ್ವಾನವೇ ಸಾಕುಬೇಕಾದಷ್ಟಾಗಿದೆ. ಪೀಠಗಳ ಸುತ್ತ ಈವರೆಗೂ ನಡೆದಿರುವ ವಿದ್ಯಮಾನಗಳು ಅಚ್ಚರಿ ಮತ್ತು ಆಘಾತ ಮೂಡಿಸಿದೆ. ಈ ಮಧ್ಯೆ ಮತ್ತೆರಡು ಹೆಚ್ಚುವರಿ ಪೀಠಗಳ ಸ್ಥಾಪನೆ ಮಾತು ಕೇಳಿಬರುತ್ತಿದೆ. ಏನಿದು ಪಂಚಮಸಾಲಿ ಪೀಠಗಳ ಮೂರಾಬಟ್ಟೆ ಕಥೆ?
ಭಾಗ-4
‘ಪಂಚಮಸಾಲಿ ಪೀಠ‘ಗಳ ಸ್ಥಾಪನೆಯ ಆರಂಭಿಕ ಸದುದ್ದೇಶವೇ ಸಂಪೂರ್ಣವಾಗಿ ಹಳ್ಳ ಹಿಡಿದಿದೆ ಎನ್ನುತ್ತಾರೆ ಸಮಾಜದ ಆಳ ಅಗಲ ಬಲ್ಲವರು. ಪಂಚಮಸಾಲಿ ಪೀಠಗಳ ಮೇಲೆ ಸಮುದಾಯದ ಮುಖಂಡರ ಮತ್ತು ಪಕ್ಷ ಆಧಾರಿತ ರಾಜಕೀಯ ನಾಯಕರ ಸ್ವಾರ್ಥದ ಕರಿಛಾಯೆ ಕವಿದಿದೆ. ಪರಿಣಾಮ ಸಮಾಜಮುಖಿ ಕಾರ್ಯ, ಧಾರ್ಮಿಕ ಚಟುವಟಿಕೆ ಹಾಗೂ ಸೃಜನಶೀಲ ಚಿಂತನೆಗಳ ಹುಟ್ಟಿಗೆ ಅವಕಾಶವೇ ಇಲ್ಲವಾಗಿದೆ. ಒಂದು ರೀತಿಯಲ್ಲಿ ಪಂಚಮಸಾಲಿಯ ಮೂರೂ ಪೀಠಗಳನ್ನು ಜಡತ್ವ ಆವರಿಸಿದೆ!
ಸದ್ಯ ವಿವಾದದ ಕೇಂದ್ರಬಿಂದುವಾದ ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ನಡುವಿನ ಸಂಘರ್ಷವು ಮತ್ತೆರಡು ಹೊಸ ಪೀಠಗಳ ಸ್ಥಾಪನೆಗೆ ದಾರಿಯಾಗುವ ಸೂಚನೆಗಳು ಮೂಡಿವೆ. ಬಿಜೆಪಿಯಲ್ಲಿರುವ ಪಂಚಮಸಾಲಿ ರಾಜಕೀಯ ಮುಖಂಡರು ಈ ಕುರಿತು ಹೆಚ್ಚು ಒಲವು ತೋರುತ್ತಿದ್ದಾರೆ.
“ಮನೆಯೊಂದು ಐದು ಬಾಗಿಲಾಗುತ್ತಿರುವ ದುರಂತದ ಬೆಳವಣಿಗೆ ಇದು. ಇದರ ಹಿಂದೆ ರಾಜಕೀಯ ನಾಯಕರ ವೈಯಕ್ತಿಕ ಹಿತಾಸಕ್ತಿ ಬಿಟ್ಟರೆ ಸಮುದಾಯದ ಏಳಿಗೆಯ ಲವಲೇಶವೂ ಇಲ್ಲ. ಈಗ ಸ್ಥಾಪಿತವಾಗಿರುವ ಮೂರು ಪೀಠಗಳ ಅಧ್ವಾನವೇ ಸಾಕುಬೇಕಾಗಿದೆ” ಎನ್ನುತ್ತಾರೆ ಸಮುದಾಯದ ಹಿರಿಯ ಸ್ವಾಮೀಜಿಗಳು ಮತ್ತು ಮುಖಂಡರು.
‘ಪಂಚಮಸಾಲಿ ಪೀಠ ಫಜೀತಿ‘ ಯ ಆಳಕ್ಕೆ ಇಳಿದು ವಿಷಯ ಬೆದಕುತ್ತ ಹೊರಟಂತೆಲ್ಲ, ಬಯಲಾಗುವ ಸಂಗತಿಗಳು ಅಚ್ಚರಿ ಮತ್ತು ಆಘಾತವನ್ನು ಮೂಡಿಸಿವೆ. ಇನ್ನು ಕೆಲವು ವಿಷಯಗಳು ನಂಬಲು ಅಸಾಧ್ಯ ಎನಿಸುವಷ್ಟು ಅತಿವಾಸ್ತವಿಕ. ಒಟ್ಟಾರೆ ಮೂರೂ ಪೀಠಗಳ ಕಥೆಯೂ ಮೂರಾಬಟ್ಟೆಯಾಗಿದೆ.
ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿರುವ ಪಂಚಮಸಾಲಿ ಸಮುದಾಯದ ರಾಜಕೀಯ ನಾಯಕರು ಪೀಠಗಳನ್ನು ತಮ್ಮ ಅಧಿಕಾರದಾಹಕ್ಕೆ ದಾಳವಾಗಿಸಿಕೊಂಡಿರುವುದೇ ಕಾರಣ. ಸ್ವಾಮೀಜಿಗಳನ್ನು ಪೀಠಗಳಲ್ಲಿ ಕೂಡಿಸಿದವರು, ಪೀಠಗಳ ಸ್ಥಾಪನೆಗೆ ಆರ್ಥಿಕ ಸಹಾಯ ನೀಡಿದವರು ರಾಜಕೀಯ ಅಸ್ತಿತ್ವಕ್ಕಾಗಿ, ಸರ್ಕಾರದಲ್ಲಿ ಸಚಿವ ಸ್ಥಾನಕ್ಕೇರಲು, ಚುನಾವಣೆಗಳಲ್ಲಿ ಟಿಕೆಟ್ ಪಡೆಯಲು ಸ್ವಾಮೀಜಿಗಳಿಂದ ಒಂದಿಲ್ಲಾ ಒಂದು ಬಗೆಯಲ್ಲಿ ನೆರವು ಪಡೆದವರಾಗಿದ್ದಾರೆ. ಇವರೆಲ್ಲರ ವರಸೆ ಈಗ ಹೇಗಿದೆ ಎಂದರೆ ತಮಗೆ ಬೇಕಾದಾಗ ಧಾರಾಳವಾಗಿ ಒಂದು ಕೈಯಲ್ಲಿ ನೆರವು ನೀಡಿ, ಬೇಡವಾದಾಗ ಇನ್ನೊಂದು ಕೈಯಲ್ಲಿ ಬಡಿಗೆ ಹಿಡಿದು ನಿಲ್ಲುವುದು!
ಒಂದಿಬ್ಬರು ಸ್ವಾಮೀಜಿಗಳಂತೂ ರಾಜಕೀಯ ನಾಯಕರ ಸಖ್ಯ ಬೆಳೆಸಿಕೊಂಡು, ತಮ್ಮತನವನ್ನು ಮಾರಿಕೊಂಡು ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ, ಮತಗಳಿಕೆ, ಸೋಲು ಗೆಲುವುಗಳ ಲೆಕ್ಕಾಚಾರಕ್ಕೆ ಕೈ ಜೋಡಿಸಿದ್ದಿದೆ. ಇನ್ನೂ ಮುಂದುವರಿದು ವರ್ಗಾವಣೆಗೆ, ಕೆಪಿಸಿಸಿ ಸದಸ್ಯರ ನೇಮಕ, ಪ್ರಾಧ್ಯಾಪಕರ ನೇಮಕ, ನಿಗಮ-ಮಂಡಳಿಯಂತಹ ಆಯಕಟ್ಟಿನ ಸ್ಥಳಗಳಿಗೆ ಆತ್ಮೀಯರು ಮತ್ತು ಪ್ರಭಾವಿಗಳನ್ನು ಶಿಫಾರಸು ಮಾಡುವ ಹಂತಕ್ಕೂ ಸ್ವಾಮೀಜಿಗಳು ಮುಂದಾಗಿದ್ದಾರೆ ಎಂದು ಆರೋಪಿಸುತ್ತಾರೆ ಪೀಠಗಳ ನಾಡಿಮಿಡಿತ ಬಲ್ಲವರು.
