ತಮಗೆ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. ನಾನು ಗೋಮೂತ್ರ ಮತ್ತು ಪಂಚಗವ್ಯ (ಸಗಣಿ) ಸೇವಿಸಿ ಕ್ಯಾನ್ಸರ್ನಿಂದ ಗುಣಮುಖಳಾದೆ ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದ ಪ್ರಗ್ಯಾ ಸಿಂಗ್
ಮಧ್ಯಪ್ರದೇಶದ ಕೇಸರಿ ವಸ್ತ್ರಧಾರಿ ಮಹಿಳೆ ಪ್ರಜ್ಞಾ ಸಿಂಗ್ – ಜಗತ್ತಿಗೆ ಪರಿಚಯವಾಗಿದ್ದು ‘ಭಯೋತ್ಪಾದಕಿ’, ‘ಭಯೋತ್ಪಾದನಾ ಕೃತ್ಯದ ಸಂಚು ರೂಪಕಿ’ ಎಂಬ ಹೆಸರುಗಳಲ್ಲಿ. ಆದರೆ, ಈಗ ಆಕೆ ಹಿಂದುತ್ವದ ನಾಯಕಿ. ಆಕೆಯನ್ನು ಅವರ ಅನುಯಾಯಿಗಳು ‘ಸಾಧ್ವಿ’ ಎಂದು ಸಂಬೋಧಿಸುತ್ತಾರೆ.
2008ರ ಸೆಪ್ಟೆಂಬರ್ 19ರಂದು ಮಹಾರಾಷ್ಟ್ರದ ಮಾಲೆಗಾಂವ್ ಪಟ್ಟಣದಲ್ಲಿ ಭೀಕರ ಸ್ಪೋಟ ಸಂಭವಿಸಿತು. ಆ ಘಟನೆ ನಡೆದಾಗ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ATS) ಪ್ರಗ್ಯಾ ಸಿಂಗ್ ಅವರನ್ನು ಬಂಧಿಸಿತು. ಆಕೆಗೆ ‘ಭಯೋತ್ಪಾದಕಿ’ ಎಂಬ ಹಣೆಪಟ್ಟಿ ಕಟ್ಟಿತು. ಆದರೆ, ಈ ಹಣೆಪಟ್ಟಿಯೇ ಪ್ರಗ್ಯಾ ಸಿಂಗ್ಗೆ ಹಿಂದುತ್ವದ ನಾಯಕಿ ಎಂದು ಬಿಂಬಿತವಾಗಲು ನೆರವಾಯಿತು. ಮಾತ್ರವಲ್ಲದೆ, ಬಿಜೆಪಿಯಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದೆಯೂ ಆದರು.
ಮಾಲೆಗಾಂವ್ ಸ್ಪೋಟ ಸಂಭವಿಸಿದ ಆರಂಭದಲ್ಲಿ, ಈ ಹಿಂದೆ ಭಾರತದಾದ್ಯಂತ ನಡೆದಿದ್ದ ಸ್ಫೋಟ ಪ್ರಕರಣಗಳಲ್ಲಿ ಪಾಕಿಸ್ತಾನಿ ಮತ್ತು ದೇಶೀಯ ಭಯೋತ್ಪಾದಕ ಗುಂಪುಗಳ ಪಾತ್ರ ಇದೆ ಎಂಬುದನ್ನೇ ಹೇಳುತ್ತಿದ್ದವು. ಹೀಗಾಗಿಯೇ, ಮಾಲೆಗಾಂವ್ ಸ್ಪೋಟ ಪ್ರಕರಣದಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ನಂತಹ ನಿಷೇಧಿತ ಮುಸ್ಲಿಂ ಉಗ್ರಗಾಮಿ ಸಂಘಟನೆಯ ಕೈವಾಡ ಇರಬಹುದು ಎಂದು ಎಟಿಎಸ್ ಶಂಕಿಸಿತ್ತು.
