ಧರ್ಮಸ್ಥಳದ ಅಸಹಜ ಸಾವು ಮತ್ತು ರಹಸ್ಯ ಅಂತ್ಯಕ್ರಿಯೆ ಪ್ರಕರಣ ದಿನಗಳೆದಂತೆ ಮಹತ್ವದ ಬೆಳವಣಿಗೆ ಕಾಣುತ್ತಿದೆ. ನೂರಾರು ಶವಗಳನ್ನ ತಾನೇ ಹೂತುಹಾಕಿರುವುದಾಗಿ ಹೇಳಿಕೊಂಡು ದೂರುನೀಡಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಪೊಲೀಸರು ವಶಕ್ಕೆ ಪಡೆದ ಬಳಿಕ ಕೆಲವು ಮಾಧ್ಯಮಗಳು ತನಿಖೆಯೇ ಮುಗಿದು ಹೋಯಿತು. ಚಿನ್ನಯ್ಯನೇ ಪ್ರಮುಖ ಆರೋಪಿ, ಧರ್ಮಸ್ಥಳದ ಹೆಸರು ಕೆಡಿಸಲು ಷಡ್ಯಂತ್ರ ರೂಪಿಸಿದ್ದರೂ ಎಂದೆಲ್ಲ ಬೊಬ್ಬೆ ಹೊಡೆಯುತ್ತಿದ್ದವು. ಇದೀಗ, ಬೊಬ್ಬೆ ಹೊಡೆಯುತ್ತಿದ್ದ ಮಾಧ್ಯಮಗಳ ಬಾಯಿಗೆ ಎಸ್‌ಐಟಿ ಬೀಗ ಹಾಕಿದೆ. ಪ್ರಕರಣದ ತನಿಖೆಯನ್ನು ವಿಸ್ತರಿಸಲು ನಿರ್ಧರಿಸಿದೆ.
ಧರ್ಮಸ್ಥಳದ ಸುತ್ತಮುತ್ತಲ ಪ್ರದೇಶದಲ್ಲಿ ನಡೆದಿರುವ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಹಲವಾರು ಅನುಮಾನಾಸ್ಪದ ಸಾವುಗಳ ಕುರಿತು 7 ವರ್ಷಗಳ ಹಿಂದೆ ಮಾಜಿ ಶಾಸಕ ವಿ.ಎಸ್ ಉಗ್ರಪ್ಪ ನೇತೃತ್ವದ ಸಮಿತಿ ನೀಡಿದ್ದ ವರದಿಯನ್ನು ಪರಿಶೀಲಿಸಲು ಎಸ್ಐಟಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಧರ್ಮಸ್ಥಳದ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ನಾಪತ್ತೆ ಹಾಗೂ ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಗೋವಾದಲ್ಲಿ ದಾಖಲಾಗಿರುವ ಎಫ್ಐಆರ್‌ಗಳನ್ನು ಪರಿಶೀಲನೆ ಮಾಡಲು ಎಸ್‌ಐಟಿ ಮುಂದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟಲು ರಚಿಸಲಾದ ವಿ.ಎಸ್ ಉಗ್ರಪ್ಪ ನೇತೃತ್ವದ ಸಮಿತಿಯು 2018ರಲ್ಲಿ 5,000 ಪುಟಗಳ ವರದಿಯನ್ನು ಸಲ್ಲಿಸಿತ್ತು. ಧರ್ಮಸ್ಥಳ ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ರಾಜ್ಯದಲ್ಲಿ ಮಹಿಳೆಯರು ನಾಪತ್ತೆಯಾಗುತ್ತಿರುವ ಹಲವಾರು ಪ್ರಕರಣಗಳನ್ನು ಬೆಳಕಿಗೆ ತಂದಿತ್ತು. ಅಲ್ಲದೆ, ನಾಪತ್ತೆಯಾದ ಮಹಿಳೆಯರು ಮತ್ತು ಹುಡುಗಿಯರನ್ನ ಪತ್ತೆಹಚ್ಚಲು ಹಾಗೂ ಅಸ್ವಾಭಾವಿಕ ಸಾವುಗಳು ಹೆಚ್ಚಾಗಿ ಕಂಡುಬರುವ ಬೆಳ್ತಂಗಡಿ ತಾಲೂಕಿಗೆ ವಿಶೇಷ ಪೊಲೀಸ್ ಪಡೆ ರಚನೆಗೆ ಸಮಿತಿ ಶಿಫಾರಸು ಮಾಡಿತ್ತು.