ಪಂಚಮಸಾಲಿ ಪೀಠಗಳ ಸ್ಥಾಪನೆ ಮತ್ತು ವಿವಾದ ಎರಡೂ ಹೊಸದಲ್ಲ. ಕೂಡಲಸಂಗಮ ಪೀಠವನ್ನು ಮೀರಿಸುವ ಬೆಳವಣಿಗೆಗಳು ಹರಿಹರ ಪೀಠದಲ್ಲಿ ಘಟಿಸಿವೆ. ಟ್ರಸ್ಟ್‌ಗಳ ಮೇಲಾಟಕ್ಕೆ ಸಿಲುಕಿದ ಸ್ವಾಮೀಜಿಗಳು ಉಸಿರಾಡಲು ಆಗದೆ ಮಾನಸಿಕವಾಗಿ ನೊಂದು, ಬೆಂದ ಸಂಕಟದ ಕಥೆಗಳಿವೆ. ಕೊನೆಗೆ ಟ್ರಸ್ಟ್‌ನವರ ಸಹವಾಸವೇ ಸಾಕು ಎಂದು ಪೀಠ ತೊರೆದು ಹೋದ ಸ್ವಾಮೀಜಿಯೂ ಇದ್ದಾರೆ. ಕೂಡಲಸಂಗಮ ಪೀಠದ ಸದ್ಯದ ವಿವಾದಾತ್ಮಕ ಬೆಳವಣಿಗೆಗೂ ಮತ್ತು ಹರಿಹರ ಪೀಠಕ್ಕೂ ಹಾಗೂ ಜಮಖಂಡಿ ಪೀಠಕ್ಕೂ ಬಿಡಿಸಲಾರದ ನಂಟಿದೆ. ಹಾಗಾದರೆ ಮೂರು ಪೀಠಗಳ ಹಿಂದಿನ ಕಥೆ ಏನು? ಪಂಚಮಸಾಲಿ ಪೀಠ ಸ್ಥಾಪನೆ ವಿಚಾರ ಹುಟ್ಟಿದ್ದು ಹೇಗೆ?

‘ಪಂಚಮಸಾಲಿ ಪೀಠ’ ಸ್ಥಾಪನೆ ವಿಚಾರ ಹುಟ್ಟಿದ ಬಗೆ
ಪಂಚಪೀಠಗಳಾದ ರಂಭಾಪುರಿ, ಉಜ್ಜಯಿನಿ, ಕೇದಾರ, ಶ್ರೀಶೈಲ ಹಾಗೂ ಕಾಶಿ ಪೀಠಗಳಿಗೆ ವೀರಶೈವ ಪರಂಪರೆ ಹಿನ್ನೆಲೆಯವರೇ ಈವರೆಗೂ ಸ್ವಾಮೀಜಿಗಳಾಗಿದ್ದಾರೆ. ಪಂಚಪೀಠಗಳು ತೋರಿಕೆಗೆ ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂದು ಹೇಳುತ್ತವೆ. ಬಸವಣ್ಣನವರ ಕುರಿತು ಮಾತನಾಡುವ ಈ ಪೀಠಗಳು ಆಚರಣೆಯಲ್ಲಿ ಬಸವ ತತ್ವಕ್ಕೆ ವಿರುದ್ಧವಾಗಿ, ವೈದಿಕಶಾಹಿ ಪರಂಪರೆಯನ್ನು ಅನುಸರಿಸುತ್ತಿರುವುದು ಹೊಸದಲ್ಲ. ಇಂತಹ ಪಂಚಾಚಾರ್ಯ ಪೀಠಗಳಲ್ಲಿ ತಮಗೂ ಒಂದು ಪೀಠ ಬೇಕು ಎಂದು ಗಟ್ಟಿಧ್ವನಿಯಲ್ಲಿ ಕೇಳಿದವರು ಪಂಚಮಸಾಲಿಗಳು.
ಪಂಚಮಸಾಲಿ ಸಮುದಾಯ ಜನರಲ್ಲಿ ಸಂಘಟನೆಯ ಕಿಚ್ಚು ಹೊತ್ತಿಸಿದವರಲ್ಲಿ ಪ್ರಮುಖರು ಹುನಗುಂದದ ಈಗಿನ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಅವರ ತಂದೆ ದಿ. ಎಸ್ ಆರ್ ಕಾಶಪ್ಪನವರ. ಇವರು ತಮ್ಮ ಛಲದ ಬಲದಿಂದಲೇ ರಾಜಕೀಯದಲ್ಲಿ ಸೋಲರಿಯದ ವಿಶಿಷ್ಟ ರಾಜಕಾರಣಿಯಾಗಿ ಗುರುತಿಸಿಕೊಂಡವರು. ತಮ್ಮ ವೈರಿಗಳನ್ನು ಸಹ ‘ಪ್ರೀತಿ’ಯಿಂದ ಕಾಣುತ್ತಿದ್ದ ಅವರು ಅವಿಭಜಿತ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯಿಂದ ಹಿಡಿದು ರಾಜ್ಯ ರಾಜಕಾರಣದಲ್ಲಿ ತಮ್ಮ ಅಸ್ತಿತ್ವವನ್ನು ಅಷ್ಟೇ ಗಟ್ಟಿಯಾಗಿ ಉಳಿಸಿಕೊಂಡಿದ್ದರು.
‘ಕಾಶಪ್ಪನವರ ಜಾತಿ ರಾಜಕಾರಣ ಮಾಡುತ್ತಾರೆ’ ಎನ್ನುತ್ತಿದ್ದವರಿಗೆ ಅಷ್ಟೇ ತೀಕ್ಷ್ಣವಾಗಿ, “ರಾಜಕಾರಣದಲ್ಲಿ ಜಾತಿ ಮಾಡದವರು ಯಾರಿದ್ದಾರೆ” ಎಂದು ತಿರುಗೇಟು ನೀಡುತ್ತಿದ್ದರು. ಲಿಂಗಾಯತರ ಸಮಗ್ರ ಸಂಘಟನೆಯ ಒಳ ಆಶಯ ಸದಾ ಅವರಲ್ಲಿ ಜಾಗೃತವಾಗಿತ್ತು. ಹೀಗಾಗಿ ಪಂಚಮಸಾಲಿ ಸಮುದಾಯದ ಸಂಘಟನೆ ಗಟ್ಟಿಗೊಳಿಸುವ ನಿರ್ಧಾರ ಮಾಡಿ, ಸಮುದಾಯದ ಪ್ರಭಾವಿ ನಾಯಕರಾಗಿದ್ದ ಹನುಮನಾಳ ಗುರುಗಳ ಜೊತೆ ಸೇರಿಕೊಂಡು 1994ರಲ್ಲಿ ‘ಪಂಚಮಸಾಲಿ ರಾಜ್ಯ ಸಂಘ’ವನ್ನು ಸ್ಥಾಪಿಸುವ ಮೂಲಕ ಪಂಚಮಸಾಲಿಗಳಲ್ಲಿ ಸ್ವಾಭಿಮಾನದ ಕಿಡಿ ಹೊತ್ತಿಸಿದರು.
1994ರಿಂದ ‘ಪಂಚಮಸಾಲಿ ಸಮುದಾಯದ ಸಂಘಟನೆ ಮತ್ತು ಪ್ರತ್ಯೇಕ ಪೀಠದ ವಿಚಾರ ಬಲವಾಗಿ ಮೊಳಕೆಯೊಡೆಯಿತು. ಮುಖ್ಯಮಂತ್ರಿಯಾಗಿದ್ದ ಎಸ್ ಎಂ ಕೃಷ್ಣ ಸಂಪುಟದಲ್ಲಿ ಸಣ್ಣ ಕೈಗಾರಿಕಾ ಸಚಿವರಾಗಿದ್ದ ಎಸ್ ಆರ್ ಕಾಶಪ್ಪನವರ ಇಳಕಲ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಬಳಿ 2003ರಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಬಳಿಕ ಉಪಚುನಾವಣೆ ನಡೆದು, ಅವರ ಪತ್ನಿ ಗೌರಮ್ಮ ಗಂಡನ ಸಾವಿನ ಅನುಕಂಪದ ಅಲೆಯಲ್ಲಿ ಗೆಲುವು ಕಾಣುತ್ತಾರೆ. ಮುಂದೆ ಸಚಿವ ಸಂಪುಟ ಪುನಾರಚನೆಯಾದಾಗ ಕಾಶಪ್ಪನವರ ನಿಧನದಿಂದ ತೆರವಾಗಿದ್ದ ಸಚಿವ ಸ್ಥಾನ ಮರಳಿ ಪಂಚಮಸಾಲಿ ಸಮುದಾಯಕ್ಕೆ ಸಿಗುವುದಿಲ್ಲ. ಇದು ಸಹಜವಾಗಿಯೇ ಸಮುದಾಯದ ನಾಯಕರ ಕಣ್ಣು ಕೆಂಪಾಗಿಸುತ್ತದೆ. ಆಕ್ರೋಶಗೊಂಡ ಸಮುದಾಯದ ಮುಖಂಡರು 2004ರಲ್ಲಿ ಬೆಳಗಾವಿಯ ಎಸ್.ಬಿ. ಸಿದ್ನಾಳ್ ಮನೆಯಲ್ಲಿ ಸೇರಿ ಪಂಚಮಸಾಲಿ ಸಮುದಾಯದ ಸಂಘಟನೆ ಮತ್ತು ಪ್ರತ್ಯೇಕ ಪೀಠ ಸ್ಥಾಪಿಸುವ ಯೋಚನೆಗೆ ಶಕ್ತಿ ತುಂಬುತ್ತಾರೆ.