ಆದರೆ, ತನಿಖೆ ನಡೆದಂತೆ ಗಂಭೀರ ವಿಚಾರಗಳ ಬಯಲಿಗೆ ಬಂದವು. ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆ (ಈಗ ಅವರಿಲ್ಲ) ನೇತೃತ್ವದ ಎಟಿಎಸ್ ತನಿಖೆಯಲ್ಲಿ ಕಂಡುಬಂದ ವಿಚಾರಗಳು ಇಡೀ ಭಾರತವನ್ನು ಬೆಚ್ಚಿಬೀಳಿಸಿತು. ಮಾಲೆಗಾಂವ್ ಸ್ಫೋಟವು ‘ಕೇಸರಿ ಭಯೋತ್ಪಾದನೆ’ಯ ಕೃತ್ಯವಾಗಿದ್ದು, ಎಲ್ಲ ಅಪರಾಧಿಗಳು ಹಿಂದುಗಳೇ ಆಗಿದ್ಅದರೆ ಎಂಬುದನ್ನು ಕರ್ಕರೆ ಬಹಿರಂಗಪಡಿಸಿದರು. ಇದು ಕೆಲವರಿಗೆ ಆಶ್ವರ್ಯವನ್ನೂ, ಇನ್ನೂ ಕೆಲವರಿಗೆ ಆತಂಕವನ್ನೂ ಉಂಟುಮಾಡಿತ್ತು. ಯಾಕೆಂದರೆ, ಇತ್ತೀಚಿನ ದಶಕಗಳಲ್ಲಿ ಸಂಭವಿಸಿದ ಸ್ಪೋಟ ಪ್ರಕರಣಗಳಲ್ಲಿ ಹಿಂದುಗಳ ಮೇಲೆ ಇಂತಹ ಭಯೋತ್ಪಾದಕ ಕೃತ್ಯದ ಆರೋಪ ಕೇಳಿ ಬಂದದ್ದು ಇದೇ ಮೊದಲು.
ಎಟಿಎಸ್ ತನಿಖೆಯಲ್ಲಿ; ಮಾಲೆಗಾಂವ್ನಲ್ಲಿ ಮೋಟಾರ್ ಸೈಕಲ್ ಬಳಸಿ ಸ್ಫೋಟ ಎಸಗಲಾಗಿದೆ. ಬೈಕ್ಗೆ ಸ್ಪೋಟಕವನ್ನು ಅವಳಡಿಸಿ, ಸಾರ್ವಜನಿಕ ಪ್ರದೇಶದಲ್ಲಿ ನಿಲ್ಲಿಸಿ, ಸ್ಫೋಟಿಸಲಾಗಿದೆ ಎಂದು ಪತ್ತೆಹಚ್ಚಲಾಯಿತು. ಕೃತ್ಯಕ್ಕೆ ಬಳಸಿದ ಆ ಮೋಟಾರ್ ಸೈಕಲ್ ಪ್ರಗ್ಯಾ ಸಿಂಗ್ ಅವರದ್ದು ಎಂಬುದು ಖಚಿತವಾಯಿತು. ಅವರನ್ನು ಎಟಿಎಸ್ ಬಂಧಿಸಿತು. ಸ್ಪೋಟ ಪ್ರಕರಣದ ಮಾಸ್ಟರ್ ಮೈಂಡ್ ಪ್ರಗ್ಯಾ ಸಿಂಗ್ ಎಂದು ಎಟಿಎಸ್ ತೀರ್ಮಾನಿಸಿತು.
ಈ ಪ್ರಗ್ಯಾ ಸಿಂಗ್ ಮೂಲತಃ ಮಧ್ಯಪ್ರದೇಶದ ಭಿಂಡ್ ಮೂಲದವರು. ತಮ್ಮ ವಿದ್ಯಾರ್ಥಿ ದಿನಗಳಲ್ಲಿ, ಬಿಜೆಪಿ-ಆರ್ಎಸ್ಎಸ್ನ ವಿದ್ಯಾರ್ಥಿ ಘಟಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜೊತೆ ಗುರುತಿಸಿಕೊಂಡಿದ್ದರು. ನಂತರದ ವರ್ಷಗಳಲ್ಲಿ, ಅವರು ಆರ್ಎಸ್ಎಸ್ಗೆ ಸಂಬಂಧಿಸಿದ ಹಲವಾರು ಮಹಿಳಾ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು.
ಬಂಧನದಲ್ಲಿದ್ದ ಪ್ರಗ್ಯಾ ಸಿಂಗ್, ತನಗೆ ಎಟಿಎಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗಿದೆ ಎಂದು ಆರೋಪಿಸಿದ್ದರು. ಆಗಿನ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಮತ್ತು ಐಪಿಎಸ್ ಅಧಿಕಾರಿ ಪರಂಬೀರ್ ಸಿಂಗ್ ವಿರುದ್ಧ ಈ ದೌರ್ಜನ್ಯದ ಆರೋಪಗಳನ್ನು ಮಾಡಿದ್ದರು. ಇದನ್ನು ನ್ಯಾಯಾಲಯದಲ್ಲಿಯೂ ವಾದಿಸಿದರು. ಆದರೆ, ಈ ಆರೋಪಗಳು ಮಾನವ ಹಕ್ಕುಗಳ ಆಯೋಗದ ವಿಚಾರಣೆಯಲ್ಲಿ ಸಬೀತಾಗಲಿಲ್ಲ.
