50% ತೆರಿಗೆ | ಟ್ರಂಪ್‌ಗೆ ತಿರುಗೇಟು ನೀಡಿದರೇ ಪ್ರಧಾನಿ; ಮೋದಿಗೆ ನಿಜಕ್ಕೂ ರೈತರ ಮೇಲೆ ಕಾಳಜಿ ಇದೆಯೇ?

Date:

Advertisements

ಭಾರತ-ಪಾಕ್ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಟ್ರಂಪ್‌ ಪದೇ ಪದೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ವ್ಯಾಪಾರ ಸಂಬಂಧದ ಅಸ್ತ್ರ ಬಳಸಿ, ಭಾರತ-ಪಾಕ್ ನಡುವೆ ಕದನ ವಿರಾಮ ಘೋಷಿಸಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಅವರ ಹೇಳಿಕೆಯನ್ನು ಪ್ರಧಾನಿ ಮೋದಿ ಅವರು ಸಂಸತ್ತಿನ ಒಳಗಾಗಲೀ, ಹೊರಗಾಗಲೀ ಖಂಡಿಸಿಲ್ಲ. ಅಲ್ಲಗಳೆದಿಲ್ಲ. ಅಷ್ಟೇ ಏಕೆ, ಟ್ರಂಪ್ ತೆಗೆದುಕೊಳ್ಳುವ ಯಾವುದೇ ನಿರ್ಧಾರ, ನಿಲುವುಗಳನ್ನು ಪ್ರಧಾನಿ ಮೋದಿ ಟೀಕಿಸುವುದೂ ಇಲ್ಲ. ಕನಿಷ್ಠ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ.

ಮೋದಿಯ ಮೌನವನ್ನೇ ದುರುಪಯೋಗಪಡಿಸಿಕೊಂಡಿರುವ ಟ್ರಂಪ್, ಭಾರತವನ್ನು ನಿಯಂತ್ರಿಸಲು ಹವಣಿಸುತ್ತಿದ್ದಾರೆ. ತಾವು ಹೇಳಿದಂತೆ ಭಾರತ ಕೇಳಬೇಕೆಂಬ ಧೋರಣೆ ಅವರಲ್ಲಿ ಬೆಳೆದಿದೆ. ಹೀಗಾಗಿಯೇ, ರಷ್ಯಾದಿಂದ ತೈಲ ಮತ್ತು ಶಸ್ತ್ರಾಸ್ತ್ರಗಳ ಖರೀದಿಯನ್ನು ನಿಲ್ಲಿಸದ ಭಾರತದ ಮೇಲೆ 50% ತೆರಿಗೆಯನ್ನು ಟ್ರಂಪ್ ವಿಧಿಸಿದ್ದಾರೆ. ಭಾರತದ ಮೇಲೆ ಆರ್ಥಿಕ ಹೊರೆ ಹಾಕಲು ಮುಂದಾಗಿದ್ದಾರೆ.

ಇದಕ್ಕೆ ಪ್ರಧಾನಿ ಮೋದಿ ಅವರು ತಿರುಗೇಟು ನೀಡಬೇಕಾಗಿತ್ತು. ಟ್ರಂಪ್ ಹೇರಿರುವ 50% ತೆರಿಗೆಯನ್ನು ಖಂಡಿಸಿ ಮಾತನಾಡಬೇಕಿತ್ತು. ಆದರೆ, 2025ರ ಆಗಸ್ಟ್ 7ರಂದು, ಕೃಷಿ ವಿಜ್ಞಾನಿ ಎಂ.ಎಸ್ ಸ್ವಾಮಿನಾಥನ್‌ರವರ ಜನ್ಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಜಾಗತಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ”ದೇಶದ ರೈತರು, ಮೀನುಗಾರರು ಹಾಗೂ ಹೈನುಗಾರರ ಹಿತಾಸಕ್ತಿಗಳೊಂದಿಗೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ” ಎಂದಿದ್ದಾರೆ.