ರಂಭಾಪುರಿ ಸ್ವಾಮೀಜಿಯಿಂದ ಅವಮಾನ!
ಹರಿಹರ ಪಂಚಮಸಾಲಿ ಪೀಠದ ಮಾಜಿ ಪೀಠಾಧಿಪತಿ ಸಿದ್ದಲಿಂಗೇಶ್ವರ ಸ್ವಾಮೀಜಿ (ಸದ್ಯ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನೆಲೋಗಿ ವಿರಕ್ತ ಮಠದ ಮಠಾಧೀಶರು) ಹೇಳುವಂತೆ, “ವೀರಶೈವರ ಪಂಚಪೀಠಗಳಲ್ಲಿ ಮೊದಲನೆಯದಾದ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ರಂಭಾಪುರಿ ಪೀಠದ 121ನೇ ಜಗದ್ಗುರು ವೀರಸೋಮೇಶ್ವರ ಸ್ವಾಮೀಜಿ 2007ರಲ್ಲಿ ರಾಣೆಬೆನ್ನೂರು ತಾಲ್ಲೂಕಿನ ಕೊಡಿಯಾಲ ಹೊಸಪೇಟೆ ಗ್ರಾಮಕ್ಕೆ ಧಾರ್ಮಿಕ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದರು. ಆಗ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಪಂಚಮಸಾಲಿ ಸಮುದಾಯದ ಪ್ರಮುಖರು ಸೇರಿಕೊಂಡು ಅವರನ್ನು ಭೇಟಿಯಾಗಿ, ತಮ್ಮ ಸಮುದಾಯಕ್ಕೂ ಒಂದು ಪೀಠ ಬಿಟ್ಟುಕೊಡಿ ಎಂದು ಕೇಳಿಕೊಳ್ಳುತ್ತಾರೆ. ಆಗ ರಂಭಾಪುರಿ ಸ್ವಾಮೀಜಿ, “ನೀವು ಎಂದಿಗೂ ನಮ್ಮ ಸಮನಾಗಿ ನಿಲ್ಲಲು ಆಗುವುದಿಲ್ಲ. ಇನ್ನು ಮೇಲೇರುವುದು ದೂರದ ಮಾತು. ಯಾವ ಕಾಲಕ್ಕೂ ನೀವು ನಮ್ಮ ಕಾಲ ಕೆಳಗೆಯೇ ಇರಬೇಕು” ಎಂದು ಧಿಮಾಕು, ಗರ್ವದಿಂದ ನುಡಿದಿದ್ದರು” ಎಂದು ಹೇಳಿದರು.
“ಪಂಚಪೀಠಗಳು ಯಾವತ್ತೂ ಬಸವಣ್ಣನವರನ್ನು ಮನಃಪೂರ್ವಕವಾಗಿ ಒಳಗೆ ಬಿಟ್ಟುಕೊಂಡಿಲ್ಲ. 12ನೇ ಶತಮಾನದ ವಚನ ಸಾಹಿತ್ಯವೇ ಅವರಿಗೆ ಬೇಕಿಲ್ಲ. 14ನೇ ಶತಮಾನದಲ್ಲಿ ರಚನೆಯಾದ ಸಂಸ್ಕೃತದ ‘ಸಿದ್ಧಾಂತ ಶಿಖಾಮಣಿ’ ಗ್ರಂಥವನ್ನೇ ಇವರು ವೀರಶೈವ ಧರ್ಮದ ಮಹತ್ವದ ಗ್ರಂಥವೆಂದು ಭಾವಿಸುತ್ತಾರೆ. ಈ ಗ್ರಂಥ ಸಂಪೂರ್ಣವಾಗಿ ವೈದಿಕಶಾಹಿ ಆಚರಣೆಯನ್ನು ಪ್ರತಿಪಾದಿಸುತ್ತದೆ. ಜಾತಿ ತಾರತಮ್ಯ, ವರ್ಗಭೇದ, ಮೇಲು-ಕೀಳು ಸದಾಕಾಲಕ್ಕೂ ಜೀವಂತವಾಗಿರಬೇಕು ಎಂದು ಹೇಳುತ್ತದೆ. ಬಸವಣ್ಣನವರು ಇಂತಹ ಸಮಾಜವಿರೋಧಿ ನಡೆಗಳನ್ನೇ ವಿರೋಧಿಸಿ ಹೊರಬಂದು, ವಚನ ಚಳವಳಿ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ್ದು. ‘ಕಾಯಕವೇ ಕೈಲಾಸ’ ಎನ್ನುವ ಮೂಲಕ ದುಡಿಯುವ ವರ್ಗವನ್ನು ಪ್ರೋತ್ಸಾಹಿಸಿ, ಇಷ್ಟಲಿಂಗವನ್ನು ಸ್ಥಾಪಿಸಿ ಪೂಜಿಸಲು ಕರೆ ನೀಡಿದ್ದು. ವೀರಶೈವರು ಶಿವನ ಆರಾಧಕರು. ಹೀಗಾಗಿ ಅವರು ಲಿಂಗಾಯತವನ್ನು ಎಂದಿಗೂ ಅಪ್ಪಿಕೊಳ್ಳುವುದಿಲ್ಲ” ಎಂದು ವಿಶ್ಲೇಷಿಸಿದರು.
“ವೀರಶೈವ-ಲಿಂಗಾಯತ ಎರಡೂ ಒಂದೇ ಆಗಿದ್ದಲ್ಲಿ ಪಂಚಪೀಠಗಳು ಲಿಂಗಾಯತ ಪ್ರತ್ಯೇಕ ಧರ್ಮವನ್ನು ವಿರೋಧಿಸುತ್ತಿರುವುದು ಏಕೆ? ಇಲ್ಲಿ ನೇರವಾಗಿ ಆರ್‌ಎಸ್‌ಎಸ್ ಕುತಂತ್ರವಿದೆ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟವನ್ನು ಹತ್ತಿಕ್ಕಿರುವುದೇ ಆರ್‌ಎಸ್‌ಎಸ್. ನನ್ನ ಪ್ರಕಾರ ದೇಶಕ್ಕೆ ಅಂಟಿದ ಅತಿ ಕೆಟ್ಟ ವೈರಸ್ ಏನಾದರೂ ಇದ್ದರೆ ಅದು ಈ ಸಂಘಟನೆಯಾಗಿದೆ. ಆರ್‌ಎಸ್‌ಎಸ್ ಎಂದಿಗೂ ಬಸವಣ್ಣನನ್ನು, ‘ಬಸವ ತ್ವತ್ವ’ವನ್ನು ಒಪ್ಪಿಕೊಳ್ಳಲ್ಲ. ಬಸವಣ್ಣನ ಚಿಂತನೆಗಳನ್ನು ಮೇಲೇಳದಂತೆ ನೆಲದಲ್ಲಿ ಹೊಸಕಿ ಹಾಕಲು ಆರ್‌ಎಸ್‌ಎಸ್ ಸದಾ ಶ್ರಮಿಸುತ್ತದೆ. ದೇಶ ಹಾಳಾಗಿರುವುದೇ ಈ ಸಂಘಟನೆಯಿಂದ. ಪಂಚಮಸಾಲಿ ಪೀಠಗಳ ವಿವಾದದ ಹಿಂದೆಯೂ ಆರ್‌ಎಸ್‌ಎಸ್ ಕೈವಾಡವಿದೆ” ಎಂದು ಆರೋಪಿಸಿದರು.
