ಮೈಸೂರಿನ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜೀತ ವಿಮುಕ್ತಿ ಕರ್ನಾಟಕ (ಜೀವಿಕ) ಹಾಗೂ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟ (ರಿ) ಸಂಘಟನೆಯಿಂದ ಇದೇ ಆಗಸ್ಟ್. 10 ರಂದು ಕಲಾ ಮಂದಿರದಲ್ಲಿ ರಾಜ್ಯಮಟ್ಟದ ಸಮಾವೇಶ ಹಾಗೂ ಒಕ್ಕೂಟದ ಚುನಾವಣೆ ನಡೆಯಲಿದೆ ಎಂದು ಹೇಳಿದರು.
ಸಂಘಟನೆಯು ಕರ್ನಾಟಕ ರಾಜ್ಯಾಧ್ಯಂತ ಸುಮಾರು 35 ವರ್ಷಗಳಿಂದ ಡಾ. ಕಿರಣ್ ಕಮಲ್ ಪ್ರಸಾದ್ ರವರ ನೇತೃತ್ವದಲ್ಲಿ ಸಾಮಾಜಿಕ ಅನಿಷ್ಠ ಪಿಡುಗಾದ ಜೀತ ಪದ್ಧತಿ ನಿರ್ಮೂಲನೆಗಾಗಿ ಹಗಲಿರುಳು ಜಾಗೃತಿ ಮತ್ತು ಸಂಘಟನೆಯ ಕೆಲಸ ಮಾಡುತ್ತಾ ಬರುತ್ತಿದೆ. ಸಂಘಟನೆಯ ಅವಿರತ ಹೋರಾಟದ ಫಲವಾಗಿ ಮತ್ತು ಸಂಘಟನೆಯ ಪ್ರೇರಣೆಯಿಂದ ಸಾವಿರಾರು ಮಂದಿ ಸ್ವತಂತ್ರವಾಗಿ ಜೀತಮುಕ್ತರಾಗಿ ಇಂದು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ.
ಕರ್ನಾಟಕ ಸರ್ಕಾರದ ಜನಪರ ನಿಲುವುಗಳಲ್ಲಿ ಒಂದಾದ ಮತ್ತು ಸಂವಿಧಾನದ ಆಶಯವಾದ 1976ರ ಜೀತಪದ್ಧತಿ ನಿರ್ಮೂಲನೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ತೆಗೆದುಕೊಂಡ ನಿಲುವುಗಳು ಅತ್ಯಂತ ಶ್ಲಾಘನೀಯ. ಇದರ ಪರಿಣಾಮವಾಗಿ 2000 ನೇ ಇಸವಿಯಿಂದ 2024 ರ ತನಕ ರಾಜ್ಯಾಧ್ಯಂತ ಸುಮಾರು 7000 ಮಂದಿ ಸರ್ಕಾರದಿಂದ ಅಧಿಕೃತ ಜೀತವಿಮುಕ್ತಿ ಪ್ರಮಾಣ ಪತ್ರ ಪಡೆದಿರುವುದು ಸರಿಯಷ್ಟೆ.
ಮೈಸೂರು ಜಿಲ್ಲೆಯಲ್ಲಿ ಇದುವರೆವಿಗೂ ಸುಮಾರು 1155 ಕ್ಕೂ ಹೆಚ್ಚು ಜೀತವಿಮುಕ್ತರಾಗಿದ್ದು ಇವರಿಗೆ ಸರ್ಕಾರದಿಂದ ಪರಿಹಾರ ಮತ್ತು ಪುನರ್ವಸತಿ ಸೌಲಭ್ಯಗಳು ಸರಿಯಾಗಿ ಹಾಗೂ ಸಕಾಲದಲ್ಲಿ ಸಿಗದೆ ಮತ್ತೆ ಜೀತಕ್ಕೆ ಹೋಗುವ ಪ್ರಸಂಗ ನಿರ್ಮಾಣವಾಗಿದೆ.
ಆದರೆ, ಜೀತಪದ್ದತಿ ಕಾನೂನು ಪ್ರಕಾರ ಕರ್ನಾಟಕ ಸರ್ಕಾರದ 2006 ಜೀತವಿಮುಕ್ತರ ಕ್ರಿಯಾಯೋಜನೆಯ ಪ್ರಕಾರ ಸಿಗಬೇಕಾದ ಸಮಗ್ರ ಪುನರ್ವಸತಿಯು ಸಕಾಲದಲ್ಲಿ ಸಿಗದೆ ಬಿಡುಗಡೆಗೊಂಡ ಜೀತವಿಮುಕ್ತರ ಜೀವನ ಅತಂತ್ರ ಪರಿಸ್ಥಿತಿಯಲ್ಲಿದೆ.
