ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಮಳೆ ಮುಂದುವರೆದಿರುವ ಪರಿಣಾಮ ನೂರಾರು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದೆ. ಈ ಪರಿಣಾಮದಿಂದ ವಾರದಿಂದ ವಿದ್ಯುತ್ ಸ್ಥಗಿತವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ನಡೆದಿದೆ.
ಕಳಸ ಭಾಗದಲ್ಲಿ ಬೀಸುತ್ತಿರುವ ಬಿರುಗಾಳಿಗೆ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದಿರುವ ಪರಿಣಾಮ ಕಳಸ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ವಾರದಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಹೀಗಾಗಿ ವಿದ್ಯುತ್ ಇಲ್ಲದೆ ಜನ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದ್ದು, ಕಳಸ ಪಟ್ಟಣದ ವ್ಯಾಪಾರಿಗಳು ಸಂಜೆಯಾಗುತ್ತಿದ್ದಂತೆ ವಿದ್ಯುತ್ ಇಲ್ಲದ ಪರಿಣಾಮ ಅಂಗಡಿಗಳ ಬಾಗಿಲನ್ನು ಬೇಗನೆ ಮುಚ್ಚುತ್ತಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಆನೆ ದೊಡ್ಡಿ ನಿರ್ಮಾಣಕ್ಕೆ ಕೇಂದ್ರ ಸಚಿವರಿಗೆ ಮನವಿ: ಸಂಸದ ಕೋಟ ಶ್ರೀನಿವಾಸ್ ಪೂಜಾರಿ
ಮೆಸ್ಕಾಂ ಸಿಬ್ಬಂದಿ ಮಾತ್ರ ವಿದ್ಯುತ್ ಸಂಪರ್ಕ ಪುನರ್ ಸ್ಥಾಪಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಜಂಗಲ್ ಕಟಿಂಗ್ ಹೆಸರಲ್ಲಿ ಮಳೆಗಾಲ ಆರಂಭಕ್ಕೂ ಮುನ್ನ ಲಕ್ಷಾಂತರ ರೂಪಾಯಿಯನ್ನು ಅಧಿಕಾರಿಗಳು ಖರ್ಚು ಮಾಡುತ್ತಿದ್ದಾರೆ. ಆದರೆ, ಎಲ್ಲಿ ಜಂಗಲ್ ಕಟಿಂಗ್ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಸೀಮೆಎಣ್ಣೆ ದೀಪ ಹಚ್ಚೋಣವೆಂದರೆ ಸೀಮೆಎಣ್ಣೆಯೂ ಸಿಗುತ್ತಿಲ್ಲ, ಡೀಸೆಲ್ ದೀಪ ಹಚ್ಚಿದರೆ ಮನೆ ತುಂಬಾ ಹೊಗೆ ತುಂಬಿಕೊಳ್ಳುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.