ಸದ್ಯ ಮೂಲಗಳ ಮಾಹಿತಿಯ ಪ್ರಕಾರ, 1995 ಮತ್ತು 2014ರ ನಡುವೆ ಧರ್ಮಸ್ಥಳದಲ್ಲಿ ವರದಿಯಾಗದ ನಾಪತ್ತೆ ಪ್ರಕರಣಗಳು ಯಾವುದಾದರೂ ಇದ್ದರೇ ಅವುಗಳನ್ನು ಎಸ್‌ಐಟಿ ಪರಿಶೀಲನೆ ಮಾಡುತ್ತದೆ. ಪ್ರಸ್ತುತ ದೂರಾದಾರರ ಹೊರತಾಗಿ, ಸರಿಯಾದ ಶವಪರೀಕ್ಷೆ ಮಾಡದೇ ಅನುಮಾನಾಸ್ಪದ ರೀತಿಯಲ್ಲಿ ದಫನ ಮಾಡಿರುವ ಬಗ್ಗೆ ದಾಖಲಾಗಿರುವ ಹಲವಾರು ದೂರುಗಳನ್ನೂ ಎಸ್‌ಐಟಿ ಪರಿಗಣಿಸಲಿದೆ.
ಧರ್ಮಸ್ಥಳದಲ್ಲಿ ಅಸಹಜ ಸಾವುಗಳು ಮತ್ತು ಶವಗಳನ್ನ ಅಕ್ರಮವಾಗಿ ಹೂತುಹಾಕಿರುವ ಬಗ್ಗೆ ದೂರುದಾರರು ನೀಡಿರುವ ದೂರು ಸಂಪೂರ್ಣವಾಗಿ ಸುಳ್ಳಲ್ಲ ಎಂಬುದನ್ನು ಎಸ್‌ಐಟಿ ಗಮನಿಸಿದೆ. ಜತೆಗೆ, ಅಕ್ರಮವಾಗಿ ಶವಗಳನ್ನು ಹೂಳಲಾಗಿರುವ ಪ್ರದೇಶದಲ್ಲಿ ಉತ್ಖನನ ಮಾಡುವ ಕೆಲಸವನ್ನೂ ಮುಂದುವರೆಸಲಿದೆ. ತನಿಖೆಯನ್ನು ವಿಸ್ತರಿಸುತ್ತಿದೆ.
“ಅಸ್ಥಿಪಂಜರದ ಅವಶೇಷಗಳಿಗಾಗಿ ಹುಡುಕಾಟ ಮುಂದುವರೆಯುತ್ತದೆ. ಜತೆಗೆ ನೆರೆಯ ರಾಜ್ಯಗಳಿಂದ ಮಾಹಿತಿ ಸಿಕ್ಕಿರುವ ಹಾಗೂ ಸದ್ಯ ತನಿಖೆ ನಡೆಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಶಂಕಿಸಲಾದ ವ್ಯಕ್ತಿಗಳ ಪ್ರಕರಣಗಳನ್ನ ಸಹ ಪರಿಶೀಲನೆ ಮಾಡಲಾಗುತ್ತದೆ” ಎಂದು ಎಸ್‌ಐಟಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಡಿಎಚ್’ ವರದಿ ಮಾಡಿದೆ.
