ನಾವ್-ನೀವ್ ಸಣ್ಣೋರ್ ಇದ್ದಾಗ ಸಾಳ್ಯಾಗ್ ಏನಾರಾ ಕಾಲಾಗಿರಿ ಮಾಡಿದಾಗ, ಇಲ್ಲಾಂದ್ರು, ಮಾಸ್ತರ್ ಹೇಳಿಂದ್ ಧಂಧ್ಯಾ ಮಾಡಲ್ ಹೋದ್ರೆ ʼಏಯ್…ಸಾಳಿಗಿ ಯದುಕ್ ಹೊಂಟಿದೋ…ಎಲ್ಲರಾ ದನ ಕಾಯ್ಲಾಕ್ ಹೋಗ್, ಏಸ್ ಫೇಕಿ ಹೇಳ್ದೂರ್ ಬಿ ಒಂದ್ ಮಾತ್ ಕೇಳಲಿʼ ಅಂತ ಮಾಸ್ತರ್ ಬಾಯ್ದಿಂದ್ ಬೈಯ್ಸಿಕೊಂಡಿಂದ್ ನೆಪ್ಪು ಇರ್ಬೇಕ್ ಅಲಾ…ಹ್ಹಾ…ಇರ್ತುದೇ ಬಿಡ್ರೀ….
ನಮ್ ಸರ್ ನಮ್ಗ್ ಏನಾರಾ ಬೈದ್ರೂರ್ ಬಿ ನಾವೇನ್ ತಿರ್ಗಿ ವಾಪಸ್ ಯಾವತ್ತೂ ಬೈದ್ದಿಲ್ಲ, ಎಡ್ಡೂ ಕೈಜೋಡ್ಸಿ, ತಲಿ ಕೆಳಗ್ ಮಾಡಿ ಮೂಕ್ ಬಸವನ್ಹಾಂಗ್ ನಿಂದುರ್ತಿದೇವು. ಖರೇ, ಈಗಿಂದ್ ಜಮಾನಾ ಭಾಳ್ ಅಲಾಗ್ ಆಗ್ಯಾದ್ ನೋಡ್ರಿ…ʼಸಾಳ್ಯಾಗ್ ಯಾವುದ್ರಾ ಪಾರುನ್ ತಲ್ಯಾಗ್ ಒಂದ್ ಹೊಡ್ದಾ ಅಂದೂರ್ ಮುಗೀತು ಆ ಮಾಸ್ತರುನ್ ಕತೀʼ..ಹಿಂಗ್ ಮಾಡಿಂದ್ ಸಲೇಕ್ ಏಶೋ ಮಾಸ್ಟಾರ್ಗೊಳು ತೋಲ್ ಫಜೀತಿಗಿ ಬಿದ್ದಾರ್….ಆಗ ನಮ್ಗೆಲ್ಲಾ ʼದನ ಕಾಯ್ಲಾಕ್ ಹೋಗ್ʼ ಅಂತ ಮಾಸ್ತರ್ ಅಂತೀದುರ್ ಅಲಾ, ಅದೊಂದ್ ತಮಾಷ್ಯಾ ಹಾಂಗ್ ಅಷ್ಟೇ ಇತ್ತು. ಈಗ ಇದು ಇರ್ಲಿ, ಮುಂದ್ ಓದ್ರೀ.
ಈಗ ಯಾವುದ್ರಾ ಊರಾಗ್ ದನ ಕಾಯೋ ಒಬ್ಬ ಮನ್ಸ್ಯಾಗ್ ತಿಂಗ್ಳಿಗ್ ಪಗಾರ್ ಏಟ್ ಅದಾಂತ್ ಒಂದ್ಸಲಾ ಕೇಳ್ದೂರ್, ನೀವ್ ಪರೇಶನ್ ಆಗೋದ್ ಪಕ್ಕಾ!

