ದಾವಣಗೆರೆಯ ಶಿಕ್ಷಕಿಯೊಬ್ಬರಿಂದ ಡಿಜಿಟಲ್ ಅರೆಸ್ಟ್ ಪ್ರಕರಣ, 22.4 ಲಕ್ಷ ರೂ. ಅಕ್ರಮವಾಗಿ ವರ್ಗಾವಣೆ ಮಾಡಿಸಿಕೊಂಡ ದೂರಿನ ಹಿನ್ನೆಲೆಯಲ್ಲಿ ದಾವಣಗೆರೆ ಪೊಲೀಸರು ಹಾಸನ ಜಿಲ್ಲೆ, ಬೇಲೂರು ತಾಲೂಕಿನ ಕೊರಟಿಕೆರೆ ಗ್ರಾಮದ ಅರುಣ್ ಕುಮಾರ್ (35) ಎನ್ನುವ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ದಾವಣಗೆರೆಯ ಶಿಕ್ಷಕಿಯೊಬ್ಬರು ನೀಡಿದ ದೂರಿನಂತೆ 2025, ಫೆಬ್ರವರಿ 02ರಂದು ಶಾಲೆಯಲ್ಲಿರುವಾಗ ಬೆಳಿಗ್ಗೆ 09:30 ಕ್ಕೆ +9672786862 ನಂಬರ್ ನಿಂದ ಕರೆ ಮಾಡಿ ನಾನು ಬ್ಲೂ ಡಾಟ್ ಕೊರಿಯರ್ ಮುಂಬೈ ಎಂದು ಪರಿಚಯಿಸಿಕೊಂಡು ನಿಮ್ಮ ಫೆಡಕ್ಸ್ ಕೊರಿಯರ್ ನಲ್ಲಿ ಕೆಲವು ಔಷಧಗಳು ಮುಂಬೈನಿಂದ ದುಬೈಗೆ ಪಾರ್ಸಲ್ ಹೋಗುತ್ತಿದ್ದು ಅದರಲ್ಲಿ ಡ್ರಗ್ಸ್ ಕೂಡ ಇದೆ ಎಂದು ಹೆದರಿಸಿದ್ದು, ನಿಮ್ಮ ಗುರುತನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ಹೇಳಿ ನಿಮ್ಮ ಮೇಲೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ ಎಂದು ವಿವರಿಸಲಾಗಿದೆ.
‘ಆಧಾರ ಕಾರ್ಡ್ ಮತ್ತು ಇ -ಮೇಲ್ ವಿಳಾಸ ಪಡೆದುಕೊಂಡು, 8983204966 ನಂಬರಿನಿಂದ ವಾಟ್ಸಾಪ್ ಕರೆಯಲ್ಲಿ DCP ಮಾತನಾಡುತ್ತಿರುವುದಾಗಿ ಹೇಳಿ ನರೇಶ್ ಗೊಯಿಲ್ ಅನ್ನುವ ವ್ಯಕ್ತಿ ಮನಿಲ್ಯಾಂಡರಿಂಗ್ ಮಾಡುತ್ತಿದ್ದಾನೆ. ಆ ಕೇಸಿನಲ್ಲಿ ನೀವು ಕೂಡ ಇದ್ದು, ಪ್ರತಿ ತಿಂಗಳು 20 ಲಕ್ಷ ನಿಮ್ಮ ಖಾತೆಗೆ ಬರುತ್ತಿದ್ದು, ನಿಮ್ಮ ಖಾತೆಯಲ್ಲಿರುವ ಹಣ ಲೀಗಲ್ ಅಥಾವ ILLEGAL ಎಂದು ಚೆಕ್ ಮಾಡಬೇಕು ಎನ್ನುವ ಕಾರಣಕ್ಕೆ ನನ್ನ ಖಾತೆಯಿಂದ ರೂ. 22,40,000 ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿರುತ್ತಾರೆ’ ಎಂದು ಆರೋಪಿಸಲಾಗಿದೆ.
ದೂರಿನ ಮೇರೆಗೆ ದಾವಣಗೆರೆ ಸಿಇಎನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಂಕಾಳಿ ನಾಗಪ್ಪ ಹಾಗೂ ಸಿಬ್ಬಂದಿಗಳಾದ ಅಶೋಕ, ಮುತ್ತುರಾಜ್, ಯೋಗೀಶ್ ನಾಯ್ಕ್, ನಿಜಲಿಂಗಪ್ಪ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಇನ್ನು 2 ಜನ ಆರೋಪಿತರು ತಲೆಮರೆಸಿಕೊಂಡಿದ್ದು, ಸದರಿ ಆರೋಪಿತರ ಪತ್ತೆ ಕಾರ್ಯ ಮತ್ತು ತನಿಖೆ ಮುಂದುವರೆದಿರುತ್ತದೆ. ಆರೋಪಿಯನ್ನು ಘನ ನ್ಯಾಯಾಲಯಕ್ಕೆ ಹಾಜರುಪಡಿಸಿ ತನಿಖೆ ಮುಂದುವರೆಸಲಾಗಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕೆರೆ ನೀರು ಪೋಲು, ನೀರಾವರಿ ಇಲಾಖೆ ನಿರ್ಲಕ್ಷ್ಯ; ದುರಸ್ತಿಗೆ ರೈತಸಂಘದ ಮುಖಂಡರ ಆಗ್ರಹ
ಸದರಿ ಕಾರ್ಯಚರಣೆಯಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿಗಳ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.