ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಈಚೆಗೆ ಒಡಿಸ್ಸಾ ಮೂಲದ ವಿದ್ಯಾರ್ಥಿನಿಯೊಬ್ಬಳು ಜನ್ಮದಿನದಂದೇ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ವಿದ್ಯಾರ್ಥಿನಿ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸಾಮಾಜಿಕ ಚಿಂತಕರು, ಹೋರಾಟಗಾರರು, ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿವಿ (ಸಿಯುಕೆ)ಯಲ್ಲಿ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಐದನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದ ಜಯಶ್ರೀ ಎಂಬ ವಿದ್ಯಾರ್ಥಿನಿ ಜುಲೈ 30ರಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿತು. ಈ ಕುರಿತು ಆಳಂದ ತಾಲೂಕಿನ ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿ ಜಯಶ್ರೀ ಆತ್ಮಹತ್ಯೆಗೂ ಮುನ್ನ ಅಂದು ರಾತ್ರಿ ಡೀನ್ ಸ್ಪೂಡೆಂಟ್ ವೆಲಫೇರ್ ಬಸವರಾಜ ಕುಬಕಡ್ಡಿ ಅವರ ಜೊತೆ ಮಾತನಾಡಿ, ಬಳಿಕ ವಿದ್ಯಾರ್ಥಿನಿ ಕಣ್ಣೀರು ಹಾಕಿದ್ದಳು. ಮರುದಿನ ತರಗತಿಗೆ ಹೋಗಲಿಲ್ಲ, ಮಧ್ಯಾಹ್ನ ಊಟಕ್ಕೆ ಬಂದಾಗ ಕೋಣೆಗೆ ಬೀಗ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಕ್ಷಣ ಕಾರ್ಪೆಂಟರ್ ಅವರನ್ನು ಕರೆಯಿಸಿ ಹಾಸ್ಟೆಲ್ ರೂಮಿನ ಬಾಗಿಲನ್ನು ಒಡೆದು ಒಳಹೊಕ್ಕಾಗ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ ಅಲ್ಲಿನ ವಿದ್ಯಾರ್ಥಿನಿಯರು ತಿಳಿಸಿದರು.
ದಲಿತ ಸಮುದಾಯದ ವಿದ್ಯಾರ್ಥಿನಿ ಎಂದು ಹೇಳಲಾಗುತ್ತಿರುವ ಜಯಶ್ರೀಗೆ ಅಲ್ಲಿ ಕ್ಯಾಂಟಿನ್ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪವೂ ಈಗ ಕೇಳಿ ಬರುತ್ತಿದೆ. ಆದರೆ ವಿದ್ಯಾರ್ಥಿನಿ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ವಿದ್ಯಾರ್ಥಿನಿ ಸಾವಿಗೆ ನಿಖರ ಕಾರಣ ತಿಳಿದು ಬರುತ್ತಿಲ್ಲ. ವಿದ್ಯಾರ್ಥಿನಿ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂಬ ಕೂಗು ಒಕ್ಕೊರಲಿನಿಂದ ದಾಖಲಾಗುತ್ತಿದೆ.
