ಸುಪ್ರೀಂ ಕೋರ್ಟ್ ಒಳ ಮೀಸಲಾತಿಯ ತೀರ್ಪು ನೀಡಿ ಇಂದಿಗೆ ಒಂದು ವರ್ಷವಾದರೂ ಸಮೀಕ್ಷೆ, ಜಾತಿಗಣತಿ ಸೇರಿದಂತೆ ಒಳ ಮೀಸಲಾತಿ ಜಾರಿಗೆ ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ಧೋರಣೆಯನ್ನು ವಿರೋಧಿಸಿ ಮತ್ತೆ ತೀವ್ರ ಹೋರಾಟದ ಎಚ್ಚರಿಕೆ ನೀಡಿ ದಾವಣಗೆರೆ ಒಳ ಮೀಸಲಾತಿ ಹೋರಾಟ ಸಮಿತಿ ನಗರದ ಡಾ. ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಅಣಕು ಶವಯಾತ್ರೆ, ಭಿತ್ತಿಪತ್ರ ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ಒಕ್ಕೂಟದ ಮುಖಂಡ, ರಾಜ್ಯ ಉಪಾಧ್ಯಕ್ಷ ಆಲೂರು ನಿಂಗರಾಜು, “ಸುಪ್ರೀಂ ಕೋರ್ಟ್ ಸಂವಿಧಾನಾತ್ಮಕವಾದ ಒಳಮೀಸಲಾತಿ ತೀರ್ಪನ್ನು ನೀಡಿ ರಾಜ್ಯ ಸರ್ಕಾರಗಳಿಗೆ ಜಾರಿಗೊಳಿಸುವ ಅಧಿಕಾರದ ಆದೇಶ ನೀಡಿ ಇಂದಿಗೆ ಒಂದು ವರ್ಷವಾಯಿತು. ಹಿಂದಿನಿಂದಲೂ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಂತೆ ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ಜಾರಿಗೊಳಿಸುವ ಭರವಸೆ ನೀಡಿದ್ದ ಕಾಂಗ್ರೆಸ್ ಸರಕಾರ ಇದುವರೆಗೂ ಒಳ ಮೀಸಲಾತಿ ಜಾರಿಗೊಳಿಸದೆ ಅವಕಾಶ ವಂಚಿತ ಶೋಷಿತ ಸಮುದಾಯಗಳಿಗೆ ವಂಚಿಸುವ ಕೆಲಸ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“35 ವರ್ಷಗಳಿಂದ ಮುಂದುವರೆದ ಒಳ ಮೀಸಲಾತಿ ಹೋರಾಟ ಇನ್ನೂ ನಿರ್ಣಾಯಕ ಹಂತ ತಲುಪಿಲ್ಲ. 2024, ಆಗಸ್ಟ್ 1ರ ತೀರ್ಪಿನಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದ್ದು, ಕೆಲವು ರಾಜ್ಯಗಳು ಈಗಾಗಲೇ ಜಾರಿಗೆ ತಂದಿರುವಂತೆಯೇ ಕರ್ನಾಟಕ ಸರ್ಕಾರವೂ ತಕ್ಷಣ ಜಾರಿಗೆ ತರಬೇಕು” ಎಂದು ಆಗ್ರಹಿಸಿದರು.
ಗೌರವಾಧ್ಯಕ್ಷ ಹಾಲೇಶಪ್ಪ ಮಾತನಾಡಿ, “ಹರಿಯಾಣ, ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳು ತೀರ್ಪು ಜಾರಿಗೆ ಮುಂದಾಗಿರುವಾಗ, ಕರ್ನಾಟಕ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದು ಮಾದಿಗ ಸಮುದಾಯ ಸೇರಿದಂತೆ 29 ಉಪಜಾತಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಇತರ ರಾಜ್ಯಗಳಿಗಿಂತ ಹಿಂದುಳಿದ ವಾತಾವರಣದಲ್ಲಿ ಸಮಾಜದ ವಿದ್ಯಾರ್ಥಿಗಳು, ಮಹಿಳೆಯರು, ಕಾರ್ಮಿಕರು, ಉದ್ಯೋಗಾಕಾಂಕ್ಷಿಗಳು ತಮ್ಮ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.

