ರಾಜ್ಯ ಸರ್ಕಾರವು ಹಾಗೂ ಚಿಂತಾಮಣಿ ಶಾಸಕರು, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಸಿ.ಸುಧಾಕರ್ ಅವರು ಕಳೆದ ಆರು ತಿಂಗಳ ಹಿಂದೆಯೇ ಚಿಂತಾಮಣಿ ಚೇಳೂರು ರಸ್ತೆಯ ರೈಲ್ವೆ ಬ್ರಿಡ್ಜ್ ಯಿಂದ ಚೇಳೂರು ರಸ್ತೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಆದರೆ, ಕಾಮಗಾರಿ ಮಾತ್ರವು ಆಮೆಗತಿಯಲ್ಲಿ ಸಾಗುತ್ತಿರುವ ಆರೋಪ ಕೇಳಿಬಂದಿದೆ.
ಅಧಿಕಾರಿಗಳ ಮತ್ತು ಗುತ್ತಿಗೆದಾರದ ನಿರ್ಲಕ್ಷ್ಯದಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ. ಇದರಿಂದ ರಸ್ತೆಯಲ್ಲಿ ವಾಹನ ಸಂಚಾರವು ಮತ್ತು ಬಸ್ ಸೇರಿದಂತೆ ಭಾರಿ ಗಾತ್ರದ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗಿದೆ.
ಆಮೆಗತಿಯಲ್ಲಿ ಕಾಮಗಾರಿ ಸಾಗುತ್ತಿರುವುದರಿಂದ ರಸ್ತೆಯಲ್ಲಿನ ಧೂಳು, ದ್ವಿಚಕ್ರ ವಾಹನ ಸವಾರರ ಜೀವಕ್ಕೆ ಅಪಾಯ ತಂದೊಡಿಡುತ್ತಿದೆ. ಇವಲ್ಲದೇ, ರಸ್ತೆಯ ಎರಡು ಬದಿಯಲ್ಲಿರುವ ರೈತರ ಜಮೀನುಗಳಲ್ಲಿ ಕಳೆದ ಆರು ತಿಂಗಳಿಂದಲೂ ಕೂಡ ಯಾವುದೇ ಬೆಳೆಗಳನ್ನು ಬೆಳೆದರೂ ಆ ಬೆಳೆಗಳ ಮೇಲೆ ಧೂಳು ತುಂಬಿಕೊಳ್ಳುತ್ತಿದೆ. ಇದರಿಂದಾಗಿ ಲಕ್ಷಾಂತರ ರೂ.ನಷ್ಟ ಕಂಡು ಬರುತ್ತಿರುವುದಾಗಿ ಸ್ಥಳೀಯ ರೈತರು ದೂರುತ್ತಿದ್ದಾರೆ.

ಅಧಿಕಾರಿಗಳು ಗುತ್ತಿಗೆದಾರರಿಗೆ ಹಲವು ಬಾರೀ ಸೂಚಿಸಿದರೂ ಕೂಡ ಮಳೆಯ ನೆಪವೊಡ್ಡಿ ರಸ್ತೆ ಅಭಿವೃದ್ಧಿಯ ಕಾಮಗಾರಿಯನ್ನು ನಿಧಾನಗತಿಯಲ್ಲಿ ಮಾಡುತ್ತಿರುವುದರಿಂದ ರಸ್ತೆಯ ಸಂಚಾರಕರಿಗೆ ಹಾಗೂ ರಸ್ತೆ ಎರಡು ಬದಿಯಲ್ಲಿರುವ ರೈತರ ಜಮೀನುಗಳಲ್ಲಿ ಬೆಳೆಯುವ ಬೆಳೆಗಳೆಲ್ಲವೂ ಹಾಳಾಗಿ ಹೋಗುತ್ತಿವೆ ಎಂದು ಸ್ಥಳೀಯರು ತಮ್ಮ ನೋವು ಹಂಚಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಬಾಗಲಕೋಟೆ | ಸರ್ಕಾರದಿಂದ ಕುರಿಗಾಹಿಗಳ ಹಿತರಕ್ಷಣೆಗೆ ಕಾಯ್ದೆ: ಕುರುಬರ ಪದವೀಧರರ ಸಂಘ ಸ್ವಾಗತ
ಅಧಿಕಾರಿಗಳು ಸಂಬಂಧಪಟ್ಟ ಗುತ್ತಿಗೆದಾರರಿಗೆ ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಬೇಕು. ಸಾರ್ವಜನಿಕರಿಗೆ ಮತ್ತು ರೈತರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನಕ್ಕೆ ತರಬೇಕು. ನಿರ್ಲಕ್ಷ್ಯ ತೋರುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ಕಾಮಗಾರಿಯನ್ನು ಕೂಡಲೆ ಪೂರ್ಣಗೊಳಿಸಿ ಸಮಸ್ಯೆಗಳಿಂದ ಮುಕ್ತಿ ನೀಡುವಂತೆ ಸಾರ್ವಜನಿಕರು ಹಾಗೂ ರೈತರು ಆಗ್ರಹಿಸಿದ್ದಾರೆ.
