ಆಫ್ರಿಕನ್ ಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ ಹಂದಿ ಮಾಲೀಕ ಸತ್ತ ಹಂದಿಗಳನ್ನು ಕೆರೆಗೆ ಬಿಸಾಡಿರುವ ಘಟನೆ ಚಿಂತಾಮಣಿ ತಾಲೂಕಿನ ಊಲವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಬ್ಬರಿ ಗ್ರಾಮದ ಸಮೀಪವಿರುವ ಕೆರೆಯಲ್ಲಿ ಕಂಡು ಬಂದಿದೆ.
ಸುಮಾರು ಒಂದು ತಿಂಗಳಿನಿಂದ ವೆಂಕಟರೆಡ್ಡಿ ಎಂಬಾತ ತಮ್ಮ ತೋಟದಲ್ಲಿ ಹಂದಿ ಸಾಕಾಣಿ ಮಾಡುತ್ತಿದ್ದು, ಕೆಲ ಹಂದಿಗಳು ಮೃತಪಟ್ಟ ಹಿನ್ನೆಲೆ ಅದರ ರಕ್ತ ಪರೀಕ್ಷೆ ಮಾಡಿದ ನಂತರ ಆಫ್ರಿಕನ್ ಜ್ವರ ಹರಡಿರುವುದು ಧೃಡಪಟ್ಟಿದೆ.
ಹಂದಿ ಮಾಲೀಕ ಸತ್ತ ಹಂದಿಗಳನ್ನು ತೋಟದ ಸಮೀಪವಿರುವ ಕೆರೆಗೆ ಬಿಸಾಡಿರುವುದನ್ನು ಕಂಡ ತಾಲೂಕು ದಂಡಾಧಿಕಾರಿಗಳಾದ ಸುದರ್ಶನ್ ಯಾದವ್, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಆನಂದ್, ಡಿವೈಎಸ್ಪಿ ಮುರಳಿಧರ್,ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್,ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಪಶುಪಾಲನಾ ಇಲಾಖೆ ಡಿಡಿ ರಂಗಪ್ಪ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಮಹೇಶ್, ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಮಚಂದ್ರ ರೆಡ್ಡಿ ಸೇರಿ ಹಲವು ಅಧಿಕಾರಿಗಳು ಮೊಕ್ಕಾಂ ಸ್ಥಳದಲ್ಲೇ ಹೂಡಿ ಕೆರೆಯಲ್ಲಿ ಸತ್ತಿರುವ ಹಂದಿಗಳನ್ನು ಜೆಸಿಬಿ ಮುಖಾಂತರ ಬೇರೆ ಕಡೆ ಸ್ಥಳಾಂತರ ಮಾಡುತ್ತಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತಿಯಿಂದ ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ.


ಇದನ್ನೂ ಓದಿ: ಚಿಕ್ಕಬಳ್ಳಾಪುರ | ಒಳ ಮೀಸಲಾತಿ: ರಾಜ್ಯ ಸರ್ಕಾರದ ತೀರ್ಮಾನ ಸ್ವಾಗತಾರ್ಹ; ಪಟ್ರೇನಹಳ್ಳಿ ಕೃಷ್ಣ
ಇನ್ನು ಈ ಕುರಿತು ತಾಲೂಕು ದಂಡಾಧಿಕಾರಿಗಳಾದ ಸುದರ್ಶನ್ ಯಾದವ್ ಹಂದಿ ಸಾಕಾಣಿಕೆ ಮಾಡಿ ಸತ್ತ ಹಂದಿಗಳನ್ನು ಕೆರೆಗೆ ಬಿಸಾಡಿರುವವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲು ಪೊಲೀಸ್ ಇಲಾಖೆಗೆ ಶಿಫಾರಸ್ಸು ಮಾಡಲಾಗಿದೆ. ಕೆರೆಯಲ್ಲಿ ಬಿಸಾಡಿರುವ ಹಂದಿಗಳಿಂದ ಯಾವುದೇ ರೀತಿಯ ಬೇರೆ ಪ್ರಾಣಿಗಳಿಗೆ ತೊಂದರೆ ಉಂಟಾಗಲ್ಲ ಜನರು ಯಾವುದೇ ಕಾರಣಕ್ಕೂ ಭಯಭೀತರಾಗಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.