ಮಾಜಿ ಉಪ ರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಸದನದಲ್ಲಿ ವಿಪಕ್ಷಗಳ ಮಾತನಾಡುವ ಹಕ್ಕನ್ನು ಹತ್ತಿಕ್ಕುತ್ತಿದ್ದರು, ಮಾತನಾಡಲು ಅವಕಾಶ ನೀಡುತ್ತಿರಲಿಲ್ಲ. ಈಗ ಸ್ವತಃ ಅವರೇ ಮಾತನಾಡಿದಾಗ, ಕೇಂದ್ರದೊಂದಿಗೆ ವಿವಿಧ ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ನಿರಾಕರಿಸಿದಾಗ ಅವರಿಗೆ ಕೊಡಲಿ ಏಟು ಬಿದ್ದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಖರ್ಗೆ ದಿಢೀರ್ ಆಗಿ ಧನಕರ್ ಅವರು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ವಿಚಾರದಲ್ಲಿ ಹಲವು ಊಹಾಪೋಹಗಳು ಸೃಷ್ಟಿಯಾಗಿದೆ. ಹಾಗೆಯೇ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧ ವಿಪಕ್ಷಗಳ ನಿಲುವಳಿಯನ್ನು ಹಿಂಪಡೆಯುವಂತೆ ಧನಕರ್ ಅವರಿಗೆ ಒತ್ತಡ ಹೇರಲಾಗುತ್ತಿದೆ ಎಂದು ಖರ್ಗೆ ಆರೋಪಿಸಿದರು.
ಇದನ್ನು ಓದಿದ್ದೀರಾ? ಭಾಗವತ್, ಆರ್ಎಸ್ಎಸ್ ಜೊತೆ ಮೋದಿ ಇರುಸು-ಮುರುಸು: ಬಿಕ್ಕಟ್ಟಿನ ನಡುವೆ ಧನಕರ್ ರಾಜೀನಾಮೆ, ನಡೆದಿರುವುದೇನು?
“ಅವರಿಗೆ ಪ್ರಸ್ತಾವನೆಯನ್ನು ಹಿಂಪಡೆಯಲು ಅಥವಾ ರಾಜೀನಾಮೆ ನೀಡಲು ಒತ್ತಡ ಹೇರಲಾಗಿದೆ. ಅದರಿಂದಾಗಿ ಧನಕರ್ ಅವರು ರಾಜೀನಾಮೆ ನೀಡಿದರು” ಎಂದು ಖರ್ಗೆ ಹೇಳಿದ್ದಾರೆ. “ಧನಕರ್ ಅವರ ಅವಧಿಯಲ್ಲಿ ಸದನದ ಕಲಾಪದ ವೇಳೆ ವಿರೋಧ ಪಕ್ಷಕ್ಕೆ ಮಾತನಾಡಲು ಅವಕಾಶ ನೀಡಲಿಲ್ಲ. 2023ರಲ್ಲಿ ಒಬ್ಬ ಸಂಸದರನ್ನು ಏಳು ತಿಂಗಳ ಕಾಲ ಅಮಾನತುಗೊಳಿಸಲಾಗಿತ್ತು” ಎಂದು ಕಾಂಗ್ರೆಸ್ ಅಧ್ಯಕ್ಷರು ನೆನಪಿಸಿಕೊಂಡಿದ್ದಾರೆ.
“ಧನಕರ್ ಅವರು ಮುಕ್ತವಾಗಿ ಮಾತನಾಡಲು ಪ್ರಾರಂಭಿಸಿದಾಗ, ನಿಯಮಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದಾಗ, ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ವಿರುದ್ಧದ ಕ್ರಮದ ಬಗ್ಗೆ ಮಾತನಾಡಲು ಪ್ರಾರಂಭಿಸಿದಾಗ, ಅವರಿಗೆ ಬೆದರಿಕೆ ಹಾಕಲಾಯಿತು, ಪ್ರಸ್ತಾವನೆಯನ್ನು ಹಿಂಪಡೆಯಲು ಅವರ ಮೇಲೆ ಒತ್ತಡ ಹೇರಲಾಯಿತು” ಎಂದು ದೂರಿದ್ದಾರೆ.