ಮೋದಿಯವರ ಈ ಹೇಳಿಕೆಯಲ್ಲಿ ಟ್ರಂಪ್‌ ಹೆಸರನ್ನು ಉಲ್ಲೇಖಿಸಲಿಲ್ಲ ಅಥವಾ ಟ್ರಂಪ್‌ ಸುಂಕದ ಕುರಿತು ಕಟುವಾಗಿ ಟೀಕಿಸಿಲ್ಲ. ರೈತರ ಹಿತಾಸಕ್ತಿ ಕಡೆಗಣಿಸುವುದಿಲ್ಲ ಎಂದಷ್ಟೇ ಹೇಳಿದ್ದಾರೆ. ಅದನ್ನೇ ಗೋದಿ ಮೀಡಿಯಾ, ಟ್ರಂಪ್‌ ವಿರುದ್ಧ ಮೋದಿ ಗುಡುಗಿದ್ದಾರೆ. ತಿರುಗೇಟು ನೀಡಿದ್ದಾರೆ ಎಂದು ಬಣ್ಣಿಸುತ್ತಿವೆ. ಮೋದಿಯವರ ರೈತರ ಹಿತಾಸಕ್ತಿಯ ಹೇಳಿಕೆ, ಅದು ಹೇಗೆ ಟ್ರಂಪ್‌ಗೆ ತಿರುಗೇಟು ಆಗುತ್ತದೆ? ಟ್ರಂಪ್‌ ವಿಧಿಸಿರುವ ಭಾರೀ ತೆರಿಗೆಯ ವಿರುದ್ಧ ಭಾರತ ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಸೂಚಿಸುತ್ತದೆ? ಈ ಪ್ರಶ್ನೆಗಳಿಗೆ ಮಡಿಲ ಮಾಧ್ಯಮಗಳಷ್ಟೇ ಉತ್ತರಿಸಬೇಕು.

ಯಾಕೆಂದರೆ, ಮೋದಿ ಅವರು ರೈತರ ಹಿತಾಸಕ್ತಿಯನ್ನು ಬಲಿಕೊಡುವುದಿಲ್ಲ ಎಂದಷ್ಟೇ ಹೇಳಿದ್ದಾರೆ. ಆದರೆ, ಭಾರೀ ತೆರಿಗೆ ವಿಧಿಸಿದ ಅಮೆರಿಕ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಅವರು ಮಾತನಾಡಿಲ್ಲ. ಅಥವಾ, ಮುಂದೇನು ಮಾಡುತ್ತೇವೆ ಎಂಬುದರ ಬಗ್ಗೆ ವಿವರಿಸಿಲ್ಲ.

ಟ್ರಂಪ್ ಅವರ ಸುಂಕ ನೀತಿಯು ಭಾರತದ ಕೃಷಿ, ಹೈನುಗಾರಿಕೆ ಹಾಗೂ ಮೀನುಗಾರಿಕೆ ಉತ್ಪನ್ನಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂಬ ಗಂಭೀರ ಆತಂಕವಿದೆ. ಭಾರತದ ಹೈನುಗಾರಿಕೆ ಉದ್ಯಮವು ದೇಶದ ಜಿಡಿಪಿಗೆ 5%ರಷ್ಟು ಕೊಡುಗೆ ನೀಡುತ್ತದೆ. ಸುಮಾರು 8 ಕೋಟಿ ಜನರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಈಗ ಟ್ರಂಪ್ ವಿಧಿಸಿರುವ 50% ತೆರಿಗೆಯಿಂದಾಗಿ, ಅಮೆರಿಕ ಮಾರುಕಟ್ಟೆಗೆ ಕೃಷಿ, ಹೈನುಕಾರಿಕೆ ಹಾಗೂ ಮೀನುಗಾರಿಕೆಯ ಉತ್ಪನ್ನಗಳು ಪ್ರವೇಶ ಪಡೆಯುವುದೇ ಕಷ್ಟವಾಗಿದೆ. ಇದು, ಭಾರತದ ರೈತರಿಗೆ ಸಂಭಾವ್ಯ ಹಾನಿಯನ್ನು ಸೂಚಿಸುತ್ತದೆ. ಹೀಗಾಗಿ, ಮೋದಿಯವರ ಹೇಳಿಕೆಯನ್ನು ರಾಷ್ಟ್ರೀಯ ಹಿತಾಸಕ್ತಿಯ ರಕ್ಷಣೆಗೆ ಸಂಬಂಧಿಸಿದ ರಾಜತಾಂತ್ರಿಕ ಹೇಳಿಕೆ ಎಂದು ಮೋದಿ ಭಕ್ತರು ಮತ್ತು ಭಕ್ತರಂತಿರುವ ಪತ್ರಕರ್ತರು ಭಾವಿಸಿದ್ದಾರೆ.

