ಅಂತರ್ಜಲ ಅಭಿವೃದ್ಧಿ ಸಲುವಾಗಿ ಎತ್ತಿನಹೊಳೆ ಯೋಜನೆಯ ಮಧುಗಿರಿ ಗುರುತ್ವಾ ಕಾಲುವೆಯಿಂದ 62 ಕೆರೆಗಳಿಗೆ ನೀರು ತುಂಬಿಸುವುದರ ಜೊತೆಗೆ 31 ಕೆರೆಗಳ ಅಭಿವೃದ್ಧಿ ಕಾರ್ಯ ನಡೆಯಲಿದೆ. 2027 ಕ್ಕೆ ಕಾಮಗಾರಿ ಸಂಪೂರ್ಣಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದರು.
ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ಚಿನ್ನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಸಣ್ಣ ನೀರಾವರಿ ಇಲಾಖೆಯಿಂದ ತಿಮ್ಮಸಂದ್ರ ಗ್ರಾಮದಲ್ಲಿ 285ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಗುರುತ್ವ ಕಾಲುವೆ ಕಾಮಗಾರಿಯನ್ನು ವೀಕ್ಷಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ತಾಲ್ಲೂಕಿನ ಕಸಬಾ ಹೋಬಳಿ 10 ಕೆರೆ, ಹೊಳವನಹಳ್ಳಿ ಹೋಬಳಿ 10ಕೆರೆ, ಸಿಎನ್ ದುರ್ಗಾ ಹೋಬಳಿ 17ಕೆರೆ, ಕೋಳಾಲ 25 ಕೆರೆಗಳಿಗೆ ನೀರು ಹರಿಸುವ ಯೋಜನೆ ಇದಾಗಿದ್ದು, ಈ ಕೆರೆಗಳಿಗೆ ನೀರು ತುಂಬಿಸಲು ಸುಮಾರು 197 ಕಿ.ಮೀ ಪೈಪ್‌ಲೈನ್ ಅವಶ್ಯಕತೆಯಿದ್ದು, ಎಂಎಸ್ ಪೈಪ್ 87 ಕಿ.ಮೀ, ಹೆಚ್‌ಡಿಪಿ ಪ್ಲಾಸ್ಟಿಕ್ ಪೈಪ್ 110 ಕಿ.ಮೀ, ಈ ಯೋಜನೆಗೆ 285 ಕೋಟಿ.ರೂ ವೆಚ್ಚ ಖರ್ಚಾಗಲಿದೆ ಎಂದು ಹೇಳಿದರು.

ಪ್ರಮುಖವಾಗಿ ಕುಡಿಯುವ ನೀರಿನ ಸರಬರಾಜಿಗಾಗಿ ಈ ಕೆರೆಗಳಿಗೆ ನೀರು ಹರಿಸುವ ಕೆಲಸವಾಗುತ್ತಿದೆ. ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಲಿದ್ದು ಈ ಯೋಜನೆ ಕೈ ಬಿಡುವಂತೆ ಕೋಲಾರ, ದೊಡ್ಡಬಳ್ಳಾಪುರದವರು ಮುಖ್ಯಮಂತ್ರಿಗಳ ಬಳಿ ಒತ್ತಾಯ ಮಾಡಿದ್ದಾರೆ. ನಮ್ಮ ಅದೃಷ್ಠ ಇಷ್ಟು ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗಿದೆ. ಇನ್ನೂ ಒಂದು ವರ್ಷದಲ್ಲಿ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಮೃತರ ಕುಟುಂಬಕ್ಕೆ ಸಾಂತ್ವನ :
ಕೊರಟಗೆರೆ ತಾಲ್ಲೂಕಿನ ಕೋಳಾಲ ಗ್ರಾಮದಲ್ಲಿ ಬ್ರೇಕ್ ಪೇಲ್ಯೂರ್‌ನಿಂದ ಗೊಬ್ಬರದ ಲಾರಿಯೊಂದು ಬೇಕರಿ, ಅಂಗಡಿ ಮಳಿಗೆ ನುಗ್ಗಿದ ವೇಳೆ ನಾಲ್ಕು ಜನರ ಬಲಿ ಪಡೆದಿದ್ದ ಘಟನಾ ಸ್ಥಳಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿ, ಪುನಃ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಎನ್‌ಆರ್‌ಎಲ್‌ಎಂ ಯೋಜನೆಯಡಿಯಲ್ಲಿ ಹುಲೀಕುಂಟೆ ಗ್ರಾಮದ ವಿಡಿವಿಕೆ ಕೇಂದ್ರದ ಶಂಕುಸ್ಥಾಪನೆ, ಸದರಿ ಗ್ರಾಮದ ಗ್ರಾ.ಪಂ ವ್ಯಾಪ್ತಿಯ ರಂಗನಾಥಸ್ವಾಮಿ ಗುಟ್ಟೆಯಲ್ಲಿ ಹಸಿರು ಗ್ರಾಮ ಕಾಮಗಾರಿ ವೀಕ್ಷಣೆ, ಹರಿಹರಪ್ಪನಪಾಳ್ಯ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಯ ಉದ್ಘಾಟನೆ, ಬಜ್ಜನಹಳ್ಳಿ ಗ್ರಾಮದ ರಸ್ತೆಯಿಂದ ಹರಿಹರಪ್ಪನಪಾಳ್ಯ ಗ್ರಾಮದ ರಸ್ತೆ ಅಭಿವೃದ್ದಿ ಮತ್ತು ಡಾಂಬರೀಕರಣ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿ, ಪ್ರವಾಸಿ ಮಂದಿರದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕರಿಸಿ ಭರವಸೆ ನೀಡಿದರು.

