ಮಾನ್ವಿ ತಾಲ್ಲೂಕು ಪೋತ್ನಾಳ ಗ್ರಾಮದಲ್ಲಿ ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಪೋತ್ನಾಳ ಗ್ರಾಮ ಘಟಕದ ಪ್ರಗತಿಪರ ಸಂಘಟನೆಗಳು ನೇತೃತ್ವದಲ್ಲಿ ಗ್ರಾಮಸ್ಥರಿಂದ ಸಾಂಕೇತಿಕ ಧರಣಿ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿದಿನ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ದೂರದೂರಿಗೆ ಪ್ರಯಾಣಿಸಲು ಬಸ್ ಸೌಲಭ್ಯವನ್ನು ಅವಲಂಬಿಸುವ ಪರಿಸ್ಥಿತಿಯಲ್ಲಿದ್ದರೂ, ಸೂಕ್ತ ಬಸ್ ನಿಲ್ದಾಣದ ಕೊರತೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟಿಸುವ ಮೂಲಕ ಆಗ್ರಹಿಸಿದರು.
ಪ್ರತಿಭಟನೆ ಉದ್ದೇಶಿಸಿ ಚಿನ್ನಮ್ಮ ಮಾತನಾಡಿ, ಶೌಚಾಲಯದ ಕೊರತೆಯಿಂದಾಗಿ ಮಹಿಳೆಯರು ಹಾಗೂ ಹಿರಿಯರು ವಿಶೇಷವಾಗಿ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಗ್ರಾಮಸ್ಥರು ಹಲವು ಬಾರಿ ಪಂಚಾಯಿತಿ ಹಾಗೂ ಸ್ಥಳೀಯ ಅಧಿಕಾರಿಗಳ ಗಮನ ಸೆಳೆದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲವೆಂದು ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಮಾಭಿವೃದ್ಧಿಗೆ ಸರಿಯಾದ ಮೂಲಸೌಕರ್ಯ ಅಗತ್ಯ. ವಿದ್ಯಾರ್ಥಿಗಳಿಗೂ ಮಹಿಳೆಯರಿಗೂ ಸುರಕ್ಷತೆ, ಆರಾಮ ಕಲ್ಪಿಸಲು ಬಸ್ ನಿಲ್ದಾಣ ಮತ್ತು ಶೌಚಾಲಯ ನಿರ್ಮಾಣ ತುರ್ತು ಅಗತ್ಯ. ಕೇಂದ್ರ ಸರ್ಕಾರವು “ಬೇಟಿ ಬಚಾವ್, ಬೇಟಿ ಪಡಾವ” ಹಾಗೂ “ಸ್ವಚ್ಛ ಭಾರತ” ಎಂದು ಘೋಷಣೆ ಮಾಡಿದರೂ, ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಮೂಲಭೂತ ಸೌಕರ್ಯಗಳ ಕೊರತೆ ತೀವ್ರವಾಗಿದೆ. ಬಸ್ ನಿಲ್ದಾಣಗಳಿಲ್ಲದೆ, ಶೌಚಾಲಯಗಳಿಲ್ಲದೆ ಜನರು ಇನ್ನೂ ಬಯಲಲ್ಲಿ ಶೌಚಕ್ಕೆ ಹೋಗುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸರ್ಕಾರದ ಘೋಷಣೆ ಕೇವಲ ಕಾಗದದಲ್ಲೇ ಉಳಿದಿದೆ. ಮಹಿಳೆಯರ ಸುರಕ್ಷತೆ, ಮಕ್ಕಳ ಭವಿಷ್ಯದ ಬಗ್ಗೆ ಮಾತಾಡುವ ಸರ್ಕಾರ, ಕನಿಷ್ಠ ಸೌಕರ್ಯಗಳಾದ ಶೌಚಾಲಯ ಮತ್ತು ಬಸ್ ನಿಲ್ದಾಣ ನಿರ್ಮಾಣದತ್ತ ಗಮನ ಹರಿಸಬೇಕು ಎಂದರು.

