ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಎಂಎಸ್‌ಸಿ ಕೋರ್ಸ್ ಅಧ್ಯಯನ ಮಾಡುತ್ತಿರುವ ಅನೇಕ ಎಸ್‌ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಕ್ಕಬೇಕಾದ ವಿದ್ಯಾರ್ಥಿವೇತನ (scholarship) ಇನ್ನೂ ಲಭ್ಯವಾಗದ ಕಾರಣದಿಂದಾಗಿ ಎಂಎಸ್‌ಸಿ ವಿದ್ಯಾರ್ಥಿಗಳ ಪರೀಕ್ಷೆ ಮುಂದೂಡಲಾಗಿದೆ.
ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ತಾಹಿರ್ ಸಮೀರ್ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿನಿಧಿ ಮಂಡಳಿ ಕುಲಪತಿ ಹಾಗೂ ಕುಲಸಚಿವರನ್ನು ಭೇಟಿಯಾಗಿ ಕಾಲೇಜು ಶುಲ್ಕ ಪಾವತಿಸಲು ಅಸಾಧ್ಯ ಸ್ಥಿತಿಯಲ್ಲಿದ್ದೇವೆ ಎಂದು ವಿದ್ಯಾರ್ಥಿಗಳು ವಿವರಿಸಿದ ಬಳಿಕ ಕುಲಪತಿಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಗಸ್ಟ್ 5 ರಿಂದ ನಡೆಯಬೇಕಿದ್ದ ಎಂಎಸ್‌ಸಿ ಪರೀಕ್ಷೆಯನ್ನು ಆ.11ರ ವರೆಗೆ ಮುಂದೂಡಲು ತಾತ್ಕಾಲಿಕ ನಿರ್ಧಾರ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ತಿಳಿಸಿದ ಕುಲಪತಿ ಪ್ರೊ. ಬಿಡಿ ಕುಂಬಾರ್ “ವಿದ್ಯಾರ್ಥಿಗಳು ಅನುಭವಿಸುತ್ತಿರುವ ಆರ್ಥಿಕ ಹಿನ್ನಡೆ ಹಾಗೂ ವಿದ್ಯಾರ್ಥಿವೇತನ ಬಾರದ ಪರಿಣಾಮವಾಗಿ ಉದ್ಭವಿಸಿದ ಸಮಸ್ಯೆಯನ್ನು ಪರಿಗಣಿಸಿ, ವಿದ್ಯಾರ್ಥಿಗಳ ಶಿಕ್ಷಣ ಹಕ್ಕುಗಳು ಹಾನಿಯಾಗದಂತೆ, ಅವರಿಗೆ ಅಗತ್ಯವಾದ ಸಹಕಾರವನ್ನು ನೀಡಲು ವಿಶ್ವವಿದ್ಯಾನಿಲಯ ಬದ್ಧವಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ ? ಚಿತ್ರದುರ್ಗ | ಶಾಲಾ ಮಕ್ಕಳು, ಪಾದಾಚಾರಿಗಳ ಸುರಕ್ಷತೆಗೆ ಸೇತುವೆ, ರಸ್ತೆ ಉಬ್ಬು ನಿರ್ಮಾಣಕ್ಕೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ
ಕುಲಪತಿಗಳ ಭೇಟಿ ವೇಳೆ ಎಂಎಸ್ಸಿ ಸ್ನಾತಕೋತ್ತರ ವಿಭಾಗದ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.