ನಮ್ಮ ದೇಶದ ದುಡಿಯುವ ವರ್ಗವು ಆಳುವ ಬಂಡವಾಳಶಾಹಿ ವರ್ಗ ಮತ್ತು ಅದರ ಸೇವೆ ಮಾಡುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದಿಂದ ಹೆಚ್ಚುತ್ತಿರುವ ಫ್ಯಾಸಿಸ್ಟ್ ದಾಳಿಗಳನ್ನು ಎದುರಿಸಲು, ದುಡಿಯುವ ಜನರ ಒಗ್ಗಟ್ಟಿನ, ಪ್ರಬಲ, ಸಂಘಟಿತ ಮತ್ತು ಅವಿರತ ಚಳವಳಿಗಳನ್ನು ಬೆಳೆಸುವ ತುರ್ತು ಅಗತ್ಯ ಮನಗಂಡು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC) ಸೆಪ್ಟೆಂಬರ್ 4ರಂದು ದೆಹಲಿಯ ಜಂತರ್ ಮಂತರ್ನಲ್ಲಿ ಅಖಿಲ ಭಾರತ ಮಟ್ಟದಲ್ಲಿ ಕಾರ್ಮಿಕರ ಬೃಹತ್ ಪ್ರತಿಭಟನೆಯನ್ನು ಸಂಘಟಿಸುತ್ತಿದೆ ಎಂದು ಬಾಗಲಕೋಟೆ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಎಚ್ ಟಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ದೆಹಲಿಯ ಜಂತರ್ ಮಂತರ್ ನಲ್ಲಿ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿರುವ ಈ ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಕಾಮ್ರೇಡ್ ಕೆ. ರಾಧಾಕೃಷ್ಣ, ವಹಿಸಲಿದ್ದು, ಉಪಾಧ್ಯಕ್ಷತೆಯನ್ನು ಕಾಮ್ರೇಡ್ ಸ್ವಪನ್ ಘೋಷ್ ವಹಿಸಲಿದ್ದಾರೆ. ಅರುಣ್ ಕುಮಾರ್ ಸಿಂಗ್, ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಶಂಕರ್ ದಾಸ್ ಗುಪ್ತಾ ಮತ್ತು ವಿವಿಧ ರಾಜ್ಯಗಳ ಮುಖಂಡರು ಭಾಷಣಕಾರರಾಗಿ ಮಾತನಾಡಲಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ, ನೌಕರ ವಿರೋಧಿ ಹಾಗೂ ಏಕಸ್ವಾಮ್ಯ ಬಂಡವಾಳಶಾಹಿ ಪರ ನೀತಿಗಳಾದ 4 ಲೇಬರ್ ಕೋಡ್ ರದ್ದುಗೊಳಿಸುವಂತೆ, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸುವಂತೆ, ಸ್ಕೀಮ್ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಅವರಿಗೆ ಎಲ್ಲಾ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸುವಂತೆ, ಎಲ್ಲಾ ಗುತ್ತಿಗೆ ಹೊರಗುತ್ತಿಗೆ ಕಾರ್ಮಿಕರಿಗೆ ಸೇವಾಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆಗ್ರಹಿಸಲು, Fixed ಟರ್ಮ್ ಎಂಪ್ಲಾಯ್ಮೆಂಟ್ ಕೈಬಿಡುವಂತೆ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶಾದ್ಯಂತ ಮತ್ತಷ್ಟು ಚಳವಳಿಗಳನ್ನು ತೀವ್ರಗೊಳಿಸುವ ಉದ್ದೇಶದಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಬಲಿಷ್ಠ ಒಗ್ಗಟ್ಟಿನ ಹೋರಾಟವನ್ನು ಬೆಳೆಸಲು ಧರ್ಮ, ಜಾತಿ, ಭಾಷೆ, ಪ್ರದೇಶ, ಜನಾಂಗೀಯ ಭೇದವನ್ನು ಮೀರಿ ಕಾರ್ಮಿಕರು, ಕೃಷಿ ಕಾರ್ಮಿಕರು, ಬಡ ರೈತರು, ಗ್ರಾಮೀಣ ಮತ್ತು ನಗರ ಕೆಳ ಮಧ್ಯಮ ವರ್ಗಗಳ ಶೋಷಿತ ಜನರ ಐಕ್ಯತೆ ಅತ್ಯಂತ ಮಹತ್ವದ್ದಾಗಿದೆ. ಆದರೆ ಆಳುವ ಬಂಡವಾಳಶಾಹಿ ವರ್ಗ ಮತ್ತದರ ಸೇವಕ ಸರ್ಕಾರಗಳು ಗರಿಷ್ಠ ಲಾಭಗಳಿಸುವ ತಮ್ಮ ವರ್ಗ ಹಿತಾಸಕ್ತಿಗಾಗಿ ನಮ್ಮ ಐಕ್ಯತೆಯನ್ನು ಒಡೆಯಲು ಸತತ ಪಿತೂರಿಗಳನ್ನು ಮಾಡುತ್ತಿವೆ. ನಿಜವಾದ ಬೇಧ ಅಥವಾ ವಿಭಜನೆಯು ಶೋಷಕ ಮತ್ತು ಶೋಷಿತರ ನಡುವೆ, ಶ್ರೀಮಂತರು ಮತ್ತು ಬಡವರ ನಡುವೆ ಇದೆ. ಆದ್ದರಿಂದ ದುಡಿಯುವ ಜನರು ತಮ್ಮ ವರ್ಗ ಹಿತಾಸಕ್ತಿಗಾಗಿ, ಆಳುವ ವರ್ಗ ಮತ್ತದರ ಸರ್ಕಾರಗಳು ನಮ್ಮ ದೇಶಭಕ್ತಿಯ ಆಳವಾದ ಭಾವನೆಗಳನ್ನು ದುರುಪಯೋಗ ಮಾಡಿಕೊಂಡು ರಾಷ್ಟ್ರ ಅಂಧಾಭಿಮಾನವನ್ನು ಕೆರಳಿಸಿ ನಮ್ಮ ಒಗ್ಗಟ್ಟನ್ನು ಮುರಿಯದಂತೆ ಪ್ರಜ್ಞಾವಂತಿಕೆಯಿಂದ ಜಾಗೃತರಾಗಿರಬೇಕು.
ಇದನ್ನೂ ಓದಿ: ಬಾಗಲಕೋಟೆ | ಬಿಜೆಪಿ ಮತಗಳ್ಳತನ ವಿರುದ್ಧ ವ್ಯಾಪಕ ಹೋರಾಟ: ಮಾಜಿ ಸಚಿವ ವಿನಿಯಕುಮಾರ್
ಹಾಗಾಗಿ ಅಖಿಲ ಭಾರತ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು, ಎಲ್ಲಾ ಜನಸಾಮಾನ್ಯರು ಹಾಗೂ ದುಡಿಯುವ ಜನರು ಧರ್ಮ, ಜಾತಿ, ಭಾಷೆ, ಪ್ರದೇಶದ ಭೇದಗಳನ್ನು ಮೀರಿ ಒಗ್ಗಟ್ಟಾಗಿ ನಿಲ್ಲಬೇಕು ಹಾಗೂ ವಿಭಜಕ ಶಕ್ತಿಗಳು ಜನರ ಒಗ್ಗಟ್ಟನ್ನು ಮುರಿಯುವ ಎಲ್ಲಾ ಪಿತೂರಿಗಳನ್ನು ಸೋಲಿಸಬೇಕು. ತನ್ಮೂಲಕ ಈ ಪ್ರತಿಭಟನೆಯು ನಮ್ಮ ಜೀವನ ಮತ್ತು ಜೀವನೋಪಾಯದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ವ್ಯಾಪಕ, ಸಂಘಟಿತ, ನಿರಂತರ ಚಳವಳಿಗಳಿಗೆ ದಾರಿಮಾಡಿಕೊಡುವಂತಾಗಬೇಕು. ಅದಕ್ಕಾಗಿ ಜನಸಾಮಾನ್ಯರು ಹಾಗೂ ದುಡಿಯುವ ಜನ ಮುಂಬರಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡುತ್ತೇವೆ ಎಂದಿದ್ದಾರೆ.