ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಾಮುಂಡಿ ಬೆಟ್ಟವು ಕೇವಲ ಹಿಂದೂಗಳ ಆಸ್ತಿಯಲ್ಲ ಎಂಬ ಮಾತನಾಡಿದ್ದಾರೆ. ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಶಿವಕುಮಾರರು ಯಾರನ್ನೋ ಸಂತಸ ಪಡಿಸಲು ಹಾಗೂ ಗಾಂಧಿ ಕುಟುಂಬವನ್ನು ಖುಷಿಪಡಿಸಲು ಈ ರೀತಿ ಹಿಂದೂಗಳಿಗೆ ಅಪಮಾನ ಮಾಡಿರುವುದನ್ನು ಹಿಂದೂ ಸಮಾಜ ಒಪ್ಪಲು ಸಾಧ್ಯವಿಲ್ಲ” ಎಂದು ಎಚ್ಚರಿಸಿದರು.
“ದಸರಾ ಉತ್ಸವ, ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮೀಯರೂ ಭೇಟಿ ಕೊಡುತ್ತಾರೆಂಬುದು ನಮಗೂ ಗೊತ್ತಿದೆ. ಆದರೆ, ಇದು ಹಿಂದೂಗಳಿಗೆ ಸಂಬಂಧಿಸಿದ್ದಲ್ಲ ಎಂಬ ಹೇಳಿಕೆ ಹಿಂದೂಗಳಿಗೆ ಮಾಡಿದ ಅಪಮಾನ; ಇದು ಅಕ್ಷಮ್ಯ ಅಪರಾಧ. ಡಿ.ಕೆ.ಶಿವಕುಮಾರ್ ಅವರು ಸದನದಲ್ಲಿ ನಮಸ್ತೇ ಸದಾ ವತ್ಸಲೇ ಗೀತೆ ಹೇಳಿದರು. ತಕ್ಷಣ ದೆಹಲಿ ಹೈಕಮಾಂಡಿನ ಒತ್ತಡ ಬಂದು ಕ್ಷಮಾಪಣೆ ಕೇಳುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಹೈಕಮಾಂಡಿನದು ಒಡೆದಾಳುವ ನೀತಿಯ ಸಂಸ್ಕೃತಿ. ಹಾಗಾಗಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಪದೇ ಪದೆ ಹಿಂದೂಗಳ ಅಪಮಾನ, ಹಿಂದೂ ಕಾರ್ಯಕರ್ತರ ಅವಮಾನ, ನಮ್ಮ ಪರಂಪರೆಗೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿದ್ದಾರೆ. ಧರ್ಮಸ್ಥಳದ ವಿಷಯದಲ್ಲಿ ಅಷ್ಟೆಲ್ಲ ಅಪಪ್ರಚಾರ ನಡೆಯುತ್ತಿದ್ದರೂ ಬಾಯಿ ಮುಚ್ಚಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಲಿಲ್ಲ” ಎಂದು ಆಕ್ಷೇಪಿಸಿದರು.
“ಬಾನು ಮುಷ್ತಾಕ್ ಅವರು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿಗಳಿಗೆ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಕರೆಯಬೇಕೆಂದು ಅನಿಸುತ್ತದೆ. ಬಾನು ಮುಷ್ತಾಕ್ ಅವರ ಜೊತೆಗೇ ದೀಪಾ ಭಸ್ತಿ ಅವರಿಗೂ ಪ್ರಶಸ್ತಿ ಲಭಿಸಿದೆ. ಅವರನ್ನು ಕರೆಯಬೇಕೆಂದು ಮುಖ್ಯಮಂತ್ರಿಗಳಿಗೆ ಯಾಕೆ ಅನಿಸಿಲ್ಲ” ಎಂದು ಪ್ರಶ್ನಿಸಿದರು.
ಅಪಪ್ರಚಾರ ನಡೆಸಿದವರನ್ನು ಬಂಧಿಸಿಲ್ಲವೇಕೆ?
“ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಹಿಂದೂಗಳ ವಿರುದ್ಧ ಕೇಸ್ ದಾಖಲಿಸಿ, 24 ಗಂಟೆಗಳಲ್ಲಿ ಬಂಧಿಸುತ್ತಾರೆ. ಆದರೆ, ಧರ್ಮಸ್ಥಳದ ವಿಷಯದಲ್ಲಿ ಹಿಂದೂ ಭಾವನೆಗೆ ಧಕ್ಕೆ ತರುವಂತೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆದರೂ ಅವರ ವಿರುದ್ಧ ಕೇಸ್ ಹಾಕಿ ಬಂಧಿಸಬೇಕೆಂದು ಯಾಕೆ ಕಾಂಗ್ರೆಸ್ ಸರಕಾರಕ್ಕೆ ಅನಿಸಿಲ್ಲ” ಎಂದು ಪ್ರಶ್ನಿಸಿದರು.
“ಎಸ್‍ಐಟಿ ತನಿಖೆ ಮಾಡಿಕೊಳ್ಳಲಿ; ದುಷ್ಟ ಶಕ್ತಿಗಳ ಹಿಂದಿರುವ ರಾಷ್ಟ್ರ- ಅಂತರರಾಷ್ಟ್ರೀಯ ಮಟ್ಟದ ದುಷ್ಟ ಶಕ್ತಿಗಳ ಬಗ್ಗೆ ತಿಳಿಯಲು ಮತ್ತು ಅವರನ್ನು ಹೊರಕ್ಕೆ ತರಲು ಎನ್‍ಐಎ, ಸಿಬಿಐ ತನಿಖೆ ಆಗಬೇಕೆಂಬ ಆಗ್ರಹ ಭಕ್ತರದ್ದೂ ಆಗಿದೆ. ಕಾಂಗ್ರೆಸ್ ಸರಕಾರಕ್ಕೆ ರಾಜ್ಯದ ಮುಖ್ಯಮಂತ್ರಿಗಳಿಗೆ ಕಿಂಚಿತ್ತಾದರೂ ಕಾಳಜಿ, ಪ್ರಾಮಾಣಿಕತೆ ಇದ್ದಲ್ಲಿ, ಹಿಂದೂಗಳ ಧಾರ್ಮಿಕ ಶ್ರದ್ಧೆ ಬಗ್ಗೆ ಕಿಂಚಿತ್ತಾದರೂ ನಂಬಿಕೆ ಇದ್ದರೆ, ಎಸ್‍ಐಟಿ ತನಿಖೆ ಆಗಲಿ; ಆದರೆ, ಅದಕ್ಕೊಂದು ಕಾಲಮಿತಿ ಬೇಕಲ್ಲವೇ” ಎಂದರು.