ಅಮೆರಿಕ ವಿಧಿಸಿದ ಹೆಚ್ಚುವರಿ ಸುಂಕಗಳು ಬುಧವಾರ ಜಾರಿಗೆ ಬಂದಿವೆ. ಈ ಬೆನ್ನಲ್ಲೇ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ನರೇಂದ್ರ ಮೋದಿ ಅವರು ವ್ಯಾಪಾರ ಒಪ್ಪಂದವನ್ನು ನಿಭಾಯಿಸಲು ಮತ್ತು ದೇಶವನ್ನು ರಕ್ಷಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
“ದುಬಾರಿ ಸುಂಕಗಳ ಮೊದಲ ಹೊಡೆತದಿಂದಲೇ ಕನಿಷ್ಠ 10 ವಲಯಗಳು 2.17 ಲಕ್ಷ ಕೋಟಿ ರೂ. ನಷ್ಟ ಅನುಭವಿಸ ಸಾಧ್ಯತೆ ಇದೆ. ಮೇಲ್ನೋಟದ ವಿದೇಶಾಂಗ ನೀತಿಯ ಪ್ರವೃತ್ತಿಗಳು (ನಗು, ಅಪ್ಪುಗೆ ಹಾಗೂ ಸೆಲ್ಫಿಗಳು) ರಾಷ್ಟ್ರೀಯ ಹಿತಾಸಕ್ತಿಗೆ ಹಾನಿ ಮಾಡಿವೆ” ಎಂದು ಹೇಳಿದ್ದಾರೆ.
“ಮೋದಿ ಅವರ ಆತ್ಮೀಯ ಸ್ನೇಹಿತ ‘ಅಬ್ಕಿ ಬಾರ್, ಟ್ರಂಪ್ ಸರ್ಕಾರ್’ ಭಾರತದ ಮೇಲೆ 50% ಸುಂಕಗಳನ್ನು ವಿಧಿಸಿದ್ದಾರೆ. ನಮ್ಮ ರೈತರು, ವಿಶೇಷವಾಗಿ ಹತ್ತಿ ಬೆಳೆವ ರೈತರು ತೀವ್ರವಾಗಿ ಹಾನಿಗೊಳಗಾಗಿದ್ದಾರೆ. ಅವರನ್ನು ರಕ್ಷಿಸಲು ಯಾವುದೇ ಕ್ರಮಕ್ಕೂ ಸಿದ್ದವೆಂದು ಮೋದಿ ಹೇಳಿದ್ದರು. ಆದರೆ, ಈ ನಷ್ಟವನ್ನು ತಡೆಯಲು ಮತ್ತು ರೈತರ ಜೀವನೋಪಾಯವನ್ನು ರಕ್ಷಿಸಲು ನೀವು (ಮೋದಿ) ಏನನ್ನೂ ಮಾಡಿಲ್ಲ” ಎಂದು ಕಿಡಿಕಾರಿದ್ದಾರೆ.
“ಜಾಗತಿಕ ವ್ಯಾಪಾರ ಸಂಶೋಧನಾ ಕಾರ್ಯಕ್ರಮ (GTRI) ವರದಿಯ ಪ್ರಕಾರ, ಟ್ರಂಪ್ ಹೇರಿರುವ ಸುಂಕವು GDPಯಲ್ಲಿ ಸುಮಾರು 1%ರಷ್ಟು ಕುಸಿತಕ್ಕೆ ಕಾರಣವಾಗಬಹುದು. ಇದರಿಂದ, ಚೀನಾ ಪ್ರಯೋಜನ ಪಡೆಯುತ್ತದೆ. MSMEಗಳು ಸೇರಿದಂತೆ ಹಲವಾರು ರಫ್ತುಆಧಾರಿತ ಪ್ರಮುಖ ವಲಯಗಳು ಭಾರಿ ಉದ್ಯೋಗ ನಷ್ಟ ಅನುಭವಿಸುತ್ತವೆ” ಎಂದು ಅವರು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಅಂಬಾನಿಯ ವಂತಾರ ಮೃಗಾಲಯದ ಕಾರ್ಯಾಚರಣೆ ತನಿಖೆಗೆ ಎಸ್ಐಟಿ ರಚನೆ
“ಭಾರತೀಯ ಜವಳಿ ರಫ್ತು ವಲಯವು ನೇರ ಮತ್ತು ಪರೋಕ್ಷ ಉದ್ಯೋಗ ಸೇರಿದಂತೆ ಸುಮಾರು 5,00,000 ಉದ್ಯೋಗ ನಷ್ಟ ಎದುರಿಸುವಂತಾಗಿದೆ” ಎಂದು ಖರ್ಗೆ ಹೇಳಿದ್ದಾರೆ.
“ಈ ಹಿಂದೆ, ಅಮೆರಿಕವು 10% ಸುಂಕವನ್ನು ಜಾರಿಗೆ ತಂದ ಏಪ್ರಿಲ್ನಲ್ಲಿಯೇ ಸೌರಾಷ್ಟ್ರ ಪ್ರದೇಶದಾದ್ಯಂತ ವಜ್ರ ಕತ್ತರಿಸುವ ಮತ್ತು ಹೊಳಪು ನೀಡುವ ಕೆಲಸ ಮಾಡುತ್ತಿದ್ದ ಸುಮಾರು 1,00,000 ಕಾರ್ಮಿಕರು ಈಗಾಗಲೇ ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಈಗ 50% ಸುಂಕಗಳು ಮುಂದುವರಿದರೆ ವಜ್ರ ಮತ್ತು ಆಭರಣ ವಲಯದಲ್ಲಿ 1,50,000 ರಿಂದ 2,00,000 ಉದ್ಯೋಗಗಳು ನಷ್ಟವಾಗಬಹುದು” ಎಂದು ಖರ್ಗೆ ಎಚ್ಚರಿಸಿದ್ದಾರೆ.