ಹ್ಹಾ..! ಪೈಲಾದಿಂದೇ ದನಕರು, ಒಕ್ಕಲುತನ ಭಾಳ್ ಇರೋದೇ ಹಳ್ಳಿದಾಗ್, ಅಂಥದ್ರಾಗ್ ಈಗ ದನಕರು ಬಿಡ್ರೀ, ಬಿತ್ಲಾಕ್ ಎತ್ತುಗೊಳ್ ಸಿಗಲಾರದ್ಹಾಂತ್ ಗತಿ ಬಂದುದ್, ಹತ್ತಿಪ್ಪತ್ತು ವರ್ಷ ಹಿಂದ್ ಸಣ್ಣ ಊರಾಗ್ ಬಿ ಕಮ್ಮಿ ಅಂದ್ರೂ ತೀಸ್-ಚಾಳೀಸ್ ಒಕ್ಕಲುತನ ಇದ್ದುವ್, ದನಕರು ಎಲ್ಲಾ ಅಂದುರ್ ಊರಿಗ್ ಪಾನ್ಸೆ ಜಾನುವಾರ್ ಪಕ್ಕಾ ಇರ್ತಿದುವ್. ಈಗ ಅಬ್ಬಬ್ಬಾ… ಅಂದೂರ್ ಊರಿಗ್ ನಾಕೈದ್ ಒಕ್ಕುಲುತನ ಸಿಗ್ತಾವ್ ಅಷ್ಟೇ. ಮತ್ ಹಿಂದ್ಕಿನ್ಹಾಂಗ್ ದನ ಕಾಯೋರು ಯಾರೂ ಸಿಗ್ಲಾತಿಲ್ಲ, ಹೊಲ್ದಾಗ್ ಬಿತ್ಲಾಕ್, ನೇಗಿಲ ಹೊಡಿಲಾಕ್ರಾ ಯಾರೂ ಮನ್ಸ್ ಮಾಡ್ಲಾತಿಲ್ಲಾ.
ಈಗ ಯಾವುದ್ರಾ ಊರಾಗ್ ದನ ಕಾಯೋರು ಅವಾ ಅಂದೂರ್ ಆ ಊರಾಗ್ ಮುಂಜಾನತ್ ಝಲ್ದಿ ಎಮ್ಮಿ, ಆಕಳಿನ ಹಾಲು ಸಿಗ್ತಾವ್ ಅಂತ ತಿಳ್ಕೊಬೇಕ್. ಅದ್ಕೆ ಹಳ್ಳಿದಾಗ ದನ ಕಾಯೋರು ಒಬ್ಬ ಖಾನ್ಗಿ ಸಾಳಿ ಮಾಸ್ತಾರ್‌ಕ್ಕಿಂತಾ ಹೆಚ್ಚಿಗೇ ತಿಂಗಳಿಗಿ ಪಗಾರ್ ತಕೋಲತಾನ್. ಇದು ಏಟ್ಬಿ ಸುಳ್ಳಲ್ಲಾ…ಬೇಕಾದುರ್ ಅವ್ರಿಗೇ ಒಂದ್ಸಲಾ ಕೇಳಿ ನೋಡ್ರೀ..
ಆಗ ʼದನ ಕಾಯೋರುʼ ಮನ್ಸ್ಯಾ ಅಂದೂರ್ ಅನ್ಫಡ್ ಅಂತ್ ತಿಳಿತಿದ್ರೂ, ಅಂದುರ್ ಅವ್ನಿಗಿ ಲೆಕ್ಕಾಪತ್ತುರ್ ಏನ್ಬೀ ಬರ್ಲದು, ಬ್ಯಾರೇ ಧಂಧ್ಯಾನೂ ಮಾಡ್ಲಾಕ್ ಸುದ್ರಾಸಲಾ ಅಂತ ಅವ್ನಿಗಿ ʼದನ ಕಾಯ್ಲಾಕ್ ನೌಕ್ರೀʼ ಇಡ್ತಿದ್ರು. ಈಗ ನೌಕ್ರೀ ಇಡೋದೆಲ್ಲಾ ಹೋಗ್ಯಾದ್, ನೌಕ್ರಿ ಇಟ್ಕೊಂಬೊರು ಸಿಗೋದ್ ಭಾಳ್ ಕಮ್ಮಿ. ಈಗ ದನ ಕಾಯೋ ಮನ್ಸ್ಯಾನೇ ಖುದ್ದು ನೌಕರದಾರ್ ಆಗ್ಯಾನ್. ಈಗ ಊರಿಗಿ ಒಬ್ಬ, ಇಬ್ಬರ್ ದನ ಕಾಯೋರು ಪಾರ್ಗೊಳ್ ಸಿಗ್ತಾರ್ ಅಟೇ, ಈಗ್ಬಿ ಅವ್ರಿಗಿ ಬ್ಯಾರೇ ಧಂಧ್ಯಾ ಮಾಡ್ಲಾಕ್ ಆಗ್ಲದ್ ಸಲೇಕೇ, ಅವ್ರು ದನ ಕಾಯೋ ಕೆಲ್ಸಾ ಮಾಡ್ಲಾತಾರ್.