ಈ ನಡುವೆ, 2008ರ ನವೆಂಬರ್ 26ರಂದು ಪಾಕಿಸ್ತಾನಿ ಭಯೋತ್ಪಾದಕರ ದಾಳಿಯಲ್ಲಿ ಹೇಮಂತ್ ಕರ್ಕರೆ ಸಾವನ್ನಪ್ಪಿದರು. ಅವರ ಸಾವಿನ ಬಗ್ಗೆ ಪ್ರಕ್ರಿಯಿಸಿದ ಪ್ರಗ್ಯಾ ಸಿಂಗ್, ‘ಈ ಸಾವು ನನ್ನ ಶಾಪದ ಪರಿಣಾಮ’ ಎಂದು ತಮ್ಮ ಮನಸ್ಸಿನ ವಿಷವನ್ನು ಹೊರಹಾಕಿದ್ದರು.
ಇದೆಲ್ಲವೂ ನಡೆದ ಸಮಯದಲ್ಲಿ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್ಸಿಪಿ ಮೈತ್ರಿಕೂಟ ಮತ್ತು ಕೇಂದ್ರದಲ್ಲಿ ಯುಪಿಎ-1 ಅಧಿಕಾರದಲ್ಲಿತ್ತು. ಹೀಗಾಗಿ, 2009ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ಮುಸ್ಲಿಂ ಮತದಾರರನ್ನು ಸಮಾಧಾನಪಡಿಸಲು ‘ಕೇಸರಿ ಭಯೋತ್ಪಾದನೆ’ ಎಂಬ ನಿರೂಪಣೆಯನ್ನು ರೂಪಿಸಲಾಗಿದೆ ಎಂದು ಬಿಜೆಪಿ ಮತ್ತು ಅದರ ಮಿತ್ರ ಸಂಘಟನೆಗಳು ಆರೋಪಿಸಿದವರು. ಪ್ರಗ್ಯಾ ಸಿಂಗ್ ಬೆಂಬಲಕ್ಕೆ ನಿಂತವು. ಪ್ರಗ್ಯಾ ಸಿಂಗ್ ಕುರಿತು ಸಹಾನುಭೂತಿ ಬೆಳೆಯುವಂತೆ ಮಾಡಿದವು.
ಇದೇ ಸಮಯದಲ್ಲಿ, ಬಂಧನದಲ್ಲಿದ್ದಾಗ ತಮಗೆ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. ನಾನು ಗೋಮೂತ್ರ ಮತ್ತು ಪಂಚಗವ್ಯ (ಸಗಣಿ) ಸೇವಿಸಿ ಕ್ಯಾನ್ಸರ್ನಿಂದ ಗುಣಮುಖಳಾದೆ ಎಂದು ಹೇಳುವ ಮೂಲಕ ಪ್ರಗ್ಯಾ ಸಿಂಗ್ ದೇಶಾದ್ಯಂತ ಸಂಚಲನ ಸೃಷ್ಟಿಸಿದರು. ಭಾರತದ ಗಮನ ಸೆಳೆದರು.
ತನಿಖಾ ಸಂಸ್ಥೆಯು ಆಕೆಯನ್ನು ಮಾಲೆಗಾಂವ್ ಸ್ಫೋಟದ ಪ್ರಮುಖ ಸಂಚುಕೋರಳು ಎಂದು ಚಿತ್ರಿಸಿದರೆ, ಬಿಜೆಪಿ ಸೇರಿದಂತೆ ಅನೇಕ ಬಲಪಂಥೀಯ ಸಂಘಟನೆಗಳು ಆಕೆಯನ್ನು ಕಾಂಗ್ರೆಸ್-ಎನ್ಸಿಪಿ ಆಳ್ವಿಕೆಯಲ್ಲಿ ಹಿಂದುಗಳ ವಿರುದ್ಧದ ದೌರ್ಜನ್ಯಗಳ ಸಂಕೇತವೆಂದು ಪ್ರಚಾರ ಮಾಡಿದವು. ಹಿಂದುತ್ವ ನಾಯಕಿಯಾಗಿ ಬಿಂಬಿಸಿದವು.