“ಕಾಂತರಾಜ್ ವರದಿಯ ಅಂಕಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಒಳಮೀಸಲಾತಿ ಜಾರಿಗೊಳಿಸುವ ಬದಲು ಮತ್ತೆ ಜಾತಿಗಣತಿ, ಆಯೋಗದ ವರದಿಯ ಕುಂಟು ನೆಪವೊಡ್ಡಿ ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ. ನಾಗಮೋಹನ್ ದಾಸ್ ಆಯೋಗ ಸರ್ಕಾರದ ಸಹಕಾರವಿಲ್ಲದೆ ಅನೇಕ ಇಲಾಖೆಗಳ ಮಾಹಿತಿ ಪಡೆಯಲಾಗದೆ ಕೆಲಸದ ಗತಿಯೂ ಕುಂಠಿತವಾಗಿದೆ. ಈ ಆಯೋಗದ ಶಿಫಾರಸುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೇ ಇರುವ ಅನುಮಾನ ಸಮುದಾಯದಲ್ಲಿ ವ್ಯಕ್ತವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಬಸವರಾಜ್ ಆಲೂರು ಮಾತನಾಡಿ “ಸರ್ವೋಚ್ಚ ನ್ಯಾಯಾಲಯದ ಆದೇಶವಾಗಿ ವರ್ಷ ಕಳೆದರೂ ಒಳಮೀಸಲಾತಿ ಜಾರಿಗೊಳಿಸಿಲ್ಲ. ಇದರಿಂದ ಅಸ್ಪೃಶ್ಯ ಸಮುದಾಯಗಳಿಗೆ ವಂಚನೆಯಾಗುತ್ತಿದ್ದು, ಆತಂಕ ಉಂಟಾಗುತ್ತಿದೆ. ಆಗಸ್ಟ್ 11ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ, ಪರಿಶಿಷ್ಟ ಜಾತಿ ಸಮುದಾಯ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದು, ತಕ್ಷಣದ ಒಳ ಮೀಸಲಾತಿ ಜಾರಿಗೆ ಕ್ರಮ ತೆಗೆದುಕೊಳ್ಳದಿದ್ದರೆ ರಾಜ್ಯಾದ್ಯಂತ ವಿದ್ಯಾರ್ಥಿಗಳು, ಮಹಿಳೆಯರು, ವಕೀಲರು ಹಾಗೂ ವಿವಿಧ ವರ್ಗದವರ ತೀವ್ರ ಆಕ್ರೋಶಕ್ಕೆ ಗುರಿಯಾಗಲಿದ್ದು, ಉಗ್ರ ಹೋರಾಟ ಆರಂಭಿಸಲಾಗುವುದು” ಎಂದು ಎಚ್ಚರಿಸಿದರು.

ನಗರದ ಕೇಂದ್ರ ಭಾಗದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ, ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘ, ದಲಿತ ಸಂಘರ್ಷ ಸಮಿತಿ ಸೇರಿದಂತೆ ಹಲವು ದಲಿತ ಸಂಘಟನೆಗಳ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಒತ್ತುವರಿ ತೆರವು, ಹದ್ದುಬಸ್ತುಗೊಳಿಸಿ ಗೋಮಾಳ ಭೂಮಿ, ಸ್ಮಶಾನ ಉಳಿಸಲು ದಂಡಾಧಿಕಾರಿಗೆ ಮನವಿ
ಪ್ರತಿಭಟನೆಯಲ್ಲಿ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಜಿಲ್ಲಾಧ್ಯಕ್ಷ ರಾಜು ಶಾಮನೂರು, ಜಿಲ್ಲಾ ಉಪಾಧ್ಯಕ್ಷರಾದ ಮಂಜುನಾಥ್ ಕುಂದವಾಡ, ಹುಚ್ಚಂಗಿ ಪ್ರಸಾದ್, ಅಂಜನಪ್ಪ ಶಾಮನೂರು, ಡಿ ಹನುಮಂತಪ್ಪ, ಸಂಘಟನಾ ಕಾರ್ಯದರ್ಶಿಗಳಾದ ಅವಿನಾಶ್, ಕರಿಯಪ್ಪ ಆವರಗೆರೆ, ಕಾರ್ಯದರ್ಶಿ ಹೊನ್ನೂರು ಹರೀಶ್, ಆನಂದ್ ಜಾಲಿಹಾಳ, ಖಜಾಂಚಿ ದುರುಗೇಶ್ ನಿಟುವಳ್ಳಿ, ಸದಸ್ಯರಾದ ಬೇತೂರು ಹನುಮಂತಪ್ಪ, ಅತ್ತಿಗೆ ಸಿದ್ದಪ್ಪ ಸೇರಿದಂತೆ ನೂರಾರು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.