ಒಬ್ಬಾ ಮನ್ಸ್ಯಾ ಏನಿಲ್ಲಾಂದುರ್ ಪನ್ನಾಸ್ ಮ್ಯಾಲೇ ದನ ಕಾಯ್ತಾನ್, ಅದ್ರಾಗ್ ಎಮ್ಮಿ, ಕ್ವಾಣಾ, ಕಂಟಲ್ಯಾ, ಆಕುಳ್, ಕರು ಎಲ್ಲಾ ಇರ್ತಾವ್. ಮಳೀ, ಛಳಿ, ಬಿಸುಲ್ ಅಂಬಲ್ದೇ ಅವ್ರು ಭಾಳ್ ನಿಯತ್ತಿನಿಂದ್ ಧಂಧ್ಯಾ ಮಾಡ್ತಾರ್. ಅದ್ಕೇ ಊರಾಗ್ ಮಂದಿನೂ ಅವ್ರು ಕೇಳಿನೋಟ್ ರೊಕ್ಕಾ ಕೊಟ್ಟಿ ದನ ಮೈಯ್ಸಲಾಕ್ ಹಾಕ್ತಾರ್. ಒಬ್ಬ ದನಾ ಕಾಯೋ ಮನ್ಸ್ಯಾಗ್ ತಿಂಗ್ಳಿಗಿ ಏನಿಲ್ಲಾಂದ್ರೆ ಪಂಚೀಸ್- ತೀಸ್ ಹಜಾರ್ ಪಗಾರ್ ಬಿಳ್ಳಾತುದ್.
ʼಎಂಟತ್ತು ವರ್ಷ್ ಹಿಂದ್ ನಮ್ಮೂರಾಗ್ ಏನರಾ ಚಾರ್ಸೆ, ಪಾನ್ಸೆ ಗವಾರಿ ದನಾ ಇದ್ದುವ್. ದನ್ ಇಲ್ದ್ ಮನೀ ಇದ್ದಿಲ್. ಒಬ್ಬೋರುರ್ ಬಲ್ಲಿ ದಸ್, ಬೀಸ್ ದನ ಇರ್ತಿದುವ್, ಈಗ ಊರ್ ಥುಂಬಾನೇ ಹೆಚ್ಚು ಕಮ್ಮಿ ತೀನ್ಸೆ, ಅದ್ರಾಗ್ ಅರ್ಧಾ ನಂಬಲ್ಲಿ ಕಾಯ್ಲಾಕ್ ಹಾಕ್ತಾರ್, ಉಳಿದಿಂದ್ ದನ ಕಟ್ಟಿನೋರೇ ಸ್ವತಾಃ ಕಾಯ್ಕೋತಾರ್. ಒಬ್ಬರು ಬಲ್ಲಿ ಪನ್ನಾಸ್, ಸಾಟೀ ದನ ಅವಾ, ಒಂದ್ ದನ ಕಾಯ್ಲಾಕ್ ತಿಂಗ್ಳಿಗಿ ಪಾನ್ಸೆ ಅದಾ, ಕರು ಇದ್ದೂರ್ ಅದರ್ ಅರ್ದಾ, ಅಂದುರ್ ಅಡ್ಸೇ ರುಪಾಯಿ ತಕೋತೆವು. ಹತ್ತು ತಿಂಗುಳ್ ಅಟೇ ಕಾಯ್ತೇವ್, ಬ್ಯಾಸಕಿದಾಗ್ ಕಾಯಲ್ಲಾ. ಹೊಲ್ದಾಗ್ ಬೆಳಿ ಇರಲ್ಲಾಂತ್ ಭಾಳ್ ದನಗೊಳ್ ಬ್ಯಾಸಕ್ಯಾಗ್ ಸೈರಾ ಬಿಡ್ತಾರ್, ಅವು ಬೇಗನಾ ಮೈಯ್ದಿ ಸಂಜಿಗಿ ತಾನೇ ವಾಪಿಸ್ ಮನೀಗಿ ಬರ್ತಾವ್ʼ ಅಂತ ದನ ಕಾಯೋ ಶಿವಪ್ಪಾ ಹೇಳ್ತಾರ್.