ಚಿಂತಕ ಶ್ರೀಪಾದ ಭಟ್ ಅವರು ʼಕಾಂಗ್ರೆಸ್ ಪಕ್ಷದ ಕಲ್ಬುರ್ಗಿ ವಿಭಾಗ, ಸ್ಥಳೀಯ ಮಹಿಳಾ, ಸಾಮಾಜಿಕ ಸಂಘಟನೆಗಳು ಒಂದು ನಿಯೋಗ ಮಾಡಿಕೊಂಡು ಕೇಂದ್ರಿಯ ವಿವಿಗೆ ಹೋಗಬಹುದಲ್ಲವೇ? ಅಲ್ಲಿನ ದಲಿತ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಕುರಿತು ಸತ್ಯಶೋಧನಾ ವರದಿ ಕೊಡಬಹುದಲ್ಲವೇ? ಮೊನ್ನೆ ಆತ್ಮಹತ್ಯೆ ಮಾಡಿಕೊಂಡ ದಲಿತ ವಿದ್ಯಾರ್ಥಿನಿಯ ಸಾಂಸ್ಥಿಕ ಹತ್ಯೆಯ ವಿರುದ್ಧ ವಿವಿಯ ಒಳಗೆ ಪ್ರಜಾತಾಂತ್ರಿಕ ಪ್ರತಿಭಟನೆ ಮಾಡಬಹುದಲ್ಲವೇ? ಇದಕ್ಕೆ ರಾಜ್ಯದ ಸಂಘಟನೆಗಳು, ಚಿಂತಕರು ಕೈ ಜೋಡಿಸಬಹುದಲ್ಲವೇʼ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ʼಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಓಡಿಸ್ಸಾ ಮೂಲದ ವಿದ್ಯಾರ್ಥಿನಿಯೊಬ್ಬಳು ತನ್ನ ಹುಟ್ಟು ಹಬ್ಬದ ದಿನದಂದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಯಾಕೆ? ಏನು ಕಾರಣ? ಒಂದು ದಿನ ಮೊದಲು ಸ್ಟುಂಡೆಂಟ್ ವೆಲ್ಫೇರ್ ಅಧಿಕಾರಿಗೆ ಭೇಟಿಯಾಗಿ ಕಣ್ಣೀರುಗರೆಯುತ್ತ ಹೋಗಿದ್ದಾಳೆ. ಏನು ನಡೆಯುತ್ತಿದೆ ವಿಶ್ವವಿದ್ಯಾಲಯದಲ್ಲಿ? ಒಂದು ಎರಡು ಆತ್ಮಹತ್ಯೆ ಕೇಸುಗಳು. ಒಂದು ಆತ್ಮಹತ್ಯೆ ಪ್ರಯತ್ನ. ಇನ್ನೊಂದು ಸಾವು. ಆದರೆ ಕುಲಪತಿಗೆ ಇದು ಮುಖ್ಯ ವಿಷಯವಲ್ಲ. ಅವರಿಗೇನಿದ್ದರೂ ಇಡೀ ಕೇವಿವಿಯನ್ನು ಕೋಮುವಾದಿ ಅಡ್ಡೆ ಮಾಡುವುದಷ್ಟೇ ಮುಖ್ಯʼ ಎಂದು ಹೋರಾಟಗಾರ್ತಿ ಕೆ.ನೀಲಾ ಆಕ್ರೋಶ ಹೊರಹಾಕಿದ್ದಾರೆ.
ʼಲೈಂಗಿಕ ದೌರ್ಜನ್ಯ ನಡೆದಿದೆಯೆ? ಅವಳು ಖಿನ್ನತೆಯಲ್ಲಿರುವುದು ಗೊತ್ತಾದರೂ ಏನೂ ಕ್ರಮವಹಿಸಲಿಲ್ಲ ಏಕೆ? ವಿವಿಯೇ ದೂರು ಕೊಟ್ಟಿಲ್ಲ ಯಾಕೆ? ಪೊಲೀಸ್ ಬರುವ ಮುನ್ನವೇ ಕಾರ್ಪೆಂಟರ್‌ಗೆ ಕರೆದು ಬಾಗಿಲು ಮುರಿದಿದ್ದು ಯಾಕೆ? ಒಳಗೆಲ್ಲ ಓಡಾಡಿ ಸಾಕ್ಷಿ ನಾಶ ಮಾಡಲಾಗಿದೆಯೆ? ವಿವಿಯಲ್ಲಿ ಆಪ್ತ ಸಮಾಲೋಚನಾ ಕೇಂದ್ರ ಇದೆಯೆ? ಇದ್ದರೂ ಈ ಪ್ರಕರಣಗಳು ಯಾಕೆ ಘಟಿಸುತ್ತಿವೆ? ದಲಿತ ವಿದ್ಯಾರ್ಥಿನಿಯ ಈ ಸಾವು ವಿಸಿಯವರು ಯಾಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲʼ ಎಂದು ಪ್ರಶ್ನಿಸಿದ್ದಾರೆ.
