ಗೊಬ್ಬರದ ಅಂಗಡಿ ಮಾಲೀಕರು ರೈತರಿಗೆ ಯೂರಿಯಾ ಗೊಬ್ಬರವನ್ನು ಸಕಾಲದಲ್ಲಿ ನೀಡಬೇಕು. ನೀಡದೆ ಸಂಗ್ರಹಿಸಿದ್ದರೆ ಅಂತಹ ಅಂಗಡಿಯ ಲೈಸೆನ್ಸ್ ರದ್ದು ಮಾಡಲಾಗುತ್ತದೆ ಎಂದು ಮತ್ತು ಈ ಭಾಗದ ರೈತರ ಬೆಳೆಗಳಿಗೆ ಬೆಳೆಹಾನಿ ಪರಿಹಾರ ಶೀಘ್ರದಲ್ಲೇ ವರದಿ ಪಡೆದು ಪರಿಹರಿಸುತ್ತೇವೆ ಎಂದು ವಿಜಯಪುರ ಎಸಿ ಗುರುನಾಥ ದಡ್ಡೆ ಹೇಳಿದರು.
ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ತಹಶೀಲ್ದಾರ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ಕರವೇ ಕಾರ್ಯಕರ್ತರು ರೈತರಿಗೆ ಯೂರಿಯಾ ಗೊಬ್ಬರ ಮತ್ತು ಬೆಳೆ ಪರಿಹಾರ ಬೇಡಿಕೆಗಳ ಈಡೇರಿಕೆಗೆ ಆಯೋಜಿಸಿದ್ದ ಹೋರಾಟದಲ್ಲಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
“ಬಳೂತಿ ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ಮನೆ ನಿರ್ಮಾಣವಾದರೂ ಹಕ್ಕುಪತ್ರ ವಿತರಣೆ ಹಾಗೂ ಹಳ್ಳದ ಗೆಣ್ಣೂರ ಗ್ರಾಮದಲ್ಲಿನ ಸಾರ್ವಜನಿಕ ಸ್ಥಳಗಳ ಸಮಸ್ಯೆ ಎಲ್ಲವನ್ನೂ ಮಾಹಿತಿ ಪಡೆದು ತಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ಹೋರಾಟಗಾರರಿಗೆ ಆಶ್ವಾಸನೆ ನೀಡಿದರು.
ಹೋರಾಟ ಸ್ಥಳಕ್ಕೆ ಆಗಮಿಸಿದ ಕೊಲ್ದಾರ ದಿಗಂಬರೇಶ್ವರ ಮಠದ ಕಲ್ಲಿನಾಥರು ಮಾತನಾಡಿ, “ರೈತರಿಗೆ ಸರಿಯಾದ ಸಮಯಕ್ಕೆ ಗೊಬ್ಬರ ಹಾಗೂ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕರೆ ಸರ್ಕಾರಕ್ಕೇ ಸಾಲ ಕೊಡಬಲ್ಲ ರೈತ. ಆದರೆ ಇಂದು ರೈತ ತನ್ನ ಗೊಬ್ಬರ ಪಡೆಯಲು ಹೋರಾಟ ಮಾಡಿ ಪಡೆಯುವ ದುಃಸ್ಥಿತಿ ಬಂದಿದೆ” ಎಂದರು.
ಪಟ್ಟಣದ ಮುಖಂಡೆ ಟಿ ಟಿ ಹಗೇದಾಳ ಮಾತನಾಡಿ, “ರಾಜ್ಯದಲ್ಲಿ ಅತಿಹೆಚ್ಚು ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡಿದ್ದು ನಮ್ಮ ತಾಲೂಕು. ಇನ್ನೂ ಮುಂದೆ ಯಾವುದೇ ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬಾರದು” ಎಂದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ಮಂದಿನ ಎಲ್ಲ ಚುನಾವಣೆಗಳಲ್ಲಿ ಎಐಎಂಐಎಂ ಪಕ್ಷದ ಅಭ್ಯರ್ಥಿಗಳ ಸ್ಪರ್ಧೆ: ಲತೀಫ್ ಖಾನ್ ಅಮೀರ್ ಪಠಾಣ್
ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಂಗಮೇಶ ಸಗರ. ಕರವೇ ತಾಲೂಕಾಧ್ಯಕ್ಷ ಮಹಾಂತೇಶ ಗಿಡ್ಡಪ್ಪಗೋಳ ಮತ್ತು ರವಿ ಗೊಳಸಂಗಿ, ಗ್ರಾಪಂ ಸದಸ್ಯ ಪ್ರದೀಪಗೌಡ ಪಾಟೀಲ ಹಾಗೂ ಹೋರಾಟ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ ಎಸ್.ಎಂ. ಮ್ಯಾಗೇರಿ. ಪಿಎಸ್ಐ ಎಂ.ಬಿ. ಬಿರಾದಾರ, ಉಪ ಕೃಷಿ ನಿರ್ದೇಶಕ ಶರಣಗೌಡ ಮಾತನಾಡಿದರು.
ಈ ಸಂದರ್ಭದಲ್ಲಿ ಶಶಿಕಾಂತ ಬಿರಾದಾರ, ಮುದಕಪ್ಪ ಚಲವಾದಿ, ಶ್ರೀಶೈಲ ಬೆಣ್ಣೂರ, ಸುರೇಶ ಗಿಡ್ಡಪ್ಪಗೋಳ, ಗೋಪಾಲ ಕಾಖಂಡಕಿ, ಕಲ್ಲಪ್ಪ ಗಿಡ್ಡಪ್ಪಗೋಳಿ, ಬಸವರಾಜ ನ್ಯಾಮಗೊಂಡ, ಗುಳಪ್ಪ ಗುಗ್ಗರಿ, ಸತ್ಯಪ್ಪ ಕುಳೊಳ್ಳಿ ನೂರಾರು ರೈತರು ಹಾಗೂ ಕರವೇ ಕಾರ್ಯಕರ್ತರು ಭಾಗವಹಿಸಿದ್ದರು.