ರಕ್ತ ವರ್ಗಾವಣೆ ಮೆಡಿಸಿನ್‌ನಲ್ಲಿ ಐತಿಹಾಸಿಕ ಮೈಲಿಗಲ್ಲೊಂದನ್ನು ಸಾಧಿಸಲಾಗಿದೆ. ಈವರೆಗೆ ವಿಶ್ವದ ಯಾವುದೇ ಭಾಗದಲ್ಲಿ ಗುರುತಿಸದೆ ಇದ್ದ ಹೊಸ ರಕ್ತದ ಗುಂಪನ್ನು ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರದಲ್ಲಿ ಕಂಡುಹಿಡಿಯಲಾಗಿದೆ. ಹೊಸ ಗುಂಪಿನ ರಕ್ತವು ಕೋಲಾರ ಜಿಲ್ಲೆಯ 38 ವರ್ಷದ ಮಹಿಳೆಯಲ್ಲಿ ಕಂಡುಬಂದಿದೆ.
ಯು.ಕೆ.ಯ ಬ್ರಿಸ್ಟಲ್‌ನಲ್ಲಿರುವ ಅಂತರರಾಷ್ಟ್ರೀಯ ರಕ್ತ ಗುಂಪು ಉಲ್ಲೇಖ ಪ್ರಯೋಗಾಲಯ (ಇಂಟರ್‌ನ್ಯಾಷನಲ್ ಬ್ಲಡ್ ಗ್ರೂಪ್ ರೆಫರೆನ್ಸ್ ಲ್ಯಾಬೊರೇಟರಿ (IBGRL)ಯಲ್ಲಿ 10 ತಿಂಗಳ ಕಾಲ ನಡೆದ ರಕ್ತ ಪರೀಕ್ಷೆ ಮತ್ತು ಆಣ್ವಿಕ ಸಂಶೋಧನೆಯ ಬಳಿಕ, ಹೊಸ ಗುಂಪಿನ ರಕ್ತವೆಂದು ಗುರುತಿಸಲಾಗಿದೆ. ಈ ಆಂಟಿಜೆನ್ ಕ್ರೋಮರ್ (CR) ಕೂಡ ರಕ್ತದ ಗುಂಪು ವ್ಯವಸ್ಥೆಯ ಭಾಗವಾಗಿದೆ ಎಂದು ಹೇಳಲಾಗಿದೆ. ಇದರ ಮೂಲವನ್ನು ಗೌರವಿಸಿ, ಈ ಗುಂಪಿನ ರಕ್ತಕ್ಕೆ ಅಧಿಕೃತವಾಗಿ ‘CRIB’ ಎಂದು ಹೆಸರಿಡಲಾಗಿದೆ, ಇಲ್ಲಿ CR ಎಂದರೆ ಕ್ರೋಮರ್ ಮತ್ತು IB ಎಂದರೆ ಇಂಡಿಯಾ, ಬೆಂಗಳೂರು.
2024ರ ಫೆಬ್ರವರಿಯಲ್ಲಿ ಕೋಲಾರ ಜಿಲ್ಲೆಯ ಈ ಮಹಿಳೆಯನ್ನು ಹೃದಯ ಶಸ್ತ್ರಚಿಕಿತ್ಸೆಗಾಗಿ ಕೋಲಾರದ ಆರ್.ಎಲ್ ಜಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆಗ ಈ ಮಹಿಳೆ ಇತಿಹಾಸ ಸೃಷ್ಟಿಸುತ್ತಾರೆಂದು ಯಾರಿಗೂ ತಿಳಿದಿರಲಿಲ್ಲ. ಆಗ, ಆಕೆಯ ರಕ್ತದ ಗುಂಪನ್ನು ‘ಒ ಪಾಸಿಟಿವ್’ ಎಂದು ಗುರುತಿಸಲಾಗಿತ್ತು. ಶಸ್ತ್ರಚಿಕಿತ್ಸೆಗೂ ಮುನ್ನ ಆಸ್ಪತ್ರೆಯ ರಕ್ತ ಬ್ಯಾಂಕ್‌ನಲ್ಲಿ ಆಕೆಗೆ ಹೊಂದಿಕೆಯಾಗುವ ರಕ್ತವನ್ನು ಸಿದ್ಧವಾಗಿಡಲು ಶಸ್ತ್ರಚಿಕಿತ್ಸಕರು ತಿಳಿಸಿದ್ದರು. ಆದರೆ, ‘ಒ ಪಾಸಿಟಿವ್ ರಕ್ತ’ದ ದಾಸ್ತಾನಿನ ಯಾವುದೇ ರಕ್ತವೂ ಆಕೆಯ ರಕ್ತದೊಂದಿಗೆ ಹೊಂದಿಕೆ ಆಗುತ್ತಿಲ್ಲ ಎಂಬುದನ್ನು ವೈದ್ಯರು ಗಮನಿಸಿದರು.
ಬಳಿಕ, ಆಕೆಯ ರಕ್ತದ ಮಾದರಿಯನ್ನು ಆಸ್ಪತ್ರೆಯಿಂದ ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರದ ‘ಅಡ್ವಾನ್ಸ್‌ಡ್ ಇಮ್ಯುನೊಹೆಮಟಾಲಜಿ ರೆಫರೆನ್ಸ್ ಪ್ರಯೋಗಾಲಯ’ಕ್ಕೆ ಕಳುಹಿಸಲಾಗಿತ್ತು.ಅಲ್ಲಿ ಆಕೆಯ ರಕ್ತವನ್ನು ‘ಪ್ಯಾನ್‌ರಿಯಾಕ್ಟಿವ್’ (ಸುಧಾರಿತ ತಂತ್ರಜ್ಞಾನಗಳನ್ನು ಬಳಸಿ ಪರೀಕ್ಷಿಸಿದ ಎಲ್ಲ ಮಾದರಿಗಳೊಂದಿಗೆ ಇದು ಹೊಂದಿಕೆಯಾಗುತ್ತಿಲ್ಲ) ಎಂಬುದನ್ನು ಕಂಡುಕೊಳ್ಳಲಾಯಿತು ಎಂದು ಟಿಟಿಕೆ ರಕ್ತ ಕೇಂದ್ರದ ಹೆಚ್ಚುವರಿ ವೈದ್ಯಕೀಯ ನಿರ್ದೇಶಕ ಡಾ. ಅಂಕಿತ್ ಮಾಥುರ್ ತಿಳಿಸಿರುವುದಾಗಿ ‘ದಿ ಹಿಂದು’ ವರದಿ ಮಾಡಿದೆ.
“ಈ ಪ್ರಕರಣ ತುಂಬಾ ಸಂಕೀರ್ಣವಾಗಿತ್ತು. ಅಪರೂಪದ ರಕ್ತ ಗುಂಪಿನ ಸೂಚನೆಯಾಗಿತ್ತು. ಕೆಲವೊಮ್ಮೆ ಅಪರೂಪದ ರಕ್ತದ ಗುಂಪುಗಳು ಒಂದೇ ಕುಟುಂಬದ ಹಲವರಲ್ಲಿ ಕಂಡುಬರುತ್ತವೆ. ಆದ್ದರಿಂದ, ಆಕೆಯ ಮಕ್ಕಳು ಸೇರಿದಂತೆ ಅವರ ಕುಟುಂಬದ 20 ಸದಸ್ಯರ ರಕ್ತದ ಮಾದರಿಗಳನ್ನು ಸಂಗ್ರಹಿಸಿದೆವು. ಆದರೆ, ಆಕೆಯ ಕುಟುಂಬದ ಯಾವುದೇ ಸದಸ್ಯರ ರಕ್ತವೂ ಆಕೆಯ ರಕ್ತದೊಂದಿಗೆ ಹೊಂದಿಕೆಯಾಗಲಿಲ್ಲ. ಹೀಗಾಗಿ, ಯಾವುದೇ ರಕ್ತ ಪೂರೈಕೆಯ ಅಗತ್ಯವಿಲ್ಲದೆ ಆಕೆಯ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಆಕೆಯ ಆರೋಗ್ಯಕ್ಕವು ಸುಗಮವಾಗಿ ಚೇತರಿಸಿಕೊಳ್ಳುವಂತೆ ಮಾಡಲಾಯಿತು” ಎಂದು ಡಾ. ಮಾಥುರ್ ಹೇಳಿದ್ದಾರೆ.