ಈ ದನ ಕಾಯಾದ್ರಾಗ್ ಏನ್ರಾ ಪಡ್ತಲ್ ಅದನಾ ಅಂತ ಕೇಳಿದ್ರೆ, ʼಏನ್ ಮಾಡ್ಬೇಕ್, ಎಂಟ್ಹತ್ತು ವರ್ಷ ಹಿಂದ್ ಗಾಡಿ ಮ್ಯಾಲ್ ಹೊಂಟುರ್ ಟೆಕ್ಕರ್ ಆಗಿ, ಒಂದು ಕೈ ಮುರ್ದಿತ್ತು. ಆಗಿನಿಂದ ಬ್ಯಾರೇ ಯಾವ್ದೂಬೀ ಧಂಧ್ಯಾ ಮಾಡ್ಲಾಕ್ ಹೊಂಟಿಲ್ಲ. ಪೈಲೇ ಎಲ್ಲಾ ಧಂಧ್ಯಾ ಮಾಡಿದಾ, ಹೈದ್ರಾಬಾದ್ ಹೋಗಿ ಥೋಡೆ ದಿನಾ ಮಾಡಿದ ಖರೇ, ಈಗ ಎಲ್ಬಿ ಹೋಗಬ್ಯಾಡ್ಡು ಅಂತ ನಾಕೈದ್ ವರ್ಷದಿಂದ ದನ ಕಾಯದೇ ಮಾಡ್ಲಾತಿದಾ. ದನ ಕಾಯ್ಲಾಕ್ ಹಾಕಿನೋರ್ ಎಲ್ರೂ ರೊಕ್ಕಾ ಕೊಡ್ತಾರ್, ಖರೇ ಮನ್ಸಿಗ್ ಬಂದ್ಹಾಂಗ್ ಕುಡ್ತಾರ್, ಹಿಂಗೇ ಮನೀ ಖರ್ಚು ನಡೀತುದ್ ಅಂತ ಹೇಳ್ತಾರ್ ಶಿವು.

ನಾವ್ ಮುಂಜಾನತ್ ದಸ್ಸೂಕ್ ದನ ಹೊಡ್ಕೊಂಡಿ ಹೊಯ್ತೆವ್ ಪುನಾಃ ವಾಪಸ್ ಸಂಜಿಗಿ ಪಾಂಚ್ ಬಜೇ ಬರ್ತೇವ್. ಎಲ್ಲೋರಿಗಿ ದನ ಬಿಡೋದು, ಹೊಡ್ಕೊಂಡು ಬರೋ ಯಾಳಿ ಖುನಾ ಅದಾ, ಅದೇ ಯಾಳಿಗಿ ಯಾರ್ ದನಾ ಅವಾ ಅವ್ರೇ ಹೊಡ್ಕೊಂಡು ಬಂದಿ ಗುಡಿ ಬಲ್ಲಿ ತಂದಿ ಬಿಡ್ತಾರ್. ಸಂಜಿಗಿ ಮತ್ ಅದೇ ಜಾಗಕ್ ಬಿಡ್ತೆವ್, ಅವ್ರೇ ಬಂದಿ ಹೊಡ್ಕೊಂಡು ಒಯ್ತಾರ್. ಎಲ್ಲಾ ದನ ಜಂಗಲ್ ಅಡಿದಾಗ ಮೈಯ್ಸತೇವ್, ದನ ಮೈಯ್ಸಲಾಕ್ ಅಂತೇ ಬ್ಯಾರೇರ್ ಬಲ್ಲಿ ರೊಕ್ಕಾದಿಂದ ನಾವೇ ನಾಕ್ ಎಕ್ಕಾರ್ ಖರ್ದಿ ಮಾಡಿದೆವು. ದನ ಕಾಯ್ಲಾಕ್ ಹಾಕಿನೋರ್ ಪೈಲಾ ಹಾಂಗ್ ಈಗ ಯಾರೂ ರೊಕ್ಕಾ ಕುಡ್ಲದ್ಹಾಂಗ್ ಇರಲ್ಲ, ಖರೇ ಅಡಾಸಿನ್ ಯಾಳಿಗಿ ಕುಡಲ್ಲಾ ಅಷ್ಟೇ ಅಂತ ದನ ಕಾಯೋ ಗುರಣ್ಣಾ ಹೇಳ್ತಾರ್.