ʼಯಾವ ಪ್ರದೇಶದಲ್ಲಿ ಕೋಮುವಾದವು ಮೇಲುಗೈ ಪಡೆಯುವುದೊ ಅಲ್ಲಿ ಮನುಸ್ಮೃತಿಯ ನಿಲುವುಗಳು ಸಹ ಮೇಲುಗೈ ಪಡೆಯುತ್ತವೆ. ಅಲ್ಲಿ ಮಹಿಳೆಯರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ ಮತ್ತು ಸಾಮಾನ್ಯ ಶ್ರಮಿಕರಿಗೆ ಕಿಂಚಿತ್ ಗೌರವ ಸಮಾನತೆ ಇರುವುದಿಲ್ಲ. ಹಿಂದೊಮ್ಮೆ ಆಂಧ್ರದ ಬಿಜೆಪಿಯ ಕಾರ್ಯಕರ್ತನು ಕ್ಯಾಂಟಿನ್ ನಡೆಸುತ್ತಿದ್ದು ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದರಿಂದ ವಿದ್ಯಾರ್ಥಿನಿಯು ದೂರು ಕೊಟ್ಟಿದ್ದಳು. ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮವಹಿಸಲಿಲ್ಲ. ಅಂದರೆ ವಿದ್ಯಾರ್ಥಿಗಳಿಗೆ ಅದರಲ್ಲಿಯೂ ವಿದ್ಯಾರ್ಥಿನಿಯರಿಗೆ ಇಲ್ಲಿ ಭದ್ರತೆ, ಸುರಕ್ಷತೆಯ ಗ್ಯಾರಂಟಿ ಏನೂ ಇಲ್ಲ ಎಂದರ್ಥ. ಈ ಸಾವಿನ ಹಿಂದಿನ ಷಡ್ಯಂತ್ರ ಬಯಲುಗೊಳಬೇಕು. ತಪ್ಪಿತಸ್ಥರ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕುʼ ಎಂದು ಆಗ್ರಹಿಸಿದ್ದಾರೆ.
ಲೇಖಕ ಹುಲಿಕುಂಟೆ ಮೂರ್ತಿ ಅವರು ʼಕಲಬುರ್ಗಿಯ ಸೆಂಟ್ರಲ್ ಯುನಿವರ್ಸಿಟಿಯಲ್ಲಿ ಮತ್ತೊಂದು ದಲಿತ ಹೆಣ್ಣುಮಗಳ ಸಾಂಸ್ಥಿಕ ಹತ್ಯೆ ನಡೆದು ಹೋಗಿದೆ. ಅತ್ಯಾಚಾರದ ಶಂಕೆ ವ್ಯಕ್ತವಾಗಿದೆ. ದಲಿತರ ಬದುಕುಗಳು ಹೀಗೆ ಹುಳ ಉಪ್ಪಟೆಗಳ ಹಾಗೆ ನಶಿಸಿ ಹೋಗುತ್ತಿದ್ದರೆ ಮುಂದೇನೋʼ ಎಂದು ನೋವು ತೋಡಿಕೊಂಡ ಅವರು ʼರಾಜ್ಯದಲ್ಲಿರುವ ಯಾವುದೇ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಗಳ ಮೇಲೆ ರಾಜ್ಯ ಸರ್ಕಾರದ ಹಿಡಿತವಿರಬೇಕು. ಕಲಬುರ್ಗಿಯ ಸೆಂಟ್ರಲ್ ಯುನಿವರ್ಸಿಟಿ ಕರ್ನಾಟಕದಲ್ಲಿದ್ಯೋ ಉತ್ತರಪ್ರದೇಶದಲ್ಲಿದ್ಯೋʼ ಎಂದು ಪ್ರಶ್ನಿಸಿದ್ದಾರೆ.
ಚಿಂತಕ ಸಿ.ಎಸ್.ದ್ವಾರಕನಾಥ ಅವರು, ʼಗುಲ್ಬರ್ಗಾದ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಿಂದಾಗಿ ಗುಲ್ಬರ್ಗಾ ಸೆಂಟ್ರಲ್ ಯೂನಿವರ್ಸಿಟಿ ಮತ್ತೊಮ್ಮೆ ವಿವಾದದಲ್ಲಿದೆ. ಅನೇಕ ವರ್ಷಗಳಿಂದ ಇಲ್ಲಿನ ದಲಿತ ವಿದ್ಯಾರ್ಥಿಗಳು ಮತ್ತು ಅಲ್ಲಿನ ಆರೆಸೆಸ್ ಉಪಕುಲಪತಿಯೇ ಮುಂತಾದ ಅಧ್ಯಾಪಕ ವಲಯದ ನಡುವೆ ಸದಾ ಒಂದಿಲ್ಲೊಂದು ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಈ ವಿಶ್ವವಿದ್ಯಾಲಯದಲ್ಲಿ ಅದರಲ್ಲೂ ಅದ್ಯಾಪಕ ವರ್ಗದಲ್ಲಿ ನೇರವಾದ ಆರೆಸೆಸ್ ಆಕ್ಟಿವಿಟಿಗಳು ನಡೆಯುತ್ತಲೇ ಇರುತ್ತವೆ. ಇಲ್ಲಿನ ಅಧಿಕಾರಿವರ್ಗ ಅಂಬೇಡ್ಕರ್ ಸಿದ್ದಾಂತದ ಪಕ್ಕಾ ವಿರೋಧಿಯಾಗಿದೆʼ ಎಂದಿದ್ದಾರೆ.