“ಭವಿಷ್ಯದಲ್ಲಿ ಈ ಮಹಿಳೆಗೆ ರಕ್ತ ಪೂರೈಕೆಯ ಅಗತ್ಯವಿದ್ದರೆ, ನಾವು ಆಟೋಲಾಗಸ್ ರಕ್ತ ಪೂರೈಕೆಯನ್ನು ಮಾಡಬೇಕಾಗಬಹುದು. ಯೋಜಿತ ಶಸ್ತ್ರಚಿಕಿತ್ಸೆಯಾದರೆ, ಆಕೆಯ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಕಬ್ಬಿಣದ ಅಂಶಗಳನ್ನು ಪೂರೈಸಬೇಕು. ಆಕೆಯ ರಕ್ತವನ್ನು ಸಂಗ್ರಹಿಸಿ, ಶಸ್ತ್ರಚಿಕಿತ್ಸೆಗೆ ಅಗತ್ಯವಿದ್ದಾಗ ಬಳಸಬೇಕಾಗಬಹುದು,” ಎಂದು ಅವರು ವಿವರಿಸಿದ್ದಾರೆ.
“ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಆಕೆಯ ಮತ್ತು ಕುಟುಂಬಸ್ಥರ ರಕ್ತದ ಮಾದರಿಗಳನ್ನು ಯು.ಕೆ.ಯ ಬ್ರಿಸ್ಟಲ್‌ನ IBGRLಗೆ ಕಳುಹಿಸಲಾಯಿತು. ಸುಮಾರು 10 ತಿಂಗಳ ಸಂಶೋಧನೆಯ ಬಳಿಕ, ಈವರೆಗೆ ಪತ್ತೆಯಾಗದ ರಕ್ತದ ಗುಂಪಿನ ಆಂಟಿಜೆನ್ ಮಹಿಳೆಯಲ್ಲಿ ಪತ್ತೆಯಾಗಿದೆ ಎಂಬುದಾಗಿ IBGRL ವರದಿ ಮಾಡಿತು. ಆಣ್ವಿಕ (ಮಲೆಕ್ಯುಲರ್) ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿ ಈ ಆಂಟಿಜೆನ್‌ನ ರಚನೆ ಮತ್ತು ಕಾರ್ಯಗಳನ್ನು ಗುರುತಿಸಲಾಯಿತು. ಇದು ಕ್ರೋಮರ್ (CR) ಎಂಬ ರಕ್ತ ಗುಂಪು ವ್ಯವಸ್ಥೆಯೊಳಗಿನ ಹೊಸ ಆಂಟಿಜೆನ್ ಆಗಿತ್ತು,” ಎಂದು ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರದ ಸಲಹೆಗಾರ ಡಾ. ಸೌಮೀ ಬ್ಯಾನರ್ಜೀ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಭಾರತದ ನಗರಗಳು ಹಾಲಿ ಜೀವನ ವೆಚ್ಚಗಳಿಗೆ ಯೋಗ್ಯವೇ?
