2025ರ ಸೆಪ್ಟೆಂಬರ್ 9ರಿಂದ ‘ಏಷ್ಯನ್ ಕಪ್’ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ‘ಗ್ರೂಪ್ ಎ’ನಲ್ಲಿ ಆಡಲಿವೆ. ಪಾಕಿಸ್ತಾನದ ಜೊತೆಗೆ ಕ್ರಿಕೆಟ್ ಪಂದ್ಯ ಆಡಲು ಮುಂದಾಗಿರುವ ಭಾರತ ತಂಡದ ವಿಚಾರವಾಗಿ ಬಿಸಿಸಿಐ ವಿರುದ್ಧ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ವಾಗ್ದಾಳಿ ನಡೆಸಿದ್ದಾರೆ. ಬಿಸಿಸಿಐಗೆ ‘ರಕ್ತಕ್ಕಿಂದ ಹಣವೇ ಮುಖ್ಯ’ ಎಂದು ಕಿಡಿಕಾರಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ. ಉಭಯ ರಾಷ್ಟ್ರಗಳ ರಾಜತಾಂತ್ರಿಕ ಮತ್ತು ವ್ಯಾವಹಾರಿಕ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಇದೆಲ್ಲದರ ನಡುವೆಯೂ, ಸೆಪ್ಟೆಂಬರ್ 9ರಿಂದ 28ರವರೆಗೆ ಯುಎಇಯಲ್ಲಿ ನಡೆಯಲಿರುವ ಏಷ್ಯನ್ ಕಪ್‌ನಲ್ಲಿ ಪಾಕ್ ಜೊತೆ ಟೀಮ್ ಇಂಡಿಯಾ ಆಟವಾಡುತ್ತದೆ ಎಂದು ಬಿಸಿಸಿಐ ಘೋಷಿಸಿದೆ.
ಸೆಪ್ಟೆಂಬರ್ 14ರಂದು ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ಪಂದ್ಯ ನಡೆಯಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಘೋಷಿಸಿದೆ. ಅಲ್ಲದೆ, ಈ ಪಂದ್ಯವನ್ನು ‘ಬ್ಲಾಕ್‌ಬಸ್ಟರ್ ಪಂದ್ಯ’ ಎಂದು ಕರೆದಿದೆ. ಸೂಪರ್ ಫೋರ್ ಸುತ್ತಿನಲ್ಲಿ ಮತ್ತು ಫೈನಲ್‌ನಲ್ಲಿಯೂ ಎರಡೂ ತಂಡಗಳು ಮುಖಾಮುಖಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಭಾರತ-ಪಾಕ್ ಪಂದ್ಯದ ವಿಚಾರವಾಗಿ ಬಿಸಿಸಿಐ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಿಯಾಂಕಾ ಚತುರ್ವೇದಿ, “ಪಾಕ್ ಜೊತೆಗಿನ ಕ್ರಿಕೆಟ್ ಸಂಬಂಧವನ್ನು ಬಿಸಿಸಿಐ ಪುನರಾರಂಭಿಸುವುದು ‘ಶಾಪಗ್ರಸ್ತ ಹಣ’ ಸಂಪಾದನೆಗೆ ಸಮವಾಗಿದೆ” ಎಂದು ಹೇಳಿದ್ದಾರೆ.
Name and Shame every sponsor, broadcaster , streaming app that attempts to make money out of this India Pak match, because clearly BCCI and GoI are shamelessly going ahead with this match, leaves us Indian citizens to make our voices loud and clear.
— Priyanka Chaturvedi🇮🇳 (@priyankac19) August 3, 2025
I ask the @MIB_India and…
“ಭಾರತ-ಪಾಕ್ ಕ್ರಿಕೆಟ್ ಪಂದ್ಯದಿಂದ ಹಣ ಗಳಿಸಲು ಯತ್ನಿಸುತ್ತಿರುವ ಪ್ರತಿಯೊಂದು ಪ್ರಾಯೋಜಕ, ಪ್ರಸಾರಕ ಹಾಗೂ ಸ್ಟ್ರೀಮಿಂಗ್ ಆ್ಯಪ್‌ನ ಹೆಸರನ್ನು ಬಹಿರಂಗಪಡಿಸಿ ಮತ್ತು ಟೀಕಿಸಿ. ಏಕೆಂದರೆ, BCCI ಮತ್ತು ಭಾರತ ಸರ್ಕಾರವು ಈ ಪಂದ್ಯವನ್ನು ಯಾವುದೇ ಲಜ್ಜೆ ಇಲ್ಲದೆ ಮುಂದುವರೆಸುತ್ತಿರುವುದು ಸ್ಪಷ್ಟವಾಗಿದೆ. ಆದ್ದರಿಂದ, ನಾವು ಭಾರತೀಯ ನಾಗರಿಕರಾಗಿ ನಮ್ಮ ಧ್ವನಿಯನ್ನು ಜೋರಾಗಿ ಮತ್ತು ಸ್ಪಷ್ಟವಾಗಿ ಎತ್ತಬೇಕಾಗಿದೆ. ಭಾರತ-ಪಾಕ್ ಪಂದ್ಯವನ್ನು ನೇರಪ್ರಸಾರ ಮಾಡುವ ಎಲ್ಲ ಸ್ಟ್ರೀಮಿಂಗ್ ಆ್ಯಪ್‌ಗಳು ಮತ್ತು ಪ್ರಸಾರ ಚಾನಲ್‌ಗಳನ್ನು ನಿಷೇಧಿಸುವಂತೆ ನಾನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವಗಳಿಗೆ ಮನವಿ ಮಾಡುತ್ತೇನೆ. ಅಥವಾ ಈ ಸಚಿವಾಲಯಗಳೂ ಕೂಡ ಒತ್ತಡಕ್ಕೆ ಮಣಿಯುತ್ತಾರೆಯೇ” ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ನಡೆದ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) ಟೂರ್ನಿಯಲ್ಲಿ ಜುಲೈ 31ರಂದು ನಡೆಯಬೇಕಿದ್ದ ಟೂರ್ನಿಯ ಸೆಮಿಫೈನಲ್‌ನಲ್ಲಿ ಯುವರಾಜ್ ಸಿಂಗ್ ನೇತೃತ್ವದ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನ ವಿರುದ್ಧ ಆಡಲು ನಿರಾಕರಿಸಿತ್ತು. ಇದಕ್ಕೆ, ಪಹಲ್ಗಾಮ್ ದಾಳಿ ಕಾರಣವಂದು ಹೇಳಲಾಗಿತ್ತು. ಭಾರತೀಯ ತಂಡ ನಿರ್ಧಾರವನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸ್ವಾಗತಿಸಿದ್ದರು.