ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಯ ಸಾಮಾಜಿಕ ನ್ಯಾಯವನ್ನು ಸರಿಪಡಿಸುವ ಒಳಮೀಸಲಾತಿ ಹೋರಾಟಕ್ಕೆ 35 ವರ್ಷಗಳಾದವು. ಈ ಹೋರಾಟದಲ್ಲಿ ಅನೇಕ ಸಾವು ನೋವುಗಳಾದವು. ಒಂದು ತಲೆಮಾರು ಬಲಿಯಾಗಿದೆ. ಸುಪ್ರೀಂ ಕೋರ್ಟ್ ಒಳಮೀಸಲಾತಿ ತೀರ್ಪಿನ ನಂತರವೂ ರಾಜ್ಯ ಸರ್ಕಾರ ಜಾರಿಗೆ ತರದೇ ಅನ್ಯಾಯವೆಸಗುತ್ತಿದ್ದು ಕೂಡಲೇ ಜಾರಿಗೆ ತಂದು ಸಾಮಾಜಿಕ ನ್ಯಾಯ ಕೊಡಬೇಕು ಎಂದು ಒತ್ತಾಯಿಸಿ ದಾವಣಗೆರೆ ಜಿಲ್ಲೆ ಹೊನ್ನಾಳಿಯ ಕನಕದಾಸ ವೃತ್ತದಲ್ಲಿ ಪ್ರತಿಭಟಿಸಿ ಮುಖ್ಯಮಂತ್ರಿಗಳಿಗೆ ಉಪವಿಭಾಗಾಧಿಕಾರಿಗಳ ಮೂಲಕ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಒಳಮೀಸಲಾತಿ ಹೋರಾಟ ಸಮಿತಿ ಕಾರ್ಯಕರ್ತರು ಮನವಿ ಸಲ್ಲಿಸಿದರು.
“ಆಗಸ್ಟ್ 01.2024ಕ್ಕೆ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಸುಪ್ರಿಂ ಕೋರ್ಟ್ ಆದೇಶ ಮಾಡಿ ಆಗಸ್ಟ್ 15, 2025ಕ್ಕೆ, ಒಂದು ವರ್ಷವಾಗಿರುತ್ತದೆ. 07 ಸದಸ್ಯರ ಪೀಠದ ಸುಪ್ರಿಂ ಕೋರ್ಟ್ ನ್ಯಾಯಾಧೀಶರು ಸೇರಿ ಎಲ್ಲಾ ರಾಜ್ಯಾಡಳಿತಕ್ಕೆ ಒಳಮೀಸಲಾತಿ ಜಾರಿ ಮಾಡಲು ತೀರ್ಪು ನೀಡಿದೆ. ರಾಜ್ಯಗಳಿಗೆ ಒಳಮೀಸಲಾತಿ ವರ್ಗೀಕರಣ ಮಾಡಲು ಅಧಿಕಾರವಿದೆ ಎಂದು ತನ್ನ ಐತಿಹಾಸಿಕ ತೀರ್ಪನ್ನು ನೀಡಿದೆ. ಸುದೀರ್ಘ ಹೋರಾಟ ನಡೆದಿದ್ದ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಹರಿಯಾಣ ಹಾಗೂ ಇತರೆ ರಾಜ್ಯಗಳಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಕೆಲವೇ ಕೆಲವು ತಿಂಗಳಲ್ಲಿ ಒಳಮೀಸಲಾತಿ ಜಾರಿ ಮಾಡಲಾಗಿದೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

“ಆದರೆ, ಕರ್ನಾಟಕದಲ್ಲಿ ಮಾತ್ರ ಆಡಳಿತರೂಢ ಕಾಂಗ್ರೇಸ್ ಸರ್ಕಾರ ಒಳಮೀಸಲಾತಿ ಜಾರಿ ಮಾಡಲು ಅನಗತ್ಯವಾಗಿ ಆಯೋಗವನ್ನು ರಚಿಸಿ ವೈಜ್ಞಾನಿಕ ಅವಧಿ, ದತ್ತಾಂಶ ಪಡೆದು ಒಳಮೀಸಲಾತಿ ಜಾರಿ ಮಾಡುತ್ತೇವೆಂದು ಸುಳ್ಳು ಹೇಳಿ 04 ತಿಂಗಳು ಕಳೆದರೂ ಒಳಮೀಸಲಾತಿ ಜಾರಿ ಬಗ್ಗೆ ಚಕಾರವೆತ್ತುತ್ತಿಲ್ಲ. ಇನ್ನಷ್ಟು ಗೊಂದಲ ಸೃಷ್ಟಿಸುತ್ತಿರುವ ಕೆಲಸ ಸರ್ಕಾರದಿಂದಲೇ ನಡೆದಿದ್ದು, ನಮ್ಮ ಸಮುದಾಯದ ದೌರ್ಭಾಗ್ಯ ಎಂದು ಹೇಳಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಒಳ ಮೀಸಲಾತಿ ಜಾರಿ ಮಾಡುತ್ತೇವೆಂದು ಘೋಷಿಸಿದ್ದ, ಎಲ್ಲಾ ಸರ್ಕಾರಗಳು ಮಾದಿಗ ಸಮಾಜಕ್ಕೆ ಅನ್ಯಾಯ ಮಾಡಿವೆ. 51 ಅಲೆಮಾರಿ ಸಮುದಾಯಕ್ಕೆ ಅನುಕೂಲವಾಗುತ್ತದೆ. ಮೀಸಲಾತಿ ವರ್ಗೀಕರಣ ಆಗಲೇಬೇಕು. ಪರಿಶಿಷ್ಟ ಜಾತಿ 101 ಜಾತಿಗೆ ಅನುಕೂಲವಾಗುತ್ತದೆ. ನಮ್ಮ ಹಕ್ಕಿಗಾಗಿ ನಮ್ಮ ಹೋರಾಟ ಒಳಮೀಸಲಾತಿ ಜಾರಿಗೊಳಿಸಿ. ಮಾದಿಗ ವಿದ್ಯಾವಂತರು ಮತ್ತು ನಿರುದ್ಯೋಗಿಗಳು, ಬಡತನರೇಖೆಗಿಂತ ಕೆಳಗೆ ಇರುವವರು, ಯುಗ ಯುಗಗಳಿಂದ ಜೀವಿಸುತ್ತಿರುವ ಕರುಣಾಜನಕ ಪರಿಸ್ಥಿತಿ ಬಗ್ಗೆ ತಿಳಿದಿರುತ್ತದೆ. ಬಡತನದ ಜೀವನದಲ್ಲಿ ಬದುಕುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

“ಯುವಕರಲ್ಲಿ ನಿರುದ್ಯೋಗವಿದೆ. ಬಡತನ ರೇಖೆಗಿಂತ ಹೀನಾಯವಾಗಿ ಗುಡಿಸಲು ಕೆಳಗೆ ವಾಸಿಸುತ್ತಿದ್ದಾರೆ. ಮಾದಿಗ ಕುಟುಂಬಗಳು ಕೂಲಿಗಾಗಿ ದೈನಂದಿನ ಕೂಲಿಯಲ್ಲಿ ಬದುಕುತ್ತಿದ್ದು, ಯಾವುದೇ ಮೂಲ ಆಸ್ತಿ, ಉದ್ಯೋಗಗಳಿಲ್ಲದೇ ಹಾಗೂ ಉತ್ಪಾದನಾ, ಸಾಧನಗಳು ಹೊಂದಿಲ್ಲ. ಅಸ್ಪೃಶ್ಯತೆ ಕಳಂಕವನ್ನು ಅನುಭವಿಸುತ್ತಿದ್ದೇವೆ. ದೌರ್ಜನ್ಯಗಳು ಸಾಮಾಜಿಕ ಬಹಿಷ್ಕಾರಗಳನ್ನು ಅನುಭವಿಸಿದ್ದೇವೆ. ಆದ್ದರಿಂದ, ಸರ್ಕಾರ ಅತೀ ಶೀಘ್ರವಾಗಿ ಎತ್ತೆಚ್ಚುಕೊಂಡು ನಮಗೆ ಆಗಿರುವ ಅನ್ಯಾಯಗಳನ್ನು ಸರಿಪಡಿಸುವ ಸಲುವಾಗಿ ಒಳ ಮೀಸಲಾತಿಯನ್ನು ಆಗಸ್ಟ್-15-2025ರ ಒಳಗಾಗಿ ಜಾರಿ ಮಾಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಒಳಮೀಸಲಾತಿ ವಿಳಂಬ ಮಾಡದೆ ಜಾರಿಗೊಳಿಸಿ, ಇಲ್ಲವೇ ತೀವ್ರ ಹೋರಾಟದ ಎಚ್ಚರಿಕೆ; ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ
ಈ ಸಂದರ್ಭದಲ್ಲಿ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ತಮ್ಮಣ್ಣ ದಿಡಗೂರು, ಕಾರ್ಯದರ್ಶಿ ಮಂಜಪ್ಪ ಮಾರಿಕೊಪ್ಪ, ಮಂಜುನಾಥ್ ಕೇಚಿನಕೊಪ್ಪ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
ವರದಿ;
ಪ್ರಭಾಕರ್ ಡಿ ಎಂ
ಹೊನ್ನಾಳಿ