ಇಪ್ಪತ್ತು ವರ್ಷ್ ಹಿಂದುಕ್ ದನ ಕಾಯೋರಿಗಿ ಭಾಳ್ ದನಗೊಳ್ ಇದ್ದೊರ್ ಒಂದ್ ವರ್ಷಿಂದ್ ಪಗಾರ್ ಕೊಟ್ಟಿ ನೌಕ್ರಿ ಇಟ್ಕೊತಿದ್ರು. ದನ ಕಾಯೋ ಮನ್ಸ್ಯಾನಿಗಿ ದನ ಕಾಯ್ಲಾಕ್ ಹೋಗೋ ಪೈಲೆ ಮುಂಜಾನತ್ ನ್ಯಾರಿ ಕುಡ್ತಿದ್ದುರ್. ದನ ಕಾಯೋ ಪಾರ್ ನೌಕ್ರಿ ಇಟ್ಕೊಂಡೊರ್ ಮನೀಗಿ ದಿನಾ ಮುಂಜಾನತ್ ರೊಟ್ಟಿ ಪಾವ್ಡು ತಕೊಂಡಿ ಹೊಗ್ತಿದ್ರು. ಅವ್ರು ರಾತ್ರಿ ಇವ್ರ ಸಲೇಕಾಂತ್ ಮಾಡಿಂದ್ ರೊಟ್ಟಿ, ಬ್ಯಾಳಿ, ಖಾರಾ ಕುಡತಿದ್ದುರ್. ಅದೇ ಕಟ್ಕೊಂಡಿ ದನ ಮೈಯ್ಸಲಾಕ್ ಹೋಗಿ ಮುಂಜಾನ್ ಉಣತಿದ್ರು, ಮಧ್ಯಾನ್ಯಾಳಿ ಅವ್ರು ಮನ್ಯಾಗಿಂದ್ ಕಟ್ಕೊಂಡಿ ಒಯ್ದಿಂದ್ ರೊಟ್ಟಿ ಉಂಡಿ ಸಂಜಿಗಿ ಮನೀಗಿ ಬರ್ತಿದುರ್.
ಆಗ ಬರೀ ನ್ಯಾರಿ ಅಟೇ ಅಲಾ, ಏನರಾ ಹಬ್ಬ, ಹುಣ್ಣಿಗಿ ನೌಕ್ರಿ ಮನಸ್ಯಾ ಹನಾ ಅಂತ ಉಳ್ಳಾಕ್ ಕರೀತಿದ್ರು, ಒಂದೆಡ್ಡು ಜೋಡ್ ಹೊಸ ಅರ್ಬಿ, ಜೋಡಾ ಇಸ್ಕುಡುತಿದ್ದುರ್. ಈಗ ಕಾಲ ಭಾಳ್ ಬದಲಾಗ್ಯಾದ್, ದನ ಕಾಯೋರಿಗಿ ನ್ಯಾರಿ, ಅರ್ಬಿದು ಕುದಿ ಇಲ್ಲ. ಹಿಂಗಾಗಿ ದನ ಕಾಯೋರಿಗಿ ನ್ಯಾರಿ ಕುಡ್ಬೇಕ್ ಅಂತ ಅವ್ರೂ ಅಲಾತಿಲ್ಲ. ಅದ್ಕ್ ಬಿಟ್ಟಿ ಏನರಾ ಯಾಳಿ ಬಿದ್ದೂರ್ ಕೇಳಿದಾಗ್ ರೊಕ್ಕಾ ಕೇಳ್ತಾರ್, ಆಗ ಕೇಳಿನೊಟ್ ಕೊಟ್ಟುರ್ ಸಾಕ್, ಅದೇ ಭಾಳ್ ಖುಷಿ ಅವ್ರಿಗಿ.

