ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ವಿಚಾರವಾಗಿ ಆ.16ಕ್ಕೆ ವಿಶೇಷ ಸಚಿವ ಸಂಪುಟ ಸಭೆ ಕರೆದು ತೀರ್ಮಾನಿಸಲಾಗುವುದು ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, “ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ಕುರಿತು ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್‌ದಾಸ್ ನೇತೃತ್ವದ ಏಕಸದಸ್ಯ ಆಯೋಗ ಸಲ್ಲಿಸಿರುವ ವರದಿಯನ್ನು ಸ್ವೀಕರಿಸಲಾಗಿದೆ” ಎಂದು ತಿಳಿಸಿದರು.
“ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಾಗಮೋಹನ್‌ದಾಸ್ ವರದಿಯನ್ನು ಮಂಡಿಸಲಾಗಿದ್ದು, ಎಲ್ಲ ಸಚಿವರಿಗೂ ಕಾಪಿ ಒದಗಿಸಲಾಗಿದೆ. ಸಚಿವರು ಅಧ್ಯಯನ ನಡೆಸಿದ ಬಳಿಕ ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದ್ದು, ಅಂದು ಜಾರಿಯ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನಿಸಲಿದ್ದಾರೆ” ಎಂದರು.
“ನಾಗಮೋಹನ್‌ದಾಸ್ ಅವರು ಶ್ರಮವಹಿಸಿ ವೈಜ್ಞಾನಿಕ ಅಧ್ಯಯನ ಮಾಡಿ ವರದಿ ಸಲ್ಲಿಸಿದ್ದಾರೆ. ಶೇ.92ರಷ್ಟು ಜನಾಂಗವನ್ನು ಸಮೀಕ್ಷೆ ಮಾಡಿ ವರದಿ ಸಲ್ಲಿಸಿದ್ದಾರೆ” ಎಂದು ಹೇಳಿದರು.