ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಿಸಿದ್ದು ನಾನೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ-ಪದೇ ಹೇಳಿಕೊಳ್ಳುತ್ತಿದ್ದಾರೆ. ಆಪರೇಷನ್ ಸಿಂಧೂರ ಬಳಿಕ ಈವರೆಗೆ ಟ್ರಂಪ್ ಅವರು ದೇಶ-ವಿದೇಶಗಳಲ್ಲಿ ನಿಂತು ‘ನಾನೇ ಕದನ ವಿರಾಮ ಘೋಷಿಸಿದೆ’ ಎಂದು ಬರೋಬ್ಬರಿ 29 ಬಾರಿ ಹೇಳಿಕೊಂಡಿದ್ದಾರೆ. ಇದನ್ನು ಮೋದಿ ತಳ್ಳಿ ಹಾಕಿದ್ದರೆ ಅಥವಾ ಟ್ರಂಪ್ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಲು ಪ್ರಧಾನಿ ನರೇಂದ್ರ ಮೋದಿ ಹೆದರುತ್ತಿದ್ದಾರೆ. ಯಾಕೆಂದರೆ, ಟ್ರಂಪ್ ಸುಳ್ಳುಗಾರನೆಂದು ಹೇಳಿದರೆ, ಟ್ರಂಪ್ ಹಲವು ಸತ್ಯಾಂಶವನ್ನು ಬಯಲುಗೊಳಿಸುತ್ತಾರೆ ಎಂಬ ಭಯ ಮೋದಿಯಲ್ಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿದ್ದ ಸಮಯದಲ್ಲಿಯೇ ಭಾರತದ ಮೇಲೆ 25% ತೆರಿಗೆ ವಿಧಿಸಿ ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಿಸಿದ್ದಾರೆ. ಭಾರೀ ತೆರಿಗೆ ಹೇರಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, “ಟ್ರಂಪ್ ಅವರು ಕದನ ವಿರಾಮದಲ್ಲಿ ತನ್ನ ಮಧ್ಯಸ್ಥಿಕೆಯನ್ನು ಪುನರುಚ್ಚರಿಸಿದ್ದಾರೆ. ಭಾರತವು ಅಮೆರಿಕದಿಂದ 25%ರಷ್ಟು ಅಧಿಕ ಸುಂಕ ದರವನ್ನು ಎದುರಿಸಲು ಸಜ್ಜಾಗುತ್ತಿದೆ ಎಂದಿದ್ದಾರೆ. ಇದೆದಲ್ಲರ ನಡುವೆಯೂ ಟ್ರಂಪ್ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿಲ್ಲ. ಅವರಿಗೆ ಅದು ಸಾಧ್ಯವೂ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದು ವಾಸ್ತವ” ಎಂದಿದ್ದಾರೆ.
“ವ್ಯಾಪಾರ ಒಪ್ಪಂದಗಳಿಗಾಗಿ ಭಾರತದ ಮೇಲೆ ಒತ್ತಡ ಹೇರವುದು ಟ್ರಂಪ್ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಭಾರತ-ಅಮೆರಿಕ ನಡುವೆ ಯಾವ ರೀತಿಯ ಒಪ್ಪಂದವಾಗಲಿದೆ ಎನ್ನುವುದನ್ನು ನೀವೇ ನೋಡುತ್ತೀರಿ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇನ್ನು, ಪ್ರಿಯಾಂಕಾ ಗಾಂಧಿ ಕೂಡ, “ಟ್ರಂಪ್ ಸುಳ್ಳು ಹೇಳುತ್ತಿದ್ದಾರೆ ಎಂಬುದನ್ನು ಮೋದಿ ಸಂಸತ್ತಿನಲ್ಲಿ ಸ್ಪಷ್ಟವಾಗಿ ತಿಳಿಸಬೇಕು” ಎಂದು ಆಗ್ರಹಿಸಿದ್ದಾರೆ.
ಇಷ್ಟೆಲ್ಲ ಚರ್ಚೆಗಳು, ಆರೋಪಗಳು, ಹೇಳಿಕೆಗಳು, ಆಗ್ರಹಗಳು ಕೇಳಿಬರುತ್ತಿದ್ದರೂ, ಮೋದಿ ಅವರು ಟ್ರಂಪ್ ಹೇಳಿಕೆಗಳನ್ನು ಕಡ್ಡಿತುಂಡಾದಂತೆ ಸ್ಪಷ್ಟವಾಗಿ ತಳ್ಳಿಹಾಕಲು, ಸುಳ್ಳೆಂದು ಹೇಳಲು ಹಿಂಜರಿಯುತ್ತಿದ್ದಾರೆ ಈ ಹಿಂಜರಿಕೆ ಯಾಕೆ?
ಟ್ರಂಪ್ ಅವರು ಮೊದಲ ಬಾರಿಗೆ ‘ತಾವೇ ಭಾರತ-ಪಾಕ್ ನಡುವೆ ಕದನ ವಿರಾಮ ಘೋಷಿಸಿದ್ದೇನೆ’ ಎಂದು ಹೇಳಿಕೊಂಡದ್ದು ಮೇ 10 ರಂದು, ಭಾರತ-ಪಾಕಿಸ್ತಾನಗಳೇ ಅಧಿಕೃತವಾಗಿ ಕದನ ವಿರಾಮವನ್ನು ಘೋಷಿಸುವುದಕ್ಕೂ ಮೊದಲು. ಟ್ರಂಪ್ ಘೋಷಣೆಯ ಬಳಿಕವಷ್ಟೇ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿರುವುದಾಗ ಘೋಷಿಸಿದವು. ಇದು, ಅಮೆರಿಕ ಮಧ್ಯಸ್ಥಿಕೆಯನ್ನು ಸ್ಪಷ್ಟವಾಗಿ ಸೂಚಿಸಿತ್ತು.
ಅದಾದ ಬಳಿಕ, ಈವರೆಗೆ ಬರೋಬ್ಬರಿ 29 ಬಾರಿ ಟ್ರಂಪ್ ತಮ್ಮ ಹೇಳಿಕೆಯನ್ನು ಪುನರಾವರ್ತಿಸಿದ್ದಾರೆ. ಕದನ ವಿರಾಮ ಘೋಷಿಸಿದ್ದು ತಾವೇ ಎಂದು ಹೇಳಿಕೊಂಡಿದ್ದಾರೆ. “ವ್ಯಾಪಾರ ಸಂಬಂಧವನ್ನು ಅಸ್ತ್ರವಾಗಿ ಬಳಸಿ, ಕದನ ವಿರಾಮ ಘೋಷಿಸುವಂತೆ ಸೂಚಿಸಿದೆ. ಆ ಕೂಡಲೇ ಅವರು ಯುದ್ಧವನ್ನು ನಿಲ್ಲಿಸಿದರು. ಕದನ ವಿರಾಮಕ್ಕೆ ಒಪ್ಪಿಕೊಂಡಲು'” ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಆದರೆ, ಟ್ರಂಪ್ ಅವರ ಈ ಹೇಳಿಕೆಗಳು ಸುಳ್ಳು ಎಂದು ಸ್ಪಷ್ಟವಾಗಿ ಹೇಳಲು ಕೇಂದ್ರ ಸರ್ಕಾರವು ಹಿಂಜರಿಯುತ್ತಿದೆ. ಟ್ರಂಪ್ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಲು ಮೋದಿ ಹೆದರುತ್ತಿದ್ದಾರೆಯೇ ಎಂಬ ಆರೋಪಗಳು ಕೇಳಿಬಂದಿವೆ.
ಈ ಲೇಖನ ಓದಿದ್ದೀರಾ?: ಆಪರೇಷನ್ ಸಿಂಧೂರ | ವಿಪಕ್ಷಗಳ ಗಂಭೀರ ಪ್ರಶ್ನೆಗಳಿಗೆ ಮೋದಿ ನಿರುತ್ತರ!
ಭಾರತವು ಅಮೆರಿಕದೊಂದಿಗೆ ತನ್ನ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಗಟ್ಟಿಗೊಳಿಸಲು ಶ್ರಮಿಸುತ್ತಿದೆ. ಜೊತಗೆ, ಮೋದಿಯವರು ತಮ್ಮನ್ನು ಒಬ್ಬ ‘ವಿಶ್ವಗುರು’ ಎಂದು ಬಿಂಬಿಸಿಕೊಂಡಿದ್ದಾರೆ. ಆದರೂ, ಟ್ರಂಪ್ ಭಾರತದ ಮೇಲೆ ಸುಂಕ, ಒತ್ತಡ ರೀತಿಯ ನಾನಾ ಹೇರಿಕೆಗಳನ್ನು ಮಾಡುತ್ತಿದ್ದಾರೆ. ಆದರೆ, ಮೋದಿ ಮೌನವಾಗಿದ್ದಾರೆ. ಮೋದಿ ಅವರು ಈ ಮೌನವು ತಮ್ಮ ‘ವಿಶ್ವಗುರು’ ಇಮೇಜ್‌ಗೆ ಧಕ್ಕೆ ತಂದಿದೆ.
1971ರ ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು ಅಮೆರಿಕದ ಒತ್ತಡಕ್ಕೆ ಮಣಿಯದೆ ಯುದ್ಧವನ್ನು ಮುಂದುವರಿಸಿದ್ದರು. ಇಂದಿರಾ ಅವರ ಆ ದಿಟ್ಟತನವು ಈಗ ಮೋದಿ ಮೌನದ ಸಮಯದಲ್ಲಿ ಚರ್ಚೆಗೆ ಬಂದಿದೆ. ಮೋದಿ ಅವರು ಭಯಗೊಂಡಿದ್ದಾರೆ ಎಂಬ ಆರೋಪಗಳನ್ನು ಗಟ್ಟಿಗೊಳಿಸಿವೆ.
Simply wanna tell that this is very useful, Thanks for taking your time to write this.