ʼಕಳೆದ ಸಲ ಅಂಬೇಡ್ಕರ್ ಜಯಂತಿಯೆಂದು ಗುಲ್ವರ್ಗಾ ಕಾರ್ಯಕ್ರಮಕ್ಕೆ ಹೊದಾಗ ದಲಿತ ವಿದ್ಯಾರ್ಥಿಗಳ ಆಹ್ವಾನದ ಮೇಲೆ ಸೆಂಟ್ರಲ್ ವಿ.ವಿ.ಗೆ ಹೋಗಿದ್ದೆ. ಅಲ್ಲಿನ ಆರೆಸೆಸ್ ಪ್ರಭಾವದಿಂದ ಅಲ್ಲಿನ ಸೆಕ್ಯುರಿಟಿ ನನಗೆ ಭಾಷಣ ಮಾಡಲೂ ಬಿಡಲಿಲ್ಲ. ಕಡೆಗೆ ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕಿ ಹೊರ ಬಂದಾಗ ದಲಿತ ವಿದ್ಯಾರ್ಥಿಗಳು ಸುತ್ತುವರೆದು ತಮ್ಮ ನೋವು ಮತ್ತು ಅಸಹಾಯಕತೆಯನ್ನು ತೋಡಿಕೊಂಡರು. ಈ ಹಿಂಸೆ ಈಗಿನ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ನಿಲ್ಲುವಂತಿಲ್ಲ, ಇಲ್ಲಿನ ದಲಿತ ವಿದ್ಯಾರ್ಥಿಗಳು ಇಲ್ಲಿ ನಡೆಯುವ ಜಾತಿಹಿಂಸೆಯಿಂದ ಜರ್ಜರಿತರಾಗಿದ್ದಾರೆ. ಇವರಿಗೆ ಯಾರ ಸಹಾಯವೂ ಇಲ್ಲ. ಈ ವಿಷಯವನ್ನು ಕೆಲವು ಮಂದಿ ಸಂಸದರ ಗಮನಕ್ಕೂ ತಂದರೂ, ಯಾವ ಪ್ರಯೊಜನವೂ ಆಗಲಿಲ್ಲʼ ಎಂದು ತಮ್ಮ ಫೇಸ್ಭುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ʼಈಗ ನಡೆದಿರುವ ವಿದ್ಯಾರ್ಥಿನಿಯ ಆತ್ಮಹತ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲಿನ ಅಸಹಾಯಕ ದಲಿತ ವಿದ್ಯಾರ್ಥಿಗಳು ಜಾತಿತಾರತಮ್ಯದಿಂದ ಪಾರಾಗಲು ದೊಡ್ಡ ಮಟ್ಟದ ಹೋರಾಟ ಅಗತ್ಯ. ಈ ವಿವಿಯಲ್ಲಿ ನಡೆಯುತ್ತಿರುವ ಜಾತೀಯತೆ ವಿರುದ್ದ ಸಂಸತ್ತಿನಲ್ಲಿ ದೊಡ್ಡ ಮಟ್ಟದಲ್ಲ ಧ್ವನಿ ಎತ್ತಬೇಕಿದೆ. ಇಡೀ ಅಂಬೇಡ್ಕರೈಟ್ ವಲಯ ಇಲ್ಲಿನ ದಲಿತ ವಿದ್ಯಾರ್ಥಿಗಳ ಪರ ನಿಲ್ಲಬೇಕಾದ ಅನಿವಾರ್ಯತೆ ಇದೆʼ ಎಂದು ಕೋರಿದ್ದಾರೆ.