ವೀರಶೈವ ಲಿಂಗಾಯತ ಪಂಚಮಸಾಲಿ V/S ಲಿಂಗಾಯತ ಪಂಚಮಸಾಲಿ
ರಂಭಾಪುರಿ ಶ್ರೀಗಳಿಂದ ಅವಮಾನಿತರಾಗಿ ಬಂದ ಬಳಿಕ ಪಂಚಮಸಾಲಿ ಮುಖಂಡರು ಪೀಠ ಸ್ಥಾಪನೆಯ ಕಸರತ್ತಿಗೆ ಮುಂದಾಗುತ್ತಾರೆ. ದಾವಣಗೆರೆ ಭಾಗದ ಪಂಚಮಸಾಲಿ ಮುಖಂಡರಾದ ಬೆಟ್ಟಪ್ಪ ಬಾವಿ, ಬಸವರಾಜ ದಿಂಡೂರ ಹಾಗೂ ಬಿ ಸಿ ಉಮಾಪತಿ ಮುಂತಾದ ಮುಖಂಡರು ‘ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ’ ಸ್ಥಾಪಿಸಿಕೊಂಡು, ಪಂಚಪೀಠಾಧೀಶ್ವರ ಮಾರ್ಗದರ್ಶನದಲ್ಲೇ ‘ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ’ ಸ್ಥಾಪಿಸಲು ಯೋಚಿಸುತ್ತಾರೆ. ಆದರೆ, ‘ವೀರಶೈವ ಲಿಂಗಾಯತ’ ಎಂಬುದನ್ನು ಒಪ್ಪದ ಧಾರವಾಡ-ಹುಬ್ಬಳ್ಳಿ, ಗದಗ, ಬೆಳಗಾವಿ ಹಾಗೂ ಬಾಗಲಕೋಟೆ ಭಾಗದ ಪ್ರಮುಖರು, ಬಸವಣ್ಣನ ತತ್ವ ಆಧಾರಿತ ಲಿಂಗಾಯತ ಪಂಚಮಸಾಲಿ ಪೀಠ ಸ್ಥಾಪನೆಗೆ ಹಠ ಹಿಡಿಯುತ್ತಾರೆ.
ಅಲ್ಲಿಗೆ ಇಬ್ಬರಲ್ಲೂ ಹೊಂದಾಣಿಕೆಯಾಗದೆ ಪಂಚಮಸಾಲಿ ಸಮುದಾಯದೊಳಗೆ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಎಂಬ ಎರಡು ಬಣಗಳಾಗುತ್ತವೆ. ಉತ್ತರ ಕರ್ನಾಟಕದ ಬಣದವರು ‘ಅಖಿಲ ಭಾರತ ಲಿಂಗಾಯತ ಪಂಚಮಸಾಲಿಯ ಮೂಲ ಟ್ರಸ್ಟ್’ನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಿಕೊಳ್ಳುತ್ತಾರೆ. ಇದರ ಮೊದಲ ಅಧ್ಯಕ್ಷರಾಗಿ ಪ್ರಭಣ್ಣ ಹುಣಸಿಕಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ನೀಲಕಂಠ ಅಸೂಟಿ ಆಯ್ಕೆಯಾಗುತ್ತಾರೆ. ಇವರೆಲ್ಲ ಸೇರಿಕೊಂಡು ಪಂಚಮಸಾಲಿ ಪೀಠ ಎಲ್ಲಿ ಸ್ಥಾಪಿಸಬೇಕು ಎನ್ನುವ ವಿಚಾರ ಹೊತ್ತು ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ಬಳಿ ಹೋಗುತ್ತಾರೆ. ಮುರುಘಾ ಶರಣರ ಸಲಹೆ ಮತ್ತು ಮೃತ್ಯುಂಜಯ ಸ್ವಾಮೀಜಿ ಒತ್ತಾಸೆ ಮೇರೆಗೆ ವಿಶ್ವಗುರು ಬಸವಣ್ಣ ಐಕ್ಯವಾದ ಸ್ಥಳವಾದ ಕೂಡಲಸಂಗಮದಲ್ಲೇ ಉತ್ತರ ಕರ್ನಾಟಕ ಬಣದಿಂದ ಪಂಚಮಸಾಲಿ ಪೀಠ ಸ್ಥಾಪಿಸುವ ನಿರ್ಧಾರ ಪ್ರಕಟವಾಗುತ್ತದೆ.
2008ರಲ್ಲಿ ಕೂಡಲಸಂಗಮ ಮತ್ತು ಹರಿಹರ ಪೀಠ ಸ್ಥಾಪನೆ
ಅತ್ತ ದಾವಣಗೆರೆ ಬಣದ ಬೆಟ್ಟಪ್ಪ ಬಾವಿ, ಬಸವರಾಜ ದಿಂಡೂರ ಹಾಗೂ ಉಮಾಪತಿ ಅವರು ಹರಿಹರದಲ್ಲಿ ‘ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ’ ಸ್ಥಾಪನೆಗೆ ಮುಂದಾಗುತ್ತಾರೆ. ‘ನಾವೇ ಮೊದಲು ಪೀಠ ಸ್ಥಾಪಿಸಬೇಕು’ ಎನ್ನುವ ತುಡಿತಕ್ಕೆ ಒಳಗಾದ ಎರಡೂ ಬಣಗಳ ನಡುವೆ ಸ್ಪರ್ಧೆ ಏರ್ಪಟ್ಟು, ಕೊನೆಗೆ 2008ರಲ್ಲಿ ಫೆಬ್ರವರಿ 8ರಂದು ಕೂಡಲಸಂಗಮದಲ್ಲಿ ಮೊದಲ ಪೀಠ ಸ್ಥಾಪನೆಯಾಗಿ, ಮೃತ್ಯುಂಜಯ ಸ್ವಾಮೀಜಿ ಪೀಠಾಧ್ಯಕ್ಷರಾಗುತ್ತಾರೆ. (ಈ ಪೀಠದ ಮುಂದಿನ ಕಥೆ ಈಗಾಗಲೇ ಪ್ರಕಟವಾಗಿರುವ ಸರಣಿಗಳಲ್ಲಿದೆ)
ಮುಂದೆ ಫೆಬ್ರವರಿ 18ಕ್ಕೆ ಹರಿಹರದಲ್ಲಿ ‘ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ’ ಸ್ಥಾಪನೆಯಾಗುತ್ತದೆ. ವೀರಶೈವ ಲಿಂಗಾಯತದವರು ಗುರು – ವಿರಕ್ತ ಎರಡೂ ಪರಂಪರೆ ಅನುಸರಿಸುವುದರಿಂದ ಸ್ಥಿರ ಮತ್ತು ಚರ ಪೀಠಗಳನ್ನಾಗಿ ಮಾಡಿ, ಎರಡೂ ಪೀಠಕ್ಕೂ ಟ್ರಸ್ಟ್‌ನವರು ಸ್ವಾಮೀಜಿಗಳನ್ನು ನೇಮಕ ಮಾಡುತ್ತಾರೆ. ಸ್ಥಿರ ಪೀಠಾಧ್ಯಕ್ಷರಾಗಿ ಬಸವನಬಾಗೇವಾಡಿ ತಾಲೂಕಿನ ಮನಗೂಳಿಯ ಹಿರೇಮಠದ ಡಾ.ಮಹಾಂತ ಸ್ವಾಮೀಜಿ ಆಯ್ಕೆಯಾದರೆ, ಚರ ಪೀಠಕ್ಕೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನೆಲೋಗಿ ವಿರಕ್ತ ಮಠದ ಸಿದ್ದಲಿಂಗೇಶ್ವರ ಸ್ವಾಮೀಜಿ ನೇಮಕವಾಗುತ್ತಾರೆ.