ಈ ಲೇಖನ ಓದಿದ್ಧೀರಾ?: ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ‘ಬಾಯಲ್ಲಿ ಬೆಲ್ಲ, ಎದೆಯಲ್ಲಿ ಕತ್ತರಿ’ಯಾಗದಿರಲಿ…
ಎಸ್‌ಐಟಿ ತಂತ್ರಜ್ಞಾನ ಚಾಲಿಕ, ವಿಧಿವಿಜ್ಞಾನ ತನಿಖೆಯನ್ನ ಪ್ರಾರಂಭಿಸುತ್ತಿದೆ. ಇನ್ನು ಈ ಪ್ರದೇಶದ ಮಣ್ಣು ಹೆಚ್ಚು ಆಮ್ಲೀಯವಾಗಿದ್ದು, ಕಳೆದ 15 ವರ್ಷಗಳ ಹಿಂದೆ ಹೂಳಲಾದ ದೇಹಗಳ ಅಸ್ಥಿಪಂಜರದ ಅವಶೇಷಗಳು ಉಳಿದುಕೊಂಡಿರುವ ಸಾಧ್ಯತೆಯಿಲ್ಲ. ಆದಾಗ್ಯೂ, ಕೊಳೆತ ದೇಹಗಳಿಂದ ಹೊರಬರುವ ಫಾಸ್ಫೇಟ್‌ಗಳು, ನೈಟ್ರೇಟ್‌ಗಳು, ಲಿಪಿಡ್‌ಗಳು ಮತ್ತು ಡಿಎನ್ಎಗಳಂತಹ ಸಾವಯವ ರಾಸಾಯನಿಕಗಳ ಕುರುಹುಗಳು ಮಣ್ಣಿನಲ್ಲಿ ಹೆಚ್ಚು ಕಾಲ ಉಳಿಯಬಹುದು. ಆಯ್ದ ಸ್ಥಳಗಳಲ್ಲಿನ ಮಣ್ಣನ್ನು ಪ್ರಯೋಗಾಯಕ್ಕೆ ಒಳಪಡಿಸಿ, ಪರೀಕ್ಷಿಸುವುದರಿಂದ ಅಲ್ಲಿ ಶವಗಳನ್ನು ಒಂದು ದಶಕಕ್ಕೂ ಹಿಂದೆ ಹೂಳಲಾಗಿತ್ತೇ ಎಂಬುದನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿಧಿವಿಜ್ಞಾನ ತಜ್ಞರು ತಿಳಿಸಿದ್ದಾರೆ.
ದೂರುದಾರ ಚಿನ್ನಯ್ಯ ನ್ಯಾಯಾಲಯಕ್ಕೆ ಹೋಗುವಾಗ ತಲೆಬುರುಡೆಯನ್ನು ತನ್ನೊಂದಿಗೆ ತಂದಿದ್ದರು. ಅದು ಮೃತ ಸಂತ್ರಸ್ತರಲ್ಲಿ ಒಬ್ಬರ ತಲೆಬುರುಡೆ ಎಂದು ಸುಳ್ಳು ಹೇಳಿದ್ದರೆಂದು ಆರೋಪಿಸಲಾಗಿದೆ. ಹೀಗಾಗಿ, ಅವರನ್ನೂ ಎಸ್ಐಟಿ ತನಿಖೆಗೆ ಒಳಪಡಿಸಲಿದೆ.
“ಮುಸುಕುಧಾರಿ ವ್ಯಕ್ತಿ ತಂದ ತಲೆಬುರುಡೆ ಪ್ರಕರಣದಿಂದ ಹೊರಗಿನ ವಸ್ತುವಾಗಿದೆ. ಅದು ಯಾರ ತಲೆಬುರುಡೆ, ಅದನ್ನು ಎಲ್ಲಿಂದ ತಂದರು? ಇನ್ನೊಂದು ಅಸ್ಥಿಪಂಜರದ ಅವಶೇಷಗಳು ಎಲ್ಲಿವೆ? ಈ ಅಂಶಗಳು ಚಿನ್ನಯ್ಯ ವಿರುದ್ಧದ ತನಿಖೆಯ ಪ್ರಮುಖ ವಿಷಯಗಳಾಗಿರುತ್ತವೆ” ಎಂದು ಎಸ್ಐಟಿ ಮೂಲಗಳು ಹೇಳಿವೆ.
1995ರಿಂದ2014ರವರೆಗೆ ರಹಸ್ಯವಾಗಿ ಹೂತುಹಾಕಲಾದ ಪ್ರಕರಣದ ತನಿಖೆಯನ್ನು ಅಸ್ವಾಭಾವಿಕ ಸಾವಿನ ಪ್ರಕರಣಗಳ ತನಿಖೆ ಮತ್ತು ರಹಸ್ಯ ಅಂತ್ಯಕ್ರಿಯೆ ಪ್ರಕರಣ ತನಿಖೆಯಾಗಿ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ತನಿಖೆಯ 90% ಅಂಶಗಳು ರಹಸ್ಯ ಅಂತ್ರಕ್ರಿಯೆ ಮತ್ತು ಚಿನ್ನಯ್ಯ ತಂದ ತಲೆಬುರುಡೆ ಎಲ್ಲಿಯದ್ದು ಎಂಬುದರ ಮೇಲೆ ಕೇಂದ್ರೀಕರಿಸುತ್ತದೆ. 10% ತನಿಖೆಯು ಇತರ ದೂರುಗಳ ಮೇಲೆ ಗಮನ ಹರಿಸುತ್ತದೆ.