“2025ರ ಜೂನ್ 4ರಂದು ಇಟಲಿಯ ಮಿಲನ್‌ನಲ್ಲಿ ನಡೆದ 35ನೇ ‘ಇಂಟರನ್ಯಾಷನಲ್ ಸೊಸೈಟಿ ಆಫ್ ಬ್ಲಡ್ ಟ್ರಾನ್ಸ್‌ಫ್ಯೂಷನ್’ (ISBT) ಸಮಾವೇಶದಲ್ಲಿ ಈ ಹೊಸ ಆಂಟಿಜೆನ್‌ಗೆ CRIB ಎಂದು ಹೆಸರಿಡಲಾಯಿತು. ಇದರಿಂದ, ಈ ಮಹಿಳೆ ಹೊಸ ಆಂಟಿಜೆನ್ ಹೊಂದಿರುವ ವಿಶ್ವದ ಮೊದಲ ವ್ಯಕ್ತಿಯೆಂದು ಗುರುತಿಸಲಾಗಿದೆ. ಈ ರಕ್ತದ ಗುಂಪಿಗೆ ‘ಇಂಟರನ್ಯಾಷನಲ್ ಸೊಸೈಟಿ ಆಫ್ ಬ್ಲಡ್ ಟ್ರಾನ್ಸ್‌ಫ್ಯೂಷನ್’ (ISBT), ರೆಡ್ ಸೆಲ್ ಇಮ್ಯುನೊಜೆನೆಟಿಕ್ಸ್ ಆಂಡ್ ಟರ್ಮಿನಾಲಜಿಯು ಹೊಸ ಹೆಸರನ್ನು ನಾಮಕರಣ ಮಾಡಿವೆ” ಎಂದು ಡಾ. ಬ್ಯಾನರ್ಜೀ ಹೇಳಿದ್ದಾರೆ.
ಅಪರೂಪದ ಗುಂಪಿನ ರಕ್ತ ಹೊಂದಿರುವ ರೋಗಿಗಳ ರಕ್ತದ ಅಗತ್ಯಗಳ ಪೂರೈಕೆಗಾಗಿ, ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರದ ‘ಬೆಂಗಳೂರು ವೈದ್ಯಕೀಯ ಸೇವೆಗಳ ಟ್ರಸ್ಟ್’ (BMST), ‘ಕರ್ನಾಟಕ ರಾಜ್ಯ ರಕ್ತ ಪೂರೈಕೆ ಮಂಡಳಿ’ ಹಾಗೂ ಐಸಿಎಂಆರ್‌ನ ‘ರಾಷ್ಟ್ರೀಯ ಇಮ್ಯುನೊಹೆಮಟಾಲಜಿ ಸಂಸ್ಥೆ’ಗಳು ಜಂಟಿಯಾಗಿ ಕಳೆದ ಜನವರಿಯಲ್ಲಿ ‘ಅಪರೂಪದ ರಕ್ತ ದಾನಿಗಳ’ ಅಭಿಯಾನ ಆರಂಭಿಸಿವೆ.
“ಇತ್ತೀಚಿನ ವರ್ಷಗಳಲ್ಲಿ ಇತರ ಹಲವಾರು ಅಪರೂಪದ ರಕ್ತ ಗುಂಪಿನ ರೋಗಿಗಳಿಗೆ (ಉದಾಹರಣೆಗೆ: D-, Rh null, In b negative) ಸೂಕ್ತ ರಕ್ತದ ಅಗತ್ಯವನ್ನು ಬೆಂಬಲಿಸುವ ಮತ್ತು ಗುರುತಿಸುವಲ್ಲಿ ನಾವು ಪ್ರಮುಖ ಪಾತ್ರ ವಹಿಸಿದ್ದೇವೆ. ಈ ಪ್ರಕರಣಗಳನ್ನು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಕಟಿಸಲಾಗಿದೆ. ಇದುವರೆಗೆ, ನಾವು 2,108 ನಿಯಮಿತ ಪುನರಾವರ್ತಿತ ದಾನಿಗಳ ರಕ್ತದ ಮಾದರಿಯನ್ನು ಪರೀಕ್ಷೆ ನಡೆಸಿದ್ದೇವೆ. 21 ದಾನಿಗಳು ಅಪರೂಪದ ರಕ್ತದ ಗುಂಪನ್ನು ಹೊಂದಿದ್ದಾರೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ,” ಎಂದು ಡಾ. ಮಾಥುರ್ ತಿಳಿಸಿದ್ದಾರೆ.
I dugg some of you post as I cerebrated they were handy very beneficial