ಅಕ್ರಮ ಆರೋಪ, ಕೋರ್ಟ್ ಕಟಕಟೆಯಲ್ಲಿ ಹರಿಹರ ಪೀಠ
ನ್ಯಾಯದ ಸ್ಥಾನದಲ್ಲಿರಬೇಕಾದ ಹರಿಹರ ಪೀಠ ಈಗಾಗಲೇ ಕೋರ್ಟ್ ಕಟಕಟೆ ಹತ್ತಿ ಬಂದಿದೆ. ಸಾಕಷ್ಟು ಅಧ್ವಾನಗಳು ಪೀಠದೊಳಗೆ ಸಂಭವಿಸಿವೆ. ಪೀಠಕ್ಕೆ ಸಂಬಂಧಿಸಿದ ‘ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು 2008ರ ಪೀಠ’ದ ಟ್ರಸ್ಟ್ ಅನ್ಯಾಯಗಳ ವಿರುದ್ಧ ಕೋರ್ಟ್‌ನಲ್ಲಿ ಕೇಸ್ ಹಾಕಿದ ಮಾಜಿ ಸೈನಿಕ ಭೀಮನಗೌಡ ಬಿರಾದಾರ್ ಅವರು ‘ಈ ದಿನ.ಕಾಂ‘ ಜೊತೆ ಮಾತನಾಡುತ್ತ, “ಹರಿಹರ ಪೀಠವನ್ನು ಟ್ರಸ್ಟ್‌ನವರು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡಿರುವುದೇ ಹೆಚ್ಚು. ಹಣದ ವ್ಯವಹಾರಗಳ ಬಗ್ಗೆ ಪಾರದರ್ಶಕತೆಯೇ ಅಲ್ಲಿಲ್ಲ. ಮಹಾಂತ ಸ್ವಾಮೀಜಿ ಮತ್ತು ಸಿದ್ದಲಿಂಗೇಶ್ವರ ಸ್ವಾಮೀಜಿಯನ್ನು ಟ್ರಸ್ಟ್‌ನವರು ಸಾಕಷ್ಟು ಹೆದರಿಸಿಟ್ಟುಕೊಂಡಿದ್ದರು. ಜೀವ ಭಯದಲ್ಲೇ ದಿನಗಳನ್ನು ಸ್ವಾಮೀಜಿಗಳು ದೂಡಿದ್ದಿದೆ. 2010-11ರಲ್ಲಿ ಭಕ್ತರು ಇಬ್ಬರೂ ಸ್ವಾಮೀಜಿಯನ್ನು ಬೆಳ್ಳಿಯಲ್ಲಿ ತುಲಾಭಾರ ಮಾಡಿದ್ದಾರೆ. ಆಗ ಬಂದ ಸುಮಾರು 110 ಕೆ.ಜೆ ಬೆಳ್ಳಿ ಈಗ ಎಲ್ಲಿದೆ ಅಂತ ಯಾರಿಗೂ ಗೊತ್ತಿಲ್ಲ. ಅಕ್ರಮಗಳ ಬಗ್ಗೆ ಗಮನಕ್ಕೆ ತಂದಾಗ, ಮಠದಲ್ಲಾದ ಹಾನಿ ತುಂಬಿಕೊಳ್ಳಲು ಬೆಂಗಳೂರಿನ ರಿಜಿಸ್ಟ್ರಾರ್ ಟ್ರಸ್ಟ್‌ಗೆ ಸೂಚಿಸುತ್ತಾರೆ” ಎಂದು ವಿವರಿಸಿದರು.
“ಆದರೆ, ಟ್ರಸ್ಟ್‌ನವರು ಆಮಿಷ ಒಡ್ಡಿ ಅಧಿಕಾರಿಯನ್ನೇ ಬಲೆಗೆ ಹಾಕಿಕೊಳ್ಳುತ್ತಾರೆ. ನಾನು ಮುಂದೆ ಕೋರ್ಟ್‌ಗೆ ಕೇವಿಯಟ್ ಸಲ್ಲಿಸುತ್ತೇನೆ. ಕೋರ್ಟ್‌ನಿಂದ ಸೂಪರ್‌ಸೀಡ್ ಆಗುತ್ತದೆ. ಟ್ರಸ್ಟ್‌ಗೆ ಎ.ಸಿ ಹಂತದ ಸರ್ಕಾರದ ಪ್ರತಿನಿಧಿ ನೇಮಕವಾಗಬೇಕು ಎಂದು ಕೋರ್ಟ್ ಹೇಳುತ್ತದೆ. ಅಷ್ಟೊತ್ತಿಗೆ 2018ರಲ್ಲಿ ಚುನಾವಣೆ ಬಂದು ಮುರುಗೇಶ್ ನಿರಾಣಿ ಸಮ್ಮುಖದಲ್ಲಿ ಎಲ್ಲವನ್ನೂ ಸರಿ ಮಾಡಿಕೊಳ್ಳಲಾಗುತ್ತದೆ ಎಂದು ಟ್ರಸ್ಟ್‌ನವರು ಹೇಳುತ್ತಾರೆ. ಅದೇ ಸಮಯದಲ್ಲಿ ಟ್ರಸ್ಟ್‌ನವರ ಕಿರುಕುಳಕ್ಕೆ ಸಿದ್ದಲಿಂಗೇಶ್ವರ ಸ್ವಾಮೀಜಿ ಮಠ ತೊರೆಯುತ್ತಾರೆ. ಟ್ರಸ್ಟ್‌ನವರ ಭಯದಿಂದಲೇ ಅರ್ಧ ಜೀವಬಿಟ್ಟಿದ್ದ ಮಹಾಂತ ಸ್ವಾಮೀಜಿ, 2013ರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು” ಎಂದು ಹೇಳಿದರು.

ಸಾರ್ವಜನಿಕವಾಗಿ ಹೇಗೆ ಮಾತನಾಡಬಾರದು ಎಂಬುದಕ್ಕೆ ವಚನಾನಂದ ಸ್ವಾಮೀಜಿ ಒಂದು ಉದಾಹರಣೆ. ಹರಿಹರದಲ್ಲಿ ನಡೆದ ಸಮಾವೇಶದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂದರ್ಭದಲ್ಲಿ “ಮುರುಗೇಶ್ ನಿರಾಣಿ ನಿಮ್ಮೊಂದಿಗೆ ಬಂಡೆಯಂತೆ ನಿಂತಿದ್ದಾರೆ. ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಿ, ಇಲ್ಲದಿದ್ದರೆ ಪಂಚಮಸಾಲಿ ಲಿಂಗಾಯತರು ನಿಮಗೆ ತಮ್ಮ ಬೆಂಬಲವನ್ನು ತ್ಯಜಿಸುತ್ತಾರೆ” ಎಂದು ಬಹಿರಂಗವಾಗಿ ಹೇಳುವ ಮೂಲಕ ಯಡಿಯೂರಪ್ಪ ಕೆಂಗಣ್ಣಿಗೆ ಗುರಿಯಾಗಿದ್ದರು. ಯಡಿಯೂರಪ್ಪ ತಕ್ಷಣವೇ ಎದ್ದು ನಿಂತು ಪ್ರತಿಕ್ರಿಯಿಸಿ, “ತಮ್ಮ ಭಾಷಣ ಮತ್ತು ಪದ ಬಳಕೆಯಲ್ಲಿ ಶ್ರೀಗಳ ಜವಾಬ್ದಾರಿಯನ್ನು ಕಾಯ್ದುಕೊಳ್ಳಬೇಕು. ಶ್ರೀಗಳ ಸಲಹೆ ಇರಲಿ, ಬೆದರಿಕೆ ಸ್ವೀಕಾರಾರ್ಹವಲ್ಲ. ಸಚಿವ ಸಂಪುಟ ವಿಸ್ತರಣೆಯಲ್ಲಿ ಇತರರಿಂದ ಒತ್ತಡ ಬಂದರೆ ನಾನು ರಾಜೀನಾಮೆಗೂ ಸಿದ್ಧ” ಎಂದು ಹೇಳಿದ್ದರು. ಸ್ವಾಮೀಜಿಯ ಈ ನಡೆ ಸಾರ್ವಜನಿಕ ವಲಯ, ಸಮುದಾಯ ಹಾಗೂ ರಾಜಕಾರಣಿಗಳಿಂದ ವ್ಯಾಪಕ ಟೀಕೆಗೆ ಕಾರಣವಾಗಿ, ಮುಂದೆ ಅವರು ಯಡಿಯೂರಪ್ಪ ಬಳಿ ಕ್ಷಮೆಯಾಚಿಸಿದರು.
ಹರಿಹರ ಪೀಠದ ಟ್ರಸ್ಟ್‌ನವರು ಸರಿಯಿಲ್ಲ: ಸಿದ್ದಲಿಂಗೇಶ್ವರ ಸ್ವಾಮೀಜಿ
ಹರಿಹರ ಪೀಠ ತೊರೆದು ಹೋದ ಮಾಜಿ ಪೀಠಾಧ್ಯಕ್ಷ ಸಿದ್ದಲಿಂಗೇಶ್ವರ ಸ್ವಾಮೀಜಿ ಅವರನ್ನು ‘ಈ ದಿನ.ಕಾಂ‘ ಸಂಪರ್ಕಿಸಿದಾಗ, “ಟ್ರಸ್ಟ್‌ನವರು ಮಹಾಂತ ಸ್ವಾಮೀಜಿ ಮತ್ತು ನನಗೆ ಸಾಕಷ್ಟು ಸಾಕಷ್ಟು ಕಿರುಕುಳ ನೀಡಿದ್ದಾರೆ. ಯಾವ ಕಾರ್ಯಕ್ರಮಕ್ಕೆ ಹೋಗಬೇಕು, ಹೋಗಬಾರದು ಎಂಬುದನ್ನು ಟ್ರಸ್ಟ್‌ನವರೇ ಸೂಚಿಸುತ್ತಿದ್ದರು. ಬಸವ ತತ್ವಕ್ಕೆ ನಾನು ನಿಷ್ಠರಾಗಿದ್ದರಿಂದ ಅವರ ಸೂಚನೆಗಳು ನನಗೆ ಸರಿಕಾಣಲಿಲ್ಲ. ಆರ್‌ಎಸ್‌ಎಸ್ ಕಾರ್ಯಕ್ರಮಗಳಿಗೆ ಹೋಗಿ ಎಂದು ಟ್ರಸ್ಟ್‌ನವರು ಹೇಳುತ್ತಿದ್ದರು. ನನಗೆ ಆ ಸಂಘಟನೆಯಲ್ಲಿ ತುಂಬಿರುವ ವಿಷದ ಬಗ್ಗೆ ಸ್ಪಷ್ಟತೆ ಇದೆ. ನಾನು ತಿರಸ್ಕರಿಸುತ್ತಿದ್ದೆ. ಈಗಲೂ ನಾನು ಆರ್‌ಎಸ್‌ಎಸ್‌ನವರು ಕರೆದರೆ ಹೋಗುವುದಿಲ್ಲ” ಎಂದರು.
“ಹರಿಹರ ಪೀಠಕ್ಕೆ ಸ್ವಾಮೀಜಿಯಾಗಿ ಬರಲು ಆರಂಭದಲ್ಲೇ ನನಗೆ ಇಷ್ಟವಿರಲಿಲ್ಲ. ಆದರೆ ಟ್ರಸ್ಟ್‌ನವರು ಒತ್ತಾಯ ಮಾಡಿ ಕರೆದುಕೊಂಡು ಬಂದರು. ಅಶೋಕ್ ಖೇಣಿ ಮಠದ ಕಟ್ಟಡ ನಿರ್ಮಾಣಕ್ಕೆ4 ಕೋಟಿ ರೂ. ಸಹಾಯಧನ ನೀಡಿದರು. ಕರುಣಾಕರ ರೆಡ್ಡಿ ಭೂಮಿ ಕೊಡಿಸಿದರು. ಮಠವನ್ನು ಶ್ರದ್ಧೆಯಿಂದ, ಪ್ರಾಮಾಣಿಕವಾಗಿ ಕಟ್ಟಿದೆ. ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಿದೆ. ಭಕ್ತರ ಸಂಖ್ಯೆಯೂ ಹೆಚ್ಚಾಯಿತು. ಈಗ ಮಠ ನೂರಾರು ಕೋಟಿ ಆಸ್ತಿಯನ್ನು ಹೊಂದಿದೆ. ಶಾಲೆಗಳು, ವಸತಿ ನಿಲಯಗಳು ನನ್ನ ಅವಧಿಯಲ್ಲೇ ಸ್ಥಾಪನೆಯಾದವು. ಮಠ ಅಭಿವೃದ್ಧಿ ಹೊಂದಿದಂತೆ ಟ್ರಸ್ಟ್‌ನವರ ನಿಜ ಬಣ್ಣ ಬಯಲಾಯಿತು” ಎಂದು ಹೇಳಿದರು.
“ಟ್ರಸ್ಟ್‌ನವರಿಗೆ ಒಬ್ಬ ಸ್ವಾಮೀಜಿ ಬೇಕಿತ್ತು ಅಷ್ಟೇ. ಉಳಿದ ಲಾಭ ಲೆಕ್ಕಾಚಾರ ಅವರೇ ಮಾಡಿಕೊಳ್ಳುತ್ತಿದ್ದರು. ಮಠದೊಳಗೆ ಅವ್ಯವಹಾರ ಕಂಡು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಸಿಟ್ಟಾದರು. ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಾಗ ನಾನು ಟ್ರಸ್ಟ್ ಹೇಳಿದಂತೆ ಕೇಳುವುದಿಲ್ಲ ಎಂದು ನೇರವಾಗಿ ಹೇಳಿದೆ. ಯಾವುದೇ ಜಾತಿ, ಧರ್ಮದವರು ಕರೆದರು ಹೋಗುತ್ತಿದ್ದೆ. ಇದು ಅವರಿಗೆ ಸರಿ ಕಾಣಲಿಲ್ಲ. ಕೊನೆಗೆ ನನ್ನನ್ನು ಪೀಠದಿಂದ ಬಾವಿ ಬೆಟ್ಟಪ್ಪ, ಬಿ ಸಿ ಉಮಾಪತಿ ಹಾಗೂ ಬಸವರಾಜ ದಿಂಡೂರ ಸೇರಿ 2015ರಲ್ಲಿ ಉಚ್ಚಾಟಿಸಿದರು” ಎಂದು ಹೇಳಿದರು.
“ಪೀಠಾಧಿಕಾರಿಯಾಗಿ ಮಠದಲ್ಲಿ ಕರ್ತವ್ಯ ನಿರ್ವಹಿಸಲು ಶಾಶ್ವತ ಅನುಮತಿ ನೀಡಬೇಕು ಎಂದು ಕೋರಿ ನ್ಯಾಯಾಲಯದಲ್ಲಿ ನಾನು ಅರ್ಜಿ ಸಲ್ಲಿಸಿದೆ. ನನ್ನ ಪರವಾಗಿಯೇ ತಾತ್ಕಾಲಿಕ ತೀರ್ಪು ಬಂದು, “ಮಠದ ಪೀಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಅಡ್ಡಿಯಾಗದಂತೆ ಟ್ರಸ್ಟ್ ಸದಸ್ಯರಿಗೆ ಕೋರ್ಟ್ ಆದೇಶ ನೀಡಿತು. ಅವರ ಜೊತೆ ಕೋರ್ಟ್‌ನಲ್ಲಿ ಕೇಸ್ ಗೆದ್ದ ಬಳಿಕ ನನಗೆ ಮಠದಲ್ಲಿ ಉಳಿಯುವ ಆಸಕ್ತಿ ಬರಲಿಲ್ಲ. ಇವರ ಸಹವಾಸ ಸಾಕು ಎಂದು ಉಟ್ಟ ಬಟ್ಟೆ ಮೇಲೆ ಮಠ ತೊರೆದು ನನ್ನ ಮೂಲ ಮಠ ನೆಲೋಗಿ ವಿರಕ್ತ ಮಠಕ್ಕೆ ಆಗಮಿಸಿದೆ. ಒಂದೇ ಮಾತಲ್ಲಿ ಹೇಳಬೇಕು ಎಂದರೆ, ಹರಿಹರ ಪೀಠದ ಟ್ರಸ್ಟ್‌ನವರು ಬಹಳ ನೀಚರು, ಸಮಾಜದ್ರೋಹಿಗಳು. ಅವರಿಗೆ ನಿಜವಾದ ಧಾರ್ಮಿಕ ಕಾರ್ಯಕ್ರಮಗಳು ಬೇಕಿಲ್ಲ. ತಮ್ಮ ಬೇಳೆ ಬೇಯಿಸಿಕೊಳ್ಳಲು ಪೀಠವನ್ನು ದಾಳವಾಗಿಸಿಕೊಂಡಿದ್ದಾರೆ ಅಷ್ಟೇ” ಎಂದು ನೇರವಾಗಿ ಆರೋಪಿಸಿದರು.
ಹರಿಹರ ಪೀಠದ ಟ್ರಸ್ಟ್ ಅಧ್ಯಕ್ಷ ಸೋಮನಗೌಡ ಅವರಿಂದ ಮಾಹಿತಿ ಪಡೆಯಲು ಈ ದಿನ.ಕಾಮ್ ಕರೆ ಮಾಡಿದಾಗ, “ಮಾಹಿತಿ ನೀಡುತ್ತೇವೆ. ಬಳಿಕ ಕಾಲ್ ಮಾಡಿ” ಎಂದು ಹೇಳಿದರು. ಮತ್ತೆ ಕಾಲ್ ಮಾಡಿದರೆ ಅವರು ಕರೆಯನ್ನು ಸ್ವೀಕರಿಸಲಿಲ್ಲ.

ಮುರುಗೇಶ್ ನಿರಾಣಿ ಹಿತಸಾಕ್ತಿಗೆ ಅನುಗುಣವಾಗಿ ಮೂರನೇ ಪೀಠ ಸ್ಥಾಪನೆ!
ಸಮಾಜ ಒಡೆಯುವ, ಬೆಸೆಯುವ ಆರೋಪ-ಪ್ರತ್ಯಾರೋಪಗಳ ನಡುವೆಯೇ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಆಲಗೂರಿನ ಕೃಷ್ಣಾನದಿ ತೀರದಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿದ್ದ ಮುರುಗೇಶ್ ನಿರಾಣಿ ಅವರು ಮುಂದೆ ನಿಂತು ‘ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ’ ಮೂರನೇ ಪೀಠವನ್ನು 2022 ಫೆಬ್ರವರಿ14ರಂದು ಅಸ್ತಿತ್ವಕ್ಕೆ ತಂದರು. ಪೀಠದ ಮೊದಲ ಪೀಠಾಧಿಪತಿಯಾಗಿ ಬಬಲೇಶ್ವರದ ಬೃಹನ್ಮಠದ ಷ.ಬ್ರ. ಮಹಾದೇವ ಶಿವಾಚಾರ್ಯ ಸ್ವಾಮೀಜಿಗೆ ಪೀಠಾರೋಹಣ ಮಾಡಿಸಲಾಯಿತು. ವಚನಾನಂದ ಸ್ವಾಮೀಜಿ ಮುಂದೆ ನಿಂತು ಅವರಿಗೆ ರುದ್ರಾಕ್ಷಿ ಕಿರೀಟ ತೊಡಿಸಿ, ಪೀಠಾರೋಹಣ ಕಾರ್ಯಕ್ರಮ ನಡೆಸಿಕೊಟ್ಟರು.
ಮೂಲಗಳು ಹೇಳುವಂತೆ ಪಂಚಮಸಾಲಿ ಮೂರನೇ ಪೀಠ ಸ್ಥಾಪನೆಯಾಗಿರುವುದೇ ಮುರುಗೇಶ್ ನಿರಾಣಿ ಮತ್ತು ಕುಟುಂಬದವರ ರಾಜಕೀಯ ಅಸ್ತಿತ್ವಕ್ಕಾಗಿ. ‘ಪಂಚಮಸಾಲಿ ಸಮುದಾಯ ಕಟ್ಟಬೇಕು ಎನ್ನುವ ಯಾವ ಆಶಯವೂ ಮೂರನೇ ಪೀಠಕ್ಕೆ ಇಲ್ಲ. ಜಮಖಂಡಿ ಕ್ಷೇತ್ರಕ್ಕೆ ಇನ್ಮುಂದೆ ಸದಾ ಪಂಚಮಸಾಲಿಗರಿಗೆ ಟಿಕೆಟ್ ಸಿಗಬೇಕು ಎನ್ನುವ ಉದ್ದೇಶದಿಂದ ಪೀಠ ಸ್ಥಾಪಿಸಲಾಗಿದೆ. ನಾಮಕಾವಾಸ್ತೆ ಪೀಠಕೊಬ್ಬ ಸ್ವಾಮೀಜಿ ಇದ್ದಾರೆ. ಪೀಠ ಸ್ಥಾಪನೆಯಾಗಿ ಮೂರು ವರ್ಷ ಕಳೆದಿದ್ದರೂ ಯಾವುದೇ ಕೆಲಸಕಾರ್ಯಗಳು ಅಲ್ಲಿ ಕಂಡುಬಂದಿಲ್ಲ” ಎನ್ನುತ್ತಾರೆ ಸಮಾಜದ ಆಳ ಅಗಲ ಬಲ್ಲವರು.
ಇನ್ನೂ ಜೀವಂತವಿದೆ ಮೂಲಪೀಠ ವಿವಾದ!
“ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಹರಿಹರ ಮಠವೇ ಮೂಲಪೀಠ. ಆಲಗೂರಿನ ಪೀಠ ಅದರ ಸಮಾನವಾಗಿ ಕೆಲಸ ಮಾಡಲಿದೆ” ಎಂದು ಸಂಘಟಕರು ಮೂರನೇ ಪೀಠ ಸ್ಥಾಪನೆ ವೇಳೆ ಘೋಷಣೆ ಮಾಡಿದಾಗಿನಿಂದ ಮೊದಲ ಪೀಠ ನಮ್ಮದೇ ಎನ್ನುವ ಪೈಪೋಟಿ ಹರಿಹರ ಮತ್ತು ಕೂಡಲಸಂಗಮ ಪೀಠದ ನಡುವೆ ಏರ್ಪಟ್ಟಿದೆ. ಇದೀಗ ಕಾಶಪ್ಪನವರ ಮತ್ತು ಸ್ವಾಮೀಜಿ ನಡುವಿನ ವಿವಾದದಲ್ಲೂ ಮುನ್ನೆಲೆಗೆ ಬರುತ್ತಿದೆ. “ಕೂಡಲಸಂಗಮದ್ದೇ ಪಂಚಮಸಾಲಿ ಮೂಲ ಪೀಠವಾಗಿದೆ. ಭಕ್ತರ ಅಪೇಕ್ಷೆಯೂ ಅದೇ ಆಗಿದೆ. ಆದರೆ, ಪೀಠ ತ್ಯಜಿಸುವ ಅಥವಾ ಪ್ರತ್ಯೇಕ ಪೀಠದ ಕುರಿತು ನಾನು ಮಾತನಾಡುವುದಿಲ್ಲ” ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಕುಷ್ಟಗಿಯಲ್ಲಿ ಹೇಳಿದ್ದನ್ನು ಗಮನಿಸಬಹುದು.
ಪೀಠಕ್ಕೆ ಇನ್ನೊಬ್ಬರು ಸ್ವಾಮೀಜಿಯನ್ನು ನೇಮಕ ಮಾಡುವುದಾಗಿ ಹೇಳುವ ಮೂಲಕ ವಿಜಯಾನಂದ ಕಾಶಪ್ಪನವರ ಮತ್ತೊಂದು ಸಮರಕ್ಕೆ ಮುಂದಾಗಿದ್ದಾರೆ. ಬಿಜೆಪಿಯ ನಾಯಕರು ಕೂಡಲಸಂಗಮ ಸ್ವಾಮೀಜಿ ಪರವಾಗಿ ಹೇಳಿಕೆ ನೀಡುತ್ತಿದ್ದಾರೆ. “ಪಂಚಮಸಾಲಿ ಸಮುದಾಯ ಬಹಳ ದೊಡ್ಡದಿದೆ. ಸಮಾಜದ ಎಲ್ಲರೂ ಒಂದೇ ಪೀಠಕ್ಕೆ ಹೋಗಲು ಆಗುವುದಿಲ್ಲ. ಜನರಿಗೆ ಅನುಕೂಲವಾಗಲಿ ಎಂದು ಐದು ಪೀಠಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ನಾಲ್ಕು ಪುರುಷ ಪೀಠವಾದರೆ ಒಂದು ಮಹಿಳಾ ಪೀಠ ಸ್ಥಾಪನೆಯಾಗಲಿದೆ” ಎಂದು ಮುರುಗೇಶ ನಿರಾಣಿ ಹೇಳಿದ್ದಾರೆ. ಇದಕ್ಕೆ ಮಾಜಿ ಸಚಿವ ಸಿ ಸಿ ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ್ ಸಹಮತ ವ್ಯಕ್ತಪಡಿಸಿದ್ದಾರೆ.
“ಟ್ರಸ್ಟ್ ವತಿಯಿಂದ ಪೀಠಕ್ಕೆ ಸ್ವಾಮೀಜಿ ಅವರನ್ನು ನೇಮಕ ಮಾಡಲಾಗಿದೆ. ಪೀಠಕ್ಕೆ ಸ್ವಾಮೀಜಿಯೇ ಬರದಿದ್ದರೆ ಹೇಗೆ? ಮಠ ಅನೈತಿಕ ಚಟುವಟಿಕೆಗಳಿಗೆ ತಾಣವಾಗದಂತೆ ನೋಡಿಕೊಳ್ಳುವುದು ಟ್ರಸ್ಟ್ ಜವಾಬ್ದಾರಿ. ಆ ಕಾರಣಕ್ಕೆ ಪೀಠಕ್ಕೆ ಗೇಟ್ ಅಳವಡಿಸಿ ಬೀಗ ಹಾಕಲಾಗಿತ್ತು. ಸ್ವಾಮೀಜಿ ಸಮಾಜ ಸಂಘಟನೆ ಬಿಟ್ಟು ಬೇರೆ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಅವರನ್ನು ತೆಗೆದು ಹಾಕುವ ಹಕ್ಕೂ ಬೈಲಾದಲ್ಲಿ ಟ್ರಸ್ಟ್‌ಗೆ ನೀಡಲಾಗಿದೆ. ಇವರ ಬಗ್ಗೆ ಇನ್ನೂ ಗಂಭೀರ ಆರೋಪಗಳಿವೆ. ಬೇರೆಯವರ ಉಸಾಬರಿ ಇವರಿಗೆ ಏಕೆ ಬೇಕು? ವರ್ಗಾವಣೆ, ನೇಮಕ ವಿಚಾರದಲ್ಲಿ ಸರ್ಕಾದಲ್ಲಿ ಕೈಯಾಡಿಸುತ್ತಾರೆ. ಹಿಂದೆ ಎಚ್ಚರಿಕೆ ನೀಡಿದಾಗ ಬದಲಾಗುತ್ತೇನೆ ಎಂದು ಸ್ವಾಮೀಜಿ ಹೇಳಿದ್ದರು. ಆದರೀಗ ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. ಹೀಗಾಗಿ ನಾವು ಬೇರೆ ಸ್ವಾಮೀಜಿ ನೇಮಕ ಮಾಡಿಕೊಳ್ಳಲು ನಿರ್ಧರಿಸುತ್ತಿದ್ದೇವೆ” ಎಂದು ಈ ದಿನ.ಕಾಂ ಗೆ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ ಹೇಳಿದರು.
“ಕೆಲವೇ ಜನರು ಸೇರಿ ರಚಿಸಿಕೊಂಡಿರುವ ಟ್ರಸ್ಟ್ ಅದು. ಅದಕ್ಕೆ ಸಮಾಜದ ಮಾನ್ಯತೆ ಇಲ್ಲ. ಪೀಠಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಕೊಡುಗೆ ಏನು?” ಎಂದು ಟ್ರಸ್ಟ್ ಅಸ್ತಿತ್ವವನ್ನೇ ಪ್ರಶ್ನಿಸುತ್ತಾರೆ ನರಗುಂದ ಶಾಸಕ ಸಿ ಸಿ ಪಾಟೀಲ್. ಒಟ್ಟಾರೆ ಈ ವಿವಾದ ಸದ್ಯಕ್ಕೆ ಶಮನಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಟೀಕೆ, ಪ್ರತಿಟೀಕೆ, ಆರೋಪ, ಪ್ರತ್ಯಾರೋಪಗಳು ತೀವ್ರಗೊಳ್ಳುತ್ತಿವೆ.
2008ರಲ್ಲೇ ಎರಡು ಪೀಠಗಳನ್ನು ಸ್ಥಾಪಿಸಿದ ಪಂಚಮಸಾಲಿ ಸಮಾಜದ ಮುಖಂಡರು ಎರಡೇ ದಶಕದಲ್ಲಿ ಜಮಖಂಡಿಯಲ್ಲಿ ಮೂರನೇ ಪೀಠ ಸ್ಥಾಪನೆ ಮಾಡಿದ್ದಾರೆ. ಈಗ ಕಾಶಪ್ಪನವರ ಮತ್ತು ಮೃತ್ಯುಂಜಯ ಸ್ವಾಮೀಜಿನ ನಡುವಿನ ವಿವಾದದಲ್ಲಿ ಇನ್ನೆರಡು ಪೀಠ ಸ್ಥಾಪಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಸ್ವಾಮೀಜಿ ಮತ್ತು ಕಾಶಪ್ಪನವರ ನಡುವಿವ ಭಿನ್ನಾಭಿಪ್ರಾಯ ಶಮನಗೊಳ್ಳದಿದ್ದರೆ ಮಲಪ್ರಭಾ ನದಿ ದಂಡೆಯ ಮೇಲೆ ನಾಲ್ಕನೇ ಪೀಠ ಸ್ಥಾಪಿಸಿ, ಅಲ್ಲಿಗೆ ಮೃತ್ಯುಂಜಯ ಸ್ವಾಮೀಜಿ ಅವರನ್ನು ಕಳುಹಿಸಿಕೊಡುವ ವಿಚಾರ ಪ್ರಸ್ತಾಪವಾಗಿದೆ. ಇದರ ಜೊತೆಗೆ ಗದಗ ಅಥವಾ ಧಾರವಾಡದಲ್ಲಿ ಪಂಚಮಸಾಲಿ ಮಹಿಳಾ ಪೀಠವೊಂದನ್ನು ಸ್ಥಾಪಿಸಬೇಕು ಎನ್ನುವ ವಿಚಾರವೂ ಇದೆ ಎನ್ನುತ್ತವೆ ಮೂಲಗಳು.
“ಇರುವ ಮೂರು ಪೀಠಗಳ ಕಥೆಯೇ ಮೂರಾಬಟ್ಟೆಯಾಗಿರುವಾಗ ಮತ್ತೆರಡು ಪೀಠ ಏಕೆ ಬೇಕು? ಸಮಾಜದಲ್ಲಿ ಈಗಾಗಲೇ ಒಗ್ಗಟ್ಟು ಹಾಳಾಗಿದೆ. ಹೊಸದಾಗಿ ಪೀಠ ಸ್ಥಾಪನೆಯಾದರೆ ಮತ್ತಷ್ಟು ಹಾಳಾಗುತ್ತದೆ. ಪೀಠ ಸ್ಥಾಪಿಸಬೇಕು ಎನ್ನುವವರೆಲ್ಲ ತಮ್ಮ ರಾಜಕೀಯ ಲೆಕ್ಕಾಚಾರ ಇಟ್ಟುಕೊಂಡು ಮಾತನಾಡುತ್ತಿದ್ದಾರೆ. ಇವರಿಗೆ ಸಮಾಜದ ಏಳಿಗೆ ಬೇಕಾಗಿಲ್ಲ. ಹಿಂದೊಮ್ಮೆ ಸಂಶೋದಕ ಎಂ ಎಂ ಕಲಬುರ್ಗಿ ಅವರು ಲಿಂಗಾಯತ ಸಮುದಾಯದಿಂದ ಪಂಚಪೀಠಗಳು ಸ್ಥಾಪನೆಯಾಗಬೇಕು ಎಂದು ಹೇಳಿದ್ದರು. ಅವರ ಉದ್ದೇಶ ಪಂಚಾಚಾರ್ಯ ಪೀಠಗಳಿಂದ ಲಿಂಗಾಯತರು ಬಿಡುಗಡೆ ಹೊಂದಿ, ಪರ್ಯಾಯವಾಗಿ ಐದು ಪೀಠ ಕಟ್ಟಿ ನಾವು ವೀರಶೈವರ ಗುಲಾಮರಲ್ಲ ಎನ್ನವುದನ್ನು ತೋರಿಸುವ ಉನ್ನತ ಆಲೋಚನೆ ಅವರದ್ದಾಗಿತ್ತು. ಆದರೆ, ಈಗಿನ ಪಂಚಮಸಾಲಿಯ ಎರಡು ಪೀಠಗಳು ವೀರಶೈವರ ಗುಲಾಮರಾಗಿಯೇ ಇವೆ” ಎನ್ನುತ್ತಾರೆ ನೆಲೋಗಿ ವಿರಕ್ತ ಮಠದ ಸಿದ್ದಲಿಂಗೇಶ್ವರ ಸ್ವಾಮೀಜಿ.
(ಮುಂದುವರಿಯುವುದು…)
‘ಈ ದಿನ’ ಸರಣಿ ಭಾಗ-1 ಪಂಚಮಸಾಲಿ ಪೀಠವೇ ರಾಜಕೀಯ ಆಡುಂಬೊಲ: ಇದು ಸ್ವಾಮೀಜಿಯಿಂದಾದ ಸ್ವಯಂಕೃತ ಅಪರಾಧ
‘ಈ ದಿನ’ ಸರಣಿ ಭಾಗ-2 ಪಂಚಮಸಾಲಿ ಪೀಠ ಫಜೀತಿ | ಸಮುದಾಯದ ‘2ಎ ಮೀಸಲಾತಿ’ ಹೋರಾಟ ಬಲಿ ಕೊಟ್ಟರೇ ಸ್ವಾಮೀಜಿ?
‘ಈ ದಿನ’ ಸರಣಿ ಭಾಗ-3 ಪಂಚಮಸಾಲಿ ಪೀಠ ಫಜೀತಿ | ‘ಸಮಾಜಮುಖಿ’ಯಾಗಿದ್ದ ಸ್ವಾಮೀಜಿಗೆ ‘ಪ್ರಚಾರಪ್ರಿಯತೆ’ ಮುಳುವಾಯಿತೇ?

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.