ಪಿಒಪಿ ವಿಗ್ರಹಗಳು ನಮ್ಮ ಕೆರೆ, ನದಿ ಮತ್ತು ಇತರೆ ಜಲಮೂಲಗಳನ್ನು ಶಾಶ್ವತವಾಗಿ ಕಲುಷಿತಗೊಳಿಸುತ್ತವೆ. ಇದರಲ್ಲಿರುವ ರಾಸಾಯನಿಕ ಬಣ್ಣಗಳು ಜಲಚರಗಳಿಗೆ ಮಾರಕವಾಗಿದ್ದು, ಇವು ನೀರಿನಲ್ಲಿ ಸುಲಭವಾಗಿ ಕರಗುವುದಿಲ್ಲ. ಈ ಕಾರಣದಿಂದ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದಂತೆ ಮತ್ತು ಸರ್ಕಾರದ ನಿರ್ದೇಶನದಂತೆ, ಜಿಲ್ಲೆಯಲ್ಲಿ ಪಿಒಪಿ ವಿಗ್ರಹಗಳ ತಯಾರಿಕೆ, ಮಾರಾಟ, ಸಂಗ್ರಹಣೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯಾಪ್ರಭು ತಿಳಿಸಿದ್ದಾರೆ.
“ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ವಿಗ್ರಹಗಳ ಬಳಕೆಯನ್ನು ತಡೆಗಟ್ಟಲು ಜಿಲ್ಲಾಡಳಿತವು ಕಠಿಣ ಕ್ರಮಗಳನ್ನು ಕೈಗೊಂಡು, ಕಾರ್ಯಾಚಣೆಯನ್ನು ಕೊಳ್ಳಲಾಗುತ್ತಿದೆ. ಹಬ್ಬ ಆಚರಿಸುವುದು ನಮ್ಮ ಸಂಸ್ಕೃತಿಯ ಹೆಮ್ಮೆ. ಆದರೆ, ಅದು ಪರಿಸರ ಸ್ನೇಹಿಯಾಗಿರಬೇಕು. ಮಣ್ಣಿನ, ನೈಸರ್ಗಿಕ ಬಣ್ಣಗಳಿಂದ ಮಾಡಿದ, ಸುಲಭವಾಗಿ ನೀರಿನಲ್ಲಿ ಕರಗುವ ಗಣೇಶನ ವಿಗ್ರಹಗಳನ್ನೇ ಪೂಜಿಸಿ. ಈಗಾಗಲೇ ಅನೇಕರು ಪರಿಸರ ಸ್ನೇಹಿ ಗಣೇಶನಿಗೆ ಆದ್ಯತೆ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ವಿಷಯವಾಗಿದೆ” ಎಂದು ಹೇಳಿದ್ದಾರೆ.
“ಈ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು, ಜಿಲ್ಲಾಡಳಿತವು ಪೊಲೀಸ್ ಇಲಾಖೆ, ಸ್ಥಳೀಯ ಸಂಸ್ಥೆಗಳು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆ ವಿಶೇಷ ತಂಡಗಳನ್ನು ರಚಿಸಿದೆ. ಈ ತಂಡಗಳು ದಿಢೀರ್ ದಾಳಿ, ಅನಿರೀಕ್ಷಿತ ಭೇಟಿ ಮೂಲಕ ಜಿಲ್ಲಾದ್ಯಂತ ಕಾರ್ಯಾಚರಣೆ ನಡೆಸಿ, ಪಿಒಪಿ ವಿಗ್ರಹಗಳನ್ನು ತಡೆಗಟ್ಟಲು ಕ್ರಮವಹಿಸಿವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ : ಖಾಸಗಿ ಜೈ ಕಿಸಾನ್ ತರಕಾರಿ ಮಾರುಕಟ್ಟೆ ಬಂದ್ ಮಾಡುವಂತೆ ಆಗ್ರಹಿಸಿ ರೈತ ಸಂಘಟನೆಯಿಂದ ಮನವಿ
“ಜಿಲ್ಲೆಯಲ್ಲಿ ಪಿಒಪಿ ಗಣಪತಿ ವಿಗ್ರಹಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ, ಪರಿಸರ ಇಲಾಖೆ, ಕಂದಾಯ ಇಲಾಖೆ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದು, ಗ್ರಾಮ ಮತ್ತು ತಾಲೂಕು ಮಟ್ಟದ, ಜಿಲ್ಲಾ ಮಟ್ಟದ ಕಾರ್ಯಪಡೆಗಳು ನಿರಂತರ ತಪಾಸಣೆ, ಪರಿಶೀಲನೆ ಕೈಗೊಳ್ಳುತ್ತಿವೆ. ಸಾರ್ವಜನಿಕರು ಮಣ್ಣಿನ ಗಣಪತಿಯನ್ನು ಪೂಜಿಸುವ ಮೂಲಕ ಪರಿಸರ ಸ್ನೇಹಿ ಗಣೇಶ ಚತುರ್ಥಿಯನ್ನು ಆಚರಿಸಬೇಕು. ನೆಲ, ಜಲ, ವಾಯು ಸೇರಿದಂತೆ ನಮ್ಮ ಪರಿಸರವನ್ನು ಕಾಪಾಡಬೇಕು, ಜಿಲ್ಲಾಡಳಿತ, ಮಹಾನಗರ ಪಾಲಿಕೆಯ ಪ್ರಯತ್ನಗಳನ್ನು ಬೆಂಬಲಿಸಿ, ನೀಡುವ ನಿರ್ದೇಶನಗಳನ್ನೂ ಪಾಲಿಸಬೇಕು” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.