ಮೈಸೂರು ಜಿಲ್ಲೆ, ಹೆಗ್ಗಡದೇವನಕೊಟೆ ತಾಲ್ಲೂಕು ಅಂತರಸಂತೆ ಅರಣ್ಯ ವಲಯದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಕಳೆದ ಜು.15 ರಂದು ಕರಡಿ ದಾಳಿಗೊಳಗಾಗಿ, ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಯ ಚಿಕಿತ್ಸೆ ಬಳಿಕ ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಮಾದನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.
ಹೆಗ್ಗಡದೇವನಕೊಟೆ ತಾಲೂಕಿನ ಸೋಗಹಳ್ಳಿ ಸಮೀಪದ ಎಂ.ಜಿ. ಹಳ್ಳಿ ಹಾಡಿಯ ಮಾದ ಅವರ ನಿವಾಸಕ್ಕೆ ಭೇಟಿ ನೀಡಿದ ಅಂತರಸಂತೆ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಧು ಹಾಗೂ ದಮ್ಮನಕಟ್ಟೆ ವಲಯ ಅರಣ್ಯಾಧಿಕಾರಿ ಸಿದ್ದರಾಜು ಅವರು ಗಾಯಾಳು ನೌಕರ ಮಾದ ಅವರ ಆರೋಗ್ಯ ವಿಚಾರಿಸಿ, ವೈಯಕ್ತಿಕ ನೆರವು ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಾಗರಹೊಳೆ ಸುಂಕದಕಟ್ಟೆ ಮಾದನ ಕಡ ಎಂಬ ಸ್ಥಳದಲ್ಲಿ ತನ್ನ ನಾಲ್ವರು ಸಹೋದ್ಯೋಗಿಗಳೊಂದಿಗೆ ಗಸ್ತು ತಿರುಗುತ್ತಿದ್ದ ವೇಳೆ ಎಲ್ಲರಿಗಿಂದ ಅಣತಿ ದೂರ ಮುಂದೆ ಹೋಗುತ್ತಿದ್ದ ಮಾದ ಅವರ ಮೇಲೆ ಏಕಾಏಕಿ ಕರಡಿ ದಾಳಿ ನಡೆಸಿ ಮುಖದ ಭಾಗಕ್ಕೆ ಗಂಭೀರ ಗಾಯಗೊಳಿಸಿದ್ದು, ಬಲಗಣ್ಣನ್ನು ತೀವ್ರ ಹಾನಿಗೊಳಿಸಿತ್ತು. ಈ ವೇಳೆ ಹಿಂಬಾಲಿಸಿ ಆಗಮಿಸಿದ್ದ ನಾಲ್ವರು ತಕ್ಷಣ ಚೀರಾಟ ನಡೆಸಿ ಗಾಯಾಳು ಮಾದನನ್ನು ಕರಡಿಯಿಂದ ರಕ್ಷಿಸಿ ಚಿಕಿತ್ಸೆಗೆಂದು ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದರು. ಪ್ರಸ್ತುತ ಆರೋಗ್ಯ ಸುಧಾರಿಸಿಕೊಂಡು ಮನೆಯಲ್ಲಿರುವ ಮಾದನಿಗೆ ಬಲಭಾಗದ ಕಣ್ಣು ಸಂಪೂರ್ಣ ಹಾನಿಯಾಗಿದ್ದ ಪರಿಣಾಮ ಶಾಶ್ವತ ಅಂಧತ್ವ ಹೊಂದಿದ್ದಾರೆ.
ಅರಣ್ಯ ಸಂರಕ್ಷಣೆಯಲ್ಲಿ ನಿರತ ಸಿಬ್ಬಂದಿ ಮೇಲಾದ ಕರಡಿ ದಾಳಿಯಿಂದ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದ್ದು ಇದುವರೆಗೆ ಅರಣ್ಯ ಇಲಾಖೆ, ಸಂಬಂಧಪಟ್ಟ ಸಚಿವರು ಸ್ಪಂದಿಸದೆ ಇರುವುದು ಶೋಚನಿಯ. ಬಡ ಕುಟುಂಬದ ನೆರವಿಗೆ ಧಾವಿಸದೆ
ಇರುವುದು ಸಾರ್ವಜನಿಖರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಗೊಂದಲ ಪರಿಹರಿಸುವಂತೆ ಆಗ್ರಹಿಸಿ ಪ್ರತಿಭಟನೆ
ಈ ಅರಣ್ಯ ಇಲಾಖೆ ಚಾಲಕ ದಿನೇಶ್, ಮಾದ ಅವರ ತಂದೆ ರಾಜು ಹಾಗೂ ಪುತ್ರ ಸಂಜಯ್ ಸೇರಿದಂತೆ ಇನ್ನಿತರರು ಮೇಲಾಧಿಕಾರಿ ಭೇಟಿ ಸಂದರ್ಭದಲ್ಲಿ ಇದ್ದರು.