ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಜಾರಿಗೆ ತಂದಿದ್ದ ʼಉಳುವವನೇ ಭೂಮಿಯ ಒಡೆಯʼ ಎಂಬ ಕ್ರಾಂತಿಕಾರಿ ಭೂ ಸುಧಾರಣಾ ಕಾಯ್ದೆ ದೇಶದಲ್ಲಿಯೇ ಮಾದರಿಯಾಗಿತ್ತು ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಮಂಡಳಿಯ ಅಧ್ಯಕ್ಷ ಹಾಗೂ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಅಶೋಕ ದಳವಾಯಿ ಅಭಿಪ್ರಾಯಪಟ್ಟರು.
ವಿಜಯಪುರ ನಗರದ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ ಮತ್ತು ಸಮಾನ ಅವಕಾಶ ಘಟಕದ ಆಶ್ರಯದಲ್ಲಿ ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಕರ್ನಾಟಕದಲ್ಲಿ ಜಮೀನ್ದಾರಿ ಪದ್ಧತಿ, ಜೀತ ಪದ್ಧತಿ ಮತ್ತು ತಲೆಮೇಲೆ ಮಲ ಹೊರುವ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಿದ ಶ್ರೇಯಸ್ಸು ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಅರಸು ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಬಹುವಾಗಿ ಶ್ರಮಿಸಿದ್ದರು. ಅರಸು ಒಬ್ಬ ಕರ್ಮಯೋಗಿ, ರಾಜಕೀಯ ಮುತ್ಸದ್ದಿಯಾಗಿದ್ದರು” ಎಂದು ಬಣ್ಣಿಸಿದರು.
“ರಾಜ್ಯದಲ್ಲಿ 70-80ರ ದಶಕದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಪರಿವರ್ತನೆಗೆ ಗಟ್ಟಿಯಾದ ಅಡಿಗಲ್ಲು ಹಾಕಿದ್ದ ದೇವರಾಜ ಅರಸು ಅವರು ಡಾ.ಬಿ ಆರ್ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಆಶಯಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಿದ್ದರು. ಇದರ ಪರಿಣಾಮವಾಗಿ ಜನರ ಬಡತನ ದೂರ ಮಾಡುವ ಇಚ್ಛಾಶಕ್ತಿ ಅವರಲ್ಲಿತ್ತು” ಎಂದು ಹೇಳಿದರು.

“ಇಂದಿನ ಪೀಳಿಗೆ ದೇವರಾಜ ಅರಸು ಅವರ ಜೀವನ ಸಾಧನೆ ತಿಳಿದುಕೊಳ್ಳಬೇಕು. ಅವರ ಜೀವನಾದರ್ಶಗಳನ್ನು ನಾವೆಲ್ಲರೂ ನಮ್ಮ ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕು. ಆಗ ಮಾತ್ರ ನಾವು ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ” ಎಂದು ಅಶೋಕ ದಳವಾಯಿ ಪ್ರತಿಪಾದಿಸಿದರು.
“ಡಿ.ದೇವರಾಜ ಅರಸು ಅವರು ಸದಾ ಸಮಾನತೆಯ ಹಾದಿಯನ್ನು ತೋರಿದ ಮಹಾನ್ ನಾಯಕ. ಸಮಾಜದಲ್ಲಿ ಮೇಲು-ಕೀಳು ಎಂಬ ಆಸಮಾನತೆಗಳನ್ನು ಹೋಗಲಾಡಿಸಲು ಅವರು ದೃಢ ಪ್ರಯತ್ನ ನಡೆಸಿದರು. ತಮ್ಮ ದೃಢ ಸಂಕಲ್ಪದಿಂದ ಶ್ರಮಜೀವಿಗಳ ಹಕ್ಕನ್ನು ಸಂರಕ್ಷಿಸಿದರು. ಅರಸು ಅವರ ಜೀವನವೇ ಒಂದು ಪಾಠ. ಸಾಮಾನ್ಯ ಜನರ ಕಲ್ಯಾಣಕ್ಕಾಗಿ ಅವರು ಬದ್ಧರಾಗಿ ದುಡಿಯುವುದರ ಮೂಲಕವೇ ನಿಜವಾದ ನಾಯಕತ್ವ ಎಂದರೇನು? ಎಂಬುದನ್ನು ತೋರಿಸಿಕೊಟ್ಟವರು ಅವರು” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿ, “ಡಿ.ದೇವರಾಜ್ ಅರಸು ಅವರು ಕರ್ನಾಟಕದ ರಾಜಕೀಯದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಜನಪರ ಆಡಳಿತದ ನಿಜವಾದ ಪ್ರತಿರೂಪವಾಗಿದ್ದರು. ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಅವರು ಕೈಗೊಂಡ ಕಲ್ಯಾಣಕಾರಿ ಕ್ರಮಗಳು ಇಂದಿಗೂ ಮಾದರಿಯಾಗಿದೆ. ಪಾರದರ್ಶಕತೆ, ಸರಳತೆ ಹಾಗೂ ನೈತಿಕತೆಗೆ ಹೆಸರಾಗಿದ್ದ ಅವರ ಆಡಳಿತ ಶೈಲಿ ಇಂದಿನ ರಾಜಕೀಯ ನಾಯಕತ್ವಕ್ಕೆ ದಿಕ್ಕು ತೋರಿಸುವಂತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಅವಳಿನಗರ ವ್ಯಾಪ್ತಿಯಲ್ಲಿ ಆ.26ರಿಂದ ಸೆ.07ರವರೆಗೆ ಮದ್ಯ ಮಾರಾಟ, ಮದ್ಯಪಾನ ನಿಷೇಧ
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಘಟಕದ ಸಂಯೋಜಕ ಪ್ರೊ.ಶ್ರೀನಿವಾಸ, ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನರು. ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಸ್ನಾತಕ ಅಧ್ಯಯನ ವಿಭಾಗದ ವಿಶೇಷ ಅಧಿಕಾರಿ ಪ್ರೊ.ಸಕ್ಷಾಲ ಹೂವಣ್ಣ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಶೋಧನಾ ವಿದ್ಯಾರ್ಥಿನಿ ಶ್ವೇತಾ ಅತಿಥಿಗಳನ್ನು ಪರಿಚಯಿಸಿದರು. ಡಾ.ತಹಮೀನಾ ನಿಗಾರ ಸುಲ್ತಾನಾ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕಿ ಪ್ರೊ.ಜ್ಯೋತಿ ಉಪಾಧ್ಯೆ ವಂದಿಸಿದರು.