ಧರ್ಮಸ್ಥಳದಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಮೇಲಿನ ಅತ್ಯಾಚಾರ, ಕೊಲೆ ಹಾಗೂ ನಾಪತ್ತೆ ಪ್ರಕರಣಗಳ ಸಮಗ್ರ ತನಿಖೆಗಾಗಿ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಈ ಹಿನ್ನೆಲೆಯಲ್ಲಿ, ಅನನ್ಯಾ ಭಟ್ ನಾಪತ್ತೆ ಪ್ರಕರಣದ ದೂರುದಾರರಾದ ಸುಜಾತಾ ಭಟ್ ಅವರಿಗೆ ಮಾಧ್ಯಮಗಳಿಂದ ಉಂಟಾಗುತ್ತಿರುವ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಮಹಿಳಾ ಆಯೋಗವು, ಎಸ್‌ಐಟಿಗೆ ಪತ್ರ ಬರೆದು ತಕ್ಷಣ ರಕ್ಷಣೆ ಒದಗಿಸುವಂತೆ ಒತ್ತಾಯಿಸಿದೆ.
ಸಮೂಹ ಮಾಧ್ಯಮಗಳ ವರದಿಗಳ ಆಧಾರದ ಮೇಲೆ ಆಯೋಗವು ಈ ಕ್ರಮಕ್ಕೆ ಮುಂದಾಗಿದೆ. ಕಳೆದ ಎರಡು ವಾರಗಳಿಂದ ಸುಜಾತಾ ಭಟ್ ಅವರನ್ನು ಮಾಧ್ಯಮದವರು ನಿರಂತರವಾಗಿ ಹಿಂಬಾಲಿಸಿ ಹೇಳಿಕೆ ನೀಡಲು ಪೀಡಿಸುತ್ತಿದ್ದಾರೆ ಎಂದು ಆಯೋಗ ಗಮನಿಸಿದೆ. ಅಲ್ಲದೆ, ಅವರನ್ನು ತೇಜೋವಧೆ ಮಾಡಿ ಹೀಯಾಳಿಸುವುದು, ತಡ ರಾತ್ರಿಯಲ್ಲಿ ಮನೆಗೆ ನುಗ್ಗಿ ವಿಡಿಯೋ ಚಿತ್ರೀಕರಣ ಮಾಡುವುದು, ಕಾರಿನಲ್ಲಿ ಕೂರಿಸಿಕೊಂಡು ವೈರುಧ್ಯಗಳಿಂದ ಕೂಡಿದ ಹೇಳಿಕೆಗಳನ್ನು ಪಡೆಯುವುದು ಮತ್ತು ಮಾನಸಿಕವಾಗಿ ಕುಗ್ಗಿಸುವ ವರದಿಗಳನ್ನು ಪ್ರಸಾರ ಮಾಡುವುದು ಇತ್ಯಾದಿ ಘಟನೆಗಳು ನಡೆದಿರುವುದನ್ನು ಆಯೋಗ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಾನವಶಕ್ತಿ ಸದ್ಬಳಕೆಗೆ ಇದು ಸಕಾಲ: ಮೋದಿ ಮನಸ್ಸು ಮಾಡುವರೇ?
ಮಹಿಳೆಯರ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ಥರು ಮತ್ತು ದೂರುದಾರರು ನಿರ್ಭೀತಿಯಿಂದ ಮಾಹಿತಿ ನೀಡುವಂತೆ ಮಾಡುವುದು ಅಗತ್ಯ ಎಂದು ಆಯೋಗ ಹೇಳಿದೆ. ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಟ್ಟು ಅವರಿಗೆ ರಕ್ಷಣೆ ನೀಡುವಂತೆ ಕೋರಲಾಗಿದೆ. ಸುಜಾತಾ ಭಟ್ ಅವರು ಮಾಧ್ಯಮಗಳ ಒತ್ತಡದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿ ಹೋಗುವ ಸಂಭವವಿದೆ ಎಂದು ಆಯೋಗ ಆತಂಕ ವ್ಯಕ್ತಪಡಿಸಿದೆ.
ಈ ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗವು, ಸರ್ಕಾರಕ್ಕೆ ಕೂಡಲೇ ವಿಶೇಷ ತನಿಖಾ ತಂಡದ ಮೂಲಕ ಸುಜಾತಾ ಭಟ್ ಅವರಿಗೆ ಭದ್ರತೆ ಒದಗಿಸಿ, ನಿರ್ಭೀತಿಯಿಂದ ಅಹವಾಲು ಸಲ್ಲಿಸುವ ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ಆದೇಶಿಸಿದೆ. ಅಲ್ಲದೆ, ಕೈಗೊಂಡ ಕ್ರಮದ ವರದಿಯನ್ನು ತುರ್ತಾಗಿ ಆಯೋಗಕ್ಕೆ ಕಳುಹಿಸಿಕೊಡುವಂತೆ ಕೋರಿದೆ.