ಅಂತರರಾಷ್ಟ್ರೀಯ ಹಣಕಾಸು ನಿಧಿಗೆ (IMF) ಭಾರತದ ಹೊಸ ಕಾರ್ಯನಿರ್ವಾಹಕ ನಿರ್ದೇಶಕರಾಗಿ (ED) ಅರ್ಥಶಾಸ್ತ್ರಜ್ಞ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾಜಿ ಗವರ್ನರ್ ಡಾ. ಉರ್ಜಿತ್ ಪಟೇಲ್ ಅವರನ್ನು ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಗುರುವಾರ ಹೊರಡಿಸಿದ ಅಧಿಕೃತ ಆದೇಶದ ಪ್ರಕಾರ, ಪಟೇಲ್ ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಐಎಂಎಫ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
2022ರಿಂದ ಐಎಂಎಫ್‌ನ ಇಡಿ ಹುದ್ದೆಯಲ್ಲಿದ್ದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಡಾ. ಕೃಷ್ಣಮೂರ್ತಿ ಸುಬ್ರಮಣಿಯನ್ ಅವರನ್ನು 2025ರ ಮೇ ತಿಂಗಳಲ್ಲಿ ತೆಗೆದುಹಾಕಲಾಗಿತ್ತು. ಇದೀಗ, ಆ ಹುದ್ದೆಗೆ ಪಟೇಲ್ ಅವರನ್ನು ನೇಮಿಸಲಾಗಿದೆ.
ಪಟೇಲ್ ಅವರು 2016ರಿಂದ 2018ರವರೆಗೆ ಆರ್‌ಬಿಐ ಗವರ್ನರ್ ಆಗಿದ್ದರು. ಸರ್ಕಾರಕ್ಕೆ ಲಾಭಾಂಶ ವರ್ಗಾವಣೆ ವಿಚಾರದಲ್ಲಿ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನಡುವಿನ ತಿಕ್ಕಾಟ ನಡೆದಾಗ, 2018ರ ಡಿಸೆಂಬರ್‌ನಲ್ಲಿ ತಮ್ಮ ಹುದ್ದೆಗೆ ಪಟೇಲ್ ಹಠಾತ್ತನೆ ರಾಜೀನಾಮೆ ನೀಡಿ, ಆರ್‌ಬಿಐನಿಂದ ಹೊರಬಂದಿದ್ದರು. ಬಳಿಕ, ಅವರು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ (AIIB) ನಲ್ಲಿ ಹೂಡಿಕೆ ಕಾರ್ಯಾಚರಣೆಗಳ (ವಿಭಾಗ 1) ಉಪಾಧ್ಯಕ್ಷರಾಗಿದ್ದರು. ಅವರು 2024ರ ಜನವರಿಯಲ್ಲಿ ತಮ್ಮ ಕುಟುಂಬದಲ್ಲಿನ ಆರೋಗ್ಯ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದರು.
ಈ ಲೇಖನ ಓದಿದ್ದೀರಾ?: ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ‘ಬಾಯಲ್ಲಿ ಬೆಲ್ಲ, ಎದೆಯಲ್ಲಿ ಕತ್ತರಿ’ಯಾಗದಿರಲಿ…
1963ರಲ್ಲಿ ಜನಿಸಿದ ಪಟೇಲ್ 1998 ರಿಂದ 2001ರವರೆಗೆ ಹಣಕಾಸು ಸಚಿವಾಲಯದ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಹಣಕಾಸು ನೀತಿ, ಆರ್ಥಿಕ ನೀತಿ ಸಂಶೋಧನೆ, ಅಂಕಿಅಂಶಗಳು ಮತ್ತು ಮಾಹಿತಿ ನಿರ್ವಹಣೆ, ಠೇವಣಿ ವಿಮೆ, ಸಂವಹನ ಮತ್ತು ಮಾಹಿತಿ ಹಕ್ಕನ್ನು ನಿರ್ವಹಣೆ ಕ್ಷೇತ್ರದಲ್ಲಿ ಸರ್ಕಾರದ ಭಾಗವಾಗಿ ಸೇವೆ ಸಲ್ಲಿಸಿದ್ದಾರೆ.
ಅಲ್ಲದೆ, ರಿಲಯನ್ಸ್ ಇಂಡಸ್ಟ್ರೀಸ್, ಐಡಿಎಫ್‌ಸಿ ಲಿಮಿಟೆಡ್, ಎಂಸಿಎಕ್ಸ್ ಲಿಮಿಟೆಡ್ ಮತ್ತು ಗುಜರಾತ್ ರಾಜ್ಯ ಪೆಟ್ರೋಲಿಯಂ ಕಾರ್ಪೊರೇಷನ್ ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿಯೂ ಕೆಲಸ ಮಾಡಿದ್ದಾರೆ.