"ಸೌಜನ್ಯ ಎಂಬ ಹೆಣ್ಣುಮಗಳು ಪಾಕಿಸ್ತಾನದವಳೂ ಅಲ್ಲ, ಮುಸ್ಲಿಂ ಕೂಡ ಅಲ್ಲ, ಆಕೆ ಹಿಂದೂ. ಆದರೆ ಎಲ್ಲಿವೆ ಹಿಂದೂಪರ ಸಂಘಟನೆಗಳು? ಭಜರಂಗದಳ, ಶೋಭಾ ಕರಂದ್ಲಾಜೆ ಎಲ್ಲಿದ್ದಾರೆ?"
“ಸೌಜನ್ಯ ಎಂದರೆ ಫ್ಲವರ್ ಅಲ್ಲ, ಫೈಯರ್. ಸೌಜನ್ಯ ಎಂಬ ಫೈಯರ್ 2012ನೇ ಇಸವಿಯಲ್ಲಿ ಉರಿಯಲು ಶುರುವಾಯಿತು. ಇನ್ನೂ ಉರಿಯುತ್ತಲೇ ಇದೆ. ಈ ಫೈಯರ್‌ಗೆ ಯಾರು ಕಾರಣವೋ ಅವರನ್ನು ಸುಡುವವರೆಗೂ ಅದು ಉರಿಯುತ್ತದೆ” ಎಂದು ಹೈಕೋರ್ಟ್ ವಕೀಲ ಎಸ್. ಬಾಲನ್ ಗುಡುಗಿದರು.
ಸೌಜನ್ಯ ಪ್ರಕರಣ ಸೇರಿದಂತೆ ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾಗುತ್ತಿರುವ ನೂರಾರು ಅತ್ಯಾಚಾರ ಮತ್ತು ಸಾವುಗಳ ನ್ಯಾಯಕ್ಕಾಗಿ ಒತ್ತಾಯಿಸಿ ಇಂದು (ಶನಿವಾರ) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಮಾನ ಮನಸ್ಕರ ವೇದಿಕೆ ನೇತೃತ್ವದಲ್ಲಿ ನಡೆದ ಜನಾಗ್ರಹ ಹೋರಾಟದಲ್ಲಿ ಅವರು ಮಾತನಾಡಿದರು.
1979ರಲ್ಲಿ ವೇದವಲ್ಲಿ, 1983ರಲ್ಲಿ ಪದ್ಮಲತಾ, 2003ರಲ್ಲಿ ಅನನ್ಯಾ ಭಟ್, 2012ರಲ್ಲಿ ಸೌಜನ್ಯ ಸೇರಿದಂತೆ ಹಲವು ಮಹಿಳೆಯರಿಗೆ ಅನ್ಯಾಯವಾಗಿದೆ. ಅದಕ್ಕಾಗಿ ನ್ಯಾಯ ಕೇಳಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ವ್ಯವಸ್ಥೆ ಸರಿ ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.
ಪದ್ಮಲತಾ ಬ್ರಾಹ್ಮಣ ಸಮುದಾಯದ ಹೆಣ್ಣುಮಗಳು. ಇವರ ತಂದೆ ದೇವಾನಂದ ಕಮ್ಯುನಿಸ್ಟ್ ಪಕ್ಷದಲ್ಲಿದ್ದರು. ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು. ‘ನನ್ನ ಕೇಳದೆ ನಾಮಿನೇಷನ್ ಮಾಡಿದ್ದೀಯ. ವಾಪಸ್ ತೆಗೆದುಕೋ’ ಎಂದರು. ಆದರೆ ದೇವಾನಂದ ಇದ್ಯಾವುದಕ್ಕೂ ಜಗ್ಗಲಿಲ್ಲ. ಮಾರನೇ ದಿನ ಕಾಲೇಜಿಗೆ ಹೋಗಿದ್ದ ಮಗಳು ಪದ್ಮಲತಾ ವಾಪಸ್ ಮನೆಗೆ ಬರಲಿಲ್ಲ. ಆಕೆಯ ಮೃತದೇಹ ನೇತ್ರಾವತಿ ನದಿಯಲ್ಲಿ ಸಿಕ್ಕಿತು ಎಂದು ನೆನಪಿಸಿದರು.