ಯುವ ಲೇಖಕರಾದ ವಿಕಾಶ ಆರ್.ಮೌರ್ಯ ಅವರು ʼಕರ್ನಾಟಕದ ಕಲಬುರ್ಗಿ ಕೇಂದ್ರೀಯ ವಿ.ವಿಯಲ್ಲಿ ಒಡಿಸ್ಸಾದ ದಲಿತ ಯುವತಿ ನೇಣಿಗೆ ಶರಣಾಗಿದ್ದಾಳೆ. ಸೌಜನ್ಯಳ ಪರವಾಗಿ ದನಿ ಎತ್ತಿದ ಇಡೀ ಕರ್ನಾಟಕ ಆಕೆಯ ಪರವಾಗಿ ಮೌನವಾಗಿದೆ. ಯಾಕೆ? ಜಾತಿ ತಿಳಿಯಿತೆ? ಎಂದು ಪ್ರಶ್ನಿಸಿದರೆ, ಲೇಖಕ ಅರುಣ ಜೋಳದಕೂಡ್ಲಿಗಿ ಅವರು ʼಕರ್ನಾಟಕದ ಕಲಬುರ್ಗಿ ಕೇಂದ್ರೀಯ ವಿ.ವಿಯಲ್ಲಿ ಒಡಿಸ್ಸಾದ ದಲಿತ ಯುವತಿ ನೇಣಿಗೆ ಶರಣಾಗಿದ್ದಾಳೆ. ಸೌಜನ್ಯಳ ಪರವಾಗಿ ದನಿ ಎತ್ತಿದ ಇಡೀ ಕರ್ನಾಟಕ ಆಕೆಯ ಪರವಾಗಿಯೂ ದನಿ ಎತ್ತಬಹುದೇ? ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ʼಕೇಂದ್ರೀಯ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲೇ ವಿದ್ಯಾರ್ಥಿನಿ ಸಾವು ನಡೆದಿದೆ. ಆ ಸಾವಿಗೆ ವಿಶ್ವವಿದ್ಯಾಲಯದ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಕುಲಪತಿ, ಕುಲಸಚಿವರು, ವಿದ್ಯಾರ್ಥಿ ಕಲ್ಯಾಣ ಅಧಿಕಾರಿಗಳೆಲ್ಲ ಹೊಣೆಗಾರರಾಗುತ್ತಾರೆ. ರಾಜ್ಯ ಸರ್ಕಾರ ಕೂಡಲೇ ಇವರನ್ನು ವಿಚಾರಣೆಗೆ ಒಳಪಡಿಸಬೇಕು. ಕೇಂದ್ರೀಯ ವಿಶ್ವವಿದ್ಯಾಲಯವು ಇತ್ತೀಚೆಗೆ ನಕಾರಾತ್ಮಕ ಸಂಗತಿಗಳಿಂದ ಸುದ್ದಿಯಲ್ಲಿದೆ. ಪ್ರೊ.ಬಟ್ಟು ಸತ್ಯನಾರಾಯಣ ಅವರು ಕುಲಪತಿಯಾದಾಗಿನಿಂದ ವಿ.ವಿ ಆವರಣದಲ್ಲಿ ಕೋಮುವಾದ, ಜಾತಿವಾದ ತಲೆ ಎತ್ತಿದೆʼ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ.ಸಾಗರ್ ದೂರಿದ್ದಾರೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಗಾಜಾದ ಮಾನವೀಯ ದುರಂತಕ್ಕೆ ಜಗತ್ತಿನ ನಿರ್ಲಜ್ಜ ಕುರುಡು-ಮೌನ
ಇತ್ತೀಚೆಗೆ ಕರ್ನಾಟಕದಲ್ಲಿ ಪ್ರಗತಿಪರ ಸಂಘಟನೆಗಳು ವಿವಿಗಳಲ್ಲಿ ದಲಿತ ದೌರ್ಜನ್ಯ ಪ್ರಕರಣ ತಡೆಯಲು ವೇಮುಲ ಕಾಯ್ದೆ ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸಿವೆ. ಕಲಬುರಗಿಯ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣ ಈ ಬೇಡಿಕೆಗೆ ಇನ್ನಷ್ಟು ಬಲ ತುಂಬಲಿ. ಕರ್ನಾಟಕದ ಮಾದರಿಯ ವೇಮುಲ ಕಾಯ್ದೆ ಇಡೀ ದೇಶಕ್ಕೆ ಮಾದರಿಯಾಗಲಿ. ಕೇಂದ್ರೀಯ ವಿವಿಗಳಲ್ಲೂ ಜಾರಿಗೆ ಬರಲಿ. ಜಯಶ್ರೀ ದಲಿತೆ ಎಂಬ ಕಾರಣಕ್ಕೆ ಆಕೆಯ ದೂರನ್ನು ನಿರ್ಲಕ್ಷ್ಯ ಮಾಡಿರುವ ಸಾಧ್ಯತೆಯಿದೆ. ವಿದ್ಯಾರ್ಥಿನಿ ಸಾವಿನ ಬಗ್ಗೆ ಸಮಗ್ರ ತನಿಖೆಯಾಗಲಿ ಎಂಬುದು ಜನಪರ ಚಳಿವಳಿಗಾರರ ಹಕ್ಕೊತ್ತಾಯವಾಗಿದೆ.