ಔರಾದ್ ತಾಲೂಕಿನ ಶೆಂಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಟ್ನಾಳ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಅವರು ಮಂಗಳವಾರ ಭೇಟಿ ನೀಡಿ ಜಲ ಜೀವನ್ ಮಿಷನ್ ಕಾಮಗಾರಿ ಪರಿಶೀಲಿಸಿದರು.
ಚಟ್ನಾಳ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಜೆಜೆಎಂ ಕಾಮಗಾರಿ ನಡೆಯುತ್ತಿದ್ದು ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಬೇಸಿಗೆ ಸಂದರ್ಭದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿತು. ಮಳೆ ಆರಂಭವಾದರೂ ಗ್ರಾಮಸ್ಥರಿಗೆ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ. ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಕೊಳವೆ ಬಾವಿಯೊಂದರ ನೀರು ಕಲುಷಿತಗೊಂಡಿರುವ ಬಗ್ಗೆ ಪಂಚಾಯಿತಿ ಅಧಿಕಾರಿಗಳೇ ಖುದ್ದು ವರದಿ ನೀಡಿದ್ದಾರೆ. ಸಮಸ್ಯೆ ಕುರಿತು ಜುಲೈ 24ರಂದು ʼಈದಿನʼನಲ್ಲಿ ʼಜೆಜೆಎಂ ಅಪೂರ್ಣ : ಕೆಸರು ಗದ್ದೆಯಂತಾದ ರಸ್ತೆ, ಚರಂಡಿಗಳು; ಸ್ವಚ್ಛತೆ ಮರೀಚಿಕೆ!ʼ ತಲೆಬರಹದಲ್ಲಿ ವರದಿ ಪ್ರಕಟವಾಗಿತ್ತು.

ವರದಿಗೆ ಸ್ಪಂದಿಸಿದ ಜಿಲ್ಲಾ ಪಂಚಾಯತ್ ಸಿಇಒ ಡಾ.ಗಿರೀಶ ಬದೋಲೆ ಅವರು ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಜೆಜೆಎಂ ಕಾಮಗಾರಿ, ಅಂಗನವಾಡಿ ಕೋಣೆ ಕಾಮಗಾರಿ ವೀಕ್ಷಿಸಿದರು. ಜೆಜೆಎಂ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಅವರು ತ್ವರಿತವಾಗಿ ಕಾಮಗಾರಿ ಮುಗಿಸಿ ಪೈಪ್‌ಲೈನ್ ಅಗೆದಿರುವ ರಸ್ತೆ ಗುಂಡಿಗಳನ್ನು ಶೀಘ್ರದಲ್ಲಿ ಮುಚ್ಚಬೇಕುʼ ಎಂದು ಹೇಳಿದರು.
ಇನ್ನು ಗ್ರಾಮದ ಮುಖ್ಯರಸ್ತೆಯಲ್ಲಿ ಚರಂಡಿ, ರಸ್ತೆ ಅವ್ಯವಸ್ಥೆ ಕಂಡು ಅಸಮಧಾನ ವ್ಯಕ್ತಪಡಿಸಿದ ಅವರು, ʼಸೂಕ್ತ ಚರಂಡಿ ವ್ಯವಸ್ಥೆ, ಸ್ವಚ್ಛತೆ ಯಾಕಿಲ್ಲʼ ಎಂದು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಪ್ರಶ್ನಿಸಿದರು. ಆಗ ಅಧಿಕಾರಿಗಳು ಹತ್ತು ದಿನದ ಒಳಗಾಗಿ ಜೆಜೆಎಂ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದರು. ಇನ್ನು ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಇತರೆ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಬೇಡಿಕೆಯಿಟ್ಟರು.

ತಾಲ್ಲೂಕಿನ ಕೌಠಾ(ಬಿ) ಗ್ರಾಮ ಪಂಚಾಯತ್ ವ್ಯಾಪ್ತಿಯ ಬಲ್ಲೂರ(ಜೆ) ಭೇಟಿ ನೀಡಿ ಜೆಜೆಎಂ ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ಪರಿಶೀಲಿಸಿ ನಲ್ಲಿಗಳಿಗೆ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಮಾಹಿತಿ ಪಡೆದರು. ಇನ್ನು ಸಂತಪೂರ ಹಾಗೂ ಬೆಳಕುಣಿ(ಚೌ) ಗ್ರಾಮಗಳಿಗೆ ಭೇಟಿ ನೀಡಿದ ಸಿಇಒ ಅವರು ಜಲ ಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಪರಿಶೀಲಿಸಿದರು.
ಇದನ್ನೂ ಓದಿ : ಔರಾದ್ | ಜೆಜೆಎಂ ಅಪೂರ್ಣ : ಕೆಸರು ಗದ್ದೆಯಂತಾದ ರಸ್ತೆ, ಚರಂಡಿಗಳು; ಸ್ವಚ್ಛತೆ ಮರೀಚಿಕೆ!
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ರಾಮಲಿಂಗ ಬಿರಾದರ್, ಔರಾದ್ ತಾಲೂಕು ಪಂಚಾಯತ್ ಇಒ ಶಿವಕುಮಾರ್ ಘಾಟೆ ಸೇರಿದಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ನಾಗೇಶ ಮುಕರಂಬೆ, ಸಂತೋಷ ಪಾಟೀಲ್, ಆತ್ಮರಾಮ, ರಘುನಾಥ ರೆಡ್ಡಿ ಹಾಗೂ ಮತ್ತಿತರರು ಇದ್ದರು.