ಅನನ್ಯಾ ಭಟ್ ಬ್ರಾಹ್ಮಣ ಸಮುದಾಯದ ಹೆಣ್ಣುಮಗಳು. ಮಣಿಪಾಲ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದಳು. ಧರ್ಮಸ್ಥಳದ ದೇವಸ್ಥಾನಕ್ಕೆ ಬಂದ ನಂತರದಲ್ಲಿ ಕಾಣೆಯಾದಳು. ಇವರ ತಾಯಿ ಸುಜಾತಾ ಭಟ್ ಸಿಬಿಐನಲ್ಲಿ ಸ್ಟೆನೋಗ್ರಾಫರ್ ಆಗಿದ್ದರು. ಮಗಳು ಕಾಣೆಯಾಗಿರುವ ಸಂಬಂಧ ದೂರು ನೀಡಲು ಹೋದಾಗ ಬೆಳ್ತಂಗಡಿ ಪೊಲೀಸರು, ‘ಯಾವನೋ ಜೊತೆಯಲ್ಲಿ ಓಡಿ ಹೋಗಿದ್ದಾಳೆ’ ಎಂದಿದ್ದರು. ಮಗಳ ಅಸ್ಥಿಪಂಜರಕ್ಕಾಗಿ ತಾಯಿ ಹೋರಾಡುತ್ತಿದ್ದಾರೆ ಎಂದರು.
ಅಮಾಯಕ ಸಂತೋಷ್ ರಾವ್ ಅವರನ್ನು ಸೌಜನ್ಯ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ಮಾಡಲಾಯಿತು. ಆದರೆ ಸೌಜನ್ಯ ಅಂದರೆ ಫ್ಲವರ್ ಅಲ್ಲ, ಫೈಯರ್. ಆಕೆಯ ಮೇಲೆ ಅತ್ಯಾಚಾರ ಮಾಡಿ ಕೊಂದ ಕ್ರೂರಿಗಳು ಯಾರು? ಈಗ ಹೊಸ ತಿರುವು ಸಿಕ್ಕಿದೆ. ಧರ್ಮಸ್ಥಳದಲ್ಲಿ ನಡೆದಿರುವ ಘಟನೆಗಳಿಗೆ ಸಾಕ್ಷಿಯಾದ ವ್ಯಕ್ತಿಯು ಮುಂದೆ ಬಂದಿದ್ದಾನೆ ಎಂದು ಹೇಳಿದರು.
ಇದನ್ನೂ ಓದಿರಿ: ಅತ್ಯಾಚಾರ ಪ್ರಕರಣ | ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ
ಸೌಜನ್ಯ ಎಂಬ ಹೆಣ್ಣುಮಗಳು ಪಾಕಿಸ್ತಾನದವಳೂ ಅಲ್ಲ, ಮುಸ್ಲಿಂ ಕೂಡ ಅಲ್ಲ, ಆಕೆ ಹಿಂದೂ. ಆದರೆ ಎಲ್ಲಿವೆ ಹಿಂದೂಪರ ಸಂಘಟನೆಗಳು? ಭಜರಂಗದಳ, ಶೋಭಾ ಕರಂದ್ಲಾಜೆ ಎಲ್ಲಿದ್ದಾರೆ? ಹಿಂದೂ ನಾವೆಲ್ಲ ಒಂದು ಎನ್ನುವವರು ಎಲ್ಲಿದ್ದಾರೆ? ವೇದವಲ್ಲಿ, ಅನನ್ಯಾ ಭಟ್ ಕೂಡ ಹಿಂದೂಗಳಲ್ಲವೆ? ಎಂದು ಪ್ರಶ್ನಿಸಿದರು.
ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ರವಿಕೃಷ್ಣಾ ರೆಡ್ಡಿ ಮಾತನಾಡಿ, “ತಮ್ಮನ್ನು ಯಾರಾದರೂ ಪ್ರಶ್ನೆ ಮಾಡಿದರೆ ನೋಟಿಸ್ ಕೊಡುವ ಕಾಯಿಲೆ ಧರ್ಮಸ್ಥಳದಲ್ಲಿ 1945ರಿಂದಲೂ ಇದೆ. 1944ರಲ್ಲಿ ಕುವೆಂಪು ಅವರಿಗೆ ನೋಟಿಸ್ ಕೊಡಲಾಗಿತ್ತು. ಅದು ಈ ಹೊತ್ತಿನವರೆಗೂ ಮುಂದುವರಿಯುತ್ತಲೇ ಇದೆ. ಮುಖ್ಯವಾಹಿನಿ ಮಾಧ್ಯಮಗಳು ಏನನ್ನೂ ಬರೆಯದೆ ಸುಮ್ಮನಿದ್ದವು. ವಕೀಲರು ಇದರ ವಿರುದ್ಧ ಹೋರಾಡಿ ಗ್ಯಾಗ್ ಆರ್ಡರ್ ರದ್ದುಪಡಿಸಿದ್ದಾರೆ. ಈಗಲಾದರೂ ಬೆನ್ನುಮೂಳೆ ಇಟ್ಟುಕೊಂಡು ಮುಖ್ಯವಾಹಿನಿಗಳು ಮಾತನಾಡಲಿ” ಎಂದು ಆಶಿಸಿದರು.
ಜನರ ಬಾಯಿ ಮುಚ್ಚಿಸುವ ಕೆಲಸ ಮಾಡಿದರೆ ಜನಪ್ರತಿನಿಧಿಯಾಗಿರಲು ಯೋಗ್ಯರಾಗಿರುವುದಿಲ್ಲ. ಪ್ರಜಾಪ್ರಭುತ್ವದ ವಿರೋಧಿಯಾದ ಪಾಳೇಗಾರಿಕೆಗೆ ಇವರು ರಾಜೀನಾಮೆ ನೀಡಬೇಕು. ಧರ್ಮಸ್ಥಳದ ಬಗ್ಗೆ ಇಷ್ಟೆಲ್ಲ ಆರೋಪಗಳು ಬಂದಿವೆ. ಈ ಆರೋಪಗಳಿಂದ ಮುಕ್ತ ಮಾಡಿ ಎಂದು ರಾಜ್ಯಸಭಾ ಸಂಸದರು ಎಂದಾದರೂ ಹೋರಾಟ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.
ಕಳೆದ 70 ವರ್ಷಗಳಲ್ಲಿ 150ಕ್ಕೂ ಹೆಚ್ಚು ಅಪರಿಚಿತ ಶವಗಳು ಧರ್ಮಸ್ಥಳದಲ್ಲಿ ಪತ್ತೆಯಾಗಿರುವ ಮಾಹಿತಿ ಇದೆ. ಪೊಲೀಸರು ಸರಿಯಾಗಿ ಕ್ರಮ ವಹಿಸಿದ್ದರೆ, ಇವುಗಳ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿರಿ: ಧರ್ಮಸ್ಥಳ ಪ್ರಕರಣ | ದೂರುದಾರನಿಗೆ ಬೆದರಿಕೆ; ಕೇಸ್ ವಾಪಸ್ ಪಡೆಯಲು ಎಸ್‌ಐ ಮಂಜುನಾಥ್ ಒತ್ತಡ
ಹೋರಾಟಗಾರ್ತಿ ಪ್ರಭಾ ಬೆಳವಂಗಲ ಮಾತನಾಡಿ, “ಎಸ್‌ಐಟಿಯೊಳಗಿರುವ ಮಂಜುನಾಥ್ ಗೌಡ ಎಂಬ ಇನ್‌ಸ್ಪೆಕ್ಟರ್ ದೂರುದಾರನನ್ನು ಬೆದರಿಸಿರುವ ಆರೋಪ ಬಂದಿದೆ. ದೂರನ್ನು ವಾಪಸ್ ತೆಗೆದುಕೋ, ಇಲ್ಲವಾದರೆ ಜೈಲಿನಲ್ಲಿ ಕೊಳೆಯಬೇಕಾಗುತ್ತದೆ, ಎಷ್ಟು ಸಾಕ್ಷಿಗಳನ್ನು ಕೊಡುತ್ತೀಯೋ ಅಷ್ಟು ಹೆಚ್ಚಿನ ಶಿಕ್ಷೆಯನ್ನು ನೀನು ಅನುಭವಿಸಬೇಕಾಗುತ್ತದೆ ಎಂದು ಮಂಜುನಾಥ್ ಗೌಡ ಹೆದರಿಸಿದ್ದಾರೆ. ಈ ಅಧಿಕಾರಿಯನ್ನು ಮೊದಲು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಬೇಕು. ಈ ಹಿಂದೆ ಧರ್ಮಸ್ಥಳ, ಬೆಳ್ತಂಗಡಿ ವ್ಯಾಪ್ತಿಯಲ್ಲಿ ಕೆಲಸ ಮಾಡಿರುವ ಪೊಲೀಸ್ ಅಧಿಕಾರಿಗಳನ್ನು ಕರೆಸಿ, ಹೇಳಿಕೆಗಳನ್ನು ಪಡೆದುಕೊಳ್ಳಬೇಕು. ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹೆಣಗಳನ್ನು ಹೂತಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಅವರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಹೋರಾಟಗಾರರಾದ ಚೇತನ್ ಅಹಿಂಸಾ, ನರಸಿಂಹಮೂರ್ತಿ, ರಂಗನಾಥ್, ಎಚ್.ಎಂ. ವೆಂಕಟೇಶ್ ಹಾಗೂ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು, ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