ಆದರೆ, ಮೋದಿ ಅವರ ಹೇಳಿಕೆಯಲ್ಲಿ ಸಾಮಾನ್ಯ ರಾಷ್ಟ್ರೀಯವಾದಿ ಧೋರಣೆ ಇದ್ದರೂ, ಸುಂಕದ ಹೊರೆಯ ಕುರಿತಾಗಿ ನಿರ್ದಿಷ್ಟ ಕಾರ್ಯಸೂಚಿಯ ಕೊರತೆ ಎದ್ದು ಕಾಣುತ್ತದೆ. ಟ್ರಂಪ್‌ ಅವರ ಸುಂಕ ದಾಳಿಗೆ ಭಾರತವು ಹೇಗೆ ಪ್ರತಿಕ್ರಿಯಿಸಲಿದೆ ಎಂಬ ಬಗ್ಗೆ ಮೋದಿಯವರು ಯಾವುದೇ ತಾಂತ್ರಿಕ ಅಥವಾ ಆರ್ಥಿಕ ಕ್ರಮಗಳ ಬಗ್ಗೆ ಮಾತನಾಡಿಲ್ಲ. ವಿವರಿಸಿಲ್ಲ.

ಅಲ್ಲದೆ, ಭಾರತ-ಅಮೆರಿಕ ವಾಣಿಜ್ಯ ಸಂಬಂಧಗಳು ಸಂಕೀರ್ಣವಾಗುತ್ತಿದ್ದು, ಉಭಯ ರಾಷ್ಟ್ರಗಳ ನಡುವಿನ ಸುಂಕ ಯುದ್ಧವು ಕೇವಲ ರೈತರಿಗೆ ಸಂಬಂಧಿಸಿದ ವಿಷಯವಲ್ಲ. ಟ್ರಂಪ್‌ರವರ ನೀತಿಗಳು ಭಾರತದ ಒಟ್ಟಾರೆ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತವೆ. ಆದರೆ, ಮೋದಿಯವರ ಹೇಳಿಕೆಯು ಆರ್ಥಿಕ ಪರಿಣಾಮವನ್ನು ಯಕಃಶ್ಚಿತ್ ಎಂಬಂತೆ ಬದಿಗೊತ್ತಿ, ರೈತರ ಹಿತಾಸಕ್ತಿಯ ಹೇಳಿಕೆಗೆ ಮಾತ್ರವೇ ಸೀಮಿತವಾಗಿದೆ. ಇದರಿಂದ, ಮೋದಿ ಅವರ ಹೇಳಿಕೆಯು ಟ್ರಂಪ್‌ಗೆ ತಿರುಗೇಟು ನೀಡುವ ಬದಲು, ರೈತರ ಮನವೊಲಿಸುವ ಏಕೈಕ ಉದ್ದೇಶವನ್ನು ಹೊಂದಿದೆ ಎಂಬ ಸ್ಪಷ್ಟ ಅನುಮಾನ ಹುಟ್ಟುಹಾಕುತ್ತದೆ.

