ಗುಬ್ಬಿ ತಾಲ್ಲೂಕಿನಲ್ಲಿ ಹಲವು ಕಡೆ ಚಿರತೆ ಕಾಣಿಸಿಕೊಂಡು ಸಿ.ಎಸ್.ಪುರ ಸಮೀಪದ ವಿ.ಕೋಡಿಹಳ್ಳಿ ಚಿಕ್ಕಕೆರೆ ಬಾರೆ ಬಳಿ ಸ್ಥಳೀಯ ರೈತರ ಮೇಲೆರಗಿ ಮೂರು ಮಂದಿಗೆ ಗಂಭೀರ ಗಾಯಗೊಳಿಸಿದೆ. ಈ ಜೊತೆಗೆ ನೆರಳೇಕೆರೆ ಗ್ರಾಮದ ಬಳಿ ಕುರಿಗಾಯಿ ಮೇಲೆರಗಿ ಕಚ್ಚಿ ಗಾಯ ಗೊಳಿಸಿದ ಘಟನೆ ತಾಲ್ಲೂಕಿನ ಜನತೆಯಲ್ಲಿ ಚಿರತೆ ಹಾವಳಿ ಬಗ್ಗೆ ಭಯ ಮೂಡಿದೆ.
ಸಿ.ಎಸ್.ಪುರ ಸಮೀಪದ ವಿ.ಕೋಡಿಹಳ್ಳಿ ಗ್ರಾಮದ ಬಳಿ ತೋಟದ ಬೇಲಿ ಸಾಲಿನಲ್ಲಿ ಕಾಣಿಸಿಕೊಂಡ ಚಿರತೆಯನ್ನು ಗಾಬರಿಗೊಳಿಸಿ ಓಡಿಸುವ ಯತ್ನ ಮಾಡಿದ ರೈತರ ಮೇಲೆ ದಾಳಿ ಮಾಡಿದ ಚಿರತೆ ಮೂವರನ್ನು ಗಾಯಗೊಳಿಸಿದೆ. ಈಗಾಗಲೇ ಚಿರತೆ ಹಲವು ಬಾರಿ ಕಾಣಿಸಿಕೊಂಡಿದೆ. ಸಾಕು ಪ್ರಾಣಿಗಳನ್ನು ಹುಡುಕಿ ಬಂದು ಮಕ್ಕಳು ವೃದ್ಧರ ಮೇಲೆ ಅಟ್ಯಾಕ್ ಮಾಡುವ ಮುನ್ನ ಓಡಿಸುವ ಪ್ರಯತ್ನ ಮಾಡಿದ್ದಾರೆ. ಅರಣ್ಯ ಇಲಾಖೆ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಿಲ್ಲ ಎಂದು ದೂರುತ್ತಿದ್ದಾರೆ.
ದೊಡ್ಡಗುಣಿ ಸಮೀಪದ ನೆರಳೇಕೆರೆ ಗ್ರಾಮದ ನರಸಿಂಹಮೂರ್ತಿ ಎಂಬುವರಿಗೆ ಭುಜ ಹಾಗೂ ಕೈಗೆ ಕಚ್ಚಿ ಗಂಭೀರ ಗಾಯ ಉಂಟು ಮಾಡಿದೆ. ಕಡಬ ಹೋಬಳಿ ಬಿ.ಕೋಡಿಹಳ್ಳಿ ಗ್ರಾಮದ ಬಳಿ ಚಿರತೆ ಕಾಣಿಸಿಕೊಂಡಿದೆ. ಏಕ ಕಾಲದಲ್ಲಿ ತಾಲ್ಲೂಕಿನ ಹಲವು ಗ್ರಾಮದ ಬಳಿ ಕಾಣಿಸಿಕೊಂಡ ಚಿರತೆಗಳ ಉಪಟಳ ಸಹಿಸಲು ಸಾಧ್ಯವಿಲ್ಲ. ಅರಣ್ಯ ಇಲಾಖೆ ಈ ಬಗ್ಗೆ ಗಂಭೀರತೆ ಪರಿಗಣಿಸಿಲ್ಲ. ಮೊಬೈಲ್ ಕರೆ ಮಾಡಿದರೆ ಬರುತ್ತೇವೆ ಎನ್ನುತ್ತಲೇ ಕಾಲಹರಣ ಮಾಡುತ್ತಾರೆ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ.