ಯಾದಗಿರಿ ಜಿಲ್ಲೆಯ ಶಹಾಪುರ ನಗರದ ವಸತಿ ಶಾಲೆಯೊಂದರಲ್ಲಿ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಬುಧವಾರ (ಆ.27)ರಂದು ಮಧ್ಯಾಹ್ನ ಶಾಲೆಯ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಶಾಲೆಯ ಪ್ರಾಚಾರ್ಯೆ ಸೇರಿದಂತೆ ನಾಲ್ವರನ್ನು ಅಮಾನತು ಮಾಡಲಾಗಿದೆ.
ಕರ್ತವ್ಯ ಲೋಪ ಮತ್ತು ಕರ್ತವ್ಯ ನಿರ್ಲಕ್ಷ್ಯ ತೋರಿದ ಹಿನ್ನೆಲೆ ವಸತಿ ನಿಲಯದ ಪ್ರಾಚಾರ್ಯೆ ಬಸಮ್ಮ, ವಾರ್ಡನ್ ಗೀತಾ, ವಿಜ್ಞಾನ ಶಿಕ್ಷಕ ನರಸಿಂಹಮೂರ್ತಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಶ್ರೀಧರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ಆ.28ರಂದು ಆದೇಶಿಸಿದ್ದಾರೆ.
ಪೋಕ್ಸೋ ಪ್ರಕರಣ ದಾಖಲು:
ಕಳೆದ 9-10 ತಿಂಗಳ ಹಿಂದೆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಡಿ ಅಪರಿಚಿತ ವ್ಯಕ್ತಿ, ಬಸಮ್ಮ, ಗೀತಾ, ಸ್ಟಾಫ್ ನರ್ಸ್ ಕಾವೇರಮ್ಮ ಹಾಗೂ ಹೆರಿಗೆ ವಿಷಯ ಮರೆಮಾಚಲು ಯತ್ನಿಸಿದ ಆರೋಪದಡಿ ಸಂತ್ರಸ್ತ ಬಾಲಕಿಯ ಸಹೋದರ ಶರಣಬಸವ ಮೇಲೆ ಪ್ರಕರಣ ದಾಖಲಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀಡಿದ ದೂರಿನ ಮೇರೆಗೆ ಬಿಎನ್‌ಎಸ್ ಕಾಯ್ದೆ ಕಲಂ 64, ಪೋಕ್ಸೋ ಕಾಯ್ದೆ ಕಲಂ 4,6,19, ಹಾಗೂ ಬಾಲ ನ್ಯಾಯ ಕಾಯ್ದೆ- 2015ರ ಕಲಂ 33, 34 ಅಡಿ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯ ಅಧಿಕಾರಿಗಳು ಬಾಲಕಿಯ ಹೆರಿಗೆ ವಿಷಯವನ್ನು ಮೊದಲು ಗೌಪ್ಯವಾಗಿಟ್ಟಿದ್ದರು. ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಗಮನಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿ ಹಾಗೂ ಮಗುವನ್ನು ಶಹಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಬೀದರ್ | ಮಳೆ ಅಬ್ಬರ, ನದಿ, ಕೆರೆಗಳಲ್ಲಿ ಉಬ್ಬರ, ಜನಜೀವನ ತತ್ತರ!