ಪುರಾತನ ಕಾಲದಿಂದಲೂ ಸ್ಮಶಾನವಿದೆಯಾದರೂ ಶವಗಳ ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಡದಿರುವ ಕಾರಣಕ್ಕೆ ಬೇಸತ್ತ ಗ್ರಾಮಸ್ಥರು ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿರುವ ಘಟನೆ ಚಿಂತಾಮಣಿ ತಾಲೂಕಿನ ರಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಂಗೇನಹಳ್ಳಿ ಗ್ರಾಮದ ಸರ್ವೆ ನಂ.8ರಲ್ಲಿ ಪುರಾತನ ಕಾಲದಿಂದಲೂ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅಲ್ಲಿಯೇ ಶವ ಸಂಸ್ಕಾರ ಮಾಡಲಾಗುತ್ತಿತ್ತು. ಆದರೆ, ಕೆಲ ದಿನಗಳಿಂದ ಆ ಜಮೀನಿನಲ್ಲಿ ಬೇರೆ ವ್ಯಕ್ತಿಗಳು ಸ್ಮಶಾನವನ್ನು ಒತ್ತುವರಿ ಮಾಡಿಕೊಂಡಿದ್ದರು. ಇಂದು ಗ್ರಾಮದ ಕೊಂಡಪ್ಪ(60 ವರ್ಷ) ಎಂಬುವವರು ಮೃತಪಟ್ಟಿದ್ದು, ಅವರನ್ನು ಸದರಿ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡುವ ಸಲುವಾಗಿ ಗುಂಡಿ ತೆಗೆಯಲು ಮುಂದಾದಾಗ ಕೆಲ ವ್ಯಕ್ತಿಗಳು ಅಡ್ಡಿಪಡಿಸಿದರು.

ಬಳಿಕ ಕಂದಾಯ ಇಲಾಖೆಯ ಅಧಿಕಾರಿಗಳು, ಪೊಲೀಸರ ಸೂಕ್ತ ಬಂದೋಬಸ್ತುನಲ್ಲಿ ಭೂ ಮಾಪನ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದು, ಸ್ಮಶಾನ ಜಾಗ ಗುರುತಿಸಿ ಕೊಡುವುದಾಗಿ ಸರ್ವೆ ಕಾರ್ಯ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ : ಸಮಗ್ರ ತನಿಖೆಗೆ ಚಿಂತಕರ ಆಗ್ರಹ
ಕಂದಾಯ ಇಲಾಖೆಯ ಅಧಿಕಾರಿ ರವೀಶ್, ನರಸಿಂಹಮೂರ್ತಿ ಸ್ಥಳಕ್ಕೆ ಬಂದು ಕಾನೂನು ರೀತಿಯಲ್ಲಿ ಸ್ಮಶಾನ ಜಾಗ ಎಲ್ಲಿ ಬರುತ್ತದೆ ಅಲ್ಲಿ ಗುರುತಿಸಿ ಕೊಡುತ್ತೇವೆಂದು ಹೇಳಿದರು, ಇದಕ್ಕೊಪ್ಪದ ಗ್ರಾಮಸ್ಥರು, ʼಸೂಕ್ತ ರೀತಿಯಲ್ಲಿ ಸರ್ವೆ ಕಾರ್ಯ ನಡೆದಿಲ್ಲ ಹಾಗೂ ಸ್ಮಶಾನದ ಜಮೀನು ಸರ್ವೆ ನಂ.08ರಲ್ಲಿ ಬರುತ್ತದೆ. ಹಾಗಾಗಿ ಅದೇ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಲು ಅನುಕೂಲ ಮಾಡಿಕೊಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಮುಖ್ಯ ರಸ್ತೆಯಲ್ಲಿ ಶವವನ್ನು ಇಟ್ಟು ಪ್ರತಿಭಟನೆ ನಡೆಸಿದರು.