ಗೌರಿಬಿದನೂರು ನಗರದ ಮದನಹಳ್ಳಿ ಕೆರೆಯಂಗಣದಲ್ಲಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಆಂಜನೇಯ ಮೂರ್ತಿ ಭ್ರಷ್ಟ ಅಧಿಕಾರಿ ಎಂದು ಸಾಬೀತಾದ ಹಿನ್ನೆಲೆ ಕೆಆರ್‌ಎಸ್ ಪಕ್ಷವು ನಾಗರಿಕ ಸನ್ಮಾನ ಮಾಡಿದೆ.
ಅಕ್ರಮ ಆಸ್ತಿ ಗಳಿಕೆಯ ಆರೋಪದಡಿಯಲ್ಲಿ ಜುಲೈ 29ರಂದು ಲೋಕಾಯುಕ್ತ ಅಧಿಕಾರಿಗಳು ಆಂಜನೇಯ ಮೂರ್ತಿಗೆ ಸಂಬಂಧಿಸಿದ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿ ಕಡತಗಳನ್ನು ಪರಿಶೀಲನೆ ನಡೆಸಿದ್ದರು. ಆಗ ಅಕ್ರಮ ಆಸ್ತಿ ಗಳಿಸಿರುವ ಬಗ್ಗೆ ದೃಢವಾಗಿತ್ತು.
ಕರ್ನಾಟಕ ರಾಷ್ಟ್ರೀಯ ಸಮಿತಿ (KRS) ಪಕ್ಷ ಭ್ರಷ್ಟ ಅಧಿಕಾರಿ ಆಂಜನೇಯ ಮೂರ್ತಿ ಅವರಿಗೆ ಸನ್ಮಾನ ಮಾಡುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ಆಂಜನೇಯ ಮೂರ್ತಿ ಅವರ ಭಾವಚಿತ್ರ ಇರುವ ಫ್ಲೆಕ್ಸ್ ತಯಾರಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡುವ ಮೂಲಕ ವಿಶೇಷ ಗೌರವ ಸಲ್ಲಿಸಿದೆ. ಕಚೇರಿಯಲ್ಲಿ ಆಂಜನೇಯ ಮೂರ್ತಿ ಇಲ್ಲದ ಕಾರಣ ಅವರು ಕೂರುವ ಕುರ್ಚಿಗೆ ಭಾವಚಿತ್ರವನ್ನಿಟ್ಟು ಪೇಟ ಮತ್ತು ಹೂಮಾಲೆ ಹಾಕುವ ಮೂಲಕ ಭ್ರಷ್ಟ ಅಧಿಕಾರಿ ಎಂದು ಕೂಗುತ್ತಾ ಸನ್ಮಾನಿಸಲಾಗಿದೆ.
ಈ ವೇಳೆ ಪಕ್ಷದ ರಾಜ್ಯ ಉಪಾಧ್ಯಕ್ಷ ರಘು ಜಾಣಗೆರೆ ಮಾತನಾಡಿ, “ರಾಜ್ಯದಲ್ಲಿ ಭ್ರಷ್ಟಾಚಾರ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಭ್ರಷ್ಟಾಚಾರ ಮಾಡಿ ಸಿಕ್ಕಿದವರಿಗೆ ಶಿಕ್ಷೆ ಅತಿ ಕಡಿಮೆ. ಭ್ರಷ್ಟಾಚಾರದಲ್ಲಿ ತೊಡಗಿದವರಿಗೆ 1% ನಷ್ಟು ಶಿಕ್ಷೆಯಾಗುತ್ತಿಲ್ಲ. ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ನಾವೆಲ್ಲ ನೋಡುತ್ತಿದ್ದೇವೆ ಕೇಳುತ್ತಿದ್ದೇವೆ. ಕೋಟಿ ಕೋಟಿ ಆಸ್ತಿಗಳು ಸಿಕ್ಕಿದೆ ಎಂದು ನಾವು ನೋಡುತ್ತೇವೆ. ಕೊನೆದಾಗಿ ಒಬ್ಬರಿಗೂ ಶಿಕ್ಷೆಯಾಗುತ್ತಿಲ್ಲ. ನಮ್ಮ ತೆರಿಗೆ ಹಣ ಲೂಟಿ ಮಾಡಿ ಇಂತಹ ಭ್ರಷ್ಟ ಅಧಿಕಾರಿಗಳು ಮೋಜು ಮಸ್ತಿ ಮಾಡುತ್ತಿದ್ದಾರೆ. ಕಾರು ಬಂಗಲೆಗಳ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಅಧಿಕಾರಿಗಳಿಗೆ ಅವಮಾನ ಆಗುವ ರೀತಿಯಲ್ಲಿ ನಾಗರಿಕ ಸನ್ಮಾನ ಎಂದು ಕೆ ಆರ್ ಎಸ್ ಪಕ್ಷ ಮಾಡಿಕೊಂಡು ಬರುತ್ತಿದೆ. ಇದರಿಂದ ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಅವಮಾನದ ಶಿಕ್ಷೆ ಕೊಡಲಾಗುತ್ತಿದೆ” ಎಂದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ಲಿಂಗತ್ವ ಅಲ್ಪಸಂಖ್ಯಾತರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹ
ಈ ವೇಳೆ ಜಿಲ್ಲಾ ಉಸ್ತುವಾರಿ ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಆರೋಗ್ಯ ಸ್ವಾಮಿ, ಜಿಲ್ಲಾಧ್ಯಕ್ಷ ಡ್ಯಾನಿಯಲ್, ತಾಲೂಕು ಅಧ್ಯಕ್ಷ ಕುಮಾರ್, ತಾಲೂಕು ಉಪಾಧ್ಯಕ್ಷ ಮಹಮ್ಮದ್, ಪ್ರಧಾನ ಕಾರ್ಯದರ್ಶಿ ಸಂತೋಷ್, ನಂಜುಂಡಿ, ಫೈರೋಸ್ ಮುಂತಾದವರು ಉಪಸ್ಥಿತರಿದ್ದರು.