ಎಲ್ಲ ಮಷೀನರಿ ಬಂದ್ಮೇಲ್ ಮಂದಿ ಹೊಲ್ದಾಗ್ ಧಂಧ್ಯಾ ಮಾಡದ್ ಬಿ ಭಾಳ್ ಕಮ್ ಆಗ್ಯಾದ್. ನೇಗಿಲ್, ಬಿತ್ಲಾಕ್, ಎಡಿ ಹೊಡಿಲಾಕ್, ಮದ್ದು ಹೊಡಿಲಾಕ್, ರಾಶಿ ಮಾಡ್ಲಾಕ್ ಎಲ್ಲಾ ಟ್ರಾಕ್ಟರ್ ಮಷೀನ್ ಬಂದಾವ್, ಊರಾಗ್ ನಾಲ್ಕೈದ್ ಮಂದಿ ಒಕ್ಕಲುತನ ಇಟ್ಟಾರ್ ಖರೇ, ಅವ್ರು ಅಸಾಮಿ ಹೊಡಿಲಾಕ್ ಅವ್ರಿಗೇ ಆಗಲ್ ಹೋಗ್ಯಾದ್, ಅವ್ರು ಆಸಿ ಮಾಡಿ ಕುಂತೂರ್ ಹೊಲ್ದಾಗಿಂದ್ ಯಾವ್ದೂ ಧಂಧ್ಯಾ ಆಗಲುವ್. ಆಗಿನ್ಹಾಂಗ್ ಹೊಲ್ದಾಗ್ ಸದಿ ಕಳಿಲಾಕ್, ಹೆಸರು, ಉದ್ದು, ತೊಗರಿ, ಜ್ವಾಳಾ ಕೊಯ್ಲಾಕ್ ಯಾರೂ ಹೊಂಟಿಲ್ಲ. ಮಂದಿ ಸಿಗಲ್ದ್ ಸಲೇಕೆ ಈ ಮಳೀಗಿ ಅಂಜಿ ಮಷೀನ್ ಹಚ್ಚಿ ರಾಶಿ ಮಾಡ್ಲಾತಾರ್.
ಇದನ್ನೂ ಓದಿ : ಔರಾದ್ ಸೀಮೆಯ ಕನ್ನಡ | ನಮ್ಮಾಯಿ-ಮುತ್ಯಾ ಒಂದೇ ದಿನಾ ಸರಿಹೋದ್ರೂ….!
ʼಮನೀ ಮುಂದ್ ಒಂದು ದನ ಇದ್ದೂರ್ ಮನೀಗಿ ಖಳಿʼ ಅಂತ ಅಂಬೋ ಮಾತು ಈಗ ಅಪರೂಪ ಆಗ್ಯಾದ್. ದನ ಕಟ್ಟಿದೊರ್ ದನದ್ಹಾಂಗ್ ದುಡಿಬೇಕ್ ಆಗ್ತುದ್ ಅಂತ ದನ ಕಟ್ಟದೇ ಬಿಟ್ಟಾರ್. ಆಗ ಸಾಳಿಗಿ ಹೋಗೋದು ಜರಾ ಕಮ್ಮಿ ಇತ್ತು, ಈಗ ಎಲ್ಲರೂ ಅವ್ರು ಮಕ್ಳಿಗಿ ಛಂದ್ ಓದ್ಸಲಾತಾರ್, ಈಗ ದನ, ಒಕ್ಕಲುತನ, ಹೊಲ ಎಲ್ಲಾ ಭ್ಯಾಡ್ ಆಗ್ಯಾದ್. ಇನ್ನೊಂದ್ ಏನಾಗ್ಯಾದ್ ಅಂದೂರ್, ಯಾವ್ದೂ ಒಂದ್ ದನ ತರ್ಲಾಕ್ ಹೋದುರ್ ಪನ್ನಾಸ್ ಹಜಾರಿಗಿ ಕಮ್ಮಿ ಇಲ್ಲ. ಒಂದು ಜೋಡು ಎತ್ತು ಖರ್ದಿ ಮಾಡ್ಬೇಕ್ ಅಂದೂರ್ ಒಂದ್ ಲಾಕ್ ಕಟ್ಟಿ ಇಡ್ಬೇಕ್. ಇಷ್ಟ ಪಿರೇದ್ ತಂದಿ ಕಟ್ಟಿ ಮತ್ಲಾಬ್ ಏನದಾ ಅಂತ ಒಕ್ಕಲುತನ ತೆಗ್ದಿ ಟ್ರ್ಯಾಕ್ಟರ್ ಹಿಂದ್ ಕೇಳ್ಕೊತಾ ಯಾಳಿ ಬಂದುದ್, ಏನಂತೀರಿ?

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.