ನಂತರ ಪ್ರತಿಭಟನೆಯ ಮುಖಂಡ ಶರಣು ಮದ್ದಮಗುಡ್ಡಿ ಮಾತನಾಡಿ, ಗ್ರಾಮಾಂತರ ಹಳ್ಳದಲ್ಲಿ ನಿರಂತರವಾಗಿ ಕಸ ವಿಲೇವಾರಿ ನೀರು ಸೇರುತ್ತಿರುವ ಪರಿಣಾಮ, ಹಳ್ಳದ ನೀರು ಕುಡಿದ ಗ್ರಾಮಸ್ಥರಲ್ಲಿ ಚರ್ಮರೋಗ ವ್ಯಾಪಕವಾಗಿ ಕಾಣಿಸಿಕೊಂಡಿದೆ. ಸ್ಥಳೀಯರು ನೀರನ್ನು ಬಳಸಿದ ತಕ್ಷಣ ಕೈ-ಕಾಲುಗಳಲ್ಲಿ ತುರಿಕೆ, ಗಾಯಗಳು ಮತ್ತು ಚರ್ಮದ ಉರಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೋತ್ನಾಳ ಗ್ರಾಮವು ಸುತ್ತಮುತ್ತಲಿನ 40ಕ್ಕೂ ಹೆಚ್ಚು ಹಳ್ಳಿಗಳಿಗೆ ಕೇಂದ್ರ ಬಿಂದುವಾಗಿದ್ದು, ಪ್ರತಿದಿನ ನೂರಾರು ಜನರು ಉದ್ಯೋಗ, ಶಿಕ್ಷಣ, ಚಿಕಿತ್ಸಾ ಸೇವೆಗಳು ಹಾಗೂ ವ್ಯಾಪಾರ ವ್ಯವಹಾರಗಳ ನಿಮಿತ್ತ ಇಲ್ಲಿಂದ ಸಂಚಾರ ನಡೆಸುತ್ತಾರೆ. ಆದರೆ ಇಲ್ಲಿ ಬಸ್ ನಿಲ್ದಾಣದ ಕೊರತೆಯಿಂದ ಪ್ರಯಾಣಿಕರು ಮಳೆ–ಬಿಸಿಲಿನಲ್ಲಿ ತೊಂದರೆ ಅನುಭವಿಸುತ್ತಿದ್ದು, ಹಿರಿಯರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ಹೀಗೆ ರಸ್ತೆ ಬದಿಯಲ್ಲಿ ನಿಲ್ಲುವುದು ಕಷ್ಟಕರವಾಗಿದೆ ಎಂದು ಹೇಳಿದರು.
“ಪೋತ್ನಾಳದಲ್ಲಿ ಬಸ್ ನಿಲ್ದಾಣ ನಿರ್ಮಿಸಿ, ಪ್ರತಿಯೊಂದು ಬಸ್ ಇಲ್ಲಿಗೆ ತಡೆರಹಿತವಾಗಿ ನಿಲ್ಲುವಂತೆ ಕ್ರಮ ಕೈಗೊಳ್ಳಬೇಕು. ಇದು ಕೇವಲ ಪೋತ್ನಾಳದಷ್ಟೇ ಅಲ್ಲ, ಸುತ್ತಮುತ್ತಲಿನ ಹಳ್ಳಿಗಳ ಜನರಿಗೂ ಬಹಳ ಅನುಕೂಲವಾಗುತ್ತದೆ” ಎಂದು ಆಗ್ರಹಿಸಿದರು.

ಗ್ರಾಮದ ಹಳ್ಳದೊಳಗೆ ನಡೆಯುತ್ತಿರುವ ಆಕ್ರಮ ಮರಳು ಸಾಕಾಣಿಕೆ ಪರಿಸರಕ್ಕೆ ಮತ್ತಷ್ಟು ಹಾನಿ ಉಂಟುಮಾಡುತ್ತಿದೆ. ಹಳ್ಳದ ತೀರಗಳು ಕುಸಿಯುತ್ತಿದ್ದು, ಕೃಷಿ ಭೂಮಿಗಳಿಗೆ ಹಾನಿ ಸಂಭವಿಸಿದೆ. ಗ್ರಾಮಸ್ಥರು ಅಧಿಕಾರಿಗಳ ತಕ್ಷಣದ ಕ್ರಮವನ್ನು ಜರುಗಿಸಬೇಕು. “ಹಳ್ಳದ ನೀರು ಶುದ್ಧೀಕರಣ ಹಾಗೂ ಅಕ್ರಮ ಮರಳು ಸಾಕಾಣಿಕೆ ನಿಲ್ಲಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಆಂದೋಲನ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಐಸಿಡಿಎಸ್ ಕೈಬಿಡಲು ಆಗ್ರಹಿಸಿ ಸಹಿ ಸಂಗ್ರಹ ಚಳುವಳಿ
ಈ ವೇಳೆ ಕರ್ನಾಟಕ ಜನಶಕ್ತಿ ಮುಖಂಡ ಮಾರೆಪ್ಪ ಹರವಿ, ಗಂಗಪ್ಪ ತೋರಣ ದಿನ್ನಿ, ಚಾಂದಸಾಬ್, ಪ್ರಭುರಾಜ ಕೊಡ್ಲಿ, ಶಾಂತಕುಮಾರ, ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಹೋರಾಟಗಾರರು, ಭಾಗವಹಿಸಿದ್ದರು.
