ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ವ್ಯಕ್ತಿಯೊಬ್ಬ ನೀಡಿದ ದೂರಿನ ಅನ್ವಯ ಆಗುತ್ತಿರುವ ತನಿಖೆಯ ಬೆನ್ನಲ್ಲೇ ಮತ್ತೊಬ್ಬ ದೂರುದಾರ ಎಸ್‌ಐಟಿ ಮುಂದೆ ಹಾಜರಾಗಿದ್ದಾರೆ. ದೂರು ದಾಖಲಿಸಲು ಮತ್ತು ಮಹತ್ವದ ಸಾಕ್ಷ್ಯಗಳನ್ನು ಸಲ್ಲಿಸಲು ಹೊಸ ಸಾಕ್ಷಿಯೊಬ್ಬರು ಬೆಳ್ತಂಗಡಿಯಲ್ಲಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಕಚೇರಿಗೆ ಬಂದಿದ್ದಾರೆ. ಸಂಜೆ ಏಳು ಗಂಟೆಗೆ ಅವರು ಬರುವುದು ನಿಶ್ಚಿತವಾಗಿತ್ತು.
ಸರಿಸುಮಾರು 20 ವರ್ಷಗಳ ಹಿಂದೆ ನಡೆದ ಘಟನೆಗೆ ಸಂಬಂಧಿಸಿದ ಈ ಹೊಸ ಸಾಕ್ಷ್ಯವು ನಡೆಯುತ್ತಿರುವ ತನಿಖೆಯಲ್ಲಿ ಮಹತ್ವದ ತಿರುವು ನೀಡಬಹುದು.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಾಕ್ಷಿದಾರ, “ನನ್ನ ಹೆಸರು ಜಯಂತ್ ಟಿ. ನಾನು ಇಂದು ದೂರು ಕೊಡಲು ಬಂದಿದ್ದೇನೆ. ಹಲವು ವರ್ಷಗಳ ಹಿಂದೆ ಈ ಧರ್ಮಸ್ಥಳ ಗ್ರಾಮದಲ್ಲಿ ಹಲವು ಕೊಲೆಗಳಾಗಿವೆ ಎಂದು ಹೇಳುತ್ತಿದ್ದೆ. ಹಲವು ವೇದಿಕೆಗಳಲ್ಲೂ ಇದನ್ನೇ ಹೇಳಿದ್ದೇನೆ. ಈ ವಿಷಯಗಳನ್ನು ಎಲ್ಲವನ್ನೂ ಪ್ರಸ್ತಾಪಿಸಿದ್ದೇನೆ” ಎಂದು ಹೇಳಿದರು.
“ದೇಶದಲ್ಲೇ ಉತ್ತಮವಾದ ಎಸ್‌ಐಟಿ ರಚನೆಯಾಗಿದೆ. ಇದು ಒಳ್ಳೆಯ ಬೆಳವಣಿಗೆ. ಅದಕ್ಕಾಗಿ ದೂರು ನೀಡಲು ಬಂದಿದ್ದೇನೆ. ಆದರೆ ಸೋಮವಾರ ಬರಲು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ನಾಳೆ ರಜೆ ಇದೆ. ಸೋಮವಾರ ಎಲ್ಲ ಮಾಹಿತಿಯನ್ನು ಅವರಿಗೆ ನೀಡುತ್ತೇನೆ. ಮುಂದಿನ ತನಿಖೆ ಏನಾಗುತ್ತದೆ ಎಂದು ನೋಡೋಣ. ಕೊಲೆಗಳನ್ನು ಯಾರೋ ಮಧ್ಯದ ವ್ಯಕ್ತಿ ನಿಂತು ಮುಚ್ಚಿ ಹಾಕಿದ್ದಾನೆ. ಧರ್ಮಸ್ಥಳದಲ್ಲಿ ಕೊಲೆಗಳು ಎಲ್ಲರಿಗೂ ಗೊತ್ತಿರುವ ವಿಚಾರ. ಭಯದಿಂದ ಯಾರೂ ಹೇಳುತ್ತಿರಲಿಲ್ಲ. ಇಂದು ರಾಜ್ಯ ಸರ್ಕಾರದ ಎಸ್‌ಐಟಿ ತಂಡ ಆ ಭಯವನ್ನೂ ದೂರ ಮಾಡಿದೆ. ಅದನ್ನು ನೋಡಿ ನಾನು ಮುಂದೆ ಬಂದಿದ್ದೇನೆ. ಇನ್ನೂ ಐದಾರು ಜನ ಸಾಕ್ಷಿಗಳು ಬರುವುದಾಗಿ ಹೇಳುತ್ತಿದ್ದಾರೆ. ತಮ್ಮ ನೋವುಗಳನ್ನು ಹಂಚಿಕೊಳ್ಳಲು ಸಿದ್ಧವಿದ್ದಾರೆ” ಎಂದು ವಿವರಿಸಿದರು.
“ನಾವು ಮೃತದೇಹಗಳನ್ನು ನೋಡಿದ್ದೇನೆ. ಯಾವುದೇ ಡೆಡ್ ಬಾಡಿ ಸಿಕ್ಕರೆ, ಅದನ್ನು ಆಸ್ಪತ್ರೆಗೆ ಸಾಗಿಸಬೇಕು, ಮರಣೋತ್ತರ ಪರೀಕ್ಷೆ ನಡೆಸಬೇಕು. ನಂತರ ಹೂತುಹಾಕಬೇಕು. ಆದರೆ ಯಾವುದೇ ಕಾರಣಕ್ಕೂ ಎಫ್‌ಐಆರ್ ಆಗಿಲ್ಲ. ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿಲ್ಲ. ಒಂದು ವಾರ ಕಾಲ ಹಾಗೆಯೇ ಬಿದ್ದಿದ್ದ ಬಾಲಕಿಯ ಮೃತದೇಹವನ್ನು ಪೊಲೀಸರಿಗೆ ತಿಳಿಸದೆ ಹೂತು ಹಾಕಿದ್ದನ್ನು ಕಣ್ಣಾರೆ ಕಂಡಿದ್ದೇನೆ. ನಾವು ಅಂದು ಬಾಯಿಬಿಡಲು ಆಗುತ್ತಿರಲಿಲ್ಲ. ಇಂದು ಇಷ್ಟೆಲ್ಲ ಇದ್ದರೂ ಹೇಳಲು ಆಗುತ್ತಿಲ್ಲ. ಇದನ್ನೆಲ್ಲ ಅಂದು ಕೂಡ ಹೇಳಲು ಆಗುತ್ತಿರಲಿಲ್ಲ” ಎಂದಿದ್ದಾರೆ.
‘ಅಂದು ಯಾಕೆ ಇದನ್ನೆಲ್ಲ ಪ್ರಶ್ನಿಸಲಿಲ್ಲ’ ಎಂದು ಮಾಧ್ಯಮಗಳು ಪದೇಪದೇ ಕೇಳಿದಾಗ, “ನನ್ನ ಕುಟುಂಬದ ಹೆಣ್ಣುಮಗಳ ಹೆಸರು ಪದ್ಮಲತಾ. ಆಕೆಗೆ ಏನಾಯಿತು? ಆ ಪ್ರಕರಣ ಏನಾಯಿತು? ಎಂಬುದನ್ನೆಲ್ಲ ಎಸ್‌ಐಟಿಗೆ ತಿಳಿಸುವವರೂ ಇದ್ದಾರೆ” ಎಂದು ಸ್ಪಷ್ಟಪಡಿಸಿದರು.