ಈ ಲೇಖನ ಓದಿದ್ದೀರಾ?: ಶೇ. 50 ಸುಂಕ ವಿಧಿಸಿದ ಡೊನಾಲ್ಡ್‌ ಟ್ರಂಪ್‌: ಭಾರತದ ಮೇಲಾಗುವ ಪರಿಣಾಮವೇನು?

ಹಾಗೆ ನೋಡಿದರೆ, ಮೋದಿ ಸರ್ಕಾರವು ತಮ್ಮ ನಿಲುವುಗಳು ಮತ್ತು ನೀತಿಗಳಿಂದಾಗಿ ರೈತರಿಂದ ಭಾರೀ ವಿರೋಧ, ಪ್ರತಿಭಟನೆ, ಆಕ್ರೋಶವನ್ನು ಎದುರಿಸಿದೆ. 2019ರಲ್ಲಿ ಮೋದಿ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ಈ ಕಾಯ್ದೆಗಳು ರೈತ ವಿರೋಧಿಯಾಗಿದ್ದು, ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುತ್ತವೆ ಎಂಬುದು ಸ್ಪಷ್ಟವಾಗಿತ್ತು. ಹೀಗಾಗಿ, 2020-21ರಲ್ಲಿ ರೈತರು ದೆಹಲಿ ಗಡಿಯಲ್ಲಿ ಬರೋಬ್ಬರಿ 1 ವರ್ಷ ನಿರಂತರ ಪ್ರತಿಭಟನೆ ನಡೆಸಿದರು. ಪರಿಣಾಮ, ಸರ್ಕಾರವು ಆ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಂಡಿತು. ಆದರೂ, ರೈತರ ಪ್ರಮುಖ ಬೇಡಿಕೆಯಲ್ಲಿ ಒಂದಾಗಿದ್ದ, ಕೃಷಿ ಉತ್ಪನ್ನಗಳಿಗೆ ‘ಕನಿಷ್ಠ ಬೆಂಬಲ ಬೆಲೆ'(ಎಂಎಸ್‌ಪಿ)ಯನ್ನು ಕಾನೂನಾತ್ಮಕವಾಗಿ ಖಾತರಿ ಪಡಿಸಬೇಕು ಎಂಬ ಬೇಡಿಕೆಗೆ ಸರ್ಕಾರ ಈವರೆಗೆ ಸ್ಪಂದಿಸಿಲ್ಲ. ಎಂಎಸ್‌ಪಿ ನೀಡುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಅಲ್ಲದೆ, ಮೋದಿ ಅವರು 2014ರಲ್ಲಿ ಪ್ರಧಾನಿಯಾದಾಗ, 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣ ಮಾಡುತ್ತೇವೆಂದು ಘೋಷಿಸಿದ್ದರು. ಆದರೆ, ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (NSO) ದತ್ತಾಂಶಗಳ ಪ್ರಕಾರ, ರೈತರ ಆದಾಯದಲ್ಲಿ ಯಾವ ಏರಿಕೆಯೂ ಕಂಡುಬಂದಿಲ್ಲ. ಗ್ರಾಮೀಣ ಭಾರತದಲ್ಲಿ ಕೃಷಿಯಿಂದ ಬರುವ ಆದಾಯವು ಇತರ ವಲಯಗಳಿಗೆ ಹೋಲಿಸಿದರೆ ತೀರಾ ಕಡಿಮೆಯಾಗಿದೆ. ಮೋದಿ ಆಡಳಿತದಲ್ಲಿ ರೈತರ ಆದಾಯ ಕುಸಿತವನ್ನೂ ಕಂಡಿದೆ. ರೈತರು ಹೆಚ್ಛಾಗಿ ಸಾಲದ ಹೊರೆಗೆ ಗುರಿಯಾಗಿದ್ದಾರೆ. ರೈತ ಆತ್ಮಹತ್ಯೆಗಳೂ ಮುಂದುವರೆದಿವೆ.

ಇದೆಲ್ಲವೂ, ಮೋದಿಯವರ ‘ರೈತಪರ’ ಹೇಳಿಕೆಗಳು ಕೇವಲ ರಾಜಕೀಯವಾಗಿ ಲಾಭ ಗಳಿಸುವ ಹೇಳಿಕೆಗಳೇ ಹೊರತು ಬೇರೇನಲ್ಲ. ಅಂತೆಯೇ, ‘ರೈತರ ಹಿತಾಸಕ್ತಿಯನ್ನು ಬಲಿಕೊಡುವುದಿಲ್ಲ’ ಎಂಬ ಮೋದಿ ಅವರ ಹೇಳಿಕೆಯೂ ರೈತ ಸಮುದಾಯವನ್ನು ಬಿಜೆಪಿಯತ್ತ ಸೆಳೆಯುವ ತಂತ್ರವಷ್ಟೇ ಆಗಿದೆ.

ಅಮೆರಿಕದೊಂದಿಗಿನ ಭಾರತದ ವಾಣಿಜ್ಯ ಸಂಬಂಧಗಳನ್ನು ಸಮತೋಲನಗೊಳಿಸಲು ಭಾರತಕ್ಕೆ ರಾಜತಾಂತ್ರಿಕ ಮತ್ತು ಆರ್ಥಿಕ ಕಾರ್ಯತಂತ್ರಗಳ ಅಗತ್ಯವಿದೆ. ಆದರೆ, ಮೋದಿ ಅವರ ಹೇಳಿಕೆಯು ಈ ದಿಶೆಯಲ್ಲಿ ಯಾವುದೇ ಸ್ಪಷ್ಟ ಕಾರ್ಯಸೂಚಿಯನ್ನು ಸೂಚಿಸುವುದಿಲ್ಲ. ಮಾತ್ರವಲ್ಲ, ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನೂ ಒದಗಿಸುವುದಿಲ್ಲ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ನನ್ನ ಗಂಡನನ್ನು ಭೇಟಿಯಾಗುವ ಅರ್ಹತೆ ನನಗಿಲ್ಲವೇ?’: ರಾಷ್ಟ್ರಪತಿ, ಮೋದಿಗೆ ಪತ್ರ ಬರೆದ ವಾಂಗ್ಚುಕ್ ಪತ್ನಿ

ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು...

ಯುವಜನರಿಗಾಗಿ ಪ್ರಾಣವನ್ನೇ ತ್ಯಾಗ ಮಾಡುತ್ತೇನೆ: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ

ಸುಡುವ ಬಿಸಿಲಿನಲ್ಲಿ ಕುರಿತು ಯುವಜನರು ತಮ್ಮ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದಾರೆ....

ದೆಹಲಿ ಶಾಲೆಗಳಲ್ಲಿ RSS ಬೋಧನೆ: ಮಕ್ಕಳ ಎಳೆ ಮನಸ್ಸಲ್ಲಿ ಕೋಮುದ್ವೇಷ ಬಿತ್ತುವ ಹುನ್ನಾರ!

ಕೋಮುವಾದಿ, ಕೋಮುದ್ವೇಷಿ, ಸಮಾಜಘಾತುಕ ಸಂಘಟನೆಯ ಬಗ್ಗೆ ಶಾಲೆಗಳಲ್ಲಿ ಬೋಧಿಸುವುದು ಎಳೆ ಮನಸ್ಸುಗಳಲ್ಲಿ...

ಬಾಪೂ ಎಂಬ ಪವಾಡದ ಅನ್ವೇಷಣೆ…

ಇಂದು ರಾಷ್ಟ್ರಪಿತ ಬಾಪೂ ಜನ್ಮದಿನ. ಆ ನೆನಪಿನಲ್ಲಿ ಸದ್ಯದಲ್ಲೇ ಹೊರಬರಲಿರುವ ಎನ್.ಎಸ್.‌...

Download Eedina App Android / iOS

X