62 ಕೆರೆಗೆ ನೀರು ತುಂಬಿಸುವುದು ಶಾಶ್ವತ ಕೆಲಸವಲ್ಲವೇ?
ಎತ್ತಿನಹೊಳೆ ಕಾಮಗಾರಿ ೬೨ಕೆರೆಗಳಿಗೆ ನೀರು ತುಂಬಿಸುವುದು ಶಾಶ್ವತವಾದ ಕೆಲಸ. ಶಾಶ್ವತ ಕೆಲಸಕ್ಕೂ ಕೆಲ ಜನ ವಿರೋಧ ಮಾಡುತ್ತಾರೆ. ನಾನು ಅಧಿಕಾರದಲ್ಲಿ ಇರಲಿ ಇಲ್ಲದಿರಲಿ ಕೆರೆಯಲ್ಲಿ ನೀರು ಶಾಶ್ವತವಾಗಿರುತ್ತದೆ. ಸರ್ಕಾರದಿಂದ ಯೋಜನೆ ನಡೆಯದೇ ಕಾಮಗಾರಿ ನಡೆಯುತ್ತಾ? ಟೀಕೆ ಟಿಪ್ಪಣಿಗಳಿಗೆ ನಾನು ತಲೆ ಕೆಡಿಸಿಕೊಳ್ಳಲ್ಲ ನನ್ನ ಅಭಿವೃದ್ಧಿ ಕೆಲಸಗಳು ಶಾಶ್ವತವಾಗಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ನಮ್ಮ ರೈತರು ಅವಕಾಶವನ್ನು ಕೈ ಚೆಲ್ಲಿದರು.ಬೈರಗೊಂಡ್ಲು ಬಫರ್ ಡ್ಯಾಂನ ಅವಕಾಶವನ್ನು ತಾಲ್ಲೂಕಿನ ರೈತರು ಕೈ ಚೆಲ್ಲಿದರು. ತಮ್ಮ ತಮ್ಮ ಜಮೀನು ಮತ್ತು ಮನೆಗಳು ಕಳೆದುಕೊಳ್ಳುವ ಆತಂಕದಲ್ಲಿ ಉತ್ತಮವಾದ ಯೋಜನೆಯ ಸದಪಯೋಗವನ್ನು ಕಳೆದುಕೊಂಡಿರುವುದು ಬೇಸರ ತಂದಿದೆ. ಬಫರ್ ಡ್ಯಾಂ ಯೋಜನೆ ಕೈ ತಪ್ಪಿದರೂ ಕೂಡ 62 ಕೆರೆಗಳಿಗೆ ನೀರು ತುಂಬಿಸುವ ಅದೃಷ್ಠ ನಮ್ಮದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ ಸಿಇಓ ಜಿ.ಪ್ರಭು, ಎಸ್.ಪಿ ಆಶೋಕ್, ತಹಶೀಲ್ದಾರ್ ಮಂಜುನಾಥ್, ತಾ.ಪಂ ಇಓ ಅಪೂರ್ವ, ಸಣ್ಣ ನೀರಾವರಿ ಇಲಾಖೆ ಮೂಡ್ಲಿಗಿರಿಯಪ್ಪ, ಜೆಇ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಅಶ್ವತ್ಥ್ನಾರಾಯಣ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.