ಈ ಲೇಖನ ಓದಿದ್ದೀರಾ?: ಮಾಲೆಗಾಂವ್ ಸ್ಫೋಟ ಪ್ರಕರಣ: 1,087 ವಿಚಾರಣೆಗಳು, ನಾನಾ ಆದೇಶಗಳ ನಡುವೆ ಸಂತ್ರಸ್ತರ ಹೋರಾಟ ನಡೆದದ್ದು ಹೀಗೆ!
ಈ ‘ಹಿಂದುತ್ವ ನಾಯಕಿ’ ಎಂಬ ಇಮೇಜ್ಅನ್ನು ಬಂಡವಾಳ ಮಾಡಿಕೊಂಡು, 2019ರಲ್ಲಿ ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಆಕೆಗೆ ಬಿಜೆಪಿ ಟಿಕೆಟ್ ನೀಡಿತು. ಪ್ರಗ್ಯಾ ಸಿಂಗ್ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರನ್ನು 3,64,822 ಮತಗಳ ಅಂತರದಿಂದ ಸೋಲಿಸಿ, ಸಂಸದೆಯಾಗಿ ಆಯ್ಕೆಯಾದರು. ಆದಾಗ್ಯೂ, 2024ರ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಟಿಕೆಟ್ ನೀಡಲಿಲ್ಲ.
ಈಗ, ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನ್ಯಾಯಾಲಯವು ಪ್ರಜ್ಞಾ ಸಿಂಗ್ ಅವರನ್ನು ಖುಲಾಸೆಗೊಳಿಸಿ, ಪ್ರಾಸಿಕ್ಯೂಷನ್ ಪ್ರಕರಣವನ್ನು ವಜಾಗೊಳಿಸಿದೆ. ಮೋಟಾರ್ ಸೈಕಲ್ನಲ್ಲಿ ಸ್ಫೋಟಕಗಳನ್ನು ಇರಿಸಲಾಗಿತ್ತು ಅಥವಾ ಆ ಮೋಟಾರ್ ಸೈಕಲ್ ಪ್ರಗ್ಯಾ ಸಿಂಗ್ ಅವರದ್ದೇ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಕೋರ್ಟ್ ಹೇಳಿದೆ.
ದೀರ್ಘಕಾಲದ ಕಾನೂನು ಹೋರಾಟದಲ್ಲಿ ಪ್ರಾಸಿಕ್ಯೂಷನ್ನ ಸೋಲಿನಿಂದ ಪ್ರಗ್ಯಾ ಸಿಂಗ್ ಸೇರಿದಂತೆ ಪ್ರಮುಖ 7 ಆರೋಪಿಗಳು ಖುಲಾಸೆಗೊಂಡಿದ್ದಾರೆ. ಈ ಖುಲಾಸೆ ಆದೇಶವು ಸರ್ಕಾರದ ಪ್ರಮುಖರನ್ನೂ ತೃಪ್ತಗೊಳಿಸಿರುವಂತೆ ಕಾಣಿಸುತ್ತಿದೆ. ಹೀಗಾಗಿ, ಸರ್ಕಾರವು ಎನ್ಐಎ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸುವ ಸಾಧ್ಯತೆ ಇಲ್ಲ ಎಂಬಂತೆ ಕಾಣಿಸುತ್ತಿದೆ.
ಆದಾಗ್ಯೂ, ಮಾಲೆಗಾಂವ್ ಪ್ರಕರಣದ ಕಾನೂನು ಹೋರಾಟದಲ್ಲಿ ಎನ್ಐಎ ಹೋರಾಟ ಸಮರ್ಪಕವಾಗಿರಲಿಲ್ಲ. 2016ರಲ್ಲಿಯೇ ಪ್ರಕರಣವನ್ನು ಮುಕ್ತಾಯಗೊಳಿಸಲು ಎನ್ಐಎ ವರದಿ ಸಲ್ಲಿಸಿತ್ತು. ಆದರೆ, ಸ್ಪೋಟದಲ್ಲಿ ಸಾವನ್ನಪ್ಪಿದ ಸಂತ್ರಸ್ತರ ಕುಟುಂಬಗಳ ಕಾನೂನು ಹೋರಾಟದ ಪರಿಣಾಮವಾಗಿ ವಿಚಾರಣೆಯು ಇಷ್ಟು ವರ್ಷ ನಡೆದಿದೆ. ಮುಂದೆಯೂ ಇದೇ ಸಂತ್ರಸ್ತರ ಕುಟುಂಬಗಳೇ ಎನ್ಐಎ ಕೋರ್ಟ್ನ ಆದೇಶವನ್ನು ಪ್ರಶ್ನಿಸಿ, ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿವೆ.