ಪಂಪ್‌ವೆಲ್ ಮೇಲೇತುವೆ ನಿರ್ಮಾಣದ ವೇಳೆ ತೆರವುಗೊಳಿಸಲಾಗಿದ್ದ ಕಲಶವನ್ನು ಪಂಪ್‌ವೆಲ್ ಮಹಾವೀರ ವೃತ್ತದಲ್ಲಿ ಮರು ಸ್ಥಾಪನೆ ಮಾಡಲಾಗಿದೆ. ಪಂಪ್‌ವೆಲ್‌ನಿಂದ ಪಡೀಲ್ ತೆರಳುವ ರಸ್ತೆಯ ಮಧ್ಯದಲ್ಲಿರುವ ವೃತ್ತದಲ್ಲಿ ಕಲಶ ಇರಿಸಲಾಗಿದೆ.
ಸೋಮವಾರ ರಾತ್ರಿ 9 ಗಂಟೆಗೆ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಂಗಳವಾರ ಬೆಳಗಿನ ಜಾವ 5ಕ್ಕೆ ಪೊಲೀಸ್ ಇಲಾಖೆ, ಮೆಸ್ಕಾಂ ಸಿಬ್ಬಂದಿ ಹಾಗೂ ಸ್ಥಳೀಯ ಯುವಕರ ಸಹಾಯದಿಂದ ಕಲಶವನ್ನು ಮರುಸ್ಥಾಪನೆ ಮಾಡಲಾಗಿದೆ.
ಇದನ್ನೂ ಓದಿ: ಮೂರು ತಿಂಗಳ ಬಳಿಕ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು
2003ರಲ್ಲಿ ಪಂಪ್‌ವೆಲ್‌ನಲ್ಲಿ ದೊಡ್ಡದ ವೃತ್ತವನ್ನು ನಿರ್ಮಿಸಿ, ಅದನ್ನು ಮಹಾವೀರ ವೃತ್ತ ಎಂದು ಹೆಸರು ಇಡಲಾಗಿತ್ತು. ಬಳಿಕ ವೃತ್ತದಲ್ಲಿ ಕಲಶದ ಆಕೃತಿಯನ್ನು ಸ್ಥಾಪಿಸಲಾಗಿತ್ತು. ಮಂಗಳೂರು ಜೈನ್ ಸೊಸೈಟಿ ಹಾಗೂ ಜೈನ ಸಮುದಾಯದವರು ಅದರ ಉಸ್ತುವಾರಿ ವಹಿಸಿದ್ದರು. ರಾಷ್ಟ್ರೀಯ ಹೆದ್ದಾರಿ 66ರ ಮೇಲ್ವೇತುವೆಯು ಈ ವೃತ್ತದ ಮೇಲೆಯೇ ಹಾದು ಕಾರಣ ಕಾಮಗಾರಿಗಾಗಿ 2016ರಂದು ಕಲಶದ ಆಕೃತಿಯನ್ನು ತೆರವುಗೊಳಿಸಲಾಗಿತ್ತು.
ಕಲಶದ ಆಕೃತಿಯನ್ನು ಮರುಸ್ಥಾಪಿಸಿ ಮಹಾವೀರ ವೃತ್ತದ ಸೌಂದರ್ಯಕ್ಕಾಗಿ ಸುಮಾರು ರೂ.15 ಲಕ್ಷ ವೆಚ್ಚದಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಅದರ ಪೀಠವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣ ಮಾಡಲಾಗಿದೆ. ಒಂದೂವರೆ ತಿಂಗಳಲ್ಲಿ ಈ ನವೀಕರಣ ಕಾಮಗಾರಿ ಮುಗಿಯಲಿದೆ ಎಂದು ಸೊಸೈಟಿಯ ಅಧ್ಯಕ್ಷ ಪುಷ್ಪರಾಜ ಜೈನ್ ಮಾಹಿತಿ ನೀಡಿದ್ದಾರೆ.
