ಮನೆಕೆಲಸದ ಮಹಿಳೆಯ ಮೇಲೆ ಪದೇ ಪದೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಅಪರಾಧಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.
ಈ ಬೆನ್ನಲ್ಲೇ ಸಿಐಡಿ ಮತ್ತು ಎಸ್‌ಐಟಿ ಮುಖ್ಯಸ್ಥರಾದ ಬಿ ಕೆ ಸಿಂಗ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, “ಕೇಸ್ ದಾಖಲಾಗಿ, ಕೇವಲ ಒಂದು ವರ್ಷ ನಾಲ್ಕು ತಿಂಗಳೊಳಗಾಗಿ ತೀರ್ಪು ಬಂದಿರುವುದು ನಿಜಕ್ಕೂ ವಿಶೇಷ. ವಿಡಿಯೋದಲ್ಲಿರುವುದು ಆರೋಪಿ ಪ್ರಜ್ವಲ್ ಅವರೇ ಎಂಬುದನ್ನು ಖಚಿತವಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಎಸ್‌ಐಟಿ ತಂಡದಿಂದ ಹೆಚ್ಚಿನ ಶ್ರಮ ಹಾಗೂ ಆಧುನಿಕ ತಂತ್ರಜ್ಞಾನದಿಂದ ಸಾಧ್ಯವಾಯಿತು” ಎಂದು ಮೈಸೂರಿನಲ್ಲಿ ಹೇಳಿದರು.
“ಪ್ರಜ್ವಲ್ ರೇವಣ್ಣ ಮೇಲಿನ ಅತ್ಯಾಚಾರದ ಆರೋಪ ಸಾಬೀತಾಗಲು ಸಂತ್ರಸ್ತೆಯ ದಿಟ್ಟತನವೇ ಮುಖ್ಯ ಕಾರಣ. ಹೀಗಾಗಿ ಇಲ್ಲಿ ವಿಶೇಷವಾಗಿ ನಾವು ಧನ್ಯವಾದ ಹೇಳಬೇಕಿರುವುದು ಸಂತ್ರಸ್ತೆಗೆ. ಆಕೆ ಒಬ್ಬ ಬಡ ಮಹಿಳೆ. ಆಕೆ ಕೇಸ್ ಹಾಕಿದ್ದಾತ ದೊಡ್ಡ ಮನೆತನದವರು. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಪ್ರಾಬಲ್ಯ ಹೊಂದಿದ್ದವರು. ಅಂಥವರಿಂದ ತೀವ್ರ ಒತ್ತಡವಿದ್ದರೂ ಸಹ ಧೈರ್ಯಗೆಡದೇ ನಮಗೆ ನ್ಯಾಯ ಬೇಕೇಬೇಕು ಎಂದು ಆಕೆ ನಮ್ಮ ಜೊತೆಗೆ (ಎಸ್ಐಟಿ) ಜೊತೆಗೆ ನಿಂತಿದ್ದಳು. ಆಕೆಯ ಸಹಕಾರದಿಂದ ನಮಗೆ ಹೆಚ್ಚಿನ ಸಾಕ್ಷ್ಯಾಧಾರ ಕಲೆಹಾಕಲು ಸಾಧ್ಯವಾಯಿತು. ಬಹುಶಃ ಈ ತೀರ್ಪಿನಿಂದಾಗಿ ಆಕೆಗೆ ಸಮಾಧಾನವಾಗಿರಬೇಕು” ಎಂದು ತಿಳಿಸಿದರು.
