ಹಿಂದೂಗಳು ಮತ್ತು ಜೈನರು ಆಚರಿಸುವ ಕೆಲವು ಹಬ್ಬಗಳ ದಿನಗಳಲ್ಲಿ ಮಾಂಸ ಮಾರಾಟವನ್ನು ಮಧ್ಯಪ್ರದೇಶದ ಇಂದೋರ್‌ನ ಆಡಳಿತವು ಸಂಪೂರ್ಣವಾಗಿ ನಿಷೇಧಿಸಿದೆ. ಈ ಬಗ್ಗೆ ಮಂಗಳವಾರ ಇಂದೋರ್ ಮೇಯರ್ ಪುಷ್ಯಮಿತ್ರ ಭಾರ್ಗವ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಗಣೇಶ ಚತುರ್ಥಿ (ಆಗಸ್ಟ್ 27), ಡೋಲ್ ಗ್ಯಾರಸ್(ಸೆಪ್ಟೆಂಬರ್ 3), ಹಿಂದೂಗಳು ಆಚರಿಸುವ ಅನಂತ ಚತುರ್ದಶಿ (ಸೆಪ್ಟೆಂಬರ್ 6) ಮತ್ತು ಜೈನರ ಪರ್ಯೂಷಣ್ ಹಬ್ಬದಂದು ಇಂದೋರ್‌ನಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಮೇಯರ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಒಂದೇ ದಿನ 11 ಲಕ್ಷ ಸಸಿ ನೆಟ್ಟ ಭಾರತದ ಸ್ವಚ್ಛ ನಗರ ಇಂದೋರ್; ವಿಶ್ವ ದಾಖಲೆ
“ಈ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಾನು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಿಷೇಧವನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದೂ ಹೇಳಿದ್ದಾರೆ.
ಹಿಂದೂ ಮತ್ತು ಜೈನ ಸಮುದಾಯಗಳ ಅನೇಕ ಜನರು ತಮ್ಮ ಧಾರ್ಮಿಕ ಭಾವನೆಗಳನ್ನು ಕಾಪಾಡಲು ಹಬ್ಬದ ಅವಧಿಯಲ್ಲಿ ಮಾಂಸ ಮಾರಾಟವನ್ನು ನಿಷೇಧಿಸುವಂತೆ ಕೋರಿದ್ದಾರೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಎಲ್ಲಾ ಜನರ ಮೇಲೆ ಆಹಾರ ಹೇರಿಕೆ ಮಾಡುವುದರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಎರಡು ಧರ್ಮಗಳ ಆಚರಣೆಯನ್ನು ಎಲ್ಲಾ ಧರ್ಮಗಳ ಮೇಲೆ ಸರ್ಕಾರ ಹೇರುವುದು ಎಷ್ಟು ಸರಿ ಎಂದು ಪ್ರಶ್ನಿಸಲಾಗುತ್ತಿದೆ.