ಈ ಹಿನ್ನೆಲೆಯಲ್ಲಿ ದಿನಾಂಕ-10-08-2025 ರಂದು ಮೈಸೂರಿನ ಕಲಾಮಂದಿರದಲ್ಲಿ ಬಿಡುಗಡೆಗೊಂಡ ಎಲ್ಲಾ ಜೀತವಿಮುಕ್ತರಿಗೆ ಭೂಮಿ, ನಿವೇಶನ, ವಸತಿ, ಪುನರ್ ವಸತಿ, ಸಾಮಾಜಿಕ ಭದ್ರತೆ. ಹಾಗೂ ಪುನರ್‌ವಸತಿಗೆ ಮಾರಕವಾಗಿರುವ ತೊಡಕುಗಳನ್ನು ನಿವಾರಿಸಿ, ಸಮಗ್ರ ಪುನರ್ವಸತಿ ಕಲ್ಪಿಸಬೇಕು. ಎಸ್.ಓ.ಪಿ.ಯನ್ನು ರದ್ದುಪಡಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನಿಟ್ಟುಕೊಂಡು ಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಮನವರಿಕೆ ಮಾಡಲು ರಾಜ್ಯ ಮಟ್ಟದ ಸಮಾವೇಶ ಹಾಗೂ ಒಕ್ಕೂಟದ ಚುನಾವಣೆಯನ್ನು ನಡೆಸುತ್ತಿದ್ದು ಈ ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳಿಂದ 3000 ಕ್ಕೂ ಹೆಚ್ಚು ಜೀತದಾಳುಗಳು ಹಾಗೂ ಕೃಷಿಕಾರ್ಮಿಕರು ಭಾಗವಹಿಸುತ್ತಿದ್ದಾರೆ.
ಕಾರ್ಯಕ್ರಮ ಉದ್ಘಾಟನೆಯನ್ನು ಜ್ಞಾನಪ್ರಕಾಶ್ ಸ್ವಾಮೀಜಿ ಹಾಗೂ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್. ಸಿ. ಮಹದೇವಪ್ಪ ನೆರವೇರಿಸಲಿದ್ದಾರೆ. ಶಾಸಕರಾದ ಅನಿಲ್ ಚಿಕ್ಕಮಾದು, ಯತಿಂದ್ರ ಸಿದ್ದರಾಮಯ್ಯ, ಹರೀಶ್ ಗೌಡ, ರೈತ ಸಂಘದ ಬಡಗಲಪುರ ನಾಗೇಂದ್ರ, ದಸಂಸ ರಾಜ್ಯ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು, ಕರ್ನಾಟಕ ಜನಶಕ್ತಿ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಸೇರಿದಂತೆ ಹಲವರು ಉಪಸ್ಥಿತರಿರುತ್ತಾರೆಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಆಗಸ್ಟ್. 12 ರಿಂದ 14 ರ ವರೆಗೆ ರಾಜ್ಯವ್ಯಾಪಿ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ
ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಸಂಘಟನಾ ಸಂಚಾಲಕ ಉಮೇಶ್, ರಾಜ್ಯಾಧ್ಯಕ್ಷ ಮಹಾದೇವ, ತಾಲ್ಲೂಕು ಸಂಚಾಲಕ ಚಂದ್ರಶೇಖರ ಮೂರ್ತಿ, ಜಿಲ್ಲಾ ಸಂಚಾಲಕ ಬಸವರಾಜು, ತಾಲ್ಲೂಕು ಒಕ್ಕೂಟದ ಅಧ್ಯಕ್ಷ ಗಣೇಶ್ ಕೆ. ಎಡತೊರೆ, ಸರಗೂರು ತಾಲ್ಲೂಕು ಅಧ್ಯಕ್ಷ ಬಸವರಾಜು, ಜಾಗೃತಿ ಸಮಿತಿ ಸದಸ್ಯ ಶಿವಣ್ಣ ಯಲವತ್ತೂರು ಸೇರಿದಂತೆ ಇನ್ನಿತರರು ಇದ್ದರು.