“ತನಿಖೆಯ ಸಮಯದಲ್ಲಿ ಸಂತ್ರಸ್ತೆ ಸಂಪೂರ್ಣ ಸಹಕಾರ ನೀಡಿದರು. ಆಕೆ ಮಾಡಿದ ಆರೋಪಗಳಿಗೆ ಸ್ಪಷ್ಟನೆ ಕೇಳಲಾಗಿತ್ತು. ತನಿಖೆ ಮುಗಿಯುವವರೆಗೂ ಆಕೆ ಧೈರ್ಯದಿಂದ ಇದ್ದರು. ಅತ್ಯಾಚಾರ ಆರೋಪವಾದ ಕಾರಣ ಪ್ರಕರಣವನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕಾಗಿತ್ತು. ತಂಡವು ಆರೋಪಿಯನ್ನು ಹುಡುಕುವ ವೇಳೆಗಾಗಲೇ ಆತನೇ ನಮ್ಮ ಬಲೆಗೆ ಬಿದ್ದ. ಅಲ್ಲಿಂದ ಪ್ರಕರಣ ತಿರುವು ಪಡೆದುಕೊಂಡಿತು. ಸತತವಾಗಿ ಏಳು ತಿಂಗಳುಗಳ ಕಾಲ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿ 180 ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೆವು” ಎಂದು ವಿವರಿಸಿದರು.
ಈ ಪ್ರಕರಣದ ತನಿಖೆಗಾಗಿ ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಎಸ್‌ಪಿಗಳಾಗಿದ್ದ ಸೀಮಾ ಲಾಟ್ಕರ್ ಮತ್ತು ಸುಮನ್ ಅವರು ಎಸ್‌ಐಟಿ ತಂಡವನ್ನು ಮುನ್ನಡೆಸಿದ್ದರು. ಅವರೊಂದಿಗೆ 26 ಅಧಿಕಾರಿಗಳು ತನಿಖೆಯಲ್ಲಿ ಭಾಗಿಯಾಗಿದ್ದರು.
ಪ್ರಜ್ವಲ್ ರೇವಣ್ಣ ವಿರುದ್ಧ 2024ರ ಲೋಕಸಭೆ ಚುನಾವಣೆ ಸಂದರ್ಭ ಸರಣಿ ಅತ್ಯಾಚಾರ ಆರೋಪ ಕೇಳಿಬಂದಿತ್ತು. ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದವು. ಇದರಲ್ಲಿ ಮೈಸೂರಿನ ಕೆಆರ್ ನಗರದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪವೂ ಒಂದಾಗಿದೆ.
ಅತ್ಯಾಚಾರ ಪ್ರಕರಣ ಬೆಳಕಿಗೆ ಬರಬಾರದು ಎಂದು ಮಹಿಳೆಯನ್ನು ಅಪಹರಿಸಿ ಹುಣಸೂರು ಬಳಿಯ ತೋಟದ ಮನೆಯಲ್ಲಿ ಕೂಡಿಹಾಕಲಾಗಿತ್ತು ಎಂಬ ಆರೋಪದ ಅಡಿ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ಡಿ ರೇವಣ್ಣ ಮತ್ತು ಭವಾನಿ ರೇವಣ್ಣ ಸೇರಿದಂತೆ ಒಟ್ಟು 9 ಆರೋಪಿಗಳಿದ್ದಾರೆ.
ಹೆಚ್ ಡಿ ರೇವಣ್ಣ ಹಾಗೂ ಭವಾನಿ ರೇವಣ್ಣ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಒಂದು ವರ್ಷದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಪ್ರಕರಣ ಸಂಬಂಧ 2024ರ ಮೇ 31ರಂದು ಪ್ರಜ್ವಲ್ ರೇವಣ್ಣರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಅವರು ದೋಷಿ ಎಂದು ಸಾಬೀತಾಗಿದ್ದು, ಶಿಕ್ಷೆಯಾಗಿದೆ.
ಒಟ್ಟಾರೆಯಾಗಿ ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರವೆಸಗಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿರುವ ಆರೋಪ ಸಂಬಂಧ ಮೂರು ಪ್ರತ್ಯೇಕ ಪ್ರಕರಣಗಳು ಇನ್ನೂ ವಿಚಾರಣಾ ಹಂತದಲ್ಲಿ ಇವೆ. ಅವುಗಳ ತೀರ್ಪು ಇನ್ನಷ್ಟೇ ಹೊರಬೀಳಬೇಕಿದೆ.

Nice read, I just passed this onto a colleague who was doing some research on that. And he actually bought me lunch because I found it for him smile So let me rephrase that: Thank you for lunch! “Without friends no one would choose to live, though he had all other goods.” by Aristotle.