ಭಾರತದಿಂದ ಅಮೆರಿಕಗೆ ರಫ್ತಾಗುವ ಸರಕುಗಳ ಮೇಲೆ ಟ್ರಂಪ್ ವಿಧಿಸಿರುವ 50% ಸುಂಕ ನೀತಿಯು ಇಂದಿನಿಂದ (ಆಗಸ್ಟ್ 27) ಜಾರಿಗೆ ಬರಲಿದೆ ಎಂದು ಅಮೆರಿಕ ಘೋಷಿಸಿದೆ. ಭಾರತದ ಸರಕುಗಳಿಗೆ 50% ಆಮದು ತೆರಿಗೆಯನ್ನು ಜಾರಿಗೆ ತರಲಾಗಿದೆ ಎಂದು ಅಮೆರಿಕದ ಕಸ್ಟಮ್ಸ್ ಹಾಗೂ ಗಡಿ ರಕ್ಷಣಾ (ಸಿಬಿಪಿ) ಇಲಾಖೆಯು ನೋಟಿಸ್ ಜಾರಿಗೊಳಿಸಿದೆ.
ರಷ್ಯಾದೊಂದಿಗೆ ಇಂಧನ ಮತ್ತು ಶಸ್ತ್ರಾಸ್ತ್ರ ವ್ಯಾಪಾರ ವಹಿವಾಟು ನಡೆಸುತ್ತಿರುವ ಕಾರಣಕ್ಕಾಗಿ ಭಾರತದ ಮೇಲೆ 25% ಸುಂಕ ಮತ್ತು 25% ದಂಡ ಒಟ್ಟು 50% ತೆರಿಗೆ ವಿಧಿಸುವುದಾಗಿ ಟ್ರಂಪ್ ಆಗಸ್ಟ್ 6ರಂದು ಘೋಷಿಸಿದ್ದರು. ಅವರ ತೆರಿಗೆ ನೀತಿಯು ಇಂದಿನಿಂದ ಜಾರಿಯಾಗಲಿದೆ.
ಭಾರತವು ವಾರ್ಷಿಕ 87.3 ಶತಕೋಟಿ ಡಾಲರ್ ಮೊತ್ತದ ಸರಕುಗಳನ್ನು ಅಮೆರಿಕಗೆ ರಫ್ತು ಮಾಡುತ್ತಿದೆ. ಈ ಮೊತ್ತದಲ್ಲಿ ಬರೋಬ್ಬರಿ 50% ಮೊತ್ತವು ಈಗ ಸುಂಕ ಪಾವತಿಗೆ ವ್ಯಯವಾಗಲಿದೆ. ಪರಿಣಾಮವಾಗಿ, ಭಾರತದ ಪ್ರಮುಖ ರಫ್ತು ಸರಕುಗಳಾದ ಜವಳಿ, ಉಡುಪುಗಳು, ರತ್ನಗಳು, ಆಭರಣ, ಸಮುದ್ರ ಆಹಾರ ಹಾಗೂ ಚರ್ಮ ಸೇರಿದಂತೆ ಹಲವಾರು ಸರಕುಗಳು ಬಾಧಿತವಾಗಲಿವೆ.
ಈ ಹೊರೆಯನ್ನು ನೀಗಿಸಿಕೊಳ್ಳಲು ಭಾರತವು ಅಮೆರಿಕದಲ್ಲಿ ತನ್ನ ಸರಕುಗಳ ಮಾರಾಟ ಮೌಲ್ಯವನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. ಆದರೆ, ಇದು ಅಮೆರಿಕದಲ್ಲಿ ಭಾರತದ ಪ್ರತಿಸ್ಪರ್ಧಿಗಳಾದ ವಿಯೆಟ್ನಾಂ, ಬಾಂಗ್ಲಾದೇಶ ಹಾಗೂ ಚೀನಾದಂತಹ ರಾಷ್ಟ್ರಗಳಿಗೆ ಲಾಭ ಮಾಡಿಕೊಡಲಿದೆ. ಈ ರಾಷ್ಟ್ರಗಳ ಸರಕುಗಳ ಮೇಲೆ ಅಮೆರಿಕವು ಕಡಿಮೆ ತೆರಿಗೆ ವಿಧಿಸುತ್ತಿದ್ದು, ಆ ಸರಕುಳ ಮಾರಾಟ ಮೌಲ್ಯವು ಸ್ಥಿರವಾಗಿರಲಿದೆ.
ಈ ಲೇಖನ ಓದಿದ್ದೀರಾ?: OBC ಮೀಸಲಾತಿ ಮೈಲಿಗಲ್ಲು- ʼಮಂಡಲ್ ಆಯೋಗʼದ ವರದಿಗೆ 35 ವರ್ಷಗಳು
‘‘ಅಮೆರಿಕದ ಗ್ರಾಹಕರು ಈಗಾಗಲೇ ಭಾರತದ ಸರಕುಗಳ ಆಮದಿಗೆ ಹೊಸ ಆರ್ಡರ್ ಸಲ್ಲಿಸುವುದನ್ನು ಸ್ಥಗಿತಗೊಳಿಸಿದ್ದಾರೆ. ಅಮೆರಿಕದ ಹೆಚ್ಚುವರಿ ಸುಂಕದಿಂದಾಗಿ 20-30%ರಷ್ಟು ಸರಕುಗಳ ರಫ್ತು ಪ್ರಮಾಣ ಕಡಿಮೆಯಾಗುವ ಆತಂಕವಿದೆ’’ ಎಂದು ಎಂಜಿನಿಯರಿಂಗ್ ರಫ್ತುಗಳ ಉತ್ತೇಜನ ಮಂಡಳಿಯ ಅಧ್ಯಕ್ಷ ಪಂಕಜ್ ಚಡ್ಡಾ ಹೇಳಿದ್ದಾರೆ.